''ಅಮ್ಮಾ... ಹಿಟ್ಲರ್ ಯಾರು?''

Update: 2023-05-03 18:44 GMT

ಎಲ್ಲೋ ಒಂದು ಮಗು ಹಿಟ್ಲರನ ಬದಲಿಗೆ ಇನ್ಯಾವುದೋ ಹೆಸರನ್ನು ಸ್ಮರಿಸಿಕೊಂಡು ಅವರ್ಯಾರು ಎಂದು ಪ್ರಶ್ನೆ ಹಾಕಬಹುದು. ನಾವು ನೀಡಲಾಗದ ಉತ್ತರಕ್ಕಾಗಿ ಕಾಯಬಹುದು. ಅದಕ್ಕೆ ಟೆಕ್ಸಾಸ್ ಕಂಪೆನಿ ನೀಡಿದ ಸಲಹೆಗಳನ್ನು ನಾವೂ ಅನುಮೋದಿಸಬಹುದು, ಪ್ರಯತ್ನಿಸಿದರೆ ಮತ್ತು ಮನಸ್ಸಿದ್ದರೆ. ಪಿರಮಿಡ್‌ನ ಮೇಲ್ತುದಿಯಲ್ಲಿ ಕುಳಿತವನಿಗೆ ಹರಿತವಾದ ತುದಿ ಚುಚ್ಚುವ ಅನುಭವವಾಗದೇ ಇರದು. ಆದ್ದರಿಂದ ಎಲ್ಲರ ವಿಕಾಸವೆಂದರೆ ಎಲ್ಲರೊಂದಿಗೆ ಬದುಕುವುದು; ಅಳಿಸುವುದಲ್ಲ.


1943ರಲ್ಲಿ 2ನೇ ಮಹಾಯುದ್ಧ ಜೋರಾಗಿ ನಡೆಯುತ್ತಿತ್ತು. ವಿಶ್ವವೇ ಅಗಾಧ ಆತಂಕವನ್ನು ಅನುಭವಿಸುತ್ತಿತ್ತು. ಸಾರ್ವಜನಿಕ ಜೀವನವು ವರ್ಣ-ವಯಸ್ಸು-ವರ್ಗ ವ್ಯತ್ಯಾಸವಿಲ್ಲದೆ ಎಲ್ಲರನ್ನೂ ಬಾಧಿಸುತ್ತಿತ್ತು. ಇಂತಹ ಸಂದರ್ಭದಲ್ಲಿ 'ಟೆಕ್ಸಾಕೊ' ಎಂಬ ಲಾಂಛನವಿರುವ ಬಹುರಾಷ್ಟ್ರೀಯ ಅಮೆರಿಕದ ತೈಲ ಉದ್ದಿಮೆ ಟೆಕ್ಸಾಸ್ ಕಂಪೆನಿಯು ಒಂದು ಜಾಹೀರಾತನ್ನು ಪ್ರಕಟಿಸಿತು. ಅದರಲ್ಲಿ ಒಬ್ಬ ಪುಟ್ಟ ಹುಡುಗಿಯ ಚಿತ್ರ ಮತ್ತು ''ಅಮ್ಮಾ... ಹಿಟ್ಲರ್ ಯಾರು?'' ಎಂಬ ಶೀರ್ಷಿಕೆಯೊಂದಿಗೆ ಈ ಪ್ರಕಟಣೆಯಿತ್ತು:


''ಇಂದು ಅನೇಕ ಮಕ್ಕಳಿಗೆ ಹಿಟ್ಲರ್ ಯಾರೆಂದು ತಿಳಿದಿದೆ.. ಅವನ ನಿರ್ದಯ ಅನುಯಾಯಿಗಳು ಎಲ್ಲೆಲ್ಲಿ ಮೆರವಣಿಗೆ ನಡೆಸಿದರು, ಅಲ್ಲಿ ಬಾಲ್ಯವು ಭಯೋತ್ಪಾದನೆ, ದಾರಿದ್ರ್ಯ, ಆಪತ್ತು ಮತ್ತು ಸಾವಿನ ದುಃಸ್ವಪ್ನವಾಗಿದೆ. ನಮ್ಮ ಮಕ್ಕಳಿಗಾಗಿ ನಾವು ಈ ಕ್ರೌರ್ಯದ ಮೂಲವನ್ನು ನಾಶಗೊಳಿಸಬೇಕು. ಅದಕ್ಕಾಗಿ, ನಮ್ಮ ಮಂದಿ ಪ್ರಪಂಚದ ವೈರಿನೆಲೆಗಳ ಮೇಲೆ ಧಾಳಿ ನಡೆಸುತ್ತಿದ್ದಾರೆ.. ನಮ್ಮ ಕೈಗಾರಿಕೆಗಳು ತಮ್ಮ ವಿಶಾಲವಾದ ಶಾಂತಿಕಾಲದ ಶಕ್ತಿಯನ್ನು ಯುದ್ಧದ ಸರಬರಾಜುಗಳ ದೊಡ್ಡ ಹರಿವಾಗಿ ಪರಿವರ್ತಿಸುತ್ತಿದ್ದಾರೆ.
