ಅಸಾಧಾರಣ ಪ್ರತಿಭಾನ್ವಿತನ ಶ್ಲಾಘನೆಯಲ್ಲಿ
ಜೀವನಚರಿತ್ರೆ ಬರವಣಿಗೆಯ ಈ ಪ್ರಕಾರಕ್ಕೆ ಈಗ ಅಷ್ಟೇ ಮಹತ್ವದ್ದಾದ ಭಾರತೀಯ ಸೇರ್ಪಡೆಯೊಂದನ್ನು ಜೋಡಿಸಲು ನನಗೆ ಸಂತೋಷವಾಗುತ್ತದೆ: ಅದು ಆರ್.ಕೆ. ಲಕ್ಷ್ಮಣ್ ಕುರಿತ ಇ.ಪಿ. ಉನ್ನಿ ಅವರ ಮೊನೊಗ್ರಾಫ್. 1954ರಲ್ಲಿ, ಲಕ್ಷ್ಮಣ್ ಅವರಿಗಿಂತ ಇಪ್ಪತ್ತಮೂರು ವರ್ಷಗಳ ನಂತರ ಜನಿಸಿದ ಉನ್ನಿ ಸ್ವತಃ ನುರಿತ ಮತ್ತು ಯಶಸ್ವಿ ವ್ಯಂಗ್ಯಚಿತ್ರ ಕಲಾವಿದರಾಗಿದ್ದಾರೆ. ಅವರು ಎಂದಾದರೂ ಭೇಟಿಯಾಗಿದ್ದಾರೆಯೇ ಎಂಬುದು ನನಗೆ ಗೊತ್ತಿಲ್ಲ. ಆದರೆ ಪುಸ್ತಕ ಆ ಪ್ರಕಾರದ ಗುಣಗಳಿಂದ ಸಮೃದ್ಧವಾಗಿದ್ದು, ಕಿರಿಯರೊಬ್ಬರು ತನ್ನ ಕಲಾ ಕ್ಷೇತ್ರದಲ್ಲಿನ ಹಿರಿಯ ಪ್ರತಿಭೆಗೆ ಸಲ್ಲಿಸಿದ ಗೌರವವಾಗಿದೆ.
ಒಂದೇ ಕ್ಷೇತ್ರದಲ್ಲಿನ ಇನ್ನೊಬ್ಬರ ಕುರಿತ ವೃತ್ತಿಪರ ಬರವಣಿಗೆ, ಜೀವನಚರಿತ್ರೆಯ ಒಂದು ಆಸಕ್ತಿದಾಯಕ ಉಪ ಪ್ರಕಾರ. ಉದಾಹರಣೆಗಳೆಂದರೆ (ನಾನು ಓದಿಕೊಂಡಿರುವ ಕೃತಿಗಳನ್ನೇ ಪಟ್ಟಿ ಮಾಡುವುದಾದರೆ), ರಾಯ್ ಹ್ಯಾರಡ್ ಬರೆದ ಜಾನ್ ಮೇನಾರ್ಡ್ ಕೇನ್ಸ್ ಜೀವನಚರಿತ್ರೆ; ಆಶ್ಲೇ ಮ್ಯಾಲೆಟ್ ಬರೆದ ಕ್ಲಾರಿ ಗ್ರಿಮ್ಮೆಟ್ ಜೀವನ ಚರಿತ್ರೆ; ರಿಚರ್ಡ್ ಇವಾನ್ಸ್ ಬರೆದ ಎರಿಕ್ ಹಾಬ್ಸ್‌ಬಾಮ್ ಜೀವನಚರಿತ್ರೆ ಮತ್ತು ಪೌಲ್ ಥೆರೌಕ್ಸ್ ಬರೆದ ವಿ.ಎಸ್. ನೈಪಾಲ್ ಅವರ ಇಂಪ್ರೆಷನಿಸ್ಟಿಕ್ ಜೀವನಚರಿತ್ರೆ.
ಈ ಕೃತಿಗಳು ವಸ್ತು, ನಿರೂಪಣೆಯ ವಿಧಾನ ಮತ್ತು ಸಾಹಿತ್ಯಕ ಗುಣಮಟ್ಟದಲ್ಲಿ ತೀರಾ ಬೇರೆಯೇ ಆದರೂ, ಮೂರು ಸಾಮಾನ್ಯ ಲಕ್ಷಣಗಳನ್ನು ಹೊಂದಿವೆ. ಮೊದಲನೆಯದಾಗಿ, ಪ್ರತಿಯೊಂದರಲ್ಲೂ ಜೀವನಚರಿತ್ರೆಕಾರ ತಾನು ಯಾರ ಬಗ್ಗೆ ಬರೆಯುತ್ತಿರುವನೋ ಅವರಿಗಿಂತ ವಯಸ್ಸಿನಲ್ಲಿ ಚಿಕ್ಕವನು. (ಕೇನ್ಸ್‌ಗಿಂತ ಹ್ಯಾರಡ್ ಹದಿನೆಂಟು ವರ್ಷ ಕಿರಿಯ, ಗ್ರಿಮ್ಮೆಟ್‌ಗಿಂತ ಮ್ಯಾಲೆಟ್ ನಲವತ್ನಾಲ್ಕು ವರ್ಷ ಕಿರಿಯ, ಹಾಬ್ಸ್‌ಬಾಮ್‌ಗಿಂತ ಇವಾನ್ಸ್ ಮೂವತ್ತು ವರ್ಷ ಕಿರಿಯ, ನೈಪಾಲ್‌ಗಿಂತ ಥೆರೌಕ್ಸ್ ಒಂಭತ್ತು ವರ್ಷ ಕಿರಿಯ.)
