ಪ್ರಜಾತಂತ್ರದಲ್ಲಿ ಪ್ರಭುತಂತ್ರ
ದಕ್ಷಿಣದ ಹಿರಿಯ ಸ್ಥಾನವು ತಮಿಳುನಾಡಿಗೆ ಸಲ್ಲುತ್ತದೆಂಬ ಅಭಿಪ್ರಾಯ ಪ್ರಧಾನಿ ಬಳಗಕ್ಕೆ. ಆದ್ದರಿಂದಲೇ ಅದ್ಯಾವುದೋ ಪ್ರಭೃತಿ ವಸ್ತುಸಂಗ್ರಹಾಲಯದಲ್ಲಿದ್ದ ಸೆಂಗೋಲ್‌ನ್ನು ನೆನಪಿಸಿದ್ದು. ಕಳೆದ 8-9 ವರ್ಷಗಳಲ್ಲಿ ಪ್ರಧಾನಿ ಪಡೆ ಮಾಡಿದ್ದೆಂದರೆ- ಮರೆಯಬೇಕಾದ್ದನ್ನು ನೆನಪಿಸಿದ್ದು; ಮತ್ತು ನೆನಪಿಡಬೇಕಾದ್ದನ್ನು ಮರೆಸಲು ಪ್ರಯತ್ನಿಸಿದ್ದು. ವೈಜ್ಞಾನಿಕ ಮನೋಭಾವಕ್ಕೆ ತಕ್ಕುದಾದ ಪ್ರಜಾತಂತ್ರದಲ್ಲಿ ರಾಜನನ್ನು ನೆನಪಿಸುವ ಯಾವ ವಸ್ತುವಿಗೂ ಮಾನ್ಯತೆ ಸಲ್ಲದು. ರಾಜನೇ ದಂಡವಾದ ಮೇಲೆ ರಾಜದಂಡಕ್ಕೇನು ಪ್ರಾಮುಖ್ಯತೆ? ಸರಕಾರದ ಸಂಗ್ರಹಾಲಯದಲ್ಲಿ ಅಲ್ಲದಿದ್ದರೆ ಟಿಪ್ಪುವಿನ ಖಡ್ಗದಂತೆ ಅದು ಹರಾಜಾಗಿ ಯಾರದ್ದೋ ಸಂಗ್ರಹಾಲಯವನ್ನು ಸೇರಬೇಕಾದ ವಸ್ತು. ಅದಕ್ಕಿರುವ ಬೆಲೆ ಅಷ್ಟೇ.
ಸಂಸತ್ತಿನ ಹೊಸ ಭವನ ಉದ್ಘಾಟನೆಯಾಗಿದೆ. ಅದರ ಸೃಷ್ಟಿ-ಸ್ಥಿತಿ-ಲಯಕಾರಕರಾಗಿ ಪ್ರಧಾನಿ ಮೋದಿ ಏಕವ್ಯಕ್ತಿ ಪ್ರದರ್ಶನವನ್ನು ಮಾಡಿದ್ದೂ ಆಗಿದೆ. ಸ್ವಂತ ಮನೆಯನ್ನು ಪ್ರವೇಶಿಸುವ ಧಣಿಯ ಹಾಗೆ ಮೋದಿ ಇದನ್ನು ಸಂಭ್ರಮಿಸಿದರು. ಪ್ರಾಯಃ ಒಂದಿಷ್ಟು ಕೇಂದ್ರ ಸಚಿವರನ್ನು ಹೊರತುಪಡಿಸಿ ಇನ್ಯಾರೂ ಅದರಲ್ಲಿ ಭಾಗವಹಿಸದಂತೆ ನಿಯಮಿಸಿದ ಕಟ್ಟುಪಾಡುಗಳು ನಭೂತೋ ಅಂತೂ ಖಂಡಿತ. ಆದರೆ ಮೊಗಲ್ ದರಬಾರಿನ ರಾಣೀವಾಸದಂತೆ ಜನಾನಾಗಳಲ್ಲಿ ಕುಳಿತೋ ನಿಂತೋ ದೇಶಾದ್ಯಂತ ಉಳಿದ ಬೆಂಬಲಿಗರು ಮುಸುಕಿನೊಳಗೇ ಸಂಭ್ರಮಿಸಿದರು. ಪ್ರಧಾನಿ 140 ಕೋಟಿ ಜನರ ಆಶಯಗಳನ್ನು ಪೂರೈಸಿದ್ದೇನೆಂದು ಘೋಷಿಸಿದರು. ಬಹುತೇಕ ವಿರೋಧ ಪಕ್ಷಗಳು ಈ ಕಾರ್ಯಕ್ರಮಗಳನ್ನು ಬಹಿಷ್ಕರಿಸಿದರು. ಹಾಜರಾದ ಆಳುವ ಪಕ್ಷದವರಿಗೆ ಹಾಜರಾತಿ ಕಡ್ಡಾಯ ಅಥವಾ ಅನಿವಾರ್ಯ. ಇದಕ್ಕೆ ‘ವಿಪ್’ ಇತ್ತೋ ಇಲ್ಲವೋ ಗೊತ್ತಿಲ್ಲ, ಆದರೆ ‘ಸೆಂಗೋಲ್’ ಎಂಬ ಮಾನದಂಡವಂತೂ ಇತ್ತು! ಅನುಕೂಲಕ್ಕಾಗಿ, ಸ್ವಾರ್ಥಕ್ಕಾಗಿ, ಕೆಲವು ಬೆಂಬಲಿಗ ಪಕ್ಷಗಳ ಸದಸ್ಯರು ಮತ್ತು ಪ್ರತಿಪಕ್ಷದ ಹೆಸರು ಹಾಕಿಕೊಂಡ ಕೆಲವು ಸಮಯಸಾಧಕರು ಪಾಲ್ಗೊಂಡರು. 539 ಲೋಕಸಭಾ (ಒಟ್ಟು ಸ್ಥಾನ-542) ಸದಸ್ಯರ ಪೈಕಿ 382 (ಬಿಜೆಪಿ-301), 238 ರಾಜ್ಯಸಭಾ (ಒಟ್ಟು ಸ್ಥಾನ-250) ಸದಸ್ಯರ ಪೈಕಿ 138 (ಬಿಜೆಪಿ-93) ಹೀಗೆ ಸಂಸತ್ತು ಒಂದು ಪಾರ್ಶ್ವದಿಂದ ನೋಡಿದರೆ ಪೂರ್ಣವಾಗಿ, ಇನ್ನೊಂದು ಪಾರ್ಶ್ವದಿಂದ ನೋಡಿದರೆ ಟೊಳ್ಳಾಗಿರುವ ಕೊರಕಲು ಕಾಂಡದಂತಿತ್ತು.
ಇಡೀ ಕಾರ್ಯಕ್ರಮವು ತಮಿಳು ಚಾರಿತ್ರಿಕ ಕಲ್ಪನೆಯ ಸಿನೆಮಾದ ಪಡಿಯಚ್ಚು. ಪ್ರಾಯಃ ಪ್ರಧಾನಿಯವರ ನಿಷ್ಠ ಬಂಟರಾದ ವಿದೇಶಾಂಗ ವ್ಯವಹಾರಗಳ ಸಚಿವ ಜಯಶಂಕರ್ ಮತ್ತು ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಈ ವ್ಯವಸ್ಥೆಗೆ ಕಾರಣರಿರಬಹುದು. ಸಂವಿಧಾನದ ಗೌರವವನ್ನು ಸಂಕೇತಿಸಬಹುದಾದ, ಸಂಸದ್‌ಭವನವು ಒಂದು ಪಕ್ಷದ, ಸಂವಿಧಾನ ವಿರೋಧಿ ಪಂಥ-ಸಿದ್ಧಾಂತದ ಪ್ರತಿನಿಧಿಯಾಗುವುದು ಅಪಾಯದ ಮುನ್ಸೂಚನೆ. ಆದರೆ ಇದು ಈಗ ಅರ್ಥವಾಗುವವರ ಸಂಖ್ಯೆ ವಿರಳಾತಿವಿರಳ. ಅನಕ್ಷರಸ್ಥರನ್ನು ಮರುಳುಮಾಡುವುದು ದೊಡ್ಡ ವಿಶೇಷವೇನಲ್ಲ. ನಮ್ಮ ಬಹುತೇಕ ವಿದ್ಯಾವಂತರು ಅನಕ್ಷರಸ್ಥರನ್ನು ಕಂಡರೆ ಇದೇ ಕೆಲಸ ಮಾಡುತ್ತಾರೆ. ಅಪರೂಪಕ್ಕೆ ಒಮ್ಮೆಮ್ಮೆ ‘ಮರುಳು ಮಾಡಾಕ ಹೋಗಿ ಮರುಳು ಸಿದ್ಧನ ನಾರಿ ಮರುಳಾಗ್ಯಾಳೋ ಜಂಗಮಯ್ಯಾಗಾ..’ ಎಂಬ ಹಾಗೆ ಪರಿಸ್ಥಿತಿ ನಿರ್ಮಾಣವಾಗಬಹುದು, ಅಷ್ಟೇ.
