ನವಭಾರತದ ಡೊಂಕು ದಿಮ್ಮಿ
(ಪರಕಲ ಪ್ರಭಾಕರ್ ಅವರ ರಾಜಕೀಯ ಅರ್ಥಶಾಸ್ತ್ರ)
ಮೋದಿ ಮತ್ತು ಅವರ ಸರಕಾರದ ಅವರೋಹಣ ಸ್ಥಿತಿಯನ್ನು ಪ್ರಭಾಕರ್ ಅನುಸರಿಸಿ ತಮ್ಮ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದಾರೆ. ಇಲ್ಲಿ ಅನವಶ್ಯಕ ಟೀಕೆಗಳಿಲ್ಲ; ಆದ್ದರಿಂದ ಗೊಂದಲಗಳಿಲ್ಲ. ಪ್ರಭಾಕರ್ ಅವರ ಭಾಷೆ ಹರಿತ. ಸಮರ್ಥಿಸುವ ವಿಚಾರಗಳ ಕುರಿತು ಅವರು ನಮ್ಮೆದುರಿರುವ ನೇರ ಉದಾಹರಣೆಗಳನ್ನು ನೀಡುತ್ತಾರೆ. ಅಂಕಿ-ಸಂಖ್ಯೆಗಳನ್ನೂ ಮೀರಬಲ್ಲ ಸುಳ್ಳುಗಳ ಕುರಿತು ಅವರು ಜಾಗೃತರಾಗುವಂತೆ ಕರೆ ನೀಡಿದ್ದಾರೆ.
ಇತ್ತೀಚೆಗಿನ ವರ್ಷಗಳಲ್ಲಿ ಭಾರತವು ತನ್ನೆಲ್ಲ ಘೋಷಿತ ಸಿದ್ಧಾಂತಗಳನ್ನು ಪ್ರಜಾತಂತ್ರವನ್ನು ದೂರೀಕರಿಸಿ ಹೊಸದೊಂದು ಮೂಲಭೂತವಾದಕ್ಕೆ, ಹೊರಳುತ್ತಿರುವುದನ್ನು ಕಾಣಬಹುದು. ಸುಮಾರು ಒಂದು ದಶಕಕ್ಕೂ ಹೆಚ್ಚು ಕಾಲ ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಮೋದಿ ಭಾರತೀಯ ಜನತಾ ಪಕ್ಷದಲ್ಲಿ ತನಗಿಂತ ಹಿರಿಯರೆಲ್ಲರನ್ನೂ ಹಿಂದಿಕ್ಕಿ 2014ರಲ್ಲಿ ಭಾರತದ ಪ್ರಧಾನಿಯಾದ ಬಳಿಕ ದೇಶದೆಲ್ಲೆಡೆ ಹಿಂದೂ ರಾಷ್ಟ್ರದ ಅಸಂಗತ ಲಾಂಛನಗಳು ಕಣ್ಣು ಕೋರೈಸುತ್ತಿವೆ. 1947ರಲ್ಲೇ ಭಾರತಕ್ಕೆ ಸ್ವಾತಂತ್ರ್ಯ ಬಂದಿದ್ದರೂ ಅದು 2014ರಲ್ಲೇ ಬಂದದ್ದು ಎಂದು ಸಾಧಿಸುವ ಪುರಾವೆಗಳನ್ನು ಆಡಳಿತ ಯಂತ್ರವು ಶೋಧಿಸುತ್ತಿದೆ. 2014ರ ಮೊದಲಿನ ಚರಿತ್ರೆಯನ್ನು ಜನಮಾನಸದಿಂದ ಅಳಿಸುವ ಇಲ್ಲವೇ ದೂರವಿಡುವ ಪ್ರವೃತ್ತಿಯ ಹೊಸ ರಾಜಕಾರಣ ಹೆಡೆಯೆತ್ತಿದೆ. ಇದನ್ನು ನಿತ್ಯ ನೋಡುತ್ತಿದ್ದೇವಾದರೂ ಬಹಳಷ್ಟು ಜನರು ಅದನ್ನು ಒಪ್ಪಿಕೊಂಡಂತಿದ್ದಾರೆ; ಇನ್ನು ಕೆಲವರು ಸಿನಿಕತನದಿಂದ ನಿಸ್ತೇಜರಾಗಿದ್ದಾರೆ. ಸಾಮಾನ್ಯವಾಗಿ ಜನರ ಅನಭಿಷಿಕ್ತ ಪ್ರತಿನಿಧಿಗಳಂತಿರಬೇಕಾಗಿದ್ದ ಸಾಹಿತಿಗಳು, ಕಲಾವಿದರು, ಚಿಂತಕರು ತಮ್ಮ ಸುತ್ತ ಸಾಹಿತ್ಯ-ಕಲೆಯ ಗೋಡೆಯನ್ನು ಕಟ್ಟಿಕೊಂಡು ಸತ್ತ ಮನೆಯಲ್ಲಿರುವಂತೆ ಸುಮ್ಮನಿದ್ದಾರೆ. ಇದೆಲ್ಲವನ್ನೂ ಆಡಳಿತವು ಗಮನಿಸಿ ತನ್ನ ಮೆರವಣಿಗೆಯನ್ನು ಬರ್ಬರವಾಗಿ ಮತ್ತು ಲಜ್ಜಾಹೀನವಾಗಿ ನಡೆಸುತ್ತಿದೆ. ಏನನ್ನೂ ಮಾಡದೆಯೂ ಎಲ್ಲವನ್ನೂ ಮಾಡಿದಂತೆಸೆವ ಅಪಾರ ಪ್ರತಿಭೆಯ ಪ್ರಧಾನಿ, ಅವರೊಂದಿಗೆ ಹೆಜ್ಜೆಹಾಕುವ ಕೋರಸ್ ಅನುಯಾಯಿಗಳು ದೇಶವನ್ನಾಳುತ್ತಿದ್ದಾರೆ. ಪ್ರತಿಭಟಿಸುವ, ಪ್ರತ್ಯಾಭಿವ್ಯಕ್ತಿಸುವ ಕೆಲವೇ ಧ್ವನಿಗಳು ದೇಶದಲ್ಲಿವೆ. ಅಂತಹವರಲ್ಲಿ ಪರಕಲ ಪ್ರಭಾಕರ್ ಒಬ್ಬರು.
