ಗಾಂಧಿ ಮತ್ತು ಪರಿಸರ

Update: 2023-06-30 05:54 GMT

ನಾವು ಗಾಂಧಿಯವರ ಮಾತುಗಳು ಮತ್ತು ಎಚ್ಚರಿಕೆಗಳನ್ನು ಪರಿಸರ ದಿನದಂದು ಮಾತ್ರವಲ್ಲ, ವರ್ಷದ ಪ್ರತೀ ದಿನವೂ ನೆನಪಿಸಿಕೊಳ್ಳಬಹುದು. ರಾಜಕೀಯ ವಿವಾದಗಳನ್ನು ಬಗೆಹರಿಸುವಲ್ಲಿ ಕಂಡುಕೊಂಡ ಅಹಿಂಸಾ ಮಾರ್ಗಕ್ಕಾಗಿ, ಅಂತರ್ ಧರ್ಮೀಯ ಸಾಮರಸ್ಯದ ವಿಚಾರದಲ್ಲಿನ ಬದ್ಧತೆಗಾಗಿ ಮತ್ತು ಅಸ್ಪೃಶ್ಯತೆಯನ್ನು ತೊಡೆದುಹಾಕುವಲ್ಲಿನ ಹೋರಾಟಕ್ಕಾಗಿ ಹೆಚ್ಚು ಪ್ರಸಿದ್ಧರಾಗಿರುವ ಗಾಂಧಿಯ ನಡೆ, ಇಂದು ನಾವು ಎದುರಿಸುತ್ತಿರುವ ತೀವ್ರವಾದ ಪರಿಸರ ಬಿಕ್ಕಟ್ಟನ್ನು ಪರಿಹರಿಸಲು ನಾವು ಬಯಸುವುದಾದರೆ ಇಲ್ಲಿಯೂ ಅಷ್ಟೇ ಪ್ರಸ್ತುತ.


ಸುಮಾರು ಮೂವತ್ತು ವರ್ಷಗಳ ಹಿಂದೆ,  Industrialize - and Perish  ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟವಾದ ಗಾಂಧಿಯವರ ಆಯ್ದ ಬರಹಗಳನ್ನು ಓದುವಾಗ, 1928 ಡಿಸೆಂಬರ್ 20ರ ‘ಯಂಗ್ ಇಂಡಿಯಾ’ದ ಸಂಚಿಕೆಯಲ್ಲಿ ಮೊದಲ ಬಾರಿಗೆ ಪ್ರಕಟವಾದ ಈ ಮಹತ್ವದ ಮಾತುಗಳನ್ನು ನಾನು ಗಮನಿಸಿದೆ: ‘ಪಾಶ್ಚಿಮಾತ್ಯರ ರೀತಿಯ ಬಳಿಕ, ಭಾರತವು ಎಂದಿಗೂ ಕೈಗಾರಿಕೀಕರಣಕ್ಕೆ ಹೋಗಬಾರದು ಎಂದು ದೇವರು ನಿಷೇಧಿಸುತ್ತಾನೆ. ಒಂದೇ ಒಂದು ಸಣ್ಣ ದ್ವೀಪ ಸಾಮ್ರಾಜ್ಯದ (ಇಂಗ್ಲೆಂಡ್) ಆರ್ಥಿಕ ಸಾಮ್ರಾಜ್ಯಶಾಹಿ ಇಂದು ಜಗತ್ತನ್ನೇ ಸಂಕೋಲೆಯಲ್ಲಿ ಇರಿಸಿದೆ. 300 ಮಿಲಿಯನ್ ಜನಸಂಖ್ಯೆಯ ಇಡೀ ರಾಷ್ಟ್ರವು ಇದೇ ರೀತಿಯ ಆರ್ಥಿಕ ಶೋಷಣೆಯನ್ನು ಮುಂದುವರಿಸಿದರೆ, ಅದು ಜಗತ್ತನ್ನೇ ಮಿಡತೆಗಳಂತೆ ಬೆತ್ತಲು ಮಾಡುತ್ತದೆ.’
ಪರಿಸರವಾದಿಗಳ ಪರಿಭಾಷೆಯಲ್ಲಿ ಈ ಮಾತುಗಳನ್ನು ಓದಿಕೊಂಡರೆ, ಅದು ಅತಿಯಾದ ಸಂಪನ್ಮೂಲ, ಅತಿಯಾದ ಇಂಧನದ ಬಳಕೆಯನ್ನು ಕೇಳುವ ಮಿತಿಮೀರಿದ ಕೈಗಾರಿಕಾ ಅಭಿವೃದ್ಧಿಯ ವಿರುದ್ಧದ ಎಚ್ಚರಿಕೆಯಾಗಿ ಕಾಣಿಸುತ್ತದೆ. ವಾಸ್ತವವಾಗಿ, (ಪಾಶ್ಚಿಮಾತ್ಯ ಪ್ರೇರಿತ) ಆರ್ಥಿಕ ಶೋಷಣೆಯ ಈ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಭಾರತ ಮತ್ತು ಚೀನಾ ನಿಜವಾಗಿಯೂ ಇಂದು ಜಗತ್ತನ್ನು ಮಿಡತೆಗಳಂತೆ ಬೆತ್ತಲಾಗಿಸುವ ಬೆದರಿಕೆ ಒಡ್ಡುತ್ತಿವೆ.