 ಅದಕ್ಕಾಗಿ ಟೆಕ್ಸಾಸ್ ಕಂಪೆನಿಯ ನಾವು ನಮ್ಮ ಶಾಂತಿಕಾಲದ ಸಂಪನ್ಮೂಲಗಳನ್ನು 100-ಅಕ್ಟೇನ್ ಏವಿಯೇಷನ್ ಗ್ಯಾಸೋಲಿನ್, ಹೆಚ್ಚಿನ ಸ್ಫೋಟಕಗಳಿಗಾಗಿ ಟೊಲುಯೀನ್, ನೌಕಾಪಡೆ, ಭೂಸೇನೆ ಮತ್ತು ವಾಯುಪಡೆಗಳಿಗೆ ಉತ್ತಮ ಗುಣಮಟ್ಟದ ನಯಗೊಳಿಸುವ ತೈಲಗಳು ಮತ್ತು ಇತರ ಅನೇಕ ಯುದ್ಧಕ್ಕೆ ಅಗತ್ಯವಿರುವ ಪರಿಕರಗಳ ಪ್ರವಾಹವಾಗಿ ಪರಿವರ್ತಿಸಿದ್ದೇವೆ.
ಅದಕ್ಕಾಗಿ, ನಾವು ವ್ಯಕ್ತಿಗಳಾಗಿ ನಮ್ಮ ನಮ್ಮ ಕಾರುಗಳನ್ನು, ನಮ್ಮ ಗ್ಯಾಸೋಲಿನ್‌ಗಳನ್ನು, ನಮ್ಮ ಟಯರುಗಳನ್ನು, ಸಂರಕ್ಷಿಸಬೇಕು... ಯುದ್ಧಬಾಂಡ್‌ಗಳನ್ನು, ಸ್ಟಾಂಪ್‌ಗಳನ್ನು ಖರೀದಿಸಬೇಕು... ಮತ್ತು ನಮಗೆ ಸಾಧ್ಯವಿರುವ ಎಲ್ಲ ರೀತಿಯಲ್ಲೂ ನೆರವಾಗಬೇಕು.
ಮಕ್ಕಳು 'ಅಮ್ಮಾ, ಹಿಟ್ಲರ್ ಯಾರು?' ಎಂದು ಕೇಳುವ ದಿನ ಬರಲೇಬೇಕು.''

ಯಾರೂ ಶಾಶ್ವತವಲ್ಲ. ಹಿಂದೆ ಶತಕೋಟಿರಾಯರುಗಳಾಳಿದ ನೆಲನ ತನ್ನದೆಂದು ಸ್ಥಾಪಿಸಲು ಯತ್ನಿಸಿದ ಹಿಟ್ಲರ್ ತನ್ನ ಕಾಲದ ಭಯಾನಕ ಕಪ್ಪುಮೋಡವಾಗಿದ್ದ. ಪ್ರಾಯಃ ಭಾರತದಂತಹ ದೇಶದಲ್ಲಿ ಸೇನಾಸಂಬಂಧಿ ಜನರನ್ನು ಹೊರತುಪಡಿಸಿದರೆ ಇತರರಿಗೆ ಬೆಲೆಯೇರಿಕೆ, ಆಹಾರದ ಅಭಾವ ಇತ್ಯಾದಿ ರುಜಿನಗಳು ಎದುರಾದವೇ ಹೊರತು ನೇರ ಸೇನಾಘಾತಗಳಾಗಿರಲಿಕ್ಕಿಲ್ಲ. ಆದರೆ ಪಾಶ್ಚಾತ್ಯ ರಾಷ್ಟ್ರಗಳು ಮುಖ್ಯವಾಗಿ ಯುರೋಪ್ ಖಂಡದ ರಾಷ್ಟ್ರಗಳು ಹಿಟ್ಲರನ ದೌಷಟ್ಯೆಕ್ಕೆ ಎರಡು ಬಾರಿ ತತ್ತರಿಸಿದವು. ಈ ಯುದ್ಧಗಳಿಗೆ ದೊಡ್ಡ ಕಾರಣಗಳಿರಲಿಲ್ಲ. ಅವು ವೈಯಕ್ತಿಕ ಅಹಂನ ಪರಿಣಾಮಗಳೇ ಆಗಿದ್ದವು. ಶ್ರೇಷ್ಠತೆಯ ವ್ಯಸನವನ್ನಾದರೂ ಸಹಿಸಬಹುದು; ಶ್ರೇಷ್ಠತೆಯ ಹುಚ್ಚಿನ ಮೂಲಕ ವ್ಯಾಪಿಸುವ ದುರಾಸೆಯ ಮಹತ್ವಾಕಾಂಕ್ಷೆಗಳನ್ನು ಸಹಿಸಲಾಗದು. ಚರಿತ್ರೆಯು ಮನುಷ್ಯನ ವಿಕಾಸದ ಹಂತವನ್ನು ಗುರುತಿಸಬಲ್ಲ ಮಹಾನದಿ. ಅದಿನ್ನೂ ಹರಿಯುತ್ತಲೇ ಇದೆ.