ಪರಕಲ ಪ್ರಭಾಕರ್ ಅವರು ರಾಜಕೀಯ ಅರ್ಥಶಾಸ್ತ್ರಜ್ಞರು, ಬರಹಗಾರರು; ವಿಶ್ಲೇಷಕರು. ಆಂಧ್ರಪ್ರದೇಶದವರು; ಹೊಸದಿಲ್ಲಿಯ ಜವಾಹರಲಾಲ್ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಹಾಗೂ ಎಮ್‌ಫಿಲ್ ಪದವೀಧರ; ಅಲ್ಲಿನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದರು. ಬಳಿಕ ಎನ್‌ಎಸ್‌ಯುಐ ವಿದ್ಯಾರ್ಥಿ ಸಂಘದ ಪ್ರಮುಖರಾಗಿ ಅದರ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದರು. ಲಂಡನ್ ಸ್ಕೂಲ್ ಆಫ್ ಇಕಾನಮಿಕ್ಸ್‌ನಲ್ಲ್ಲಿ ಅಧ್ಯಯನ ಮಾಡಿ ಅಂತರ್‌ರಾಷ್ಟ್ರೀಯ ಸಂಪರ್ಕ ಮತ್ತು ವ್ಯವಹಾರಗಳ ರಾಜಕೀಯ ಎಂಬ ವಿಷಯದಲ್ಲಿ ಮಹಾ ಪ್ರಬಂಧವನ್ನು ಬರೆದು ಪಿಎಚ್‌ಡಿ ಪದವಿ ಪಡೆದರು. ಭಾರತಕ್ಕೆ ಮರಳಿ ನರಸಿಂಹರಾವ್ ಅವರ ಕಾಲದಲ್ಲಿ ಕೇಂದ್ರ ಸರಕಾರದ ರಾಜೀವ್ ಗಾಂಧಿ ನೆನಪಿನ ಯೋಜನೆಗಳ ಅನುಷ್ಠಾನದ ವಿಶೇಷ ಅಧಿಕಾರಿಯಾಗಿ ಕೆಲಸಮಾಡಿದರು. ಆದರೆ 1994ರಲ್ಲಿ ಈ ಹುದ್ದೆಯನ್ನು ತ್ಯಜಿಸಿ ರಾಜಕೀಯದಲ್ಲಿ ತನ್ನ ಭವಿಷ್ಯವನ್ನು ಪರೀಕ್ಷಿಸಿದರು. 1994ರಿಂದ 1996ರ ವರೆಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸಿನ ಸಕ್ರಿಯ ಸದಸ್ಯರಾಗಿದ್ದ ಅವರು 1997ರಿಂದ 2006ರ ವರೆಗೆ ಭಾಜಪದಲ್ಲಿ ದುಡಿದು ಕ್ರಮೇಣ ಅದರಿಂದ ದೂರವಾದರು. 