ಆದರೆ ಈ ವಿದ್ಯಾವಂತರ ನಡುವೆ ಶೇ. 10 ಕೂಡಾ ವಿವೇಕಿಗಳು ಇಲ್ಲದಿರುವುದು ನಮ್ಮ ಶಿಕ್ಷಣದ ಶೋಚನೀಯ ಸ್ಥಿತಿಯನ್ನು ಹೇಳುತ್ತದೆ. ವಿಚಾರಿಪೊಡೆ ಬಹಳಷ್ಟು ಹಿರಿಯರು ನಿವೃತ್ತ ಕೇಂದ್ರ-ಸರಕಾರಿ ಅಧಿಕಾರಿಗಳು, ಬಹುರಾಷ್ಟ್ರೀಯ ಉದ್ದಿಮೆಗಳಲ್ಲಿ ಉನ್ನತ ಹುದ್ದೆಯನ್ನು ಹೊಂದಿದವರು, ವಿಶ್ವವಿದ್ಯಾನಿಲಯಗಳಲ್ಲಿ ದಶಕಗಳ ಕಾಲ ಪಾಠ ಹೇಳಿದವರು, ಥರ್ಮಾಮೀಟರಿನಂತೆ ಹತ್ತಾರು ಡಿಗ್ರಿಗಳನ್ನು ಸಂಪಾದಿಸಿದವರು, ಬಹಳಷ್ಟು ಪುಸ್ತಕಗಳನ್ನು ಪ್ರಕಟಿಸಿದವರು, ಕಥೆ-ಕಾದಂಬರಿ-ಕವಿತೆ-ನಾಟಕ-ವಿಮರ್ಶೆಗಳಲ್ಲಿ ನಿಪುಣರು, ಗೌ.ಡಾ.ದಿಂದ ಮೊದಲ್ಗೊಂಡು ಪದ್ಮದ ವರೆಗೆ ದಕ್ಕಿದ, ದಕ್ಕಿಸಿಕೊಂಡ, ಪ್ರಶಸ್ತಿಗಳ ಹೇರಳತನದಿಂದಾಗಿ ಮನೆಯಲ್ಲಿಟ್ಟುಕೊಳ್ಳಲು ಜಾಗವಿಲ್ಲದವರು, ಆದರೆ ಆಡಳಿತದ ದೋಷಗಳ ಬಗ್ಗೆ ಹಗಲೇ ಕಂದೀಲು ಹಿಡಿದು ನಡೆಯುವ ಕುರುಡರು.
ಪ್ರಜಾತಂತ್ರವನ್ನು, ಸಂವಿಧಾನದ ಗೌರವವನ್ನು ಸಂಸತ್ತಿನ ಈ ದೇಗುಲ ಪ್ರತಿನಿಧಿಸುತ್ತದೆ ಮತ್ತು ಎತ್ತಿಹಿಡಿಯುತ್ತದೆ ಎಂದು ಪ್ರಜೆಗಳು ನಂಬುವಂತಿರಬೇಕು. ಆದ್ದರಿಂದ ಇದಕ್ಕೆ ಅಷ್ಟು ಪ್ರಾಶಸ್ತ್ಯ. ತಾಜ್‌ಮಹಲನ್ನೋ, ಒಬೆರಾಯ್ ಹೊಟೇಲನ್ನೋ ಆದರೆ ಯಾರು ತೆರೆದರೂ ಉದ್ಘಾಟಿಸಿದರೂ ಸರಿಯೇ. ಅವರವರ ಭಾವಕ್ಕೆ; ಅವರವರ ಭಕುತಿಗೆ. ಆದರೆ ದೇಶದ ಮಾನಂಡವನ್ನು ಅಳೆಯುವ ಸಂದರ್ಭದಲ್ಲಿ ಅದೊಂದು ರಾಜಕೀಯ ಹುನ್ನಾರವಾಗಬಾರದು. ದೇವರ ದೇಗುಲದಲ್ಲಿ ನಡೆಸುವ ಹುಸಿ ಪಾವಿತ್ರ್ಯ ಅದಕ್ಕಿಲ್ಲ. ಎಲ್ಲರೂ ಸಮಾನರೆಂಬ ಭಾವ, ವಿಚಾರ ಕೃತಿಯಲ್ಲಿ ಮೂಡಬೇಕು; ಮನದಟ್ಟಾಗಬೇಕು.
ಆದರೆ ಆರಂಭದಲ್ಲಿ ಹೇಳಿದಂತೆ ಪ್ರಧಾನಿ ಈ ಸಂದರ್ಭವನ್ನು ತಮ್ಮ ವೈಯಕ್ತಿಕ ವೈಭವೀಕರಣಕ್ಕೆ ಪ್ರಯೋಗಿಸಿದರು; ಉಪಯೋಗಿಸಿದರು. ಇದಕ್ಕೆ ಅವರು ಆರಿಸಿಕೊಂಡ ತಂತ್ರವು ಮಂತ್ರದ್ರಷ್ಟಾರರದ್ದಲ್ಲ; ಮಂತ್ರವಾದಿಗಳದ್ದು. ಅವರ ನಂಬಿಕೆಯ ಬಂಟರೊಂದಿಗೆ ಮತ್ತು ಇವೆಲ್ಲದರ ಹಿಂದೆ ನೇಪಥ್ಯದಲ್ಲಿ ಅಡಗಿರುವ ಸಂಘ ಪರಿವಾರದೊಂದಿಗೆ ಈ ಬಗ್ಗೆ ದೀರ್ಘಕಾಲದ ಯೋಜನೆ ರೂಪುಗೊಂಡಿತ್ತೆಂಬುದು ಸ್ಪಷ್ಟ. ಈ ಕಟ್ಟಡವನ್ನು ಉದ್ಘಾಟಿಸುವುದು ವಿಶ್ವದ ವಿಸ್ಮಯವೆಂಬಂತೆ ಪ್ರಧಾನಿ ಮತ್ತು ಅವರ ಪರಿವಾರ ಬಹಳ ಸಮಯದಿಂದ ಪ್ರಚಾರಮಾಡುತ್ತಿತ್ತು. ಇದು ಮೊದಲೋ ಅಯೋಧ್ಯೆಯ ರಾಮಮಂದಿರವು ಮೊದಲೋ ಎಂಬ ಲೆಕ್ಕಾಚಾರ ಮಾತ್ರ ಬಾಕಿಯಿತ್ತು. ಅದೀಗ ಇತ್ಯರ್ಥವಾದಂತಾಗಿದೆ. ಪ್ರಧಾನಿಯವರು ಅಯೋಧ್ಯೆಯ ರಾಮಮಂದಿರದ ಉದ್ಘಾಟನೆಯನ್ನು 2024ರ ಲೋಕಸಭಾ ಚುನಾವಣೆಯ ಬಿಸಿ ಆರಂಭವಾಗುವ ಹೊತ್ತಿಗೆ ಮಾಡಬಹುದು.