ಮನುಷ್ಯನ ದುರಾಸೆಯ ಟೀಕಾಕಾರರಾಗಿ, ವಿಕೇಂದ್ರೀಕೃತ, ಗ್ರಾಮ ಕೇಂದ್ರಿತ (ಮತ್ತು ಕಡಿಮೆ ಸುಲಿಗೆ ಮಾಡುವ) ಆರ್ಥಿಕತೆಯ ಪ್ರತಿಪಾದಕರಾಗಿ, ಹಾನಿಕಾರಕ ಅಥವಾ ವಿನಾಶಕಾರಿ ರಾಜನೀತಿಗಳ ವಿರುದ್ಧ ಅಹಿಂಸಾತ್ಮಕ ಪ್ರತಿಭಟನೆಯ ಪ್ರವರ್ತಕರಾಗಿ ಗಾಂಧಿ ಪರಿಸರ ಆಂದೋಲನದಲ್ಲಿ ತಮ್ಮದೇ ಆದ ಹಿರಿತನ ಹೊಂದಿದ್ದಾರೆಂದು ಬಹಳ ಹಿಂದಿನಿಂದಲೂ ಹೇಳಿಕೊಂಡು ಬರಲಾಗಿದೆ. ಚಿಪ್ಕೋ ಮತ್ತು ನರ್ಮದಾ ಬಚಾವೋ ಆಂದೋಲನಗಳಂತಹ ಅತ್ಯಂತ ಪ್ರಸಿದ್ಧವಾದ ಭಾರತೀಯ ಪರಿಸರ ಹೋರಾಟಗಳು, ಚಿಂತನೆ ಮತ್ತು ಕೆಲಸದಲ್ಲಿ ತಾವು ಗಾಂಧಿಯ ಹೆಜ್ಜೆಗಳನ್ನು ಅನುಸರಿಸುವವರೆಂದು ಘೋಷಿಸಿಕೊಂಡವರ ನೇತೃತ್ವದಲ್ಲಿ ನಡೆದಿವೆ. ದಿವಂಗತ ಅರ್ಥಶಾಸ್ತ್ರಜ್ಞ ಇ.ಎಫ್. ಶುಮಾಕರ್ (‘ಸ್ಮಾಲ್ ಈಸ್ ಬ್ಯೂಟಿಫುಲ್’ ಕೃತಿಯ ಲೇಖಕ) ಮತ್ತು ಪ್ರಭಾವಿ ಜರ್ಮನ್ ಗ್ರೀನ್ ಪಾರ್ಟಿಯ ಸಿದ್ಧಾಂತವಾದಿಗಳಂತಹ ಪಾಶ್ಚಿಮಾತ್ಯ ಪರಿಸರವಾದಿಗಳು ಗಾಂಧಿಯನ್ನು ಮಾದರಿಯಾಗಿ ಕಂಡದ್ದಿದೆ.