2008ರಲ್ಲಿ ತೆಲುಗು ನಟ ಚಿರಂಜೀವಿ ಪ್ರಜಾರಾಜ್ಯ ಪಕ್ಷವನ್ನು ಸ್ಥಾಪಿಸಿದಾಗ ಪ್ರಭಾಕರ್ ಅದರ ಸ್ಥಾಪಕ ಕಾರ್ಯದರ್ಶಿಯಾಗಿದ್ದರು. ಆನಂತರ ಅದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನೊಂದಿಗೆ ವಿಲೀನವಾಯಿತು. ಬಳಿಕ ಅವರು ಆಂಧ್ರಪ್ರದೇಶ ಸರಕಾರದ ಸಂಪರ್ಕ ಸಲಹೆಗಾರರಾಗಿ 2014ರಿಂದ 2018ರ ವರೆಗೆ ಕೆಲಸ ಮಾಡಿದವರು. ಈ ಎಲ್ಲ ಅವಧಿಯಲ್ಲೂ ಅವರು ರಾಜಕೀಯ ಪಲ್ಲಟಗಳನ್ನು ಸೂಕ್ಷ್ಮವಾಗಿ ಗಮನಿಸಿದವರು. ಆನಂತರ ಈ ಎಲ್ಲ ರಾಜಕಾರಣದಿಂದ ದೂರವಾಗಿ ತನ್ನ ಪಾಡಿಗೆ ತಾನು ಸ್ವತಂತ್ರರಾಗಿ ವ್ಯವಹರಿಸಿದರು. ಆಂಧ್ರಪ್ರದೇಶದ ವಿಭಜನೆಯನ್ನು ವಿರೋಧಿಸಿದರು. ಹಲವಾರು ಸಂಘ ಸಂಸ್ಥೆಗಳ ಜೊತೆಗೆ ಸಕ್ರಿಯರಾಗಿರುವುದರ ಜೊತೆಗೆ 'ರೈಟ್ಸ್ ಫೋಲಿಯೋ' ಎಂಬ ಸಂಸ್ಥೆಯ ಆಡಳಿತ ನಿರ್ದೇಶಕರಾಗಿ ದುಡಿಯುತ್ತಿದ್ದಾರೆ. ಸಂಸಾರದ ವಿಚಾರಕ್ಕೆ ಬಂದರೆ ಅವರ ತಂದೆ-ತಾಯಿ ಇಬ್ಬರೂ ಶಾಸಕರಾಗಿದ್ದವರು. ರಾಜಕೀಯವನ್ನು ಬಾಲ್ಯದಿಂದಲೇ ನೋಡಿದ ಪ್ರಭಾಕರ್ ಉದ್ದಕ್ಕೂ ತನಗನ್ನಿಸಿದ್ದನ್ನು ನಿರ್ಭಿಡೆೆಯಿಂದ ಅಭಿವ್ಯಕ್ತಿಸಿದವರು. ಈ ಕಾರಣಗಳೇ ಇರಬೇಕು 1994, 1996 (ಕಾಂಗ್ರೆಸ್‌ನಿಂದ), 1998 ಮತ್ತು 2006 ಭಾಜಪದಿಂದ ಸ್ಪರ್ಧಿಸಿದರೂ ಅವರು ವಿಧಾನ ಸಭೆಗಾಗಲೀ ಲೋಕಸಭೆಗಾಗಲೀ ಆಯ್ಕೆಯಾಗಲಿಲ್ಲ. ಪ್ರಾಯಃ ನೇರ ನಡು-ನಡೆಗಳ ವ್ಯಕ್ತಿಗಳಿಗೆ ಚುನಾವಣೆಯಲ್ಲಿ ಗೆಲ್ಲುವುದು ಅಸಾಧ್ಯ ಮಾತು. ಅವರ ಪತ್ನಿ ಭಾರತ ಸರಕಾರದ ಹಣಕಾಸು ಮತ್ತು ಕಂಪೆನಿ ವ್ಯವಹಾರಗಳ ಸಚಿವರಾಗಿರುವ ನಿರ್ಮಲಾ ಸೀತಾರಾಮನ್; ಅವರ ಮಗಳು ವಾಙ್ಮಯಿ ಪತ್ರಕರ್ತೆ.