ಅದರ ಅನುಗ್ರಹವು ಅವರ ಮೇಲೆ ಅಗಣಿತ ಮತಗಳ ರೂಪದಲ್ಲಿ ಬೀಳಬಹುದು ಎಂಬ ಗಣಿತ ಅವರದ್ದು. ಇದರೊಂದಿಗೆ ದಕ್ಷಿಣಭಾರತದಲ್ಲಿ ಬಹುತೇಕ ಕದವನ್ನು ಮುಚ್ಚಿಕೊಂಡಿರುವ ಭಾರತೀಯ ಜನತಾಪಕ್ಷಕ್ಕೆ ಪುನಶ್ಚೇತನ ನೀಡಲು ಪ್ರಧಾನಿಯವರು ಮತ್ತು ಅವರ ‘ದುಷ್ಟ ಚತುಷ್ಟಯ’ (ಇದೊಂದು ರೂಪಕ ಅಷ್ಟೇ; ಅದು ತನ್ನ ಸಂಖ್ಯೆಯನ್ನು ವೃದ್ಧಿಸಿಕೊಂಡಿದೆ!) ಏನು ಬೇಕಾದರೂ ಮಾಡಲು ಸಿದ್ಧ. 2014ರಲ್ಲಿ ಹುಟ್ಟಿದ ಅವರ ನವಭಾರತ ಈಗಾಗಲೇ ಕೆಲವಾದರೂ ಬಾಲಗ್ರಹದೋಷಗಳನ್ನು ಪರಿಹರಿಸಿಕೊಳ್ಳಲಾಗದೆ ಮುದುಡುತ್ತಿದೆ. ಪ್ರಧಾನಿ ಮೋದಿಯೆಂಬ ಸಕಲರೋಗ ನಿವಾರಣಾ ಚೂರ್ಣವು ತನ್ನ ಜೀವಿತಾವಧಿಯನ್ನು ಪೂರೈಸುತ್ತಿದೆಯೆಂಬಂತಿದೆ. ಉತ್ತರ ಭಾರತದಲ್ಲಾದರೋ ಹಿಂದಿ ಮತ್ತು ಹಿಂದೂ ಎಂಬ ದ್ವೈತ-ಅದ್ವೈತ ಸಮೀಕರಣದಿಂದಾಗಿ ತನ್ನ ಛಾಯೆಯನ್ನು ಬೀರಿದರೂ ವಿಂಧ್ಯಪರ್ವತದ ದಕ್ಷಿಣಕ್ಕೆ ಅದು ಬಿಳಲುಬಿಡಲು ಸಾಧ್ಯವಾಗಲಿಲ್ಲ. ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳಲ್ಲಿ ಬೆಂಕಿಯನ್ನು ನಂದಿಸಲು ನೀರು ಹೊಯ್ಯುವ ಬದಲು ಎಣ್ಣೆಯನ್ನು ಹೊಯ್ದದ್ದರ ಪರಿಣಾಮ ವಾಗಿ ಅಲ್ಲೀಗ ರಾತ್ರಿ ಪ್ರಯಾಣಕ್ಕೆ ಬೆಳಕಿನ ನೆರವು ಬೇಕಾಗಿಲ್ಲ; ಎಲ್ಲ ಕಡೆ ಬೆಂಕಿ ಹಚ್ಚಲಾಗಿದೆ. ಅದರದ್ದೇ ಬೆಳಕು. ಶಾಂತಿಯಿದೆಯೆಂದು ಹೇಳಿದಲ್ಲೆಲ್ಲ ಸ್ಫೋಟದ ಆತಂಕ ಮನೆಮಾಡಿದೆ. ಈಗ ದೇಶದಲ್ಲಿ ಶಾಂತಿಯಿರುವುದು ಪ್ರಧಾನಿ ಮತ್ತವರ ಬಳಗದ ಮೋಸಮನದೊಳಗೆ ಮಾತ್ರ.