ಎರಡನೆಯದಾಗಿ, ಪ್ರತೀ ಸಂದರ್ಭದಲ್ಲಿ ಜೀವನಚರಿತ್ರೆಕಾರ ತಾನು ಬರೆಯುತ್ತಿರುವ ವ್ಯಕ್ತಿಯ ವೈಯಕ್ತಿಕ ಪರಿಚಯವನ್ನು ಹೊಂದಿದ್ದ. ಎರಡು ನಿದರ್ಶನಗಳಲ್ಲಿ (ಕೇನ್ಸ್ ಜೊತೆ ಹ್ಯಾರಡ್ ಮತ್ತು ನೈಪಾಲ್ ಜೊತೆ ಥೆರೌಕ್ಸ್) ಪರಿಚಯ ನಿಕಟ ಮತ್ತು ತೀವ್ರವಾಗಿತ್ತು; ಇನ್ನೆರಡರಲ್ಲಿ (ಗ್ರಿಮ್ಮೆಟ್ ಜೊತೆ ಮ್ಯಾಲೆಟ್ ಮತ್ತು ಹಾಬ್ಸ್‌ಬಾಮ್ ಜೊತೆ ಇವಾನ್ಸ್) ಇದು ಅತ್ಯಲ್ಪವಾಗಿತ್ತು.
ಮೂರನೆಯದು ಮತ್ತು ಅತ್ಯಂತ ಮುಖ್ಯವಾದದ್ದು, ಪ್ರತಿಯೊಂದರಲ್ಲೂ ಜೀವನಚರಿತ್ರೆಕಾರ, ತನ್ನ ಕ್ಷೇತ್ರದಲ್ಲಿ ಸಾಕಷ್ಟು ಪ್ರವೀಣನಾಗಿದ್ದಾಗಲೂ ತಾನು ಬರೆಯುತ್ತಿರುವ ವ್ಯಕ್ತಿಗಿಂತ ಕಡಿಮೆ ಖ್ಯಾತಿಯುಳ್ಳವನಾಗಿದ್ದ. ಹ್ಯಾರಡ್ ಒಬ್ಬ ಸುಪ್ರಸಿದ್ಧ ಬ್ರಿಟಿಷ್ ಅರ್ಥಶಾಸ್ತ್ರಜ್ಞ. ಹೆಚ್ಚಾಗಿ ಆಕ್ಸ್ ಫರ್ಡ್‌ನಲ್ಲಿ ಇರುತ್ತಿದ್ದ; ಆದರೆ ಕೇಂಬ್ರಿಡ್ಜ್ ಮೂಲದ ಕೇನ್ಸ್ ಇಪ್ಪತ್ತನೇ ಶತಮಾನದ ಅತ್ಯಂತ ಪ್ರಭಾವಶಾಲಿ ಅರ್ಥಶಾಸ್ತ್ರಜ್ಞನಾಗಿದ್ದ. ಮ್ಯಾಲೆಟ್ ಆಸ್ಟ್ರೇಲಿಯದ ಮಧ್ಯಮ ಯಶಸ್ವಿ ಆಫ್-ಸ್ಪಿನ್ ಬೌಲರ್ ಆಗಿದ್ದರೆ, ಗ್ರಿಮ್ಮೆಟ್ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಶ್ರೇಷ್ಠ ರಿಸ್ಟ್ ಸ್ಪಿನ್ನರ್ ಆಗಿದ್ದ. ಬಿಲ್ ಓ'ರೈಲಿ, ರಿಚಿ ಬೆನಾಡ್ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಶೇನ್ ವಾರ್ನ್ ಅವರೊಂದಿಗೆ ಆರಂಭಿಸಿದವನಾಗಿದ್ದ. ಇವಾನ್ಸ್ ಬಹಳಷ್ಟು ಬರೆದಿದ್ದ ಇತಿಹಾಸಕಾರನಾಗಿದ್ದು, ಇಪ್ಪತ್ತನೇ ಶತಮಾನದ ಜರ್ಮನಿಯ ಅನೇಕ ಪುಸ್ತಕಗಳ ಲೇಖಕ. ಆದರೆ ಹಾಬ್ಸ್‌ಬಾಮ್ ಕೆಲಸ ಜಾಗತಿಕ ವ್ಯಾಪ್ತಿಯನ್ನು ಹೊಂದಿತ್ತು ಮತ್ತು ಜಗತ್ತಿನಾದ್ಯಂತದ ದೇಶಗಳಲ್ಲಿ ಐತಿಹಾಸಿಕ ವಿದ್ವತ್ತಿನ ಕ್ಷೇತ್ರವನ್ನು ಬದಲಿಸಿದ್ದಾಗಿತ್ತು. ಥೆರೌಕ್ಸ್ ಒಬ್ಬ ಶಕ್ತಿಯುತ ಕಾದಂಬರಿಕಾರ ಮತ್ತು ಪ್ರವಾಸಿ ಬರಹಗಾರನಾಗಿದ್ದು, ಸಾಕಷ್ಟು ಮಟ್ಟದ ಹಣ, ವೃತ್ತಿಪರ ಹೆಸರು ಮಾಡಿದವನಾಗಿದ್ದರೆ, ಅದೇ ಪ್ರಕಾರಗಳಲ್ಲಿ ಕೆಲಸ ಮಾಡಿದ್ದ ನೈಪಾಲ್, ಬರಹಗಾರರಿಗೆ ಸಿಗುವ ಅತ್ಯುನ್ನತ ಸಂಭವನೀಯ ಪುರಸ್ಕಾರವಾದ ಸಾಹಿತ್ಯದ ನೊಬೆಲ್ ಪ್ರಶಸ್ತಿಯನ್ನು ಗೆದ್ದಿದ್ದರು.
