ಆಧಾರ್‌ ನ ಲೋಪಗಳನ್ನು ದುರ್ಬಳಕೆ ಮಾಡುತ್ತಿರುವ ವಂಚಕರು: ವಿಶಿಷ್ಟ ಗುರುತು ಪ್ರಾಧಿಕಾರಕ್ಕೆ ದಿಲ್ಲಿ ಪೊಲೀಸರ ಪತ್ರ

Update: 2023-03-18 13:58 GMT

ಹೊಸದಿಲ್ಲಿ: ವಂಚಕರು ದುರುಪಯೋಗಪಡಿಸಿಕೊಳ್ಳುತ್ತಿರುವ ಆಧಾರ್‌ ವ್ಯವಸ್ಥೆಯ ಲೋಪದೋಷಗಳು ಹಾಗೂ ದುರ್ಬಲತೆಗಳ ಕುರಿತು ದಿಲ್ಲಿ ಪೊಲೀಸರು ಬೆಳಕು ಚೆಲ್ಲಿ ವಿಶಿಷ್ಟ ಗುರುತು ಪ್ರಾಧಿಕಾರಕ್ಕೆ ಪತ್ರ ಬರೆದಿದ್ದಾರೆ.

ಬ್ಯಾಂಕ್‌ ವಂಚನೆ ಸಹಿತ ಇತ್ತೀಚಿನ ಕೆಲ ಪ್ರಕರಣಗಳ ಪೊಲೀಸ್‌ ತನಿಖೆಯಿಂದ ಕಂಡುಕೊಂಡಂತೆ ವಿಶಿಷ್ಟ ಗುರುತು ಪ್ರಾಧಿಕಾರವು ಐಡಿಗಳನ್ನು ರಚಿಸುವಾಗ ಫೇಶಿಯಲ್‌ ಬಯೋಮೆಟ್ರಿಕ್ಸ್‌ ಅನ್ನು ಹೊಂದಾಣಿಕೆ ಮಾಡುತ್ತಿಲ್ಲ ಎಂದು ತಿಳಿದು ಬಂದಿದೆ.

ಆಧಾರ್‌ ಕಾರ್ಡ್‌ಗಳಲ್ಲಿ ಒಂದೇ ವ್ಯಕ್ತಿಯ ಫೋಟೋ ಇದ್ದರೂ ವಿವಿಧ ವ್ಯಕ್ತಿಗಳ ಹೆಸರುಗಳಲ್ಲಿ 12 ಬ್ಯಾಂಕ್‌ ಖಾತೆಗಳನ್ನು ತೆರೆಯಲಾಗಿರುವ ಪ್ರಕರಣದ ಕುರಿತು ದಿಲ್ಲಿ ಪೊಲೀಸರು ಪ್ರಾಧಿಕಾರದ ಗಮನ ಸೆಳೆದಿದ್ದಾರೆ.

ಸರಕಾರಿ ಸಂಸ್ಥೆಗಳಲ್ಲಿ ಮಾತ್ರ ಲಾಗಿನ್‌ ಮಾಡಬಹುದಾದ ಅಧಿಕೃತ ಆಧಾರ್‌ ಏಜಂಟರ ರುಜುವಾತುಗಳನ್ನೂ ಸಹ ವಂಚಕರು ಬಳಸುತ್ತಿದ್ದಾರೆ, ಜಿಪಿಎಸ್‌ ಟ್ಯಾಗಿಂಗ್‌ ಅನ್ನು ಬೈಪಾಸ್‌ ಮಾಡಲು ವಂಚಕರು ನಿಯೋಜಿತ ಸರ್ಕಾರಿ ಸಂಸ್ಥೆಗಳೊಂದಿಗೆ ಸಿಂಕ್‌ ಆಗುವಂತಾಗಲು ತಮ್ಮ ಲ್ಯಾಪ್‌ಟಾಪ್‌ಗಳನ್ನು ಸತತ ಮರುಕಾನ್ಫಿಗರ್‌ ಮಾಡುತ್ತಿರುವ ಅಂಶವನ್ನೂ ಪೊಲೀಸರು ಪ್ರಾಧಿಕಾರದ ಗಮನಕ್ಕೆ ತಂದಿದ್ದಾರೆ.

ಆಧಾರ್‌ ವ್ಯವಸ್ಥೆಗೆ ಸಿಲಿಕಾನ್‌ ಬೆರಳಚ್ಚು ಮತ್ತು ನೈಜ ಬೆರಳಚ್ಚು ನಡುವಿನ ವ್ಯತ್ಯಾಸ ಕಂಡುಹಿಡಿಯಲಾಗುತ್ತಿಲ್ಲ, ಇದರಿಂದಾಗಿ ವಂಚಕರು  ಅಧಿಕೃತ ಏಜಂಟರ ಸಿಲಿಕಾನ್‌ ಬೆರಳಚ್ಚುಗಳನ್ನು ಬಳಸುತ್ತಿದ್ದಾರೆ. ಐರಿಸ್‌ ಸ್ಕ್ಯಾನ್‌ ವಿಚಾರವೂ ಇದೇ ಆಗಿದೆ, ಜನರ ಕಲರ್‌ ಪ್ರಿಂಟ್‌ ಔಟ್‌ ಬಳಸಿ ಈ ಸ್ಕ್ಯಾನ್‌ ಅನ್ನೂ ವಂಚಿಸಬಹುದು ಎಂದು ದಿಲ್ಲಿ ಪೊಲೀಸರು ಹೇಳಿದ್ದಾರೆ.

ಆಧಾರ್‌ ವ್ಯವಸ್ಥೆಯು ಒಬ್ಬ ವ್ಯಕ್ತಿಯ  10 ಬೆರಳುಗಳನ್ನು ಪ್ರತ್ಯೇಕ ಗುರುತು ಎಂದು ಪರಿಗಣಿಸದೆ ಒಂದೇ ಗುರುತು ಎಂದು ಪರಿಗಣಿಸುತ್ತದೆ.ಇದೇ ಕಾರಣದಿಂದ ತಮ್ಮ ಬೆರಳಚ್ಚು ಬದಲಿಸಿದ ವ್ಯಕ್ತಿಗಳಿಗೆ ಹಲವು ಕಾರ್ಡ್‌ಗಳನ್ನು ಒದಗಿಸಲಾಗಿದೆ, ಅಂದರೆ ಉಂಗುರ ಬೆರಳು ಇರಿಸಬೇಕಾದಲ್ಲಿ ತೋರು ಬೆರಳು ಇರಿಸಿದ್ದಾರೆ ಎಂಬುದನ್ನು ಪೊಲೀಸರು ಕಂಡುಕೊಂಡಿದ್ದು ಈ ಮಾಹಿತಿಯನ್ನು ಪ್ರಾಧಿಕಾರಕ್ಕೆ ಒದಗಿಸಲಾಗಿದೆ.

Similar News