ದಕ್ಷಿಣದ ಹಿರಿಯ ಸ್ಥಾನವು ತಮಿಳುನಾಡಿಗೆ ಸಲ್ಲುತ್ತದೆಂಬ ಅಭಿಪ್ರಾಯ ಪ್ರಧಾನಿ ಬಳಗಕ್ಕೆ. ಆದ್ದರಿಂದಲೇ ಅದ್ಯಾವುದೋ ಪ್ರಭೃತಿ ವಸ್ತುಸಂಗ್ರಹಾಲಯದಲ್ಲಿದ್ದ ಸೆಂಗೋಲ್‌ನ್ನು ನೆನಪಿಸಿದ್ದು. ಕಳೆದ 8-9 ವರ್ಷಗಳಲ್ಲಿ ಪ್ರಧಾನಿ ಪಡೆ ಮಾಡಿದ್ದೆಂದರೆ- ಮರೆಯಬೇಕಾದ್ದನ್ನು ನೆನಪಿಸಿದ್ದು; ಮತ್ತು ನೆನಪಿಡಬೇಕಾದ್ದನ್ನು ಮರೆಸಲು ಪ್ರಯತ್ನಿಸಿದ್ದು. ವೈಜ್ಞಾನಿಕ ಮನೋಭಾವಕ್ಕೆ ತಕ್ಕುದಾದ ಪ್ರಜಾತಂತ್ರದಲ್ಲಿ ರಾಜನನ್ನು ನೆನಪಿಸುವ ಯಾವ ವಸ್ತುವಿಗೂ ಮಾನ್ಯತೆ ಸಲ್ಲದು. ರಾಜನೇ ದಂಡವಾದ ಮೇಲೆ ರಾಜದಂಡಕ್ಕೇನು ಪ್ರಾಮುಖ್ಯತೆ? ಸರಕಾರದ ಸಂಗ್ರಹಾಲಯದಲ್ಲಿ ಅಲ್ಲದಿದ್ದರೆ ಟಿಪ್ಪುವಿನ ಖಡ್ಗದಂತೆ ಅದು ಹರಾಜಾಗಿ ಯಾರದ್ದೋ ಸಂಗ್ರಹಾಲಯವನ್ನು ಸೇರಬೇಕಾದ ವಸ್ತು. ಅದಕ್ಕಿರುವ ಬೆಲೆ ಅಷ್ಟೇ. ಚಾರಿತ್ರಿಕವಾಗಿ ನಾವು ನೆನಪಿಸಬೇಕಾದ ಅಗತ್ಯ ಬೇರೆ; ವೈಭವೀಕರಿಸಬೇಕಾದ ಕಾರಣ ಬೇರೆ. ಆದರೆ ತಮಿಳು ಚರಿತ್ರೆಗೆ ಸಂಬಂಧಿಸಿದ ಈ ವಸ್ತುವನ್ನು ಸರಿ, ಒಂದು ವೇಳೆ ಸಂಸತ್ತಿನೊಳಗೇ ರಕ್ಷಿಸಿಡಬೇಕಾದ ಇಚ್ಛೆಯಿದ್ದರೂ ಅದು ಅಗತ್ಯವೆನ್ನಿಸಬಾರದು. ಅದೊಂದು ಮೂಲೆಯಲ್ಲಿರಲಿ. ಸಾರನಾಥದ ಅಶೋಕಚಕ್ರವೂ ಇದೆ; ಗಾಂಧಿಯ ಚರಕವೂ ಇದೆ; ಇವೆಲ್ಲವೂ ಗೌರವಾರ್ಹವುಗಳು ಹೌದು. ಇಂತಹ ಹತ್ತಾರು ವಸ್ತುಗಳು ಎಲ್ಲಿರಬೇಕೋ ಅಲ್ಲಿರಬೇಕು. ಹೀನೋಪಮೆಯೆಂದು ತಿಳಿಯದಿದ್ದರೆ ಹೀಗೂ ಹೇಳಬಹುದು: ಹೆತ್ತವರ ಚಪ್ಪಲಿಗಳೇ ಆಗಲಿ, ಅವನ್ನು ನಿತ್ಯ ತಲೆಯಲ್ಲಿಡಲಾಗದು.
