ಮಹಿಳೆಯರಿಗೆ ಔಚಿತ್ಯಪೂರ್ಣ ಉಚಿತ ಪ್ರಯಾಣ

Update: 2023-06-15 10:22 GMT

ಇದು ಒಂದು ಆದರ್ಶ ಕಲ್ಪನೆ; ರಾಜಕೀಯವು ಹೀಗಿರುತ್ತದೆಂದು ಅನ್ನಿಸುವುದು ಯುಟೋಪಿಯಾದ ಆಶಯ. ಗಾಂಧಿವಾದದಂತೆ ಕಟ್ಟಕಡೆಯವನಿಗೂ ಸಿಗಬಲ್ಲ ಸೌಲಭ್ಯವು ಕೆಲವರಿಗಾದರೂ ಸಿಗುತ್ತದಲ್ಲ ಎಂದುಕೊಂಡು ಬೆಂಬಲಿಸಬೇಕು. ಸರಕಾರ ಇನ್ನಷ್ಟು ಯೋಜನೆಗಳನ್ನು ಹಾಕಿಕೊಂಡಿದೆ. ತಪ್ಪಾದಾಗ ಪಕ್ಷಭೇದ ಮರೆತು ಟೀಕಿಸೋಣ. ಒಳ್ಳೆಯದನ್ನು ಸ್ವಾಗತಿಸೋಣ. ದಿನನಿತ್ಯ ಉದಯಿಸುವ ಸೂರ್ಯನನ್ನು, ರಾತ್ರಿ ಮೂಡುವ ಚಂದ್ರನನ್ನು ಟೀಕಿಸುವುದು ಯಾವ ಸಾರ್ಥಕತೆ?


ಮಡಿಕೇರಿಯಲ್ಲಿರುವ ನನ್ನ ಮನೆಗೆ ಕೊಣನೂರಿನಿಂದ ಹೂ-ಸೊಪ್ಪು-ತರಕಾರಿಯನ್ನು ಒಬ್ಬ ಹೆಣ್ಣುಮಗಳು ಬೆಳಗ್ಗೆ ತಂದುಕೊಡುತ್ತಾಳೆ. ಅವಳದ್ದು 12್ಡ7 ಉದ್ಯೋಗ. ತಡರಾತ್ರಿಯಲ್ಲಿ ಹುಬ್ಬಳ್ಳಿ-ಶಿವಮೊಗ್ಗ-ಹಾಸನ ಕಡೆಯಿಂದ ಬರುವ ಯಾವುದೋ ಕೆಂಪು ಬಸ್ ಹಿಡಿದು ಮಡಿಕೇರಿಗೆ ಸೂರ್ಯೋದಯಕ್ಕೆ ಮೊದಲೇ ತಲುಪಿ ಮನೆ-ಮನೆ ಹೋಗಿ ವ್ಯಾಪಾರ ಮಾಡಿ ಮಧ್ಯಾಹ್ನದ ಹೊತ್ತಿಗೆ, ಸರಕು ಮುಗಿಯದಿದ್ದರೆ ಕೆಲವೊಮ್ಮೆ ಸಂಜೆಯ ವರೆಗೆ, ಉಳಿದು ಮರಳುವುದು ಆಕೆಯ ದಿನಚರಿ. ಆಕೆ ಅಂತಲ್ಲ ಕನಿಷ್ಠ ಹತ್ತಕ್ಕೂ ಮಿಕ್ಕಿ ಇಂತಹ ಸೊಪ್ಪು-ತರಕಾರಿಯವರು ಆ ಕಡೆಯಿಂದ ಬರುತ್ತಾರೆ. ಮಡಿಕೇರಿಯಲ್ಲಿ ಸೊಪ್ಪು-ತರಕಾರಿಗಳ ಅಂಗಡಿಗಳು ಇಲ್ಲವೆಂದಲ್ಲ. ಆದರೆ ಈ ಹೆಣ್ಣುಮಕ್ಕಳು ತಮ್ಮದೇ ಆದ ಗ್ರಾಹಕರನ್ನು ಸಂಪಾದಿಸಿದ್ದಾರೆ. ಅವರಿಗೆ ನಾವು ಗ್ರಾಹಕರು ಇವತ್ತು ಏನೂ ಬೇಡ ಎಂದರೆ ನಿರಾಶರಾಗುವುದಿಲ್ಲ; ನಾಳೆ ಬರುತ್ತೇನೆಂದು ಹೋಗುತ್ತಾರೆ. ಹಾಗೆಯೇ ಹೇಳಿದರೆ ನಮಗೆ ಬೇಕಾದ ವಿಶೇಷ ವಸ್ತುಗಳಾದ ಹುಣಸೆಹುಳಿ, ಬೆಲ್ಲ, ಕೆಂಪುಮೆಣಸು, ರಾಗಿ ಇತ್ಯಾದಿಗಳನ್ನು ತಂದುಕೊಡುತ್ತಾರೆ. ಎಲ್ಲವನ್ನೂ ಮೊದಲೇ ತೂಕ ಮಾಡಿ ಪ್ರತ್ಯೇಕವಾಗಿ ಪ್ಲಾಸ್ಟಿಕ್ ಇಲ್ಲವೇ ಪೇಪರಿನಲ್ಲಿ ಪ್ಯಾಕ್ ಮಾಡಿಕೊಂಡೇ ಬರುವುದರಿಂದ ತೂಕ ಇತ್ಯಾದಿಗಳ ಸಮಸ್ಯೆಯಿಲ್ಲ. ಸುಮಾರು 50 ಕಿಲೋವಿನಷ್ಟು (ಅಥವಾ ಅದಕ್ಕೂ ಹೆಚ್ಚು) ತೂಕದ ಈ ಸಾಮಗ್ರಿಗಳನ್ನು ಹೊತ್ತು ತರುತ್ತಾರಲ್ಲ ಅದನ್ನು ಅಚ್ಚರಿಯೊಂದಿಗೆ ಮೆಚ್ಚಬೇಕು.

ಈ ವಿಚಾರಕ್ಕೆ ಇದು ಒಂದು ಮುಖವಾದರೆ ಅವರ ಹಣಕಾಸಿನ ವಿಚಾರ ಇನ್ನೊಂದು. ಈ ಸೊಪ್ಪು-ತರಕಾರಿ-ಧವಸಧಾನ್ಯಗಳು ಅವರು ಸ್ವಂತ ಬೆಳೆದದ್ದಲ್ಲ. ಅದನ್ನು ಅಲ್ಲೆಲ್ಲೋ ಸಂತೆಯಲ್ಲಿ ಕೊಂಡುಕೊಂಡು ಬರುತ್ತಾರೆ. ಅದನ್ನು ಇಲ್ಲಿ ಮಾರಿದರೆ ಬರುವ ಲಾಭವೆಷ್ಟು? ಕೆಲವು ನೂರು ರೂಪಾಯಿಗಳಾದರೆ ವಿಶೇಷ. ಹೂ-ಸೊಪ್ಪು-ತರಕಾರಿಗಳು ಇತರ ವಸ್ತುಗಳಂತೆ ಅಲ್ಲ. ಒಂದು ದಿನಕ್ಕೇ ದಿನಪತ್ರಿಕೆಗಳಂತೆ ಹಳತಾಗುತ್ತವೆ. (ಅವರಲ್ಲಿ ಶೈತ್ಯಾಗಾರ ವ್ಯವಸ್ಥೆಯೂ ಇರುವುದಿಲ್ಲ.) ಆದ್ದರಿಂದ ಆ ದಿನದ ಸರಕು ಆ ದಿನವೇ ಮಾರಾಟವಾಗದಿದ್ದರೆ ನಷ್ಟದೊಂದಿಗೆ ಅವನ್ನು ಮರಳಿ ಒಯ್ಯುವ ಭಾರ ಹೇಳತೀರದು. ಅಲ್ಲದೆ ಅವರು ನಮ್ಮ ಅನಾಗರಿಕರಿಂದ ಅನುಭವಿಸುವ ಟೀಕೆ ಮತ್ತು ದುರ್ವರ್ತನೆ ಬೇರೆ. ಕೊಣನೂರಿನಿಂದ ಮಡಿಕೇರಿಗೆ ಬೆಳಗ್ಗೆ ಬಂದು ಸಂಜೆ ಹೋಗುವ ಮಾರಾಟಗಾರ್ತಿಗೆ ಕನಿಷ್ಠ 150-200 ರೂಪಾಯಿ ಬಸ್ ಪ್ರಯಾಣ ವೆಚ್ಚ ತಗಲುತ್ತದೆ. ಅವರೇನೂ ಐರಾವತವೋ, ರಾಜಹಂಸವೋ ಇನ್ನಿತರ ಐಷಾರಾಮಿ ಬಸ್‌ಗಳಲ್ಲಿ ಪ್ರಯಾಣಿಸುವವರಲ್ಲ. ಅವರಿಗೆ ಕೆಂಪು ಬಸ್‌ಗಳೇ ದಾರಿದೀಪ. ನಿತ್ಯ ಪ್ರಯಾಣಿಸುವ ಕಾರಣ ಕೆಲವೊಮ್ಮೆ ಲಗೇಜ್ ವೆಚ್ಚ ತಗಲದೇ ಇರಬಹುದು. ಬಂದವರು ತಮ್ಮ ಊಟ, ಕಾಫಿ ಇನ್ನಿತರ ಆಹಾರ ಸಾಮಗ್ರಿ ತಂದರೆ ಸರಿ, ಇಲ್ಲದಿದ್ದರೆ ಅದಕ್ಕೂ ಇನ್ನೊಂದು 100 ರೂಪಾಯಿ ವೆಚ್ಚ. ಇವೆಲ್ಲವನ್ನು ಭರಿಸಿ ಕೈಗೆ ದಕ್ಕುವ ಉಳಿಕೆಯೆಷ್ಟೆಂದು ಯೋಚಿಸಿದರೆ ಈ ದೇಶದ ಶ್ರೀಮಂತರು, ಸರಕಾರಿ ಮತ್ತಿತರ ಸಂಸ್ಥೆಗಳ ಉದ್ಯೋಗಿಗಳು ಬಿಡಿ, ಮಧ್ಯಮವರ್ಗದ ಸ್ವಯಂವೃತ್ತಿ ನಿರತರಾದ ಟ್ಯಾಕ್ಸಿ/ಆಟೋ ಚಾಲಕರು, ಸ್ಥಳೀಯವಾಗಿ ಕೆಲಸ ಮಾಡಿ ಸಂಪಾದಿಸುವವರಿಗೂ ಇವರಿಗೂ ಇರುವ ವ್ಯತ್ಯಾಸ ಗೊತ್ತಾಗಬಲ್ಲುದು. ಊರಿಂದೂರಿಗೆ ಬೆಡ್‌ಶೀಟು, ಪಾತ್ರೆಸಾಮಗ್ರಿ, ಮುಂತಾದ ಅನೇಕ ವಸ್ತುಗಳನ್ನು ಗಂಡಸರೇ ಹೊತ್ತು ವ್ಯಾಪಾರ ಮಾಡುತ್ತಾರೆ. ಅವರ ಪಾಡೂ ಭಿನ್ನವೇನಲ್ಲ. ಆದರೆ ಮನೆವಾರ್ತೆಯ ಹೆಂಗಸರಿಗೆ ಮಕ್ಕಳು-ಮರಿಯಿದ್ದು ಅವರ ಲಾಲನೆ-ಪಾಲನೆ ಮಾಡುವುದರೊಂದಿಗೆ ಜೀವನ ನಿರ್ವಹಣೆಯೂ ಆಗಬೇಕಾದಾಗ ಇಂತಹ ಪ್ರಯಾಣ ಮತ್ತು ಪ್ರಯಾಸದ ಕಷ್ಟ ಅರಿವಾಗಬಹುದು. ಇಂಥವರ ಜೀವನದ ಕಥೆ ಕೇಳಿದರೆ ಅದೇ ಒಂದು ಕತೆಯಾಗಬಹುದು.

ಎಲ್ಲರಿಗೂ ಬದುಕಿನಲ್ಲಿ ಇಂಥದ್ದೊಂದು ದಿನ ಲಭಿಸಿದರೆ ದೇಶಕ್ಕೂ ಸಮಾಜಕ್ಕೂ ಒಳ್ಳೆಯದು. ಮೊನ್ನೆ ರಾಜ್ಯದ ಕಾಂಗ್ರೆಸ್ ಸರಕಾರವು ಮಹಿಳೆಯರಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಉಚಿತ ಪ್ರಯಾಣವನ್ನು ಘೋಷಿಸಿದಾಗ ಇದು ನೆನಪಾಯಿತು. ಒಂದು ಊರಿನ ವಿಚಾರ ಇದು. ಇಂತಹ ಅಸಂಖ್ಯ ಉದಾಹರಣೆಗಳು ರಾಜ್ಯದೆಲ್ಲೆಡೆ ಸಿಕ್ಕಾವು. ಕರ್ನಾಟಕ ಸರಕಾರವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ ಗ್ಯಾರಂಟಿಗಳನ್ನು ಒಂದೊಂದಾಗಿ ಅನುಷ್ಠಾನಗೊಳಿಸಲು ಹೊರಟಿದೆ. ಈ ಪೈಕಿ ಮೊದಲನೆಯದೇ ಮಹಿಳೆಯರಿಗೆ ಉಚಿತ ಪ್ರಯಾಣ. ಇದೊಂದು ರಾಜಕೀಯ ತಂತ್ರವೆಂದು ಟೀಕಿಸಿದವರಿಗೆ ಇದು ರಾಜಕೀಯ ತಂತ್ರವೇ ಇರಬಹುದು; ಆದರೆ ಇದರ ಫಲಾನುಭವಿಗಳನ್ನು ಕೇಳಿ; ಅವರ ಸಂತೋಷ, ಸಮಾಧಾನವನ್ನು ಗಮನಿಸಿ ಎಂದು ಹೇಳಬೇಕು. ಮಾಧ್ಯಮಗಳಲ್ಲಿ ಭಾವುಕವಾದ ಅನೇಕ ಚಿತ್ರಗಳು ಮೂಡಿವೆ. ಹಾಸ್ಯ, ವ್ಯಂಗ್ಯ, ವಿಷಾದ, ರೊಚ್ಚು, ಕೋಪ ಮುಂತಾದ ಅನೇಕ ಅನುಭವಗಳು ಅಭಿಮತಗಳು ಅಭಿವ್ಯಕ್ತಿಯಾಗಿವೆ.