ಇವೆಲ್ಲದರ ನಡುವೆ ಪ್ರಭಾಕರ್ ತನ್ನ ಬರವಣಿಗೆಯ ಕಾಯಕವನ್ನು ತೆಲುಗಿನಲ್ಲೂ, ಇಂಗ್ಲಿಷಿನಲ್ಲೂ ಮುಂದುವರಿಸಿದರು. ಸಾಕಷ್ಟು ಅನುವಾದಗಳನ್ನೂ ಮಾಡಿದರು. ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿದರು. ಸರಕಾರದ, ಆಡಳಿತದ, ರಾಜಕಾರಣಗಳನ್ನು ವಿವರವಾಗಿ ಪರಾಮರ್ಶಿಸಿದರು. ಅವರ ಬರಹಗಳು ತಜ್ಞರೊಬ್ಬರ ಬರಹಗಳಾಗಿ ಕಾಣುತ್ತವೆಯೇ ಹೊರತು ಯಾವುದೇ ರಾಜಕೀಯ ಪಕ್ಷದ ಇಲ್ಲವೇ ಪಂಥಗಳ ವಕ್ತಾರರ ಬರಹದಂತೆ ಕಾಣುವುದಿಲ್ಲ. ಮುಖ್ಯವಾಗಿ ಕಳೆದೊಂದು ದಶಕದ ಬರಹಗಳನ್ನು ಗಮನಿಸಿದರೆ ಅವರ ಪತ್ನಿ ನಿರ್ಮಲಾ ಸೀತಾರಾಮನ್ ಭಾರತ ಸರಕಾರದ ಹಣಕಾಸು ಮತ್ತು ಕಂಪೆನಿ ವ್ಯವಹಾರಗಳ ಸಚಿವರಾಗಿರುವುದರಿಂದಷ್ಟೇ ಅವರು ಸ್ವತಂತ್ರರಾಗಿದ್ದಾರೆ; ಇಲ್ಲವಾದರೆ ಇಷ್ಟರಲ್ಲಿ ಅವರ ವಿರುದ್ಧ ಮೋದಿ ಸರಕಾರವು ಹಲವು ಪ್ರಕರಣಗಳನ್ನು ದಾಖಲಿಸಿ ಹಿಂಸಿಸುತ್ತಿತ್ತೆಂದು ಅನಿಸುತ್ತದೆ. ಏಕೆಂದರೆ ಅವರ ವಿಚಾರಲಹರಿ ಭಾಜಪದ ಮಾನದಂಡದಲ್ಲಿ 'ಅರ್ಬನ್ ನಕ್ಸಲ'ರನ್ನು ಹೋಲುತ್ತದೆ. ಈಗ ಪತ್ರಕರ್ತರಾದ ರಾಣಾ ಅಯ್ಯ್ಯೂಬ್, ರವೀಶ್ ಕುಮಾರ್, ಮತ್ತು ಆರ್ಥಿಕತಜ್ಞರಾದ ನೊಬೆಲ್ ಪ್ರಶಸ್ತಿ ವಿಜೇತ ಅಮಾರ್ತ್ಯಸೇನ್, ರಿಸರ್ವ್ ಬ್ಯಾಂಕಿನ ಮಾಜಿ ಗವರ್ನರ್ ರಘುರಾಮರಾಜನ್, ಚಿಂತಕ ರಾಮಚಂದ್ರ ಗುಹಾ ಮತ್ತಿತರರಂತೆ ಪ್ರಭಾಕರ್ ಭಾರತದ ಆಗುಹೋಗುಗಳನ್ನು ಸಾರ್ವಜನಿಕರಿಗೆ ಮನದಟ್ಟುಮಾಡುವ ಸಾಕ್ಷಿಪ್ರಜ್ಞೆಯಾಗಿ ನಮ್ಮ ನಡುವೆ ಇದ್ದಾರೆ. ಈ ಪರಿಚಯವು ಅವರ ಹೊಸ ಕೃತಿ 'ದಿ ಕ್ರೂಕ್ಡ್ ಟಿಂಬರ್ ಆಫ್ ನ್ಯೂ ಇಂಡಿಯಾ' (ನವಭಾರತದಲ್ಲಿ ಡೊಂಕು ದಿಮ್ಮಿ) ದ ಕುರಿತ ಪೀಠಿಕೆ, ಅಷ್ಟೇ.
ಬಹಳಷ್ಟು ಬಿಡಿ ಲೇಖನಗಳನ್ನು ಬರೆದರೂ ಪುಸ್ತಕ ರೂಪದಲ್ಲಿ ಬಂದ ಅವರ ಕೃತಿಗಳ ಕುರಿತು ಮಾಹಿತಿಯಿಲ್ಲ. ಶೀರ್ಷಿಕೆಯೇ ಇಡೀ ದೇಶದ ದಾರುಣ ಸ್ಥಿತಿಯನ್ನು ಸಂಕೇತಿಸುತ್ತದೆ. ಡೊಂಕು ದಿಮ್ಮಿಯಿಂದ ಎಂತಹ ಮೋಪನ್ನು, ಉಪಕರಣಗಳನ್ನು ತಯಾರಿಸಬಹುದು? ಒಂದು ರೀತಿಯಲ್ಲಿ ಡೊಂಕುಬಾಲಕ್ಕೆ ಗಿಲೀಟು ಚಿನ್ನದ ನಳಿಕೆಯನ್ನು ಸುರಿದು ನೆಟ್ಟಗೆ ಮಾಡಲು ಯತ್ನಿಸುವ ತಲ್ಲಣದ ಸ್ಥಿತಿಯನ್ನು ಇದು ತೋರಿಸುತ್ತದೆ. ಎರಡೂ ಕೃತಕ; ಎರಡೂ ಕೇಡು. ಕೃತಿಯಲ್ಲಿ ಸುಮಾರು 25 ಸ್ವತಂತ್ರ ಲೇಖನಗಳಿದ್ದು ಚಿಂತಕ ಸಂಜಯಬರು (ಇವರೂ ಜೆಎನ್‌ಯುವಿನ ಹಳೆ ವಿದ್ಯಾರ್ಥಿ) ಅವರ ಮುನ್ನುಡಿಯಿದೆ. ಪ್ರಸ್ತಾವನೆ, ಮುನ್ನುಡಿಗಳು ಕೂಡಾ ಹೆಚ್ಚು ಔಪಚಾರಿಕತೆಯನ್ನು ಹೊಂದದೆ ಲೇಖನಗಳ ಪೂರ್ವೋತ್ತರ ಸಮೀಕ್ಷೆಗೆ ಇಂಬುಕೊಡುವಂತಿವೆ. ಮೋದಿಯವರು ಮೊದಲ ಬಾರಿಗೆ ಪ್ರಧಾನಿಯಾದಾಗ ಮತ್ತು ಈ 8 ವರ್ಷಗಳಲ್ಲಿ ಅವರು ಅವರೋಹಿಸಿದ ಹಾದಿ ರೋಚಕ. ಮೊದಲ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಅವರು ಅಭಿವೃದ್ಧಿ ಮತ್ತು ಭ್ರಷ್ಟಾಚಾರದ ವಿಚಾರವನ್ನಷ್ಟೇ ಚರ್ಚಿಸಿದ್ದರು. ತಾನು ಪ್ರಧಾನ ಮಂತ್ರಿಯಲ್ಲ, ಪ್ರಧಾನ ಸೇವಕನೆಂದು ಘೋಷಿಸಿದರು. ತನ್ನ ಹಿಂದಿನ ಎಲ್ಲ ಪ್ರಧಾನಮಂತ್ರಿಗಳನ್ನು, ಅವರ ಸಾಧನೆಯನ್ನು ಪೂರ್ವಸೂರಿಗಳನ್ನು ಸ್ಮರಿಸುವಂತೆ ಸ್ಮರಿಸಿ ಅವನ್ನು ತಾನು ಮುಂದುವರಿಸುತ್ತಿದ್ದೇನೆಂದು ವಿನಮ್ರರಾಗಿ ಹೇಳಿದರು. ತಾವು ಬಹುಮತದಲ್ಲಿದ್ದೇವೆಂಬ ಕಾರಣದಿಂದ ಮುಂದುವರಿಯುತ್ತಿದ್ದೇವೆಂದು ಹೇಳುತ್ತಿಲ್ಲ; ಸರ್ವಸಮ್ಮತದೊಂದಿಗೆ ಮುಂದುವರಿಯಬೇಕಾಗಿದೆ ಎಂದರು. ಭಾರತದ ಸಾಧನೆಯು ಅದರ ಪ್ರಧಾನಿಗಳದ್ದು ಮಾತ್ರವಲ್ಲ, ಬದಲಿಗೆ ಸರಕಾರದಲ್ಲಿರುವ ಜನರು, ಸಂಸದರು ಮತ್ತು ಪ್ರತಿಪಕ್ಷಗಳದ್ದೂ ಆಗಿದೆಯೆಂದರು.
ಎಲ್ಲಾ ರಾಜಕೀಯ ಪಕ್ಷಗಳಿಗೂ ಅವರು ಅಂದು ವಂದಿಸಿದರು. ಇಷ್ಟೇ ಅಲ್ಲ, ಜಾತೀಯತೆ ಮತ್ತು ಮತಾಂಧತೆಗಳು ನಮ್ಮ ಸಮಾಜದ ವಿಷವೆಂದರು. ಹಿಂದಿರುಗಿ ನೋಡಿದರೆ ಯಾರಿಗೂ ಇದರಿಂದ ಹಿತವಾಗಲಿಲ್ಲವೆಂಬುದನ್ನು ಅರಿಯಬಹುದು ಎಂದರು. ಒಂದು ದಶಕದ ಕಾಲ ಎಲ್ಲ ಕೆಟ್ಟ ಯೋಚನೆಗಳನ್ನು ಶೈತ್ಯಾಗಾರದಲ್ಲಿಟ್ಟು ಬದುಕೋಣ; ಶಾಂತಿ, ಒಗ್ಗಟ್ಟು, ಸೌಹಾರ್ದ ಮತ್ತು ಭ್ರಾತೃತ್ವಗಳಿಂದ ನಮ್ಮ ಶಕ್ತಿ ಹೆಚ್ಚುತ್ತದೆಯೆಂದರು. ಭಾರತವನ್ನು 'ಟೀಮ್ ಇಂಡಿಯಾ' ಎಂದರು. ಈ ಮತ್ತು ಇಂತಹ ಮೋದಿ ಮರುವರ್ಷದಿಂದ ಮಾಯವಾದರು. ಅವರ 2014ರ ಭಾಷಣವನ್ನು ಕೇಳಿದರಷ್ಟೇ ಅವರು ಹೀಗೆ ಹೇಳಿದ್ದಾರೆಂದು ನಂಬಬಹುದು. ಇಲ್ಲಿಂದ ಮುಂದಿನ ವರ್ಷಗಳಲ್ಲಿ ಅವರ ಧಾಟಿಯೇ ಬದಲಾಯಿತು. ಅವರ ಭಾಷಣ ತಯಾರಕರ ತಂಡವೇ ಬದಲಾದಂತಿತ್ತು. ಅಥವಾ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಿದ್ಧಾಂತಗಳನ್ನು ಅಳವಡಿಸುವತ್ತ ಹೆಚ್ಚು ಗಮನ ನೀಡಿ ದೇಶ ಅಂದರೆ ಸರಕಾರ, ಸರಕಾರ ಅಂದರೆ ಆಡಳಿತ ಪಕ್ಷ, ಆಡಳಿತ ಪಕ್ಷ ಎಂದರೆ ಬಹುಮತೀಯ ಹಿಂದೂಗಳು ಎಂಬ ಪ್ರಮೇಯವನ್ನು ಆರಂಭಿಸಿದರು. ತನಗಿಂತ ಹಿಂದಿನ ಯಾವ ಪ್ರಧಾನಿಯೂ ಏನೂ ಮಾಡಲಿಲ್ಲ ಎಂದು ದೂರಲಾರಂಭಿಸಿದರು. ಭಾರತದ 6 ಲಕ್ಷ ಗ್ರಾಮಗಳ ಪೈಕಿ 18,500 ಗ್ರಾಮಗಳ ಹೊರತಾಗಿ ಉಳಿದೆಲ್ಲ ಗ್ರಾಮಗಳು (ಅಂದರೆ ಶೇ. 97 ಗ್ರಾಮಗಳು) 2014ರ ಮೊದಲೇ ಈ ಸೌಕರ್ಯವನ್ನು ಹೊಂದಿದ್ದವು ಎಂಬುದನ್ನು ಮರೆಮಾಚಿದರು. ರಿಲೇ ಓಟದಲ್ಲಿ ಕೊನೆಯ ಪಾಲು ಓಟವನ್ನು ಮಾಡುವ ಓಟಗಾರನು ತಾನೇ ಈ ವಿಜಯಕ್ಕೆ ಕಾರಣನೆಂದು ಹೇಳುವಂತೆ ಅವರ ಧೋರಣೆಯಿತ್ತು. ಹಳೇ ಯೋಜನೆಗಳಿಗೆ ಹೊಸಹೊಸ ಹೆಸರುಗಳನ್ನಿಟ್ಟು ತಮ್ಮದೇ ಎಂಬಂತೆ ಜನರಿಗೆ ಒಪ್ಪಿಸಲಾರಂಭಿಸಿದರು.
ಮೇಕ್ ಅಪ್ ಇಂಡಿಯಾ, ಸ್ಕಿಲ್ ಇಂಡಿಯಾ, ಸ್ಟಾರ್ಟ್‌ಅಪ್ ಇಂಡಿಯಾ, ಸ್ಟಾಂಡ್‌ಅಪ್ ಇಂಡಿಯಾ ಮುಂತಾಗಿ ವರ್ಣಿಸಿ ಬಡಿಸಿದರು. ಪುನರ್ನಾಮಕರಣವು ಯೋಗಿಯ ಸಾಧನೆಯಾಗುವುದಕ್ಕೂ ಮೊದಲೇ ಮೋದಿಯವರ ಸಾಧನೆಯಾಗಿತ್ತು. ವರ್ಷ ವರ್ಷದ ಮೋದಿ ಭಾಷಣವನ್ನು ಗಮನಿಸಿದರೆ ಪ್ರಜಾತಂತ್ರದಿಂದ ಸರ್ವಾಧಿಕಾರಕ್ಕೆ, ಮತಾಂಧತೆಗೆ ಭಾರತವು ಹೊರಳುತ್ತಿದ್ದುದನ್ನು, ಜಾರಿದ್ದನ್ನು ಸ್ಪಷ್ಟವಾಗಿ ಕಾಣಬಹುದಾಗಿತ್ತು. 