ಈ ಅಂಕಣದಲ್ಲಿ, ನಮ್ಮ ಪ್ರಸಕ್ತ ಕಳವಳಗಳನ್ನು ಆಗಲೇ ಗ್ರಹಿಸಿದ್ದಂತೆ ಕಂಡುಬರುವ ಅವರ ಚಿಂತನೆಯ ಇತರ ಕೆಲವು ಅಂಶಗಳ ಕುರಿತು ಹೇಳುವ ಮೂಲಕ ನಾನು ಪರಿಸರ ಕುರಿತ ಗಾಂಧಿಯ ಅರಿವಿನ ಹೆಚ್ಚುಗಾರಿಕೆಯನ್ನು ಇನ್ನಷ್ಟು ದೃಢಪಡಿಸಲು ಬಯಸುತ್ತೇನೆ. ಖಚಿತವಾಗಿ ಹೇಳಬೇಕೆಂದರೆ, ಮರಗಳು ಮತ್ತು ಅರಣ್ಯದ ಪ್ರಾಮುಖ್ಯತೆಯ ಕುರಿತ, ಹೆಚ್ಚು ಮಂದಿಗೆ ಗೊತ್ತಿರದ ಅವರ ಮಾತುಗಳ ಮೇಲೆ ನಾನಿಲ್ಲಿ ಗಮನ ಹರಿಸುತ್ತೇನೆ.

ನವೆಂಬರ್ 1925ರಲ್ಲಿ ಗಾಂಧಿಯವರು ಪಶ್ಚಿಮ ಭಾರತದ ಕಚ್‌ನ ಮರುಭೂಮಿ ಪ್ರದೇಶಕ್ಕೆ ಹೋದರು. ಅಲ್ಲಿ ಅಲ್ಪಪ್ರಮಾಣದ ಮಳೆ ಮತ್ತು ಬತ್ತುವ ನದಿ, ಮರಗಿಡಗಳ ನಶಿಸುವಿಕೆಗೆ ಕಾರಣವಾಗಿತ್ತು. ಗಾಂಧಿಯವರನ್ನು ಕರೆಸಿಕೊಂಡಿದ್ದ ಜಯಕೃಷ್ಣ ಇಂದ್ರಜಿ ಸಾಮಾಜಿಕ ಕಾರ್ಯಕರ್ತರಾಗಿದ್ದರು. ಅವರನ್ನು ಗಾಂಧಿಯವರು ‘ಗುಜರಾತ್‌ನ ರತ್ನ’ ಎಂದು ಬಣ್ಣಿಸಿದ್ದಾರೆ ಮತ್ತು ಇನ್ನೊಂದೆಡೆಗಿನ ಉಲ್ಲೇಖ ಅವರನ್ನು ಜನಾಂಗೀಯ ಸಸ್ಯಶಾಸ್ತ್ರಜ್ಞ ಎಂದು ಗುರುತಿಸುತ್ತದೆ. ಗಾಂಧಿಯವರಿಗಿಂತ ಇಪ್ಪತ್ತು ವರ್ಷಗಳ ಮೊದಲು 1849ರಲ್ಲಿ ಜನಿಸಿದ ಜಯಕೃಷ್ಣ ಅವರು ಸ್ವಯಂ ತರಬೇತಾದ ಸಸ್ಯಶಾಸ್ತ್ರಜ್ಞರಾಗಿದ್ದರು. ಅವರು ನಂತರ ಪೋರಬಂದರ್ ರಾಜ್ಯದೊಂದಿಗೆ ಕೆಲಸ ಮಾಡಿದರು (ಈ ಆಡಳಿತದ ಅಡಿಯಲ್ಲಿ ಒಂದು ಕಾಲದಲ್ಲಿ ಗಾಂಧಿಯವರ ಪೂರ್ವಜರೂ ಸೇವೆ ಸಲ್ಲಿಸಿದ್ದರು). ಸಸ್ಯಗಳು ಮತ್ತು ಮರಗಳ ಬಗ್ಗೆ ಭಾರತೀಯರಿಗೆ ಆಸಕ್ತಿ ಇಲ್ಲದಿರುವುದು ಜಯಕೃಷ್ಣ ಅವರಲ್ಲಿ ನಿರಾಸೆ ಮೂಡಿಸಿತ್ತು. ‘‘ನಮ್ಮಲ್ಲಿ ನೆಲೆಸಿರುವ ಯುರೋಪಿಯನ್ನರು ಈ ದೇಶದ ಸಸ್ಯಗಳ ಬಗ್ಗೆ ತಿಳಿದಿದ್ದಾರೆ ಮತ್ತು ಬರೆಯುತ್ತಾರೆ. ನಮ್ಮವರಿಗೆ ಮಾತ್ರ ತಮ್ಮ ಅಂಗಳದಲ್ಲಿರುವ ಸಸ್ಯಗಳ ಬಗ್ಗೆ ತಾವು ಕಾಲಡಿಯಲ್ಲಿ ತುಳಿಯುತ್ತಿರುವ ಸಸ್ಯಗಳ ಬಗ್ಗೆ ತಿಳಿದಿರುವುದಿಲ್ಲ’’ ಎಂದು ಆ ನಿರಾಸೆಯಿಂದಲೇ ಹೇಳಿದ್ದಿತ್ತು. ನಮ್ಮವರ ಈ ಅಜ್ಞಾನವನ್ನು ತೊಡೆದುಹಾಕಲು ಜಯಕೃಷ್ಣ ಅವರು ಪೋರಬಂದರ್‌ನ ಬರ್ದಾ ಬೆಟ್ಟಗಳ ಸಸ್ಯವರ್ಗದ ಹೆಗ್ಗುರುತು ಎಂಬ ಅಧ್ಯಯನ ಕೃತಿಯನ್ನು ಬರೆದರು. ಇದು ಕಚ್‌ನ ಮಹಾರಾವ್ ಅವರ ಗಮನವನ್ನು ಸೆಳೆಯಿತು. ಆನಂತರ ಅವರು ತಮ್ಮಲ್ಲಿಗೆ ಜಯಕೃಷ್ಣ ಅವರನ್ನು ಆಹ್ವಾನಿಸಿದರು. ಅಲ್ಲಿ ಜಯಕೃಷ್ಣ ರಾಜ್ಯದ ಸಸ್ಯಗಳ ಬಗ್ಗೆ ಸಂಶೋಧನೆಯಲ್ಲಿ ತೊಡಗಿ ಪುಸ್ತಕ ಬರೆಯುವಾಗ ಮರುಭೂಮಿಗಳಲ್ಲಿ ಮರು ಅರಣ್ಯೀಕರಣಕ್ಕೆ ಸ್ಫೂರ್ತಿಯಾದರು.