ಬಸ್ ಏರುವ ಮೊದಲು ಅದರ ಮೆಟ್ಟಲಿಗೆ ನಮಿಸಿದ ವೃದ್ಧೆಯ ಚಿತ್ರ ಪತ್ರಿಕೆಯಿಂದ, ಸಾಮಾಜಿಕ ಜಾಲತಾಣದಿಂದ ಅಳಿಸಿಹೋದರೂ ಮರೆತುಹೋಗದು. ಸಂಸತ್ತಿಗೆ ಪ್ರವೇಶಿಸುವ ಮೊದಲು ಪ್ರಧಾನಿ ಮೋದಿ ಅದರ ಪ್ರವೇಶದ್ವಾರದ ಹೊರಗಿನ ಮೆಟ್ಟಲಿಗೆ ನಮಿಸಿದ್ದಕ್ಕೂ ಇದಕ್ಕೂ ಅಗಾಧ ವ್ಯತ್ಯಾಸವಿದೆ. ಅಲ್ಲಿ ಅಧಿಕಾರಕ್ಕೆ ಧನ್ಯವಾದ ಹೇಳಿದರೆ ಇಲ್ಲಿ ಬಾವಿಯೊಳಗೆ ಬಿದ್ದವರನ್ನು ಮೇಲೆತ್ತಿದಾಗ ಭವಭೂತಿಗೆ ನಮಿಸಿದ ಮೂಕಜೀವಿಗಳ ಅಭಿವಂದನೆ. ಆದ್ದರಿಂದ ಈ ಉಚಿತ ಕೊಡುಗೆ ಬರೀ ರಾಜಕೀಯವಲ್ಲ; ಮಾನವತ್ವದ ಪ್ರದರ್ಶನ. ಇವೆಲ್ಲ ಬಿಳಿಕಾಲರಿನ ಮಂದಿಗೆ ಅಷ್ಟಾಗಿ ಅರ್ಥವಾಗದು. ನಮ್ಮ ತೆರಿಗೆಯ ಹಣದಲ್ಲೇಕೆ ಉಚಿತ ಕೊಡುಗೆ ಎಂದೇ ಅವರು ಕೇಳಬಲ್ಲರು. (ಕಂಬಳಕನೆಂಬ ಕೃತಘ್ನರು ಅಂದೂ ಇದ್ದರು, ಇಂದೂ ಇದ್ದಾರೆ!) ಇಂತಹ ಸಂದರ್ಭದಲ್ಲಿ ಅವರಿಗೆ ತಾವು ಪಡೆಯುವ ಅನೇಕ ಉಚಿತಗಳು ನೆನಪಾಗುವುದಿಲ್ಲ. ಉಚಿತ ಕೈಗಾರಿಕಾ ಸ್ಥಳ, ತೆರಿಗೆ ಮುಕ್ತ ವಾತಾವರಣ, ಇವು ತಂತ್ರಜ್ಞಾನ ಕಂಪೆನಿಗಳಿಗಾದರೆ ಸರಕಾರದಲ್ಲಿರುವವರಿಗೆಲ್ಲ ಉಚಿತ ವೈದ್ಯಕೀಯ ಸೌಲಭ್ಯ, ಉಚಿತ ಹೆರಿಗೆ ರಜೆ, ಉಚಿತ ಭೂಮಂಜೂರಾತಿ, ಸಬ್ಸಿಡಿ, ಕೃಷಿಸಾಲ ಮನ್ನಾ, ತೆರಿಗೆ ಮುಕ್ತ ಕೃಷಿ ಆದಾಯ, ಇವೆಲ್ಲ ಅನುಚಿತ ಉಚಿತಗಳೇ. ಬಹಳಷ್ಟು ಮಹಿಳೆಯರು ದೂರದೂರಿನ ತೀರ್ಥಕ್ಷೇತ್ರಗಳಿಗೆ, ಧರ್ಮಕ್ಷೇತ್ರಗಳಿಗೆ ಪ್ರಯಾಣಿಸಿದ್ದಾರೆಂದು ವರದಿಯಾಗಿದೆ. ಇದರಿಂದ ಎಲ್ಲ ಉದ್ದಿಮೆಗಳಿಗೆ ನೆರವಾಗಬಹುದು. ಪ್ರಯಾಣದ ಹೊರತು ಊಟ-ಕಾಫಿ-ವಸತಿ ಮತ್ತಿತರ ವೆಚ್ಚ ಮುಂಚಿನಂತೆಯೇ ಇದೆಯಲ್ಲ! ಹೋಗಲಿ, ಮಹಿಳೆಯರಿಗಷ್ಟೇ ಪ್ರಯಾಣ ಉಚಿತ.