ಈ ನಾಲ್ಕೂ ಸಂದರ್ಭಗಳಲ್ಲಿ ಉನ್ನತ ಮಟ್ಟದ ನಿಪುಣನೊಬ್ಬ ತನ್ನ ಕ್ಷೇತ್ರದ ಅಸಾಮಾನ್ಯ ಪ್ರತಿಭೆಗೆ ಪುಸ್ತಕವೊಂದರ ಮೂಲಕ ಗೌರವ ಸಲ್ಲಿಸುತ್ತಿದ್ದ.
ಜೀವನಚರಿತ್ರೆ ಬರವಣಿಗೆಯ ಈ ಪ್ರಕಾರಕ್ಕೆ ಈಗ ಅಷ್ಟೇ ಮಹತ್ವದ್ದಾದ ಭಾರತೀಯ ಸೇರ್ಪಡೆಯೊಂದನ್ನು ಜೋಡಿಸಲು ನನಗೆ ಸಂತೋಷವಾಗುತ್ತದೆ: ಅದು ಆರ್.ಕೆ. ಲಕ್ಷ್ಮಣ್ ಕುರಿತ ಇ.ಪಿ. ಉನ್ನಿ ಅವರ ಮೊನೊಗ್ರಾಫ್. 1954ರಲ್ಲಿ, ಲಕ್ಷ್ಮಣ್ ಅವರಿಗಿಂತ ಇಪ್ಪತ್ತಮೂರು ವರ್ಷಗಳ ನಂತರ ಜನಿಸಿದ ಉನ್ನಿ ಸ್ವತಃ ನುರಿತ ಮತ್ತು ಯಶಸ್ವಿ ವ್ಯಂಗ್ಯಚಿತ್ರ ಕಲಾವಿದರಾಗಿದ್ದಾರೆ. ಅವರು ಎಂದಾದರೂ ಭೇಟಿಯಾಗಿದ್ದಾರೆಯೇ ಎಂಬುದು ನನಗೆ ಗೊತ್ತಿಲ್ಲ. ಆದರೆ ಪುಸ್ತಕ ಆ ಪ್ರಕಾರದ ಗುಣಗಳಿಂದ ಸಮೃದ್ಧವಾಗಿದ್ದು, ಕಿರಿಯರೊಬ್ಬರು ತನ್ನ ಕಲಾ ಕ್ಷೇತ್ರದಲ್ಲಿನ ಹಿರಿಯ ಪ್ರತಿಭೆಗೆ ಸಲ್ಲಿಸಿದ ಗೌರವವಾಗಿದೆ.
ಆರ್.ಕೆ.ಲಕ್ಷ್ಮಣ್ ಹುಟ್ಟಿ ಬೆಳೆದದ್ದು ಮೈಸೂರು ನಗರದಲ್ಲಿ. ಅವರ ಮೊದಲ ರೇಖಾಚಿತ್ರ ಶಾಲಾ ಶಿಕ್ಷಕರಾಗಿದ್ದ ತಂದೆಯವರದ್ದಾಗಿತ್ತು. ಮನೆಯ ನೆಲದ ಮೇಲೆ ಬರೆದಿದ್ದರು. ಬಾಂಬೆಯ ಪ್ರಸಿದ್ಧ ಜೆಜೆ ಸ್ಕೂಲ್ ಆಫ್ ಆರ್ಟ್‌ನಲ್ಲಿ ಓದಬೇಕೆಂಬುದು ಹುಡುಗನ ಬಯಕೆಯಾಗಿತ್ತಾದರೂ, ಪ್ರವೇಶ ಪಡೆಯಲು ಸಾಧ್ಯವಾಗಲಿಲ್ಲ. ಬದಲಿಗೆ ಮೈಸೂರಿನಲ್ಲಿ ಬಿಎ ಪದವಿ ಪಡೆದರು. ಬಿಡುವಿನ ವೇಳೆಯಲ್ಲಿ ನಗರದ ಪ್ರಮುಖ ಸ್ಥಳಗಳ ಸ್ಕೆಚಿಂಗ್ ಮತ್ತು ಪೇಂಟಿಂಗ್ ಮಾಡುತ್ತಿದ್ದರು. ಮನೆಗೆ ಬರುತ್ತಿದ್ದ ವೃತ್ತಪತ್ರಿಕೆಗಳು ಮತ್ತು ನಿಯತಕಾಲಿಕೆಗಳಲ್ಲಿನ ಇಲಸ್ಟ್ರೇಷನ್‌ಗಳನ್ನು ಗಮನಿಸುತ್ತಿದ್ದ ಅವರು, ಮದ್ರಾಸ್‌ನ 'ದಿ ಹಿಂದೂ' ಪತ್ರಿಕೆಯಲ್ಲಿ ಮರುಮುದ್ರಣಗೊಳ್ಳುತ್ತಿದ್ದ 'ಲಂಡನ್ ಇವ್ನಿಂಗ್ ಸ್ಟ್ಯಾಂಡರ್ಡ್'ನಲ್ಲಿನ ವ್ಯಂಗ್ಯಚಿತ್ರಗಳ ಕಲಾವಿದ, ನ್ಯೂಝಿಲ್ಯಾಂಡ್‌ನ ಡೇವಿಡ್ ಲೋ ಅವರ ಬಗ್ಗೆ ವಿಶೇಷ ಮೆಚ್ಚುಗೆಯನ್ನು ಬೆಳೆಸಿಕೊಂಡರು.
ದಶಕಗಳ ನಂತರ, ಜೆಜೆ ಸ್ಕೂಲ್ ಸಮಾರಂಭವೊಂದರಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲು ಆಹ್ವಾನ ಬಂದಾಗ, ಅಲ್ಲಿ ಓದಿದ್ದರೆ ಅದರ ಅನೇಕ ಪದವೀಧರರಂತೆ, ಜಾಹೀರಾತು ಏಜೆನ್ಸಿಯಲ್ಲಿ ಉತ್ತಮ ಸಂಬಳ ಪಡೆಯುವ ಕಲಾ ನಿರ್ದೇಶಕನಾಗಿರಬಹುದಿತ್ತು ಎಂದೆನಿಸಿತ್ತು ಲಕ್ಷ್ಮಣ್ ಅವರಿಗೆ. ಪ್ರವೇಶ ನಿರಾಕರಿಸಿದ್ದ ಜೆಜೆ ಸ್ಕೂಲ್ ನಿರ್ಧಾರವು ನಿಜಕ್ಕೂ ಐತಿಹಾಸಿಕ ಪರಿಣಾಮಗಳಿಗೆ ಕಾರಣವಾದ ನಿರಾಕರಣೆಯಾಗಿತ್ತು ಮತ್ತು ಲಕ್ಷ್ಮಣ್ ಅವರನ್ನು ಕಲಾ ವಿದ್ಯಾರ್ಥಿಯಾಗಲು ಅನರ್ಹ ಎಂದು ತೀರ್ಮಾನಿಸಿದ್ದ ಪರೀಕ್ಷಕರಿಗೆ ನಾವು ಕೃತಜ್ಞರಾಗಿರಬೇಕು.
ಲಕ್ಷ್ಮಣ್ ಅವರು ಮೊದಲು ಕೆಲಸಕ್ಕೆ ಸೇರಿದ್ದು ಬಾಂಬೆಯ 'ಫ್ರೀ ಪ್ರೆಸ್ ಜರ್ನಲ್'ನಲ್ಲಿ, 1947ರಲ್ಲಿ ದೇಶ ಸ್ವತಂತ್ರಗೊಳ್ಳುವುದಕ್ಕೆ ಸ್ವಲ್ಪಮುಂಚೆ. ಅದಾದ ಕೆಲವೇ ಸಮಯದಲ್ಲಿ ಅವರು 'ಟೈಮ್ಸ್ ಆಫ್ ಇಂಡಿಯಾ'ಕ್ಕೆ ಹೋದರು. ತಮ್ಮ ವೃತ್ತಿಜೀವನವನ್ನೆಲ್ಲ ಅವರು ಕಳೆದದ್ದು ಅಲ್ಲಿಯೇ. ಲಕ್ಷ್ಮಣ್‌ರ ತಂತ್ರವನ್ನು, ಅವರ ಕುಶಲ ಬ್ರಷ್ ಸ್ಟ್ರೋಕ್‌ಗಳ ಕುರಿತು ಹೇಳುತ್ತ ಉನ್ನಿ ಚೆನ್ನಾಗಿ ವಿವರಿಸುತ್ತಾರೆ. ಈ ಜೀವನಚರಿತ್ರೆಯ ಮೊನೊಗ್ರಾಫ್‌ನಲ್ಲಿ ಲಕ್ಷ್ಮಣ್ ಅವರ ಹೊರತಾಗಿ ಪ್ರಮುಖ ಪಾತ್ರವೆಂದರೆ, ಅವರ ಸೃಷ್ಟಿಯಾದ ಧೋತಿ ಮತ್ತು ಚೌಕಳಿ ಜಾಕೆಟ್‌ನಲ್ಲಿದ್ದ 'ದಿ ಕಾಮನ್ ಮ್ಯಾನ್'. ಬಹುಪಾಲು ಮಾತಿರದ ಅದರ ಉಪಸ್ಥಿತಿ ಮತ್ತು ಅವಲೋಕನದ ಮೂಲಕ ಕಲಾವಿದ ಭಾರತದಲ್ಲಿನ ದೈನಂದಿನ ಜೀವನದ ವಿರೋಧಾಭಾಸಗಳು ಮತ್ತು ತೊಡಕುಗಳನ್ನು ಕಟ್ಟಿಕೊಟ್ಟಿದ್ದಾರೆ.
