ಮರ ಕಳ್ಳಸಾಗಣೆದಾರರಿಂದ ಅರಣ್ಯಾಧಿಕಾರಿ ಹತ್ಯೆ; ಕಾರ್ಯಾಚರಣೆ ವೇಳೆ ಮೂವರಿಗೆ ಗಾಯ
ಗುವಾಹತಿ: ಮರ ಕಳ್ಳಸಾಗಣೆದಾರರ ವಿರುದ್ಧದ ಕಾರ್ಯಾಚರಣೆ ವೇಳೆ ಶಂಕಿತ ಕಳ್ಳಸಾಗಣೆದಾರರರು ಅರಣ್ಯರಕ್ಷಕರೊಬ್ಬರನ್ನು ಹತ್ಯೆ ಮಾಡಿರುವ ಘಟನೆ ಸೋಮವಾರ ತಡರಾತ್ರಿ ಸಂಭವಿಸಿದೆ. ಗೋಪಾಲಪುರ ಜಿಲ್ಲೆಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅವರ ಮೂವರು ಸಹೋದ್ಯೋಗಿಗಳು ಗಾಯಗೊಂಡಿದ್ದಾರೆ.
ಬೋರೆ ಮಾಟಿಯಾ ಮೀಸಲು ಅರಣ್ಯದಲ್ಲಿ ರಜ್ಬೀರ್ ಅಹ್ಮದ್ ಹಾಗೂ ಅವರ ತಂಡ ಕಳ್ಳಸಾಗಣೆದಾರರ ವಿರುದ್ಧ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ದೊಣ್ಣೆ ಮತ್ತು ಇತರ ಹರಿತವಾದ ಆಯುಧಗಳಿಂದ ಅವರ ಮೇಳೆ ಹಲ್ಲೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ದಾಳಿಕೋರರನ್ನು ಬುಧವಾರದ ಒಳಗಾಗಿ ಬಂಧಿಸಿ, ಕಳ್ಳಸಾಗಣೆದಾರರಿಗೆ ಪ್ರಬಲ ಸಂದೇಶವನ್ನು ರವಾನಿಸುವಂತೆ ಅಸ್ಸಾಂ ಡಿಜಿಪಿ ಜಿ.ಪಿ.ಸಿಂಗ್ ಆದೇಶ ನೀಡಿದ್ದಾರೆ. "ಅರಣ್ಯ ಸಿಬ್ಬಂದಿ ಮೇಲೆ ನಡೆದಿರುವ ದಾಳಿ, ಅರಣ್ಯ ಒತ್ತುವರಿಯನ್ನು ತೆರವುಗೊಳಿಸುವ ಸರ್ಕಾರದ ಪ್ರಯತ್ನಕ್ಕೆ ಅಡ್ಡಿಪಡಿಸುವ ಯತ್ನ. ಈ ವಿಷಯದಲ್ಲಿ ಯಾರಿಗೂ ವಿನಾಯಿತಿ ನೀಡುವ ಪ್ರಶ್ನೆಯೇ ಇಲ್ಲ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕಳ್ಳಸಾಗಣೆದಾರರು ಸಿಬ್ಬಂದಿಯ ಮೊಬೈಲ್ ಹಾಗೂ ಎರಡು ಚಿನ್ನದ ಉಂಗುರಗಳನ್ನು ಕೂಡಾ ಕಿತ್ತುಕೊಂಡಿದ್ದಾರೆ ಎಂದು ದುಧೋನಿ ಠಾಣೆಯ ಅಧಿಕಾರಿ ದುಲಾಲ್ ಮಹಾಂತ ವಿವರಿಸಿದ್ದಾರೆ.