ಜಯಕೃಷ್ಣ ಅವರನ್ನು ಭೇಟಿಯಾದ ನಂತರ ಗಾಂಧಿ ಬರೆದಿದ್ದು ಹೀಗೆ: ‘ಅವರಿಗೆ ಬರ್ದಾದಲ್ಲಿನ ಪ್ರತಿಯೊಂದು ಮರ ಮತ್ತು ಪ್ರತಿಯೊಂದು ಎಲೆಯೂ ತಿಳಿದಿದೆ. ಅವರು ಮರಗಳನ್ನು ನೆಡುವುದರಲ್ಲಿ ಎಷ್ಟು ದೊಡ್ಡ ನಂಬಿಕೆಯನ್ನು ಹೊಂದಿದ್ದಾರೆಂದರೆ ಅವರು ಅದಕ್ಕೆ ಅತ್ಯಂತ ಮಹತ್ವದ ಸ್ಥಾನವನ್ನು ನೀಡುತ್ತಾರೆ ಮತ್ತು ಈ ವಿಧಾನಗಳಿಂದ ಹೆಚ್ಚಿನದನ್ನು ಸಾಧಿಸಬಹುದು ಎಂದು ಅವರು ನಂಬಿದ್ದಾರೆ. ಈ ವಿಷಯದಲ್ಲಿ ಅವರ ಉತ್ಸಾಹ ಮತ್ತು ನಂಬಿಕೆ ಎಲ್ಲರನ್ನೂ ಆವರಿಸುವಂಥದ್ದು. ನಾನು ಬಹಳ ಹಿಂದೆಯೇ ಇವುಗಳಿಂದ ಪ್ರಭಾವಿತನಾಗಿದ್ದೇನೆ. ದೊರೆ ಮತ್ತು ಪ್ರಜೆಗಳಿಬ್ಬರೂ, ಅವರು ಬಯಸಿದರೆ ಅಂತಹ ಬುದ್ಧಿವಂತ ವ್ಯಕ್ತಿಯ ನಡುವೆ ಇರುವುದರ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಬಹುದು ಮತ್ತು ಸುಂದರವಾದ ಅರಣ್ಯವನ್ನು ಬೆಳೆಸಬಹುದು.’