ಉಚಿತವೆಂದು ಒಬ್ಬೊಬ್ಬರೇ ಪ್ರಯಾಣ ಮಾಡುವವರು ತೀರ ಕಡಿಮೆ. ಅವರೊಂದಿಗೆ ಪ್ರಯಾಣಮಾಡುವ (ಗಂಡು ಮಕ್ಕಳೂ ಸೇರಿದಂತೆ) ಪುರುಷರಿಗೆ, ಪ್ರಯಾಣವೇನೂ ಉಚಿತವಲ್ಲವಲ್ಲ! ಇಷ್ಟು ಮಾತ್ರವಲ್ಲ, ಉಚಿತವೆಂದು ನಿತ್ಯ ಪ್ರಯಾಣ ಮಾಡುವುದಕ್ಕಾಗುತ್ತದೆಯೇ? ದಿನಾ ಸಿಹಿ ತಿನ್ನುವುದು ಪುರೋಹಿತರಿಗೂ, ಅರ್ಚಕರಿಗೂ, ಅಡುಗೆಯವರಿಗೂ ಮಾತ್ರ ಕಷ್ಟಸಾಧ್ಯ. ಅವರವರ ಕೆಲಸಕಾರ್ಯಗಳು, ವೃತ್ತಿಬದ್ಧತೆಗಳು, ಆರೋಗ್ಯ ಸಮಸ್ಯೆಗಳು ಇದ್ದೇ ಇರುತ್ತವೆ. ಆದ್ದರಿಂದ ಉಚಿತವೆಂದಾಕ್ಷಣ ಎಲ್ಲ ಮಹಿಳೆಯರೂ ಲೋಕಸಂಚಾರ ಮಾಡುತ್ತಾರೆಂದು ತಿಳಿಯಬಾರದು. ಇದನ್ನು ಹೇಳಬೇಕಾದ ಅಗತ್ಯವೆಂದರೆ ಈ ಉಚಿತ ಪ್ರಯಾಣ ಸೌಲಭ್ಯವನ್ನು ಟೀಕಿಸುವ ಮಂದಿ- ಪಂಚಾಯತ್ ಸದಸ್ಯನಿಂದ ಪ್ರಧಾನಿಯ ವರೆಗೆ, ಇದೊಂದು ಪ್ರಯೋಗ, ಹೇಗಾಗುತ್ತದೆಯೋ ಕಾದು ನೋಡೋಣ ಎಂಬ ತಾಳ್ಮೆಯೂ ಇಲ್ಲದೆ ರಾಜ್ಯ ದಿವಾಳಿಯೆದ್ದು ಹೋಗುತ್ತದೆ ಎಂಬಂತೆ ರೋದಿಸುತ್ತಿದ್ದಾರೆ. ಇದು ಎಷ್ಟರ ಮಟ್ಟಿಗೆ ರಾಜ್ಯ ಸರಕಾರದ ಆರ್ಥಿಕ ಸಾಮರ್ಥ್ಯವನ್ನು ಬಾಧಿಸುತ್ತದೆಯೆಂಬುದನ್ನು ತಜ್ಞರು ಹೇಳಬೇಕು. ಆದರೆ ಮಾಧ್ಯಮ ವರದಿಗಳ ಪ್ರಕಾರ ಮೊದಲನೇ ದಿನ ಸುಮಾರು 1 1/2-2 ಕೋಟಿ ರೂಪಾಯಿಯ ಭಾರ ರಾಜ್ಯ ಸರಕಾರದ ಮೇಲೆ ಬಿದ್ದಿದೆ.