ಭರತ ರಾಮನ ಪಾದುಕೆಗಳನ್ನು ಶಿರದಲ್ಲಿ ಹೊತ್ತ ಮಾತ್ರಕ್ಕೆ ಅದು ಕಿರೀಟಕ್ಕೆ ಪರ್ಯಾಯವಾಗಲಾರದು. ಆದರೆ ಪ್ರಸಕ್ತ ಪರಿಸ್ಥಿತಿಯಲ್ಲಿ ಅದನ್ನು ವೈದಿಕವೈಭವವಾಗಿ ಪರಿವರ್ತಿಸಲಾಗಿದೆ. ಹಿಂದೆ ಪ್ರತ್ಯಕ್ಷವಾಗದ ಹತ್ತಾರು ತಮಿಳು ಪುರೋಹಿತರು ಟ್ರೋಜನ್ ಕುದುರೆಯೊಳಗಿಂದ ಹೊರಬಂದಂತೆ ಎಲ್ಲಿಂದಲೋ ಆವಿರ್ಭವಿಸಿ ಸಂಸತ್ತಿನೊಳಗೆ ಬಂದು ಸಂಸದೀಯರಿಗಿಂತ ಪ್ರಮುಖರಾದರು. ಪ್ರಾಯಃ ಅಯೋಧ್ಯೆಯ ಶ್ರೀರಾಮ ಮಂದಿರದ ಶಂಕುಸ್ಥಾಪನೆಗೂ ಈ ಮಂದಿ ಬಂದಿರಲಿಕ್ಕಿಲ್ಲ. ಅವರಿಂದ ಪ್ರಧಾನಿ ರಾಜದಂಡದಂತೆ ಇದನ್ನು ಸ್ವೀಕರಿಸಿದರು ಮತ್ತು ಅದನ್ನೇ ಪ್ರತಿಷ್ಠಾಪಿಸುವ ನೆಪದಲ್ಲಿ ಉದ್ಘಾಟನೆಯಾದದ್ದು ಸಂಸತ್ತಿನ ಕಟ್ಟಡವೋ, ಸೆಂಗೋಲೋ ಎಂದು ಜನರಿಗೆ ಸಂಶಯ ಬರುವಂತೆ ಮಾಡಿದರು. ಹೊರಗೆ ಒಂದು ಯಜ್ಞವೂ ನಡೆಯಿತೆಂದು ವರದಿಯಾಗಿದೆ. ಇವೆಲ್ಲ ಲಂಕೇಶ ರಾವಣನ ದಶಶಿರಗಳ ವೈಭವವನ್ನು ನೆನಪಿಸುವಂತಿತ್ತು.
ವಿನಯ, ಸೌಜನ್ಯ, ಸರಳತೆ ಇವಕ್ಕೆ ಆದಿನ ಸಂಸತ್ತಿನೊಳಗೆ ಸ್ಥಾನವಿರಲಿಲ್ಲ. ಧಣಿ ಮತ್ತು ಗುಲಾಮರ ದೊಡ್ಡ ಪ್ರದರ್ಶನ ನಡೆಯಿತು. ಕೆಲವು ಪ್ರಶ್ನೆಗಳು ಉಳಿದುಕೊಂಡಿವೆ. ಇವನ್ನು ಪ್ರಧಾನಿಯೇ ನೆರವೇರಿಸಬೇಕಿತ್ತೇ? ಪ್ರಧಾನಿಯ ಆತ್ಮವೈಭವದ ತೀಟೆಯನ್ನು ಗಮನಿಸಿದವರಿಗೆ ಇದು ಅಚ್ಚರಿಯ ಸಂಗತಿಯೇನಲ್ಲ. ಅವರು ಇದನ್ನು ಮೂರ್ಖತನದಿಂದ ಅನುಭವಿಸಿ ಆನಂದಿಸುತ್ತಾರಲ್ಲ, ಅದು ಅವರ ಮತ್ತು ಈ ದೇಶದ ದುರಂತ. ಪ್ರತಿಪಕ್ಷಗಳು ಈ ಸಮಾರಂಭವನ್ನು ಬಹಿಷ್ಕರಿಸಿದವು. ಕೆಲವು ಸಣ್ಣ-ಪುಟ್ಟ ಪುಟಗೋಸಿ ಪಕ್ಷಗಳು ಹಾಜರಾದವು. ಎಲ್ಲ ಕಡೆ ಸಲ್ಲುವ ಕನ್ನಡದ ಪ್ರತಿಪಕ್ಷದವರೂ ಹಾಜರಾದರು. ಹಾಗಾದರೆ ಕಾಂಗ್ರೆಸ್ ಕಾಲದಲ್ಲಿ ನೆಹರೂ, ಇಂದಿರಾ ಸಂಸತ್ತಿನ ಒಳಕಟ್ಟಡಗಳನ್ನು ಉದ್ಘಾಟನೆ ಮಾಡಲಿಲ್ಲವೇ ಎಂದು ಬಿಜೆಪಿ ಉತ್ತರಿಸಿತು. ಸಂಸತ್ತನ್ನಲ್ಲ ಎಂದು ಅವರಿಗೆ ಉತ್ತರ ಹೇಳುವಷ್ಟು ಜಾಣತನವನ್ನು, ಧೂರ್ತತನವನ್ನು ಪ್ರತಿಪಕ್ಷದವರು ತೋರಲಿಲ್ಲ. ಹೇಗಿದ್ದರೂ ಕಾಂಗ್ರೆಸಿನ ಕೆಟ್ಟ ಆದರ್ಶಗಳನ್ನೆಲ್ಲ ಬಿಜೆಪಿಯು ಅನುಸರಿಸುತ್ತದೆಂದು ಮತ್ತು ಬಹುಪಾಲು ಮೀರಿಸುತ್ತದೆಂದು, ತೋರಿಸುವುದಕ್ಕೆ ಇದೊಂದು ಉದಾಹರಣೆಯಾಯಿತು. ಸಂಸತ್ತಿನ ಅಧಿವೇಶನವನ್ನೂ ಇನ್ನು ಮುಂದೆ ಪ್ರಧಾನಿಯವರೇ ಮಾಡಿದರೂ ಆಶ್ಚರ್ಯವಿಲ್ಲ. ಪಾಪ, ರಾಷ್ಟ್ರಪತಿ, ಉಪರಾಷ್ಟ್ರಪತಿ ಮುಂತಾದ ಸಂವಿಧಾನ ಪ್ರಣೀತ ಹಕ್ಕುದಾರರು ಸೂತಕದವರಂತೆ ಮುಖಮುಚ್ಚಿ ಸುಮ್ಮನಾದರು. ಅವರೆಲ್ಲ ಪ್ರಧಾನಿಯವರ ಅಧಿಕಾರದ ಕೂಸುಗಳಲ್ಲವೇ?