2014ರಿಂದ 2022ರ ಕಾಲಕ್ಕೆ ಬಂದಾಗ ಅಮೃತ ಕಾಲವೆಂಬ ಹೊಸ ಘೋಷಣೆ ಆರಂಭವಾಯಿತು. ಈ ಅವಧಿಯಲ್ಲಿ ಪ್ರತಿಪಕ್ಷಗಳನ್ನು ವಿರೋಧಿಗಳಂತೆ ಕಾಣಲಾಗಿದೆ. ಸರಕಾರವನ್ನು ವಿರೋಧಿಸಿದರೆ ಎಲ್ಲಿ ವೈಯಕ್ತಿಕವಾಗಿ, ವ್ಯಾವಹಾರಿಕವಾಗಿ ತೊಂದರೆಯಾಗುತ್ತದೆಯೋ ಎಂದು ರಾಜಕಾರಣದ ಎಲ್ಲ ವ್ಯಕ್ತಿಗಳೂ ಪಕ್ಷಗಳೂ ಮುಟ್ಟಿನೋಡಿಕೊಳ್ಳುವಂತಾಗಿದೆ. ಅಲ್ಪಸಂಖ್ಯಾತರ ಮೇಲಿನ ಎಲ್ಲ ದಾಳಿಗಳನ್ನು ಅಲಕ್ಷಿಸುವ ಹೊಸ ಸಂಪ್ರದಾಯವನ್ನು ಕೇಂದ್ರ ಸರಕಾರವೇ ಮುಂಚೂಣಿಯಲ್ಲಿ ನಿಂತು ನಡೆಸಿದೆ. ಬಿಜೆಪಿ ಮತ್ತು ಸಂಘ ಪರಿವಾರವು ಭಾರತವನ್ನು ಹಿಂದೂ ರಾಷ್ಟ್ರವಾಗಿ ಪರಿವರ್ತಿಸುವತ್ತ ದಾಪುಗಾಲನ್ನಿಟ್ಟಿದೆ. ಇದನ್ನು ಕೆಲವರು ಗಮನಿಸುತ್ತಾರಾದರೂ ಯಾಕೆ ಸುಮ್ಮನಿದ್ದಾರೆ? ಅದಕ್ಕೆ ಪ್ರಭಾಕರ್ ಕಾರಣಗಳನ್ನು ಕೊಟ್ಟಿದ್ದಾರೆ: ಕೆಲವರು ಬದ್ಧತೆಯಿಂದ, ಇನ್ನು ಕೆಲವರು ಲಾಭಗಿಟ್ಟಿಸುವ ಯೋಚನೆಯಿಂದ, ಇನ್ನೂ ಕೆಲವರು ಭಯದಿಂದ, ಮೋದಿಯನ್ನು ಬೆಂಬಲಿಸುತ್ತಾರೆ ಇಲ್ಲವೇ ಸುಮ್ಮನಿದ್ದು ತಮ್ಮ ಸಮ್ಮತಿಯನ್ನು ಸೂಚಿಸುತ್ತಾರೆ.
ಪ್ರಭಾಕರ್ ಬಾತುಕೋಳಿ ಮತ್ತು ಮೊಲದಂತೆ ಕಾಣಬಲ್ಲ ಚಿತ್ರವನ್ನು ಉದಾಹರಿಸಿ ಎರಡು ಬಗೆಯ ಚಿತ್ರಗಳನ್ನು ಕಾಣುವ ಎರಡು ಮಾದರಿಯ ಜನರ ಇಂಗಿತವನ್ನು ನಿದರ್ಶನವಾಗಿ ನೀಡುತ್ತಾರೆ. ಜಾತ್ಯತೀತ ಪ್ರಜಾಪ್ರಭುತ್ವದ ಮೊಲವನ್ನು ಕಾಣುವ ಸಮುದಾಯ ಒಂದಾದರೆ ಹಿಂದುತ್ವದ ಮತಾಂಧತೆಯನ್ನು ಕಾಣುವ ಸಮುದಾಯ ಇನ್ನೊಂದು. ಅವರವರ ಭಾವಕ್ಕೆ, ಅವರವರ ಭಕುತಿಗೆ. ದೇಶದಲ್ಲಿ ಅಲ್ಪಸಂಖ್ಯಾತರ ಜನಸಂಖ್ಯೆ ಹೆಚ್ಚಾಗುತ್ತದೆಂಬ ಆತಂಕವನ್ನು ಸುಳ್ಳಾಗಿಯೇ ಸೃಷ್ಟಿಸಿ ಹಿಂದೂಗಳನ್ನು ಒಟ್ಟಾಗಿಸುವ ತಂತ್ರವನ್ನು ಪ್ರಭಾಕರ್ ಅಂಕಿ-ಅಂಶಗಳ ಸಹಿತ ವಿವರಿಸಿದ್ದಾರೆ. ಸ್ವತಹ ಅಂಕಿ-ಅಂಶಗಳ ವಿಜ್ಞಾನಿಯಾಗಿ ಅವರು ಈ ಪೊಳ್ಳನ್ನು ಅಗೆದುತೆಗೆದಿದ್ದಾರೆ. ಚುನಾವಣೆ ಬಂತೆಂದರೆ ಮತೀಯ ಗಲಭೆಗಳನ್ನು ಪ್ರಚೋದಿಸುವುದು ಮತ್ತು ಒಂದು ವೇಳೆ ಸಿಗಬೇಕಾದಷ್ಟು ಸ್ಥಾನಗಳು ಲಭಿಸದಿದ್ದಲ್ಲಿ ಆಪರೇಷನ್ ಕಮಲವನ್ನು ಮಾಡಿಸಿ ಅಧಿಕಾರವನ್ನು ಪಡೆಯುವುದು ಇಂತಹ ಅನೀತಿಗಳನ್ನು ನೀತಿಗಳಾಗಿ ಪರಿಗಣಿಸುವುದು ಈಗ ಭಾರತೀಯತೆಯಾಗಿದೆ. ಹಿಂದಿ ಮತ್ತು ಹಿಂದೂವನ್ನು ರಾಷ್ಟ್ರೀಯತೆಗೆ ಸಮೀಕರಿಸುವಲ್ಲಿ ಮೋದಿ ಯಶಸ್ವಿಯಾಗಿದ್ದಾರೆ.