ಇದನ್ನೇ ಮಾಪನವಾಗಿ ಸ್ವೀಕರಿಸಿದರೆ ತಿಂಗಳಿಗೆ 45-60 ಕೋಟಿ, ವರ್ಷಕ್ಕೆ 540-720 ಕೋಟಿ ಹಣ ವೆಚ್ಚವಾಗುತ್ತದೆ. ಇದಕ್ಕಿಂತ ಹೆಚ್ಚು ಹಣವನ್ನು ಮಠಮಾನ್ಯಗಳಿಗೆ, ಮಂದಿರಗಳಿಗೆ, ಮೂರ್ತಿಗಳಿಗೆ, ಧುರೀಣರ ಪ್ರಯಾಣಕ್ಕೆ, ದೊಡ್ಡವರ ಹಬ್ಬ-ಹರಿದಿನಗಳಿಗೆ ವೆಚ್ಚವಾಗುವುದನ್ನು ನಾವು ನೋಡಿಯೂ ನೋಡದಂತಿದ್ದೇವೆ. 3,000 ಕೋಟಿ ರೂಪಾಯಿಯಲ್ಲಿ ಸರ್ದಾರ್ ಪಟೇಲರ ಪ್ರತಿಮೆಗೆ, ಅದೆಷ್ಟೋ ಕೋಟಿಯನ್ನು ರಾಮಾನುಜಾಚಾರ್ಯರ ಪ್ರತಿಮೆಗೆ ವೆಚ್ಚ ಮಾಡುವಾಗ ಸಾರ್ವಜನಿಕ ಬೊಕ್ಕಸಕ್ಕೆ ಹೊರೆಯಾಗುವುದನ್ನು ದೇಶಭಕ್ತರು ಮಾತ್ರವಲ್ಲ, ಹಸಿವನ್ನು ಮರೆತ ಎಲ್ಲ ಮಾಧ್ಯಮಗಳು ಉಲ್ಲೇಖಿಸುತ್ತಿಲ್ಲ. ರಾಜಕೀಯ ರ್ಯಾಲಿಗಳಿಗೆ, ರಾಜಕಾರಣಿಗಳ ಚಾರ್ಟರ್ ವಿಮಾನ ಪ್ರಯಾಣಗಳಿಗೆ ಆಗುವ ವೆಚ್ಚವನ್ನು ಲೆಕ್ಕ ಹಾಕಿದರೆ ಇದು ನಗಣ್ಯ. ಒಬ್ಬೊಬ್ಬ ಸರಕಾರಿ ಅಧಿಕಾರಿ/ನೌಕರರಲ್ಲಿ ಪತ್ತೆೆಯಾಗುವ ಆಗಬಹುದಾದ ಕಪ್ಪುಹಣವನ್ನು ಲೆಕ್ಕಹಾಕಿದರೂ ಇದೇನೂ ಅಲ್ಲ. ಇಷ್ಟೇ ಅಲ್ಲ. ಇದು ರೂಢಿಯಾದ ಮೇಲೆ ಪ್ರಯಾಣಿಕರ ಸಂಖ್ಯೆ ತನ್ನಿಂತಾನಾಗಿಯೇ ಕಡಿಮೆಯಾಗುತ್ತದೆ. ಆರಂಭದ ಉತ್ಸಾಹ ಆನಂತರವಿರುವುದಿಲ್ಲ. ಅನಗತ್ಯವಾಗಿ ಪ್ರಯಾಣಿಸುವ ಮಹಿಳೆಯರು ಕಡಿಮೆ. ಈ ವರ್ಗ ಪುರುಷರಲ್ಲೇ ಹೆಚ್ಚು!