ಆರ್.ಕೆ. ಲಕ್ಷ್ಮಣ್ ಮತ್ತು ಹಿಂದಿನ ತಲೆಮಾರಿನ ಪ್ರಖ್ಯಾತ ಭಾರತೀಯ ವ್ಯಂಗ್ಯಚಿತ್ರಕಾರ ಕೆ. ಶಂಕರ್ ಪಿಳ್ಳೈ ನಡುವಿನ ಕುತೂಹಲಕಾರಿ ಹೋಲಿಕೆಯನ್ನು ಉನ್ನಿ ನೀಡುತ್ತಾರೆ. ಇಬ್ಬರೂ ಪ್ರಗತಿಪರ ರಾಜಪ್ರಭುತ್ವದ ರಾಜ್ಯಗಳಲ್ಲಿ ಬೆಳೆದರು. ಇಬ್ಬರೂ ಮೇಲ್ಜಾತಿ ಹಿಂದೂಗಳಾಗಿದ್ದು, ಇಂಗ್ಲಿಷ್ ಶಿಕ್ಷಣ ಮತ್ತು ಉತ್ತಮ ಗ್ರಂಥಾಲಯಗಳ ಸೌಲಭ್ಯ ಹೊಂದಿದ್ದರು. ಈ ಇಬ್ಬರು ದೈತ್ಯರು 'ಸರಿಸಾಟಿಯಿರದ ಲಕ್ಷ್ಮಣ್ ಅವರ ಮೃದುವಾದ ಆಕರ್ಷಕ ಹಾಸ್ಯ' ಮತ್ತು 'ಶಂಕರ್ ಅವರ ನೇರ ಫೈರ್‌ಬ್ರಾಂಡ್ ಶೈಲಿ' ಈ ಎರಡು ವಿಭಿನ್ನ 'ಕಾರ್ಟೂನಿಂಗ್ ಶೈಲಿಗಳ' ಮೇಲೆ ಪ್ರಭಾವ ಬೀರಿದ್ದಾರೆ ಎಂದು ಉನ್ನಿ ವಾದಿಸುತ್ತಾರೆ. ಅಭ್ಯಾಸಿಗಿಂತ ಹೆಚ್ಚಾಗಿ ಆಸಕ್ತನಾಗಿ ನಾನಿದನ್ನು ಈ ವ್ಯಾಖ್ಯಾನದೊಂದಿಗೆ ನೋಡಬಯಸುತ್ತೇನೆ. ಮೊದಲನೆಯದಾಗಿ, ಉನ್ನಿ ಅವರ ನಿರೂಪಣೆ ಹಲವೆಡೆಗಳಲ್ಲಿ ಕಾಣಿಸುವಂತೆ, ಲಕ್ಷ್ಮಣ್ ಅವರ ರಚನೆಯು ಆಗಾಗ ತೀಕ್ಷ್ಣವಾದ ರಾಜಕೀಯ ಮೊನಚುಳ್ಳದ್ದಾಗಿರುತ್ತಿತ್ತು. ನಿಜವಾದ ವ್ಯತ್ಯಾಸವೆಂದರೆ, ಶಂಕರ್ ವಸಾಹತು ವಿರೋಧಿ ರಾಷ್ಟ್ರೀಯತಾವಾದಿ ಆಗಿದ್ದು, ಸ್ವಾತಂತ್ರ್ಯಾನಂತರದ ಕಾಂಗ್ರೆಸ್ ಸ್ವಾತಂತ್ರ್ಯ ಹೋರಾಟದ ಆದರ್ಶಗಳಿಗೆ ಹೆಚ್ಚು ಬದ್ಧವಾಗಿರುತ್ತದೆಂದು ಭಾವಿಸಿದ್ದರೆ, ಲಕ್ಷ್ಮಣ್ ರಾಜಕೀಯೇತರವಾಗಿರದೆಯೂ ನಿಷ್ಠುರ ನಿಷ್ಪಕ್ಷಪಾತಿಯಾಗಿದ್ದರು. ಕಾರಣ ಸಿಕ್ಕಾಗಲೆಲ್ಲ ಎಲ್ಲಾ ಸಿದ್ಧಾಂತಗಳ ಮತ್ತು ಪಕ್ಷಗಳ ರಾಜಕಾರಣಿಗಳನ್ನು ತಿವಿಯದೆ ಬಿಡಲಿಲ್ಲ.