ಈ ಹಗರಣವು ಸಂಸತ್ತಿನೊಳಗೆ ನಡೆಯುತ್ತಿರುವಾಗ ಸಂಸತ್ತಿನ ಹೊರಗೆ ಭಾರತದ ಹೆಮ್ಮೆಯ ಕ್ರೀಡಾಪಟುಗಳು ಪೊಲೀಸ್ ದಬ್ಬಾಳಿಕೆಗೆ ಬಲಿಯಾಗುತ್ತಿದ್ದರು. ಅದನ್ನು ವಿಚಾರಿಸುವ ಮನಸ್ಸು ಪ್ರಧಾನಿಗಾಗಲೀ ಅವರ ತಂಡಕ್ಕಾಗಲೀ ಇರಲಿಲ್ಲ. ಗಂಗೆಯಲ್ಲಿ ಅವರ ಪದಕಗಳು ಚೆಲ್ಲಿಹೋದರೂ ಗಣನೆಗೆ ತೆಗೆದುಕೊಳ್ಳದೆ ಈ ವಿಪರೀತ ಬುದ್ಧಿಯ ಕಾಲವೈಭವವು ಮುಂದುವರಿಯುತ್ತಿದೆ. ಈ ಸಂಬಂಧ ಸಂವಿಧಾನದಲ್ಲಿನ ಸ್ಥಾನಗಳನ್ನು ಅಳೆಯಬಹುದು. ಭಾರತ ಸರಕಾರವು ಅಧಿಕೃತವಾಗಿ ಪ್ರಕಟಿಸಿದ, ಅನುಸರಿಸಬೇಕಾದ ಆದ್ಯತೆ ಸರಣಿಯಲ್ಲಿ ಪ್ರಧಾನಿಗೆ 3ನೇ ಸ್ಥಾನ. ಮೊದಲೆರಡು ಸ್ಥಾನಗಳು ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಯವರಿಗೆ. ಸಂವಿಧಾನದ ಆಶಯದಂತೆ ರಾಷ್ಟ್ರಪತಿಯವರು ದೇಶದ ಮೊದಲ ಪ್ರಜೆ ಮತ್ತು ಅಗ್ರ ಪೂಜೆ ಅವರಿಗೇ ಸಲ್ಲಬೇಕು. ಸಂವಿಧಾನದ 52ನೇ ವಿಧಿಯಿಂದ 62ರ ವರೆಗೆ ರಾಷ್ಟ್ರಪತಿ, ಹಾಗೂ 63ರಿಂದ 70ರ ವರೆಗೆ ಉಪರಾಷ್ಟ್ರಪತಿಯವರ ಹಕ್ಕುಬಾಧ್ಯತೆಗಳನ್ನು ವಿವರಿಸಲಾಗಿದೆ. ಇದನ್ನು 71-73ರಲ್ಲಿ ವಿಸ್ತರಿಸಲಾಗಿದೆ. 74ನೇ ವಿಧಿಯಲ್ಲಿ ಸಚಿವಸಂಪುಟ ಮತ್ತು ಅವರ ನಾಯಕನಾಗಿ ಪ್ರಧಾನ ಮಂತ್ರಿ ರಾಷ್ಟ್ರಪತಿಗೆ ಸಲಹೆ ನೀಡಲು ನಿಯೋಜಿತರಾಗುತ್ತಾರೆ ಮತ್ತು ರಾಷ್ಟ್ರಪತಿಯು ಅಂತಹ ಸಲಹೆಗನುಗುಣವಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ. (ಈ ಸಲಹೆ ಸರಿಯೇ ಮತ್ತು ಪ್ರಾಮಾಣಿಕವೇ ಎಂಬುದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗದು ಎಂಬ 74(2)ರ ಷರತ್ತನ್ನು 2010ರ ಬಿ.ಪಿ.ಸಿಂಘಾಲ್ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ವಿಶ್ಲೇಷಿಸಿ ಯಾವ ಆಧಾರದಲ್ಲಿ ಅಂತಹ ಸಲಹೆಗಳನ್ನು ನೀಡಲಾಗಿದೆಯೆಂಬುದನ್ನು ನ್ಯಾಯಾಲಯಗಳು ವಿಚಾರಿಸಬಹುದೆಂದು ಮತ್ತು ಅವು ದುರುದ್ದೇಶದಿಂದ ಕೂಡಿದ್ದರೆ ಅಥವಾ ನಿರಾಧಾರವಾಗಿದ್ದರೆ ಅವನ್ನು ನಿರಸನಗೊಳಿಸಬಹುದೆಂದು ಹೇಳಲಾಗಿದೆ.) ಹೀಗಿರುವಾಗ ಕಾರ್ಯನಿರ್ವಹಣೆಯು ರಾಷ್ಟ್ರಪತಿಯವರ ಹೊಣೆಯೇ ಹೊರತು ಪ್ರಧಾನಿಯವರದ್ದಲ್ಲ. ಯಾವ ಚರಿತ್ರೆ-ಪುರಾಣದಲ್ಲೂ ಪ್ರಧಾನಿ ರಾಜಸಿಂಹಾಸನದಲ್ಲಿ ಕುಳಿತ ಉದಾಹರಣೆಯಿಲ್ಲ (ಸಂಚಿನ ಹೊರತಾಗಿ).