ಗಾಂಧಿಯವರಿಂದ ಜಯಕೃಷ್ಣ ಸುಂದರವಾದ ಬಯಲಿನಲ್ಲಿ ಗಿಡವೊಂದನ್ನು ನೆಡಿಸಿದರು. ಅದು ಕಚ್‌ನಲ್ಲಿ ತಾನು ಮಾಡಿದ ಅತ್ಯಂತ ಆಹ್ಲಾದಕರ ಕೆಲಸ ಎಂದು ಗಾಂಧಿ ಭಾವಿಸಿದ್ದರು. ಅದೇ ದಿನ ಮರಗಳ ರಕ್ಷಣೆಗಾಗಿ ಒಂದು ಸಂಘಟನೆಯನ್ನು ಸ್ಥಾಪಿಸಲಾಯಿತು. ಅದು ಯಶಸ್ಸಿನ ಕಿರೀಟವಾಗಲಿದೆ ಎಂದು ಗಾಂಧಿ ಆಶಿಸಿದ್ದರು.

ಜಯಕೃಷ್ಣ ಅವರು ಕಚ್‌ನಲ್ಲಿ ಮಾಡಿದ ಕೆಲಸಗಳು ಗಾಂಧಿಯವರು ಕಾನೂನು ಅಭ್ಯಾಸ ಮಾಡಿದ ಮತ್ತು ಹೋರಾಟ ನಡೆಸಿದ್ದ ದಕ್ಷಿಣ ಆಫ್ರಿಕಾದ, ಒಂದು ಕಾಲದಲ್ಲಿ ಶುಷ್ಕ ಮತ್ತು ನಿರ್ಜನ ಪಟ್ಟಣದಲ್ಲಿನ ಬದಲಾವಣೆಯನ್ನು ನೆನಪಿಸಿಕೊಳ್ಳುವಂತೆ ಮಾಡಿತ್ತು. ಗಾಂಧಿ ಹೀಗೆ ಬರೆಯುತ್ತಾರೆ:

‘ಜೋಹಾನ್ಸ್ ಬರ್ಗ್ ಕೂಡ ಇಂಥದೇ ಪ್ರದೇಶವಾಗಿತ್ತು. ಒಂದು ಕಾಲದಲ್ಲಿ ಅಲ್ಲಿ ಹುಲ್ಲು ಬಿಟ್ಟರೆ ಬೇರೇನೂ ಬೆಳೆಯುತ್ತಿರಲಿಲ್ಲ. ಒಂದೇ ಒಂದು ಕಟ್ಟಡವೂ ಇರಲಿಲ್ಲ. ನಲವತ್ತು ವರ್ಷಗಳಲ್ಲಿ ಈ ಸ್ಥಳವು ಚಿನ್ನದ ನಗರವಾಯಿತು. ಒಂದೊಂದು ಕೊಡ ನೀರಿಗೆ ಹನ್ನೆರಡು ಆಣೆಗಳನ್ನು ಕೊಡಬೇಕಿತ್ತು. ಕೆಲವೊಮ್ಮೆ ಸೋಡಾ ನೀರನ್ನು ಬಳಸಬೇಕಾಗಿತ್ತು. ಕೆಲವೊಮ್ಮೆ ಅದರಲ್ಲಿಯೇ ಮುಖ ಮತ್ತು ಕೈಗಳನ್ನು ತೊಳೆಯಬೇಕಾಗಿತ್ತು! ಇಂದು ಅಲ್ಲಿ ನೀರಿದೆ, ಮರಗಳೂ ಇವೆ. ಮೊದಲಿನಿಂದಲೂ ಚಿನ್ನದ ಗಣಿಗಳ ಮಾಲಕರು ಈ ಪ್ರದೇಶವನ್ನು ಅಸಾಧಾರಣವಾಗಿ ಹಸಿರಿನ ನೆಲೆಯಾಗಿ ಪರಿವರ್ತಿಸಿದರು ಮತ್ತು ಉತ್ಸಾಹದಿಂದ ದೂರದ ಸ್ಥಳಗಳಿಂದ ಸಸಿಗಳನ್ನು ತಂದು ನೆಡುವ ಮೂಲಕ ಮಳೆಯ ಪ್ರಮಾಣ ಹೆಚ್ಚಾಗಲು ಕಾರಣರಾದರು. ಅರಣ್ಯನಾಶದಿಂದ ಮಳೆಯ ಪ್ರಮಾಣ ಕಡಿಮೆಯಾದ ಮತ್ತು ಅರಣ್ಯೀಕರಣದಿಂದ ಹೆಚ್ಚಾದ ಇಂತಹ ಇತರ ನಿದರ್ಶನಗಳೂ ಇವೆ.’