ಎರಡನೆಯದಾಗಿ, ಬಹುಶಃ ಭಾರತೀಯ ವ್ಯಂಗ್ಯಚಿತ್ರಕಾರರ ಶಂಕರ್ ಶೈಲಿ ಇದ್ದಾಗ, ಲಕ್ಷ್ಮಣ್ ಯಾವುದೇ ಶಿಷ್ಯರನ್ನು ಅಥವಾ ಅನುಯಾಯಿಗಳನ್ನು ಹೊಂದಿರಲಿಲ್ಲ. ಅವರು ಘರಾನಾವನ್ನು ರಚಿಸಲು ಸಾಧ್ಯವಾಗಲಿಲ್ಲ ಅಥವಾ ರಚಿಸಲಿಲ್ಲ. ಅವರು ಅನನ್ಯರಾಗಿದ್ದರು. ಅವರ ಸಮಕಾಲೀನರಲ್ಲಿ ಯಾರೂ ಅವರಷ್ಟು ಚೆನ್ನಾಗಿ ಚಿತ್ರಿಸಲಿಲ್ಲ; ಕಣ್ಸೆಸೆಳೆಯುವಂಥ ಒನ್-ಲೈನರ್‌ಗಳನ್ನು ರಚಿಸುವ ಅವರ ಸಾಮರ್ಥ್ಯವನ್ನು (ನಿಜವಾಗಿಯೂ ಅವರು ಜಾಹೀರಾತು ಏಜೆನ್ಸಿಗೆ ಸೇರಿದ್ದರೆ ಅವರು ಇಲಸ್ಟ್ರೇಟರ್ ಬದಲಿಗೆ ಸ್ಟಾರ್ ಕಾಪಿರೈಟರ್ ಆಗಿಬಿಡುತ್ತಿದ್ದರೇನೊ), ಅವರ ಸ್ವಂತಿಕೆಯನ್ನು, ವಿಲಕ್ಷಣವಾದ ಹಾಸ್ಯ ಪ್ರಜ್ಞೆ ಮತ್ತು ಅಸಂಗತತೆಯನ್ನು ಯಾರೂ ತೋರಿಸಲಾಗಲಿಲ್ಲ. ವಿವರಣೆ ಅಥವಾ ವಿಶ್ಲೇಷಣೆಯನ್ನು ನಿರಾಕರಿಸುವ ಅವರ ಅಪ್ರತಿಮ ಪ್ರತಿಭೆಗೆ ಇತರ ಮಗ್ಗುಲುಗಳಿದ್ದವು. ಅವರನ್ನು ಅಥವಾ ಅವರ ಕಲೆಯನ್ನು ಮರಳಿ ನಿರೂಪಿಸಲು ಅಥವಾ ಅನುಕರಿಸಲು ಸಾಧ್ಯವಿಲ್ಲ ಎಂದು ಹೇಳಿದರೆ ಸಾಕು. ಗ್ಯಾರಿ ಸೋಬರ್ಸ್ ಒಬ್ಬರೇ ಇದ್ದರು ಮತ್ತು ಒಬ್ಬ ಆರ್.ಕೆ. ಲಕ್ಷ್ಮಣ್ ಮಾತ್ರ ಇರಲು ಸಾಧ್ಯ.