ಮದುಮಗಳಿಗೆ ಪುರೋಹಿತರೇ ತಾಳಿಕಟ್ಟಿದಂತಾಗಿದೆ- ಪ್ರಧಾನಿ ಸಂಸತ್ತಿನ ಉದ್ಘಾಟನೆ ಮಾಡಿದ್ದು. ಸೂಕ್ಷ್ಮವಾಗಿ ಪರಿಗಣಿಸಿದರೆ ನಮ್ಮ ಪ್ರಧಾನಿ ಅಧ್ಯಕ್ಷೀಯ ಮಾದರಿಯನ್ನು ಅನುಸರಿಸುತ್ತಾರೆಂಬಲ್ಲಿಗೆ ತರ್ಕ ಮುಗಿಯದು; ಅವರು ಭಾರತವೆಂಬ ಈ ಭೂಖಂಡದ ಚಕ್ರವರ್ತಿಯಾಗುವ ಕನಸು ಕಾಣುತ್ತಿದ್ದಾರೆಂದು ಅನ್ನಿಸುತ್ತದೆ. ಇದಕ್ಕೆ ಪೂರಕವಾಗಿ ನಮ್ಮ ವಿದೇಶಾಂಗ ಸಚಿವರು ಎಂದಿಗಿಂತ ಪ್ರಖರವಾಗಿ ಕುಂಕುಮದ ಬೊಟ್ಟನ್ನಿಟ್ಟು ಪ್ರಧಾನಿಯವರಿಗೆ ಸಹಕಾರ ನೀಡಿದರೆ, ಹಣಕಾಸು ಸಚಿವರು ರಾಮಾಶ್ವಮೇಧದಲ್ಲಿ ಸೀತೆಯ ಗೈರುಹಾಜರನ್ನು ತುಂಬಿಸುವ ಸುವರ್ಣಸೀತೆಯಂತೆ ಕಂಗೊಳಿಸುತ್ತಿದ್ದರು. ಅತಿರೇಕದಂತೆ ಕಾಣುವ ಇಂತಹ ಸುರ್ಗಮ ಕಾಯಕದ ಸ್ಥಿತಿ-ಗತಿಗಳ ಮೂಲ ಸಪ್ತಸಾಲವೃಕ್ಷಗಳ ಅಡಿಯ ರಕ್ಕಸರಲ್ಲಿದೆ. ಅದನ್ನು ನಿವಾರಿಸುವ ಶಕ್ತಿ ನಮ್ಮ ಪ್ರಜಾತಂತ್ರಕ್ಕಾಗಲೀ, ಸಂವಿಧಾನಕ್ಕಾಗಲೀ ಇವೆಲ್ಲವನ್ನೂ ನಿರ್ವಹಿಸುವ 140 ಕೋಟಿ ಭಾರತಿಯರಿಗಾಗಲೀ ಇದೆಯೇ ಎಂಬುದು ನಮ್ಮ ಪ್ರಶ್ನೆ; ಇರಬೇಕೆಂಬುದೇ ನಮ್ಮ ಆಶಯ. ಯಾವ ಅರಿವು ಇದಕ್ಕೆ ಉತ್ತರ ನೀಡಬಹುದೆಂಬುದು ಇನ್ನೂ ದೊಡ್ಡ ಪ್ರಶ್ನೆ. ಬದುಕಿನ ತಾತ್ಕಾಲಿಕತೆಯನ್ನು ಅರಿತ ಯಾವ ವ್ಯಕ್ತಿಯೂ ಆತ್ಮವೈಭವದಲ್ಲಿ ತೊಡಗಬಾರದು. ಮನಸ್ಸು ಹಗುರಾಗಬೇಕೇ ಹೊರತು ವ್ಯಕ್ತಿತ್ವವು ಹಗುರಾಗಬಾರದು. ಪ್ರಧಾನಿ ಇಂತಹ ನಾಟಕಗಳ ಮೂಲಕ ನೀರು ಹರಿಸದ ಬಿಳಿಮೋಡವಾಗುತ್ತಿದ್ದಾರೆಯೇ ಎಂಬ ಸಂಶಯ ಎಲ್ಲರಿಗೂ ಬರುವ ದಿನ ದೂರವಿರಲಾರದು.