ಕೆಲವು ವರ್ಷಗಳ ನಂತರ ಸಬರಮತಿ ಆಶ್ರಮದಲ್ಲಿ ಒಂದು ಸಂಜೆ ಗಾಂಧೀಜಿ ಮಲಗುವ ಮೊದಲು ಸ್ವಲ್ಪಹೊತ್ತು ಹತ್ತಿಯನ್ನು ಬಿಡಿಸಲು ಯೋಚಿಸಿದಾಗ, ಬಿಲ್ಲು ಹುರಿಗೊಳಿಸುವುದಕ್ಕಾಗಿ ಅವರ ಶಿಷ್ಯೆ ಮೀರಾ ಆಶ್ರಮವಾಸಿ ಹುಡುಗನೊಬ್ಬನಿಗೆ ತೋಟದಿಂದ ಬಬುಲ್ ಮರದ ಕೆಲವು ಎಲೆಗಳನ್ನು ತರಲು ಹೇಳಿದರು. ಆ ಹುಡುಗ ತುಂಬಾ ದೊಡ್ಡ ಟೊಂಗೆಯನ್ನೇ ತಂದಿದ್ದ. ಅಗ ಗಾಂಧಿ ನೊಂದುಕೊಂಡಿದ್ದನ್ನು ಮೀರಾ ನೆನಪಿಸಿಕೊಂಡಿದ್ದಿದೆ. ‘‘ಮರಗಳು ನಮ್ಮಂತೆಯೇ ಜೀವ ಉಳ್ಳವುಗಳಾಗಿವೆ. ಅವೂ ಬದುಕುತ್ತವೆ, ಉಸಿರಾಡುತ್ತವೆ. ತಿನ್ನುತ್ತವೆ, ಕುಡಿಯುತ್ತವೆ. ನಮ್ಮಂತೆಯೇ ಅವಕ್ಕೂ ನಿದ್ರೆ ಬೇಕು. ರಾತ್ರಿಯಲ್ಲಿ ಮರವೊಂದು ವಿಶ್ರಮಿಸುವಾಗ ಅದರ ಎಲೆಗಳನ್ನು ಕಿತ್ತುಕೊಂಡು ಹೋಗುವುದು ದರಿದ್ರ ಸಂಗತಿ’’ ಎಂದು ಗಾಂಧಿ ಹೇಳಿದ್ದರು. ಮೀರಾ ಹೇಳಿದಂತೆ, ಸಾರ್ವಜನಿಕ ಸಭೆಯೊಂದರಲ್ಲಿ ಭಾರೀ ದೊಡ್ಡ ಹೂಮಾಲೆಗಳನ್ನು ಅವರ ಕೊರಳಿಗೆ ಹಾಕಿ ಸ್ವಾಗತಿಸಿದಾಗ ಅವರ ಮುಖದಲ್ಲಿ ಕಂಡಷ್ಟೇ ಬೇಸರ ಅಂದು ಆ ಹುಡುಗ ಅಷ್ಟು ದೊಡ್ಡ ಟೊಂಗೆಯನ್ನು ತಂದಿದ್ದಾಗ ಗಾಂಧಿಯವರಿಗೆ ಆಗಿತ್ತು.