ಲಕ್ಷ್ಮಣ್ ಅವರು ಹನ್ನೆರಡು ಪ್ರಧಾನ ಮಂತ್ರಿಗಳ ಅಧಿಕಾರಾವಧಿ ಯನ್ನು ಕಂಡವರು ಮತ್ತು ಅವರೆಲ್ಲರನ್ನು ಗೇಲಿ ಮಾಡುವ ಸಂದರ್ಭ ಅವರಿಗೆ ಸಿಕ್ಕಿತ್ತು. ಅವರ ಲೇಖನಿ ಮತ್ತು ಅವರ ಕುಂಚ ಯಾವ ರಾಜಕಾರಣಿಗಳನ್ನೂ ಬಿಡಲಿಲ್ಲ (ಉದಾಹರಣೆಗೆ ಎಲ್.ಕೆ. ಅಡ್ವಾಣಿ, ಮೃದುಭಾಷಿ ಗುಣದಿಂದ ತೀಕ್ಷ್ಣ ಮಾತುಗಾರಿಕೆಯವರೆಗಿನ ಅವರ ಪರಿವರ್ತನೆ ಲಕ್ಷ್ಮಣ್ ವ್ಯಂಗ್ಯಚಿತ್ರಗಳಲ್ಲಿ ಅದ್ಭುತವಾಗಿ ಸೆರೆಯಾಗಿದೆ). ಲಕ್ಷ್ಮಣ್ ಅವರ ಕೃತಿಗಳು ಬಹಳಷ್ಟಿದೆ. ಆದರೂ, ಉನ್ನಿ ಹೇಳುವಂತೆ, ಇಂದಿರಾ ಗಾಂಧಿಯವರ ಬಗ್ಗೆ ಶಬ್ದದಲ್ಲಿ ಅಥವಾ ಚಿತ್ರದಲ್ಲಿ ಟೀಕಿಸುವಾಗ ಅವರು ಬಹುಶಃ ತಮ್ಮ ಅತ್ಯುತ್ತಮ ಅಭಿವ್ಯಕ್ತಿಯನ್ನು ಕಾಣಿಸಿದ್ದರು. ಶ್ರೀಮತಿ ಗಾಂಧಿಯವರ ಕುರಿತಾದ ಲಕ್ಷ್ಮಣ್ ಅವರ ವ್ಯಂಗ್ಯಚಿತ್ರಗಳನ್ನು ಟಿಪ್ಪಣಿಯೊಡನೆ ಒಂದೆಡೆಗೆ ಸಂಕಲಿಸಿದರೆ ಅದು ಸಾಟಿಯಿರದ ರಾಜಕೀಯ ಕಥನವಾಗುತ್ತದೆ ಎಂದು ಉನ್ನಿ ಬರೆಯುತ್ತಾರೆ. 'ಕ್ಯಾರಿಕೇಚರ್ ಅಪರೂಪಕ್ಕೆ ಹೆಚ್ಚು ಕ್ರಿಯಾತ್ಮಕವಾಗಿತ್ತು. ವಿಶಾಲ ಕಣ್ಣಿನ ಅನನುಭವಿ; ಆರ್ಥಿಕ ಗಣಿಭೂಮಿಯಲ್ಲಿ ಕಾಡು ನರ್ತಕಿ; ಪಕ್ಷದಲ್ಲಿರುವ ಹಿರಿಯರ ಮೇಲೆ ಕಲ್ಲು ತೂರುವ ಬೀದಿ ರಾಜಕಾರಣಿ; ನ್ಯಾಯದ ಪ್ರತಿಮೆಯನ್ನು ಅಣಕಿಸಲು ಕತ್ತಿಯನ್ನು ಝಳಪಿಸುತ್ತಿರುವ ಅತಿರೇಕ; ಚುನಾವಣಾ ಅಸಮಾಧಾನದ ನಂತರದ ಹಿಮ್ಮೆಟ್ಟುವಿಕೆಯಲ್ಲಿ ಮಗ ಸಂಜಯ್‌ನನ್ನು ತಳ್ಳುಗಾಡಿಯಲ್ಲಿ ಉಪನಗರಗಳಿಗೆ ತಳ್ಳುವುದು.'
ಉನ್ನಿ ತಮ್ಮ ಕರ್ಮಭೂಮಿಯಾದ ನಗರದೊಂದಿಗೆ ಲಕ್ಷ್ಮಣ್ ಸಂಬಂಧದ ಬಗ್ಗೆ ಒಳನೋಟ ಕೊಡುತ್ತಾರೆ: 'ವ್ಯಂಗ್ಯಚಿತ್ರಗಳು ನಗರಗಳೊಂದಿಗೆ ಬೆಳೆಯುತ್ತಿರುವ ಇತಿಹಾಸವನ್ನು ಹೊಂದಿವೆ ಮತ್ತು ಮುಂಬೈ ತನ್ನ ವ್ಯಂಗ್ಯಚಿತ್ರಕಾರನಿಗಾಗಿ ಕಾಯುತ್ತಿದ್ದ ನಗರವಾಗಿತ್ತು. ಲಕ್ಷ್ಮಣ್ ದಿನನಿತ್ಯದ ಸಮಸ್ಯೆಗಳೊಂದಿಗೆ ಹೊಡೆದಾಡುವ ವೃತ್ತಪತ್ರಿಕೆ ಓದುಗರ ಸಮೂಹವನ್ನು ಹುಡುಕಿಕೊಂಡಿದ್ದರು. ಅವರ ವ್ಯಂಗ್ಯಚಿತ್ರಗಳು, ಅವ್ಯವಸ್ಥೆ ಎಲ್ಲರಿಗೂ ಸಾಮಾನ್ಯವಾಗಿತ್ತು ಎಂಬುದನ್ನು ಆ ಸಮೂಹಕ್ಕೆ ಹೇಳಿದವು; ಅದರ ಬಗ್ಗೆ ವೈಯಕ್ತಿಕವಾಗಿ ಏನೂ ಇರಲಿಲ್ಲ ಮತ್ತು ಅಷ್ಟು ಅವ್ಯವಸ್ಥೆಯನ್ನು ತಂದ ಒಳ್ಳೆಯ ಕ್ರಮಕ್ಕಾಗಿ ದೂರದ ದಿಲ್ಲಿಯಲ್ಲಿರುವ ಆಡಳಿತಗಾರರಿಗೆ ಧನ್ಯವಾದಗಳು.' ಲಕ್ಷ್ಮಣ್ ಅವರ ಓದುಗರು 'ಕಾಮನ್ ಮ್ಯಾನ್' ನಲ್ಲಿ, ದಟ್ಟಣೆಯ ಮತ್ತು ಸಮಸ್ಯಾತ್ಮಕ ಭಾರತೀಯ ನಗರದೊಳಗಿನ ಸದಾ ತಳಮಳದ ನೆಲೆಯಲ್ಲಿರುವಂತಿರುವ ತಮ್ಮದೇ ಎಂಥದೋ ಸ್ಥಿತಿಯನ್ನು ಕಂಡರು.
