ಖಾಸಗಿಯವರಿಗೆ ಸರಕಾರಿ ಶಾಲೆಗಳ ದತ್ತು ಅಪಾಯಕಾರಿ ನಡೆ
‘ಮೃದು ಖಾಸಗೀಕರಣ’ದ ಪರವಾಗಿ ಲಾಬಿ ಮಾಡುವವರು ಶೇ.೩೦-೪೦ರಷ್ಟು ಶುಲ್ಕವನ್ನು ಪೋಷಕರಿಂದ ವಸೂಲಿ ಮಾಡಿ ಉಳಿದ ಶೇ.೭೦-೬೦ರಷ್ಟು ಹಣವನ್ನು ಸ್ವತಃ ಸಂಸ್ಥೆಗಳೇ ಭರಿಸುತ್ತವೆ ಎಂದು ವಾದಿಸುತ್ತಾರೆ. ಆದರೆ ವಾಸ್ತವದಲ್ಲಿ ಅದು ಸಂಪೂರ್ಣ ವ್ಯತಿರಿಕ್ತವಾಗಿದೆ. ಅದು ತೀವ್ರವಾದ ಖಾಸಗೀಕರಣದ ಸ್ವರೂಪ ಪಡೆದುಕೊಂಡಿದೆ. ಹೆಚ್ಚೂ ಕಡಿಮೆ ಶೇ.೮೦-೯೦ ಪ್ರಮಾಣದ ಶುಲ್ಕವನ್ನು ಪೋಷಕರಿಂದಲೇ ವಸೂಲಿ ಮಾಡುವ ಖಾಸಗಿ ಶಿಕ್ಷಣ ಸಂಸ್ಥೆಗಳು ಸಂವಿಧಾನದ ಎಲ್ಲಾ ನೀತಿಸಂಹಿತೆಗಳನ್ನು ಧಿಕ್ಕರಿಸಿವೆ. ಇಲ್ಲಿ ಪರ್ಯಾಯ ಖಾಸಗೀಕರಣ ಎನ್ನುವ ತರ್ಕವೇ ಅಸಂಬದ್ಧವಾಗಿದೆ.
ಖಾಸಗಿ ಶಾಲೆಗಳು ಒಂದೊಂದು ಸರಕಾರಿ ಶಾಲೆಯನ್ನು ದತ್ತು ಪಡೆಯುತ್ತವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೇಳಿರುವುದು ಪತ್ರಿಕೆಗಳಲ್ಲಿ ವರದಿಯಾಗಿದೆ. ಇದು ನಿಜಕ್ಕೂ ಅಘಾತಕಾರಿಯಾಗಿದೆ. ಪ್ರಜಾಪ್ರಭುತ್ವದ ಆಶಯಗಳು ಜೀವಂತವಾಗಿರಬೇಕೆಂದರೆ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಸಬಲೀಕರಣಗೊಳ್ಳಬೇಕು, ಸರಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸಬೇಕು, ಸಮಾನ ಶಿಕ್ಷಣ, ನೆರೆಹೊರೆ ಶಾಲಾ ಪದ್ಧತಿ ಜಾರಿಗೊಳ್ಳಬೇಕು ಎನ್ನುವ ಮೂಲ ತತ್ವಗಳು ಮತ್ತು ೬-೧೪ರ ವಯಸ್ಸಿನ ಮಕ್ಕಳ ಶಿಕ್ಷಣವನ್ನು ಮೂಲಭೂತ ಹಕ್ಕು ಎಂದು ಕಡ್ಡಾಯಗೊಳಿಸಿದ ನಮ್ಮ ಸಂವಿಧಾನದ ೨೧ಎ ಆಶಯವನ್ನೇ ಕಡೆಗಣಿಸಿ ಕರ್ನಾಟಕ ಸರಕಾರವು ಖಾಸಗಿ ಶಿಕ್ಷಣ ಸಂಸ್ಥೆಗಳೊಂದಿಗೆ ಖಾಸಗಿ-ಸಾರ್ವಜನಿಕ-ಸಹಭಾಗಿತ್ವದ ಅಡಿಯಲ್ಲಿ ಒಡಂಬಡಿಕೆ ಮಾಡಿಕೊಳ್ಳಲು ನಿರ್ಧರಿಸಿರುವುದು ಸ್ವಾಗತಾರ್ಹವಲ್ಲ.