ಗುಜರಾತಿ ಮತ್ತು ಇಂಗ್ಲಿಷ್‌ನಲ್ಲಿ ಏಕಕಾಲದಲ್ಲಿ ಪ್ರಕಟವಾದ ಲೇಖನವೊಂದರಲ್ಲಿ, ಗಾಂಧಿ ಈ ಕಥೆಯನ್ನು ಮೀರಾ ಅವರ ಮಾತುಗಳಲ್ಲಿ ನಿರೂಪಿಸಿ, ಕಡೆಗೆ ತಮ್ಮದೇ ಆದ ವಿವರಣೆಯನ್ನು ಹೀಗೆ ಸೇರಿಸಿದ್ದರು:
‘ಓದುಗರು ಇದನ್ನು ಭಾವುಕತನದ ನಿರರ್ಥಕ ಸಂಗತಿ ಎಂದುಕೊಳ್ಳಬಾರದು ಅಥವಾ ನನ್ನದಾಗಲೀ ಮೀರಾಬಾಯಿಯ ದ್ದಾಗಲೀ ಹತಾಶೆಯ ಭಾವನೆ ಎಂದು ಭಾವಿಸಬಾರದು. ರಾತ್ರಿಯಲ್ಲಿ ಮರವು ವಿಶ್ರಮಿಸುತ್ತಿರುವಾಗ ಎಲೆಗಳನ್ನು ಕೀಳಲು ನಾವು ಕೊಂಚವೂ ಹಿಂಜರಿಯುವುದಿಲ್ಲ. ಒಬ್ಬ ಕಟುಕ ಕೂಡ ಸ್ವಲ್ಪಮಟ್ಟಿಗೆ ಮಾನವೀಯತೆ ಹೊಂದಿರಬಲ್ಲ. ಕುರಿ ಮಾಂಸವನ್ನು ತಿನ್ನುವವನು, ಮಲಗಿರುವಾಗ ಕುರಿಗಳ ಹಿಂಡನ್ನು ಕೊಲ್ಲಲಾರ. ಮನುಷ್ಯತ್ವದ ಸಾರವು ಎಲ್ಲಾ ಜೀವ, ಪ್ರಾಣಿ ಮತ್ತು ಸಸ್ಯಗಳನ್ನೂ ಪರಿಗಣಿಸುವುದರಲ್ಲಿದೆ. ಆನಂದದ ಹುಡುಕಾಟದಲ್ಲಿ ಇತರ ಜೀವಗಳನ್ನು ಅಲಕ್ಷಿಸುವವನು ಖಂಡಿತವಾಗಿಯೂ ಮನುಷ್ಯನಲ್ಲ, ವಿವೇಕಿಯಲ್ಲ.’

ಸಂಪನ್ಮೂಲ ಬಳಕೆಯಲ್ಲಿ ಹೀಗೆ ಸಂಯಮವನ್ನು ತೋರಿದ್ದ ಗಾಂಧಿ, ನಂತರ ಭಾರತೀಯ ಸಂಸ್ಕೃತಿಯಲ್ಲಿ ಮರಗಳ ಸ್ಥಾನವನ್ನು ಶ್ಲಾಘಿಸಿದ್ದರು. ಹಾಗಾಗಿಯೇ ಅವರು ಬರೆದಿದ್ದಾರೆ: ‘ದಮಯಂತಿಯು ಮರಗಳ ಬಳಿ ತನ್ನ ದುಃಖವನ್ನು ತೋಡಿಕೊಳ್ಳುವುದನ್ನು ಕವಿ ವಿವರಿಸುತ್ತಾನೆ. ಶಕುಂತಲೆಗೆ ಮರಗಳು, ಪಕ್ಷಿಗಳು, ಮೃಗಗಳೆಲ್ಲ ಸಹವರ್ತಿಗಳೇ ಆಗಿದ್ದವು. ಅವರೆಲ್ಲದರಿಂದ ಬೇರೆಯಾಗುವುದು ಅವಳಿಗೆಷ್ಟು ನೋವುಂಟುಮಾಡಿತ್ತು ಎಂಬುದನ್ನು ಮಹಾಕವಿ ಕಾಳಿದಾಸ ನಮಗೆ ಹೇಳುತ್ತಾನೆ.’