ಕಾಲದ ಹರಿವಿನಲ್ಲಿ ಅದು ಯಾವಾಗ ಎಲ್ಲಿ ಶಾಂತಿ-ಅಶಾಂತಿಯ ಮಹಾಸಾಗರವನ್ನು ತಲುಪುತ್ತದೆಯೋ ನಾವರಿಯೆವು. ನಡೆದ ಹೆಜ್ಜೆಗಳ ಸದ್ದನ್ನು, ಚಹರೆಯನ್ನು, ಗುರುತಿಸುವ ಉದ್ದೇಶವೇ ಮುಂಜಾಗ್ರತೆಯನ್ನು ಕೈಗೊಳ್ಳುವುದು; ಮಾಡಿದ ತಪ್ಪನ್ನು ಮಾಡದಿರಲು ಪ್ರಯತ್ನಿಸುವುದು; ತಪ್ಪುಮಾಡುವವರನ್ನು ಎಚ್ಚರಿಸುವುದು; ಕೇಡಿಗರಿಗೆ ಚರಿತ್ರೆಯನ್ನು ನೆನಪಿಸುವುದು. ಉತ್ತಮಿಕೆಯನ್ನು ಸಾಧಿಸುವುದು. ಈ ವಿಕಾಸವನ್ನು ಡಾರ್ವಿನ್ ಪ್ರಾಣಿ/ಜೀವ-ಶಾಸ್ತ್ರದ ವಿಕಾಸದ ಮೂಲಕ ನಿರೂಪಿಸಿದ. ಅಮೀದಾದಿಂದ ಮನುಷ್ಯನ ವರೆಗೆ ಜೀವವಿಕಾಸವನ್ನು ನಿರ್ದಿಷ್ಟ ಹೆಗ್ಗುರುತುಗಳ ಮೂಲಕ ತೋರಿಸಿಕೊಟ್ಟ. ಮನುಷ್ಯನ ಪರಂಪರೆಯು ತೀರಾ ಸರಳವಾಗಿತ್ತು ಮತ್ತು ಪರಾವಲಂಬಿಯಾಗಿತ್ತು, ಹಾಗೂ ಕಾಲಾನುಕ್ರಮಗಳಲ್ಲಿ ಆತ ತನ್ನ ಪ್ರಾಣಿಗುಣವನ್ನು ಕಳಚಿಕೊಂಡು ಮನುಷ್ಯನಾಗಿ ರೂಪುಗೊಂಡ ಎಂಬುದನ್ನು ನಮ್ಮ ಶಿಕ್ಷಣದ ಅಗತ್ಯ ಅಧ್ಯಯನವೆಂಬಷ್ಟು ಪರಿಣಾಮಕಾರಿಯಾಗಿ ಮತ್ತು ಅದಿಲ್ಲದೆ ಮನುಷ್ಯನು ತನ್ನ ವಿಕಾಸವನ್ನು ಕಂಡುಕೊಳ್ಳಲಾರ ಎಂಬಷ್ಟರ ಮಟ್ಟಿಗೆ ಸಾಮಾಜಿಕಗೊಳಿಸಿದ. ಮಂಗನಿಂದ ಮನುಷ್ಯ ಎಂಬ ಸರಳ ಮಾತುಗಳಿಂದ ನಾವಿದನ್ನು ವಿವರಿಸಲು ಪ್ರಯತ್ನಿಸುತ್ತೇವಾದರೂ ಅದು ಇಷ್ಟೇ ಅಲ್ಲ, ಇನ್ನಷ್ಟು ಸಂಕೀರ್ಣವಾಗಿರುವ ವಿಕಾಸವೆಂಬುದು ಹೆಚ್ಚಿನ ಅಧ್ಯಯನ ಮಾಡಿದವರಿಗೆ ಅರ್ಥವಾದೀತು.

