ಝುಬೈರ್ ವಿರುದ್ಧ ನಿಂದನಾತ್ಮಕ ಟ್ವೀಟ್ ಮಾಡಿದ ವ್ಯಕ್ತಿಯ ಬಗ್ಗೆ ಯಾವ ಕ್ರಮ ಕೈಗೊಂಡಿದ್ದೀರಿ?
ದಿಲ್ಲಿ ಪೊಲೀಸರಿಗೆ ಹೈಕೋರ್ಟ್ ಪ್ರಶ್ನೆ
ಹೊಸದಿಲ್ಲಿ: ಆಲ್ಟ್ ನ್ಯೂಸ್‌ನ ಸಹಸಂಸ್ಥಾಪಕ ಮೊಹಮ್ಮದ್ ಝುಬೈರ್ ವಿರುದ್ಧ ನಿಂದನಾತ್ಮಕ ಟ್ವೀಟ್‌ಗಳನ್ನು ಪೋಸ್ಟ್ ಮಾಡಿರುವ ಟ್ವಿಟರ್ ಬಳಕೆದಾರನ ವಿರುದ್ಧ ಯಾವ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ದಿಲ್ಲಿ ಹೈಕೋರ್ಟ್ ಬುಧವಾರ ದಿಲ್ಲಿ ಪೊಲೀಸರನ್ನು ಪ್ರಶ್ನಿಸಿದೆ.
ಈ ವಿಷಯವಾಗಿ ಆರು ವಾರಗಳೊಳಗೆ ಯಥಾಸ್ಥಿತಿ ವರದಿಯನ್ನು ಸಲ್ಲಿಸುವಂತೆಯೂ ಹೈಕೋರ್ಟ್ ದಿಲ್ಲಿ ಪೊಲೀಸರನ್ನು ಆದೇಶಿಸಿದೆ. ‘‘ನೀವು ಝುಬೈರ್ ವಿರುದ್ಧ ಎಲ್ಲಾ ಅಸ್ತ್ರಗಳನ್ನು ಬಳಸಿದ್ದೀರಿ. ಆದರೂ ಈ ಪ್ರಕರಣವು ಕ್ಷೀಣವಾಗಿ ಅಂತ್ಯವನ್ನು ಕಂಡಿತು. ಹಾಗೆಯೇ ಆಗ ಬೇಕಿತ್ತು ಕೂಡಾ. ಯಾಕೆಂದರೆ ಅಲ್ಲಿ ಅವರ ವಿರುದ್ಧ ಯಾವುದೇ ಪುರಾವೆಯಿರಲಿಲ್ಲ. ಆದರೆ ಝುಬೈರ್ ವಿರುದ್ಧ ನಿಂದನಾತ್ಮಕ ಟ್ವೀಟ್ ಮಾಡಿರುವ ವ್ಯಕ್ತಿಯ ವಿರುದ್ಧ ನೀವು ಯಾವ ಕ್ರಮವನ್ನು ಕೈಗೊಂಡಿದ್ದೀರಿ?’’ ಎಂದು ಹೈಕೋರ್ಟ್ ದಿಲ್ಲಿ ಪೊಲೀಸರನ್ನು ಪ್ರಶ್ನಿಸಿತು.
ಪ್ರಕರಣದ ಮುಂದಿನ ಆಲಿಕೆ ಸೆಪ್ಟೆಂಬರ್ 14ರಂದು ನಡೆಯಲಿದೆ. ‘‘ ದ್ವೇಷ ಭಾಷಣಗಳ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳುವಂತೆ ಸುಪ್ರೀಂಕೋರ್ಟ್ ಪದೇ ಪದೇ ಕರೆ ನೀಡುತ್ತಲೇ ಬಂದಿದೆ. ಒಂದು ವೇಳೆ ದ್ವೇಷ ಭಾಷಣದ ಕುರಿತಾಗಿ ಯಾವುದೇ ದೂರು ಬಾರದೆ ಇದ್ದರೂ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಬೇಕೆಂದು ಅದು ಸೂಚಿಸಿದೆ’’ ಎಂದು ನ್ಯಾಯಮೂರ್ತಿ ಅನೂಪ್ ಜೈರಾಮ್ ಭಾಮ್‌ಭನಿ ತಿಳಿಸಿದರು.
ತನ್ನನ್ನು ನಿಂದಿಸಿದ ಹಾಗೂ ತುಚ್ಛವಾಗಿ ಟೀಕೆಸಿದ ಹಾಗೂ ಕೋಮು ಪ್ರಚೋದನಕಾರಿ ಅನಿಸಿಕೆಗಳನ್ನು ಟ್ವಿಟರ್ ಪೇಜ್‌ನಲ್ಲಿ ಬರೆದ ವ್ಯಕ್ತಿಯ ವಿರುದ್ಧ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯಿಸಿದ್ದಕ್ಕಾಗಿ ತನ್ನ ವಿರುದ್ಧ ದಾಖಲಾದ ಎಫ್‌ಐಆರ್ ಅನ್ನು ರದ್ದುಗೊಳಿಸಬೇಕೆಂದು ಕೋರಿ ಝುಬೈರ್ ಸಲ್ಲಿಸಿದ ಅರ್ಜಿಯ ವಿಚಾರಣೆ ಸಂದರ್ಭ ಹೈಕೋರ್ಟ್ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ.
ತನ್ನ ವಿರುದ್ಧ ನಿಂದನಾತ್ಮಕ ಟೀಕೆಗಳನ್ನು ಮಾಡಿದ್ದ ವ್ಯಕ್ತಿಯು ಆತನ ಮೊಮ್ಮಗಳೊಂದಿಗಿರುವ್ನ ಛಾಯಾಚಿತ್ರವನ್ನು , ಟ್ವಿಟರ್‌ನ ಡಿಸ್‌ಪ್ಲೇಯಲ್ಲಿ ಪ್ರಕಟಿಸಿದ್ದನು. ಈ ಬಗ್ಗೆ ಮರುಟ್ವೀಟ್ ಮಾಡಿದ್ದ ಝುಬೈರ್ ಅವರು ಪ್ರೊಫೈಲ್‌ನ ಛಾಯಾಚಿತ್ರದಲ್ಲಿದ್ದ ಅಪ್ರಾಪ್ತ ಬಾಲಕಿಯ ಮುಖವನ್ನು ಮಸುಕುಗೊಳಿಸಿ, ‘‘ ಹಲೋ... ಸಾಮಾಜಿಕ ಜಾಲತಾಣಗಳಲ್ಲಿ ಜನರನ್ನು ನಿಂದಿಸುವುದು ನಿಮ್ಮ ಅರೆಕಾಲಿಕ ಉದ್ಯೋಗವೆಂದು ನಿಮ್ಮ ಮುದ್ದಿನ ಮೊಮ್ಮಗಳಿಗೆ ತಿಳಿದಿದೆಯೇ?. ನಿಮ್ಮ ಪ್ರೊಫೈಲ್ ಚಿತ್ರವನ್ನು ಬದಲಾಯಿಸಬೇಕೆಂದು ನಾನು ನಿಮಗೆ ಸಲಹೆ ನೀಡುತ್ತಿದ್ದೇನೆ’’ ಎಂದು ಬರೆದಿದ್ದರು.