ಈ ಪುಸ್ತಕವನ್ನು ಓದುವಾಗ, ನಾನು ಕರಾವಳಿ ಮತ್ತು ವ್ಯಂಗ್ಯಚಿತ್ರಕಾರರ ನಡುವಿನ ಸಂಪರ್ಕದ ಬಗ್ಗೆ ಯೋಚಿಸು ವಂತಾಯಿತು. ಆಧುನಿಕ ಭಾರತದ ಅತ್ಯಂತ ಪ್ರಭಾವಶಾಲಿ ವ್ಯಂಗ್ಯಚಿತ್ರಕಾರರು ಕೇರಳದಿಂದ ಬಂದವರು; ಅಂಥವರಲ್ಲಿ ಶಂಕರ್, ಅಬು ಅಬ್ರಹಾಂ, ಒ.ವಿ. ವಿಜಯನ್, ಮಂಜುಳಾ ಪದ್ಮನಾಭನ್ ಮತ್ತು ಸ್ವತಃ ಉನ್ನಿ ಇದ್ದಾರೆ. ಆಗ ಗೋವಾದ ಮಾರಿಯೋ ಮಿರಾಂಡಾ ಇದ್ದರು. ಇಂದು ಛಾಪು ಮೂಡಿಸುತ್ತಿರುವ ಕಿರಿಯ ವ್ಯಂಗ್ಯಚಿತ್ರಕಾರರಲ್ಲಿ ಕರ್ನಾಟಕದ ಕರಾವಳಿ ಭಾಗದ ಸತೀಶ್ ಆಚಾರ್ಯ ಕೂಡ ಒಬ್ಬರು.
ಲಕ್ಷ್ಮಣ್ ಅವರ ತವರು ಮೈಸೂರು, ಕರಾವಳಿಯಿಂದ ದೂರವಿದೆ. ಆದರೆ ಅದೃಷ್ಟವಶಾತ್ ಅವರು ಬಾಂಬೆಗೆ ವಲಸೆ ಹೋಗಿ ಅಲ್ಲಿ ವಾಸಿಸಲು ಮತ್ತು ಕೆಲಸ ಮಾಡಲು ಸಾಧ್ಯವಾಯಿತು. ಕೆಲವು ಬಗೆಯಲ್ಲಿ ಅವರ ವೃತ್ತಿಜೀವನವು ಅವರ ಆರಂಭಿಕ ಆದರ್ಶ ಡೇವಿಡ್ ಲೋ ಅವರ ವೃತ್ತಿಜೀವನವನ್ನು ಪ್ರತಿಬಿಂಬಿಸುತ್ತದೆ. ಅವರು ನ್ಯೂಜಿಲ್ಯಾಂಡ್‌ನ ಸಣ್ಣ ಊರಿನಿಂದ ವಿಶ್ವದ ಅತ್ಯಂತ ಕುತೂಹಲ ಕಾರಿ ನಗರಕ್ಕೆ ಸ್ಥಳಾಂತರಗೊಂಡರು. ಲಂಡನ್‌ಗೆ ವಲಸೆ ಬಂದ ಕಿವಿ; ಲಕ್ಷ್ಮಣ್ ಬಾಂಬೆಯಲ್ಲಿ ತನ್ನನ್ನು ಕಂಡುಕೊಂಡ ಮೈಸೂರಿಗ. ಕರಾವಳಿಯ ದೊಡ್ಡ ನಗರಗಳು ಪ್ರೋತ್ಸಾಹಿಸಿ ಮತ್ತು ಬೆಳೆಸಿದಂತೆ ಅವರಿಗೆ ಸಾಮಾಜಿಕ ಮತ್ತು ಆರ್ಥಿಕ ವೈವಿಧ್ಯತೆಯ ಅರಿವನ್ನು, ಪ್ರಪಂಚದಾದ್ಯಂತದ ಸೆಳೆತಗಳಿಗೆ, ಬೌದ್ಧಿಕ ಮತ್ತು ಸಾಂಸ್ಕೃತಿಕ ಸೃಜನಾತ್ಮಕತೆಗೆ ಒಡ್ಡಿಕೊಳ್ಳುವ ಅವಕಾಶವನ್ನು ಅವರ ಪುಟ್ಟ ಊರುಗಳೆಂದೂ ಕೊಡಲಾಗುತ್ತಿರಲಿಲ್ಲ.