ಕಿಟಿಕಿಯಿಂದ ನೋಡುವ ಜಗತ್ತಿಗೂ ಹೊರಗೆ ಬಟ್ಟಬಯಲಿನಲ್ಲಿ ನಿಂತು ನೋಡುವ ಜಗತ್ತಿಗೂ, ಭೂಗರ್ಭದಲ್ಲಿ, ಆಕಾಶದವಿಸ್ತಾರದಲ್ಲಿ ನೋಡುವ ಜಗತ್ತಿಗೂ ಬಹಳಷ್ಟು ವ್ಯತ್ಯಾಸಗಳಿವೆ. ವಿಕಾಸವೆಂದರೆ ಅಮೀಬಾದಿಂದ ಮನುಷ್ಯನಾಗುವುದಷ್ಟೇ ಅಲ್ಲ, ವಿಶ್ವದ ವಿಸ್ತಾರವನ್ನು ಅಳೆಯುವುದೂ ಹೌದು; ಕಾಲದ ಪರಿಮಿತಿಯನ್ನು ಅರ್ಥಮಾಡಿಕೊಳ್ಳುವುದೂ ಹೌದು. ಹೀಗೆಂದು ಎಲ್ಲವನ್ನೂ ವಿವರಿಸಿಕೊಂಡು ಹೋಗುವುದು ಸಾಧ್ಯವಿಲ್ಲ. ನಮ್ಮ ಪುರಾಣಗಳ ಕಥಾವಿನ್ಯಾಸದ ಹಾಗೆ ಚರಿತ್ರೆಯ ನಿರೂಪಣೆ. ರಾಮಾಯಣದಲ್ಲಿ 14 ವರ್ಷಗಳ ವನವಾಸದ ಕೊನೆಯ ಒಂದು ವರ್ಷ, ಅದರಲ್ಲೂ ಕೊನೆಯ ಕೆಲವು ತಿಂಗಳುಗಳೇ ಹೆಚ್ಚು ಪ್ರಮಾಣವನ್ನು ಬಳಸಿವೆ; ಕಬಳಿಸಿವೆ. ಅಲ್ಲಿಯ ವರೆಗೆ ಏನಾಯಿತೆಂಬುದನ್ನು ಸಂಕ್ಷಿಪ್ತವಾಗಿ ಒಂದೆರಡು ಪುಟಗಳಲ್ಲೇ ಹೇಳಲಾಗಿದೆ. ಮಹಾಭಾರತದಲ್ಲೂ ಅಷ್ಟೇ: ಹದಿನೆಂಟು ದಿನಗಳ ಯುದ್ಧದ ಕಾರಣೀಭೂತ ವಿವಾದದಿಂದ ಕೊನೆಯ ವರೆಗೆ ಆಕ್ರಮಿಸಿದಷ್ಟು ಪ್ರಮಾಣವನ್ನು ಅಲ್ಲಿ ವರೆಗಿನ ತಲೆಮಾರುಗಳ ಚರಿತ್ರೆ ಆಕ್ರಮಿಸಿಲ್ಲ. ತಲೆಮಾರುಗಳ ಸಂಘರ್ಷ ಜೀವಿತಾವಧಿಯನ್ನು ಒಂದೇ ಷಟ್ಪದಿಯಲ್ಲಿ ಹೇಳಿದ್ದೂ ಇದೆ. ನಮ್ಮ ಕಲ್ಪನೆಗೆ ಬೇಕಷ್ಟನ್ನು ಬಿಟ್ಟುಹೋಗಿವೆ.

ಆರಂಭದಲ್ಲಿ ಹೇಳಿದ ಪುಟ್ಟ ಜಾಹೀರಾತು ಒಂದು ದೊಡ್ಡ ಕಂಪೆನಿಯು ತನ್ನ ಕುರಿತ ಪ್ರಚಾರತಂತ್ರವಾಗಿ ಪ್ರಕಟಿಸಿದ್ದಾದರೂ ಅದು ಸಮಾಜಮುಖಿಯಾಗಿರುವುದನ್ನು ಕಾಣಬಹುದು. ಲೋಕಹಿತ, ಜನಹಿತವನ್ನು ಜಾಹೀರಾತುಗಳ ಮೂಲಕವೂ ಸಾಧಿಸಬಹುದು ಎಂಬುದನ್ನು ಇದರ ಮೂಲಕ ಕಾಣಬಹುದು. ಇಷ್ಟರಿಂದಲೇ ಇವು ಸಾಧನೆಯಾದವೆಂದು ತಿಳಿಯುವುದು ತಪ್ಪಾದೀತು. ದೂರಯಾನದಲ್ಲಿ ಇದೊಂದು ಹೆಜ್ಜೆ, ಅಷ್ಟೇ. ಚಂದ್ರನ ಮೇಲೆ ನೀಲ್‌ಆರ್ಮ್‌ಸ್ಟ್ರಾಂಗ್ ಕಾಲಿಟ್ಟಾಗ, ಆತನದ್ದು ಒಂದು ಹೆಜ್ಜೆ ಮಾತ್ರ; ಆದರೆ ಅದು ಮನುಕುಲದ ದೈತ್ಯ ಜಿಗಿತವೆಂದು ಹೇಳಿದರಲ್ಲ, ಹಾಗೆ. ವಾಮನನ ಮೂರು ತ್ರಿವಿಕ್ರಮ ಹೆಜ್ಜೆಗಳನ್ನು ಪುರಾಣಗಳು ಗುರುತಿಸಿದವಲ್ಲ, ಹಾಗೆ. ನಮ್ಮ ದೇಶದಲ್ಲೂ ದೊಡ್ಡ ಕಂಪೆನಿಗಳು ತಮ್ಮ ಜಾಹೀರಾತಿನ ಮೂಲಕ ಸಾಮಾಜಿಕವಾಗಿ ಒಳಗೊಂಡಿವೆ. ಚಾರಿತ್ರಿಕವಾಗಿವೆ. 'ಅಮುಲ್' ನಂತಹ ಸಾರ್ವಜನಿಕ ಉದ್ದಿಮೆಗಳು ದೈನಂದಿನ ಸಂಗತಿಗಳನ್ನು ಆಧರಿಸಿ ಇತ್ಯಾತ್ಮಕವಾಗಿ ಮತ್ತು ಲಘುಹಾಸ್ಯಮಯವಾಗಿ ಜಾಹೀರಾತನ್ನು ನೀಡುತ್ತಿವೆ. ಅವು ಯಾರಿಗೂ ನೋವು ನೀಡುವುದಿಲ್ಲ, ಬದಲಿಗೆ ಮುದನೀಡುತ್ತವೆ.