ಕಳೆದ ವರ್ಷ ‘ದಿ ಗಾರ್ಡಿಯನ್’ನಲ್ಲಿನ ಲೇಖನವೊಂದು ಹೇಳಿದಂತೆ, ‘ಇಂಗಾಲವನ್ನು ಬೇರ್ಪಡಿಸುವ ನೈಸರ್ಗಿಕ ಸಾಮರ್ಥ್ಯದಿಂದಾಗಿ, ವಾತಾವರಣದಿಂದ ಅದನ್ನು ಹೀರಿಕೊಳ್ಳುವ ಮರಗಳು ಹವಾಮಾನ ತುರ್ತುಸ್ಥಿತಿಯನ್ನು ನಿಭಾಯಿಸಲು ಸರಳವಾದ, ಸುಲಭವಾಗಿ ಅರ್ಥಮಾಡಿಕೊಳ್ಳಬಹುದಾದ ಮಾರ್ಗ’ ಎಂಬುದು ನಮಗೀಗ ತಿಳಿದಿದೆ. ಮಾನವ ಚಟುವಟಿಕೆಯ ಪರಿಣಾಮವಾದ ಜಾಗತಿಕ ತಾಪಮಾನ ಮತ್ತು ಹವಾಮಾನ ಬದಲಾವಣೆಯ ಪುರಾವೆಗಳು ಗೊತ್ತಾಗುವ ದಶಕಗಳಿಗೂ ಮೊದಲೇ ಗಾಂಧಿ ಬರೆಯುತ್ತಿದ್ದರು. ಮರಗಳನ್ನು ಬೆಳೆಸುವುದರಿಂದ ಅವು ನೆರಳು ಮತ್ತು ಆಶ್ರಯವನ್ನು ಒದಗಿಸುತ್ತವೆ, ಮಣ್ಣು ಮತ್ತು ನೀರಿನ ನಿರ್ವಹಣೆಯನ್ನು ಸಮಸ್ಥಿತಿಯಲ್ಲಿಡಲು ಸಹಾಯ ಮಾಡುತ್ತವೆ ಮತ್ತು ಇತರ ಜೀವಗಳ ಬಗ್ಗೆ ಮನುಷ್ಯನ ಕಾಳಜಿಯನ್ನು ತೋರಿಸುತ್ತವೆ ಎಂದು ಅವರು ಪ್ರತಿಪಾದಿಸಿದ್ದರು. ಅವರ ಮಾತುಗಳು ಎಷ್ಟು ಭವಿಷ್ಯಜ್ಞಾನವುಳ್ಳವಾಗಿದ್ದವು ಎಂಬುದು ಈಗಿನ ಹವಾಮಾನ ತುರ್ತುಸ್ಥಿತಿಯುಲ್ಲಿ ಅರ್ಥವಾಗುತ್ತಿದೆ.

ಈ ಅಂಕಣವನ್ನು ಜೂನ್ 5ರ ವಿಶ್ವ ಪರಿಸರ ದಿನಕ್ಕೆ ತುಸು ಮೊದಲು ಪ್ರಕಟಿಸಲಾಗುತ್ತಿದೆ. ನಾವು ಗಾಂಧಿಯವರ ಮಾತುಗಳು ಮತ್ತು ಎಚ್ಚರಿಕೆಗಳನ್ನು ಆ ದಿನದಂದು ಮಾತ್ರವಲ್ಲ, ವರ್ಷದ ಪ್ರತೀ ದಿನವೂ ನೆನಪಿಸಿಕೊಳ್ಳಬಹುದು. ರಾಜಕೀಯ ವಿವಾದಗಳನ್ನು ಬಗೆಹರಿಸುವಲ್ಲಿ ಕಂಡುಕೊಂಡ ಅಹಿಂಸಾ ಮಾರ್ಗಕ್ಕಾಗಿ, ಅಂತರ್ ಧರ್ಮೀಯ ಸಾಮರಸ್ಯದ ವಿಚಾರದಲ್ಲಿನ ಬದ್ಧತೆಗಾಗಿ ಮತ್ತು ಅಸ್ಪೃಶ್ಯತೆಯನ್ನು ತೊಡೆದುಹಾಕುವಲ್ಲಿನ ಹೋರಾಟಕ್ಕಾಗಿ ಹೆಚ್ಚು ಪ್ರಸಿದ್ಧರಾಗಿರುವ ಗಾಂಧಿಯ ನಡೆ, ಇಂದು ನಾವು ಎದುರಿಸುತ್ತಿರುವ ತೀವ್ರವಾದ ಪರಿಸರ ಬಿಕ್ಕಟ್ಟನ್ನು ಪರಿಹರಿಸಲು ನಾವು ಬಯಸುವುದಾದರೆ ಇಲ್ಲಿಯೂ ಅಷ್ಟೇ ಪ್ರಸ್ತುತ.

Similar News