ಮತೀಯತೆಯು ಮೂಢನಂಬಿಕೆಯಾಗಿತ್ತು; ಅದೀಗ ಆಧುನಿಕ ಸಂಪ್ರದಾಯವಾಗುತ್ತಿದೆ. ಜನಪ್ರಿಯ ರಾಜಕಾರಣವಾಗುತ್ತಿದೆ; ಸಾಮಾಜಿಕ ಧರ್ಮವಾಗುತ್ತಿದೆ. ಗಾಂಧಿ, ನೆಹರೂ, ಪಟೇಲ್, ಸುಭಾಸ್ ಇದ್ದಲ್ಲಿ ಪಟೇಲ್, ಸುಭಾಸ್, ಗೋಡ್ಸೆ, ಸಾವರ್ಕರ್ ಅವರನ್ನು ಸ್ಥಾಪಿಸುವ ಹುನ್ನಾರ ನಡೆಯುತ್ತಿದೆ. ಆದರೆ ಈ ಯಾವ ಅವಿಚಾರಗಳನ್ನೂ ಎದುರಿಸುವ ಶಕ್ತಿ ಪ್ರತಿಪಕ್ಷಗಳಿಗೆ ಕಡಿಮೆಯಾಗುತ್ತಿದೆ. ಬೇಲಿಯಲ್ಲಿ ಕುಳಿತವರು ಅತ್ತಿಂದಿತ್ತ ನೋಡುವುದೇ ಹೊರತು ಏನನ್ನೂ ಹೇಳಲಾರದ ಸ್ಥಿತಿಗೆ ಬಂದಿದ್ದಾರೆ. ಮೋದಿ ಮತ್ತು ಅವರ ಸರಕಾರದ ಅವರೋಹಣ ಸ್ಥಿತಿಯನ್ನು ಪ್ರಭಾಕರ್ ಅನುಸರಿಸಿ ತಮ್ಮ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದಾರೆ. ಇಲ್ಲಿ ಅನವಶ್ಯಕ ಟೀಕೆಗಳಿಲ್ಲ; ಆದ್ದರಿಂದ ಗೊಂದಲಗಳಿಲ್ಲ. ಪ್ರಭಾಕರ್ ಅವರ ಭಾಷೆ ಹರಿತ. ಸಮರ್ಥಿಸುವ ವಿಚಾರಗಳ ಕುರಿತು ಅವರು ನಮ್ಮೆದುರಿರುವ ನೇರ ಉದಾಹರಣೆಗಳನ್ನು ನೀಡುತ್ತಾರೆ. ಅಂಕಿ-ಸಂಖ್ಯೆಗಳನ್ನೂ ಮೀರಬಲ್ಲ ಸುಳ್ಳುಗಳ ಕುರಿತು ಅವರು ಜಾಗೃತರಾಗುವಂತೆ ಕರೆ ನೀಡಿದ್ದಾರೆ. ಇಂತಹ ಹಲವು ವಿಚಾರಗಳನ್ನು ಪ್ರಭಾಕರ್ ಕಲೆಹಾಕಿ ಇದೊಂದು 'ದಶಕದ ದಿನಚರಿ'ಯಾಗುವಂತೆ ವಿವರಿಸಿದ್ದಾರೆ. ಓದಿದರೆ ಸರಕಾರವೂ ಬೆಚ್ಚಿ ಬೀಳಬಹುದು; ಆದರೆ ಕಲೆಯನ್ನು ವಾಸ್ತವವೆಂದು ನಂಬಿಸಿ 'ಕಾಶ್ಮೀರ್ ಫೈಲ್ಸ್', 'ಕೇರಳ ಸ್ಟೋರಿ'ಗಳನ್ನು ಗಳಿಕೆ ಒರತೆಯಾಗಿಸುವ ಜನದಟ್ಟಣೆಯಲ್ಲಿ ವಾಸ್ತವದ ಕುರುಡುತನಕ್ಕೆ ಯಾವ ಕ್ಯಾಟರಾಕ್ಟ್ ಎಂಬುದನ್ನು ನಾವು ಓದುಗರು ವಿವೇಕವನ್ನು ಬಳಸಿ ನಿರ್ಧರಿಸಬೇಕಾದ ದಿಸೆಯಲ್ಲಿ ಪ್ರಭಾಕರ್ ಯಶಸ್ವಿಯಾಗಿದ್ದಾರೆ.