ಅವನ್ನು ನೋಡಿ ಮುಗುಳ್ನಗು ಬಾರದಿರದು. ಆದರೆ ಮುನುಷ್ಯರ ದೃಷ್ಟಿಕೋನವು ಶಿಕ್ಷಣದ ಹೊರತಾಗಿಯೂ ಆರಂಭ-ಅವಸಾನಗಳ ನಡುವೆ ಧ್ರುವೀಕರಣಗೊಂಡಾಗ, ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ಗೋಚರಿಸಿದಂತೆ ಎಲ್ಲದರಲ್ಲೂ ಏನಾದರೊಂದು ಕೇಡು ಗೋಚರಿಸುತ್ತದೆ. ಸೌಂದರ್ಯವು ನೋಟಕನ ಕಣ್ಣುಗಳಲ್ಲಿರುತ್ತವೆಂದು ಹೇಳಿದಂತೆ ಇಲ್ಲೂ ಒಳಿತು-ಕೆಡುಕುಗಳು ನೋಟಕನ ಮನಸ್ಸಿನಲ್ಲಿರುತ್ತವೆ ಮತ್ತು ಪ್ರಾಕೃತಿಕ ಅಥವಾ ಸುಸಂಸ್ಕೃತ ಅಥವಾ ವಿಕೃತವಾಗಿರುತ್ತವೆ. ಕೇಡುಗಳೇ ಸದಾಕಾಲವೂ ಬಹುಸಂಖ್ಯೆಯಲ್ಲಿರುವ ಸಮಾಜದಲ್ಲಿ ಸಹಜವಾಗಿಯೇ ಅವು ಏನು ಕೆಡುಕು ಮಾಡುತ್ತವೆಂದು ಸಮರ್ಥಿಸಲಾಗದವನೂ ಅದರಲ್ಲಿಲ್ಲದ ಕೆಡುಕನ್ನು ಪ್ರಸಾರ-ಪ್ರಚಾರ ಮಾಡಲೆಳಸುತ್ತಾನೆ. ಇಂತಹ ಪುಟ್ಟ ಸಂಗತಿಗಳೇ ಲಂಕಾದಹನಕ್ಕೆ, ಕುರುಕ್ಷೇತ್ರಕ್ಕೆ, ಉಪಪಾಂಡವರ ಹತ್ಯೆಗೆ ಕಾರಣವಾಗುತ್ತವೆ. ಈಚೆಗೆ ಟಾಟಾ ಸಂಸ್ಥೆಯು ಹಬ್ಬವೊಂದರ ಸಂದರ್ಭದಲ್ಲಿ ಪ್ರಕಟಿಸಿದ ಜಾಹೀರಾತಿನಲ್ಲಿ ಕೋಮುವಾದವನ್ನು ಗುರುತಿಸಿದ್ದರ ಪರಿಣಾಮವಾಗಿ ಒಂದು ಒಳ್ಳೆಯ ಸೌಂದರ್ಯ ಸಂವೇದನೆಯ ಅಂಶವು ಸಮಾಜದೆದುರಿನಿಂದ ಕಣ್ಮರೆೆಯಾಯಿತು. ಈ ರೀತಿ ಸದಾಶಯದ ಸಂಸ್ಕೃತಿಗಳು ವಿಕೃತಿಗೆ ಬಲಿಯಾದ ಇತರ ಉದಾಹರಣೆಗಳು ಇವೆ. ಇವೆಲ್ಲ ಇತಿಹಾಸದಲ್ಲಿ ವಿಕೃತದರ್ಶನದ ನಿದರ್ಶನಗಳಾಗಿ ಉಳಿಯುತ್ತವೆಯೆಂಬುದೇ ದುರಂತ.