ಆದರೆ ಜನರು ಈ ಉಚಿತವನ್ನು ಸ್ವೀಕರಿಸುವಾಗ ತಾವಿದಕ್ಕೆ ಪಾತ್ರರೇ ಎಂಬುದನ್ನು ಗಮನಿಸಿಕೊಳ್ಳುವುದು ಒಳ್ಳೆಯದು. ಉಚಿತವಾದರೆ ಇರಲಿ ಎಂದು ವಸ್ತುಪ್ರದರ್ಶನಗಳಲ್ಲಿ ಸಿಕ್ಕುವ ಉಚಿತ ಕರಪತ್ರಗಳನ್ನು ಮನೆಗೆ ತಂದು ರದ್ದಿಯೊಂದಿಗೆ ಮಾರುವವರೂ ಇದ್ದಾರೆ. ಅಪಾತ್ರ ದಾನ ಹೇಗೆ ಕೂಡದೋ, ಹಾಗೆಯೇ ಅಪಾತ್ರ ಸ್ವೀಕಾರವೂ ಕೂಡದು. ಈಗ ಏನಾಗಿದೆಯೆಂದರೆ ನೌಕರಿಯಲ್ಲಿದ್ದು ಪ್ರಯಾಣ ಮಾಡುವ ಉದ್ಯೋಗಿ ಮಹಿಳೆಯರೂ ಈ ಉಚಿತ ಉಡುಗೊರೆಯನ್ನು ಸೆರಗೊಡ್ಡಿ ಸ್ವೀಕರಿಸುತ್ತಿದ್ದಾರೆ. ಆದಾಯ ತೆರಿಗೆ ಪಾವತಿಸುವವರು ಹೀಗೆ ಹೋದದ್ದುಂಟು. ಗಂಡ, ಮಕ್ಕಳೊಂದಿಗೆ ಹೋಗುವಾಗ ತಾನೊಬ್ಬಳು ಉಚಿತ ಸೇವಾವ್ರತಿಯೆಂಬಂತೆ ಪ್ರಯಾಣಿಸಿದವರೂ ಇದ್ದಾರೆ. ಇದಕ್ಕೆ ಕಡಿವಾಣ ಹಾಕದಿದ್ದರೆ ಜೀವನ ಮೌಲ್ಯಗಳು ಬಿಗಡಾಯಿಸಿಯಾವು. ಆದರೆ ಇಲ್ಲೂ ಎಲ್ಲವೂ ತಪ್ಪಾಗದು. ಬಹಳಷ್ಟು ಉಳ್ಳವರು ಸ್ವಂತ ವಾಹನಗಳನ್ನು, ಐಷಾರಾಮಿ ಬಸ್‌ಗಳನ್ನು ಬಳಸುತ್ತಾರೆ.

ನನಗೆ ತಿಳಿದ ಮಂದಿಗಳಲ್ಲಿ ಯಾವ ಗಂಡಸು ನೀನು ಬಸ್‌ನಲ್ಲಿ ಉಚಿತವಾಗಿ ಹೋಗು, ನಾನು ಐಷಾರಾಮಿ ಬಸ್‌ನಲ್ಲಿ ಹೋಗುತ್ತೇನೆಂದು ಪತ್ನಿಗೋ, ತಾಯಿಗೋ, ಮಗಳಿಗೋ ಇತರ ಹೆಣ್ಣುಮಕ್ಕಳಿಗೋ ಹೇಳಿ ಪ್ರತ್ಯೇಕವಾಗಿ ಹೋದವರಿಲ್ಲ. ಟೀಕಿಸುವುದು ಸುಲಭ; ಯಾವುದೇ ಒಳ್ಳೆಯ ಅಥವಾ ಕೆಟ್ಟ ನಡೆಯ ಪರಿಣಾಮವನ್ನು ಅನುಭವಿಸಿದವರಿಗೇ ಅದರ ಸುಖ-ಕಷ್ಟ ಗೊತ್ತು. ನಾವು ಮಾಡಬೇಕಾದ್ದನ್ನು, ಆದರೆ ಮಾಡದ್ದನ್ನು ಇನ್ನೊಬ್ಬ ಮಾಡಿದರೆ ಟೀಕಿಸುವ ಸತ್ಸಂಪ್ರದಾಯ ನಮ್ಮಲ್ಲಿ ಹೇರಳವಾಗಿದೆ. (ಈ ಮಾತನ್ನು ಕುವೆಂಪು 5 ದಶಕಗಳ ಹಿಂದೆಯೇ ಹೇಳಿದ್ದರು.) ಯಾರಾದರೂ ಒಳ್ಳೆಯ ಕೆಲಸವನ್ನು ಮಾಡಿದಾಕ್ಷಣ ಆತನಿಗೇನೋ ಲಾಭವಿರಬೇಕು ಅಥವಾ ಪ್ರಚಾರ ಗಿಟ್ಟಿಸಲು ಹೀಗೆ ಮಾಡುತ್ತಿದ್ದಾನೆ ಅಥವಾ ಆತನಿಗೆ ಬೇರೆ ಕೆಲಸವಿಲ್ಲ ಎಂದು ಮುಂತಾಗಿ ವ್ಯಂಗ್ಯವಾಡುವವರು, ಹಳಿಯುವವರು ಅಸಂಖ್ಯ. 5-6 ಶತಮಾನಗಳ ಹಿಂದೆಯೇ ದಾಸರು ‘‘ನಿಂದಕರಿರಬೇಕಿರಬೇಕು, ಹಂದಿ ಇದ್ದರೆ ಕೇರಿ ಹೇಗೆ ಶುದ್ಧವೋ ಹಾಗೆ ನಿಂದಕರಿರಬೇಕಿರಬೇಕು’’ ಎಂದು ಹಾಡಿದರು. ರಾಜ್ಯ ಸರಕಾರ ತನ್ನ ಇತರ ಮತ್ತು ರಾಜಕಾರಣಕ್ಕೆ ಸಹಜವಾಗಿರುವಂತಹ ಭ್ರಷ್ಟಾಚಾರ, ಅನಗತ್ಯ ವೈಭವ, ಅದ್ದೂರಿಯ ಸೌಕರ್ಯಗಳು ಮುಂತಾದ ನಡೆಗಳ ರೆಕ್ಕೆಪುಕ್ಕಗಳನ್ನು ಸ್ವಲ್ಪಕತ್ತರಿಸಿಕೊಂಡರೆ ಈ ವೆಚ್ಚವನ್ನು ಭರಿಸಬಹುದು.