ಮತ್ತೆ ಮತ್ತೆ ನೆನಪಾಗುವ ಜಾರ್ಜ್ ಆರ್ವೆಲ್ಲನ ಪ್ರಸಿದ್ಧ ಕೃತಿಗಳಾದ 'ಅನಿಮಲ್ ಫಾರ್ಮ್' ಮತ್ತು '1984' ಇಂತಹ ವಿಕಾರಗಳನ್ನು ಚಿತ್ರಿಸಿದವು. '1984' ಅಂತೂ ಅದಕ್ಕೆ ನಾಲ್ಕು ದಶಕಗಳ ಮೊದಲೇ ಊಹಾತ್ಮಕವಾಗಿ ಬರೆದ ಪ್ರವಾದಿತನದ ಸತ್ಯದಂತಿತ್ತು. ಅದರಲ್ಲಿ ಚರಿತ್ರೆಯನ್ನು ಅಕ್ಷರಶಃ ಅಳಿಸುವ -ಈ ಪದಕ್ಕೆ ಕನ್ನಡದಲ್ಲಿ ನಾಶಮಾಡುವ (destroy) ಎಂಬ ಅರ್ಥವಲ್ಲದೆ, ಬರೆದ್ದನ್ನು ಕಾಣದಂತೆ ಮಾಡುವ (erase) ಎಂಬ ಇನ್ನೊಂದು ಅರ್ಥವಿದೆಯಲ್ಲ!- ಚಿತ್ರಣವಿದೆ. ಒಂದು ರೀತಿಯಲ್ಲಿ ಹೇಳುವುದಾದರೆ ತೀರಾ ಸಂವೇದನಾಶೀಲವಾಗಿ ಬರೆದದ್ದರ ಮೇಲ್ಪದರದ ಅರ್ಥವು ಭಿನ್ನವಾಗಿರುವುದರಿಂದ, ಅಂತರಾಳವು ಜನಸಾಮಾನ್ಯರಿಗೆ ಅರ್ಥವಾಗುವುದಕ್ಕೆ ಬಹಳ ಕಾಲ ಬೇಕಾಗುತ್ತದೆ. ಆದರೆ ವ್ಯಂಗ್ಯ, ವಿಡಂಬನೆ, ನೀತಿ ಇವು ನೇರ ಮತ್ತು ಸರಳವಾಗಿ ಜನರನ್ನು ತಲುಪುತ್ತವೆ. ಈ ಕಾರಣದಿಂದಲೇ ಇರಬಹುದು ಬಹುಪಾಲು ಪ್ರಭುತ್ವಗಳು ಅಧಿಕಾರ ಸ್ಥಾಪನೆಗೆ ಮತ್ತು ಉಳಿವಿಗೆ ನೇರನುಡಿಯನ್ನು ದೂರವಿಡುತ್ತಾರೆ ಇಲ್ಲವೇ ದಂಡಿಸುತ್ತವೆ. ಅದಕ್ಕೆ ಬಹುಮುಖಗಳಿರುತ್ತವೆ.

ಇವುಗಳಲ್ಲಿ ಮುಖ್ಯವಾದದ್ದು ಚರಿತ್ರೆಯನ್ನು ಅಳಿಸುವುದು ಮತ್ತು ಆಯ್ದ ಭಾಗಗಳನ್ನು ಮಾತ್ರ ಉಳಿಸಿಕೊಂಡು ಬಳಸುವುದು. ಈಚೆಗೆ ಕೇಂದ್ರ ಸರಕಾರದ ಶಿಕ್ಷಣ ಪ್ರಾಧಿಕಾರವು ಡಾರ್ವಿನ್ನನ ವಿಕಾಸವಾದದ ಭಾಗವನ್ನು ಪಠ್ಯದಿಂದ ತೊಲಗಿಸಿದೆಯೆಂಬ ವರದಿಗಳು ಬಂದಿವೆ. ಇದನ್ನು ಸರಕಾರವು ನಿರಾಕರಿಸಿಲ್ಲ; ಪಠ್ಯದ ಗಾತ್ರ-ಪಾತ್ರಗಳನ್ನು ಕಡಿಮೆಗೊಳಿಸುವ ಉದ್ದೇಶದಿಂದ ಮತ್ತು ಬೇಕಾದವರು ಹೆಚ್ಚಿನ ಓದನ್ನು ಮಾಡುವ ಅವಕಾಶವನ್ನು ಉಳಿಸಿಕೊಡುವ ಇರಾದೆಯಿಂದ ಅವನ್ನು ಪ್ರತ್ಯೇಕಿಸಲಾಗಿದೆಯೆಂದು ಸಮರ್ಥಿಸಿಕೊಂಡಿತು. ಕಳೆದ ಕೆಲವು ವರುಷಗಳಿಂದ ಎಲ್ಲವನ್ನೂ ಸ್ವದೇಶೀಗೊಳಿಸುವ ಭರಾಟೆಯಲ್ಲಿ ವಿಜ್ಞಾನವನ್ನು ಮರೆಯಿಸಿ ಅಜ್ಞಾನ ಪರಂಪರೆಯನ್ನು ಹೇರುವ ಧೂಳಿನ ಹಾದಿಯಿದು. ನಮ್ಮಲ್ಲೇ ಎಲ್ಲವೂ ಇದ್ದದ್ದಾದರೆ ವೈಜ್ಞಾನಿಕ ಸಂಶೋಧನೆಗಳು ಬೂಟಾಟಿಕೆಯ ಸರಕುಗಳಾಗಿರಬೇಕಿತ್ತಲ್ಲ? ವಿಶ್ವದಲ್ಲಿ ಇನ್ನೆಲ್ಲೂ ಬುದ್ಧಿವಂತರೇ ಇಲ್ಲವೆಂಬ ಪ್ರತಿಷ್ಠೆಯ ಪ್ರತಿಷ್ಠಾಪನೆಯು ಆತ್ಮರತಿಯ ಸ್ಥಾಪನೆಯಲ್ಲದೆ ಲೋಕಮುಖದ ನ್ಯಾಯವಾಗಲು ಸಾಧ್ಯವಿಲ್ಲ. ಇದಕ್ಕೆ ಪೂರ್ವಸಮರ್ಥನೆಯೆಂಬಂತೆ ಅದಾಗಲೇ ಕೇಂದ್ರ ಸರಕಾರವು ಚರಿತ್ರೆಯಲ್ಲಿ ಮೊಗಲರ ಆಡಳಿತದ ಕಾಲಾವಧಿಯನ್ನು ಅಳಿಸಿತೋ ಮೊಟಕುಗೊಳಿಸಿತೋ ಅಂತೂ ಸುಮಾರು 3 ಶತಮಾನಗಳ ಇತಿಹಾಸ ಮಕ್ಕಳಿಗೆ ದಕ್ಕದಂತೆ ವ್ಯವಸ್ಥೆಮಾಡಿದೆಯೆಂದು ವರದಿಯಾಗಿದೆ.

ಚರಿತ್ರೆಯೆಂದರೆ ರಾಜರುಗಳ ಹುಟ್ಟು-ಸಾವು-ವೈಭವ-ಯುದ್ಧಗಳ ಚರಿತ್ರೆಯಷ್ಟೇ ಅಲ್ಲ, ಆ ಕಾಲದ ಸಂಸ್ಕೃತಿಯ ಚರಿತ್ರೆಯೂ, ಅವನ್ನು ಕೇಳುವ, ಓದುವ ಮೂಲಕ ನಾವೇನು ಮಾಡಬೇಕು ಮತ್ತು ಮಾಡಬಾರದೆನ್ನುವುದನ್ನು ಕಲಿಯುವುದು ಮಾತ್ರವಲ್ಲ, ನಮ್ಮ ಬದುಕು ಹೇಗಿತ್ತು ಮತ್ತು ಅದು ಹೇಗೆ ನಮ್ಮ ಕಾಲದ ವರೆಗೆ ರೂಪುಗೊಂಡಿತು ಹಾಗೂ ಮುಂದುವರಿಯುತ್ತದೆಯೆಂಬುದನ್ನು ಶೋಧಿಸುವ ಸುವರ್ಣಗಣಿಯೂ ಹೌದು. ಈ ಅವಧಿಯಲ್ಲಿ ಏನು ನಡೆಯಿತೆಂಬುದನ್ನು ಹೇಳದಿದ್ದರೆ ಕುತೂಹಲದ ಕಣ್ಣಿಗೆ ಅದು ದಕ್ಕುವುದಿಲ್ಲವೆಂದು ನಂಬುವುದು ಮೂರ್ಖತನ. ಅದು ಭೇದಿಸುವ ರಹಸ್ಯವಾಗಿ ಬದುಕಿನಲ್ಲಿ ಉಳಿಯುತ್ತದೆ. ರಹಸ್ಯಗಳೆಂದು ಉಳಿಸಿಕೊಂಡ ಎಂಥೆಂಥವೋ ಸ್ಫೋಟಿಸಿವೆ. ಅಂಥದ್ದರಲ್ಲಿ ನಮ್ಮ ಈಗಿನ ತಲೆಮಾರಿನ ವರೆಗಿನ ಶಿಕ್ಷಣವು ಹೊಂದಿದ್ದ ಅರಿವನ್ನು ನಮ್ಮ ಮುಂದಿನ ತಲೆಮಾರು ಹೊಂದಬಾರದೆಂದು ಆಶಿಸುವುದು ಪರಮ ಅನ್ಯಾಯ. ಮೊಗಲರ ಕಾಲವನ್ನು ಪುಸ್ತಕದ ಪುಟಗಳಿಂದ ವಿರಮಿಸಬಹುದು. ಆ ಅವಧಿಯಲ್ಲಿ ಏನಾಗಿದೆಯೆಂದು ಕೇಳುವ ಪ್ರಶ್ನೆಗೆ ಏನು ಉತ್ತರ ನೀಡಬಹುದು? ಬಾಬರನು ಪ್ರವೇಶವೇ ಆಗಲಿಲ್ಲ ಮತ್ತು ಬ್ರಿಟಿಷರ ಪ್ರವೇಶದ ವರೆಗೆ ಭಾರತದಲ್ಲಿ ಏನೂ ನಡೆಯಲಿಲ್ಲ ಎಂದು ವಾದಿಸಬಹುದೇ? ಬ್ರಿಟಿಷರು ಭಾರತಕ್ಕೆ ಬಂದಾಗ ಇಲ್ಲಿ ಯಾರು ದಿಲ್ಲಿಯನ್ನು ಅಳುತ್ತಿದ್ದರು ಎಂಬ ಸಹಜ ಪ್ರಶ್ನೆಗೆ ಏನು ಉತ್ತರ ನೀಡಬಹುದು? ಕುತುಬ್‌ಮಿನಾರ್, ತಾಜ್‌ಮಹಲ್ ಇವುಗಳನ್ನು ಎಷ್ಟು ಮತ್ತು ಯಾವ ಕಾಲದ, ಯಾವ ರೀತಿಯ ದೇಗುಲಗಳಾಗಿಸಬಹುದು? ದೇಶದುದ್ದಕ್ಕೂ ಈ ಅನನುಕೂಲ ಅನಿಷ್ಟಗಳನ್ನು ಅಳಿಸಿದರೆ ಕೊನೆಗೆ ಬಾಮಿಯಾನ್ ಬುದ್ಧ ಅಳಿದರೂ ಅವಶೇಷಗಳು ಉಳಿದುಕೊಂಡು ಮತ್ತೊಂದು ಸಂಸ್ಕೃತಿಯ ನಾಶದ ಕಥೆ ಉದಿಸಬಹುದೇ ಹೊರತು ಚರಿತ್ರೆ ಮರೆಯಾಗದು.