ಇದಕ್ಕೆ ಸರಕಾರದ ಎಲ್ಲ ಅಧಿಕಾರಿಗಳು, ನೌಕರರು ಸಹಕರಿಸುತ್ತಾರೆಂದೇನೂ ಇಲ್ಲ. ಅವರಲ್ಲಿ ಹೆಚ್ಚಿನವರು ತಮಗೆ ಬೇಕಾದ್ದನ್ನು ಕಪ್ಪು-ಬಿಳಿ ಆಟದ ಮೂಲಕ ಪಡೆಯುವುದನ್ನಷ್ಟೇ ಧ್ಯಾನಿಸುತ್ತಿರುತ್ತಾರೆ. ಹೊಸ ವಾಹನಗಳಿಗೆ ಬೇಡಿಕೆಯಿಟ್ಟಾಗ ಹಳತು ಯಾಕೆ ಬೇಡ ಎಂಬುದನ್ನು ಕೇಳುವ ಸ್ಥೈರ್ಯ, ಆತ್ಮಸಾಕ್ಷಿ ಸರಕಾರದ ರಾಜಕಾರಣಿಗಳಿಗಿರಬೇಕು. ಅನಗತ್ಯವಾದ್ದನ್ನು ತಿರಸ್ಕರಿಸುವ ಧೈರ್ಯ, ಮನಸ್ಸು ಎಲ್ಲ ಶಾಸಕರಿಗೂ ಇರಬೇಕು. ಪ್ರತಿಪಕ್ಷಗಳು ತಮ್ಮಾಳಗಿನ ಸೋತ ಉರಿಯನ್ನು ಸ್ವಲ್ಪಅದುಮಿಟ್ಟು ತಮ್ಮ ಪರಿಸ್ಥಿತಿಯು ಇನ್ನಷ್ಟು ಹೀನಾಯವಾಗದಂತೆ ಜಾಗ್ರತೆಯಿಂದಿದ್ದು ಜನಮತವನ್ನು ಸಹಾನುಭೂತಿಯಿಂದ ಕಂಡು ಸಹಕರಿಸಬೇಕು. ಚುನಾವಣೆಯ ಮೊದಲು ತಾವು ಭಿನ್ನ ಪಕ್ಷದವರು; ಆದರೆ ಈಗ ತಾವೆಲ್ಲರೂ ಪ್ರಜೆಗಳಿಗೆ ಉತ್ತರದಾಯಿತ್ವವನ್ನು ಹೊಂದಿದವರು ಎಂಬ ಎಚ್ಚರವನ್ನು ಹೊಂದಿರಬೇಕು.

ಇದು ಒಂದು ಆದರ್ಶ ಕಲ್ಪನೆ; ರಾಜಕೀಯವು ಹೀಗಿರುತ್ತದೆಂದು ಅನ್ನಿಸುವುದು ಯುಟೋಪಿಯಾದ ಆಶಯ. ಗಾಂಧಿವಾದದಂತೆ ಕಟ್ಟಕಡೆಯವನಿಗೂ ಸಿಗಬಲ್ಲ ಸೌಲಭ್ಯವು ಕೆಲವರಿಗಾದರೂ ಸಿಗುತ್ತದಲ್ಲ ಎಂದುಕೊಂಡು ಬೆಂಬಲಿಸಬೇಕು. ಸರಕಾರ ಇನ್ನಷ್ಟು ಯೋಜನೆಗಳನ್ನು ಹಾಕಿಕೊಂಡಿದೆ. ತಪ್ಪಾದಾಗ ಪಕ್ಷಭೇದ ಮರೆತು ಟೀಕಿಸೋಣ. ಒಳ್ಳೆಯದನ್ನು ಸ್ವಾಗತಿಸೋಣ. ದಿನನಿತ್ಯ ಉದಯಿಸುವ ಸೂರ್ಯನನ್ನು, ರಾತ್ರಿ ಮೂಡುವ ಚಂದ್ರನನ್ನು ಟೀಕಿಸುವುದು, ಯಾವ ಸಾರ್ಥಕತೆ?

Similar News