ಒಂದಿಷ್ಟು ವ್ಯಂಗ್ಯವಾಗಿ ಹೇಳುವುದಾದರೆ, 1947ರಲ್ಲಿ ಭಾರತವು ಸ್ವಾತಂತ್ರ್ಯವನ್ನು ಗಳಿಸಿದ ಮೇಲೆ 2014ರ ವರೆಗಿನ ಚರಿತ್ರೆಯನ್ನು ಅಳಿಸಬಹುದು; ಮಧ್ಯೆ 1999ರಿಂದ 2004ರ ವರೆಗಿನ ಚರಿತ್ರೆಯನ್ನು ಅದು ಹೇಗೋ ಮೆಲುಕಾಡಬಹುದು; ಆನಂತರ 2014ರಿಂದ ಭಾರತ ಉದಿಸಿತು ಎಂದು ಹೇಳಬಹುದು ಅಥವಾ 2014ರಲ್ಲಿ ಭಾರತದ ಮೊದಲ ಪ್ರಧಾನಿಯವರ ಪಟ್ಟಾಭಿಷೇಕವಾಯಿತೆಂದು ಸಾರಬಹುದು. ಅಲ್ಲಿಯ ವರೆಗೆ..? ಭಾರತ ಭೂಗತವಾಗಿತ್ತೇ ಅಥವಾ ನಮ್ಮ ಪುರಾಣಗಳ ಕಲ್ಪನೆಯಂತೆ ಪ್ರಳಯವಾಗಿ ಹೊಸ ಯುಗದ ಸ್ಥಾಪನೆಗಾಗಿ ಜನಮಾನಸ ಕಾಯುತ್ತಿದ್ದರೇ ಎಂದೆಲ್ಲ ಬರೆಯಬೇಕಾದೀತು. ಸಹನೆ ಈ ದೇಶದ ಬಹುದೊಡ್ಡ ಲಕ್ಷಣ. ಅದನ್ನು ಸರ್ವಧರ್ಮ ಸಮಭಾವವೆಂದು ಸಂವಿಧಾನ ರಚನಾಕಾರರು ಬರೆದರು. ಎಲ್ಲರನ್ನೂ ಎಲ್ಲವನ್ನೂ ಒಂದೇ ರೀತಿಯಲ್ಲಿ ಅಂದರೆ ನಿಷ್ಪಕ್ಷಪಾತವಾಗಿ ಕಾಣಬೇಕಾದ್ದು ಲೋಕನ್ಯಾಯ. ಆಗಲೇ ಸುಖೀಸಮಾಜವು ತನ್ನೊಳಗಿನ ಎಲ್ಲ ಭಿನ್ನತೆಯನ್ನು ವೈವಿಧ್ಯವಾಗಿ ಕಂಡು ಸರಿಪಡಿಸಿಕೊಂಡು ಬದುಕಬಹುದು. ಅದಿಲ್ಲವಾದರೆ ನಾನೇ ಈ ವಿಶ್ವದ ಮೊದಲ ಮತ್ತು ಕೊನೆಯ ಸೃಷ್ಟಿಯೆಂಬ ಅತಿಯಲ್ಲಿ ಮುಳುಗಿಹೋಗಬಹುದು. ಎಲ್ಲೋ ಒಂದು ಮಗು ಹಿಟ್ಲರನ ಬದಲಿಗೆ ಇನ್ಯಾವುದೋ ಹೆಸರನ್ನು ಸ್ಮರಿಸಿಕೊಂಡು ಅವರ್ಯಾರು ಎಂದು ಪ್ರಶ್ನೆ ಹಾಕಬಹುದು. ನಾವು ನೀಡಲಾಗದ ಉತ್ತರಕ್ಕಾಗಿ ಕಾಯಬಹುದು. ಅದಕ್ಕೆ ಟೆಕ್ಸಾಸ್ ಕಂಪೆನಿ ನೀಡಿದ ಸಲಹೆಗಳನ್ನು ನಾವೂ ಅನುಮೋದಿಸಬಹುದು, ಪ್ರಯತ್ನಿಸಿದರೆ ಮತ್ತು ಮನಸ್ಸಿದ್ದರೆ. ಪಿರಮಿಡ್‌ನ ಮೇಲ್ತುದಿಯಲ್ಲಿ ಕುಳಿತವನಿಗೆ ಹರಿತವಾದ ತುದಿ ಚುಚ್ಚುವ ಅನುಭವವಾಗದೇ ಇರದು. ಆದ್ದರಿಂದ ಎಲ್ಲರ ವಿಕಾಸವೆಂದರೆ ಎಲ್ಲರೊಂದಿಗೆ ಬದುಕುವುದು; ಅಳಿಸುವುದಲ್ಲ.

Similar News