ಈಗಾಗಲೇ ಹಿಂದಿನ ಸರಕಾರಗಳು ಅಧಿಕಾರದಲ್ಲಿದ್ದಾಗ ಸಾರ್ವಜನಿಕ ಶಿಕ್ಷಣ ಇಲಾಖೆಯು ಕಲಿಕೆಯ ಸಂಬಂಧ ಸರಕಾರೇತರ ಖಾಸಗಿ ಸಂಘ ಸಂಸ್ಥೆಗಳ ಜೊತೆ ಒಡಂಬಡಿಕೆ ಮಾಡಿಕೊಂಡಿದೆ. ಇದರ ಅನುಸಾರ ಅಜೀಮ್ ಪ್ರೇಮ್ಜಿ ಪ್ರತಿಷ್ಠಾನಕ್ಕೆ ಶಿಕ್ಷಕರಿಗೆ, ಅಧಿಕಾರಿಗಳಿಗೆ ತರಬೇತಿ, ಬಿಸಿಯೂಟದ ಗುಣಮಟ್ಟ ಕಾಪಾಡುವುದು ಪ್ರಥಮ್ ಪ್ರತಿಷ್ಠಾನಕ್ಕೆ ಪ್ರಥಮ ಭಾಷೆ ಮತ್ತು ಗಣಿತ ವಿಷಯಗಳ ಕಲಿಕಾ ಮಟ್ಟ ಹೆಚ್ಚಿಸುವುದು, ಶಿಕ್ಷಣ ಪ್ರತಿಷ್ಠಾನಕ್ಕೆ ಮಕ್ಕಳ ಶಿಕ್ಷಣ ಕಲಿಕೆ, ಅಭ್ಯಾಸ ಪುಸ್ತಕಗಳ ಮೂಲಕ ಕಲಿಕಾ ಮಟ್ಟ ಹೆಚ್ಚಿಸುವುದು, ಖಾನ್ ಅಕಾಡಮಿಗೆ ವೀಡಿಯೊ ಲೇಖನಗಳು ಮತ್ತು ಇತರ ಡಿಜಿಟಲ್ ತರಬೇತಿ ಹೀಗೆ ಅನೇಕ ವಿಷಯಗಳ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಮೇಲಿನ ನಾಲ್ಕು ಖಾಸಗಿ ಸಂಸ್ಥೆಗಳೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಇದರ ಮುಂದುವರಿದ ಭಾಗವಾಗಿ ಈಗ ಬಹುಮತ ಗಳಿಸಿ ಅಧಿಕಾರಕ್ಕೆ ಬಂದಿರುವ ಕರ್ನಾಟಕದ ಕಾಂಗ್ರೆಸ್ ಸರಕಾರವು ಸರಕಾರಿ ಶಾಲೆಗಳನ್ನು ಖಾಸಗಿಯವರಿಗೆ ದತ್ತು ಕೊಡಲು ಆಲೋಚಿಸಿದೆ. ಆದರೆ ಕರ್ನಾಟಕದ ಜನತೆ ಶಿಕ್ಷಣದ ಖಾಸಗೀಕರಣಕ್ಕೆ ಕಾಂಗ್ರೆಸ್ ಪಕ್ಷವನ್ನು ಆಯ್ಕೆ ಮಾಡಲಿಲ್ಲ ಎನ್ನುವ ಸತ್ಯವನ್ನು ಆ ಪಕ್ಷದವರು ಆದಷ್ಟು ಬೇಗ ಅರಿತುಕೊಳ್ಳಬೇಕಾಗಿದೆ
ಪ್ರಸಕ್ತ ಸಂದರ್ಭದ ಸರಕಾರಿ ಶಾಲೆಗಳ ಕುರಿತು ಪ್ರಾಥಮಿಕ ಮಾಹಿತಿ ವಿಶ್ಲೇಷಿಸಿದಾಗ..
೨೩, ಜೂನ್ ೨೦೨೩ರ ಡೆಕ್ಕನ್ ಹೆರಾಲ್ಡ್ನ ವರದಿಯ ಪ್ರಕಾರ ೨೧,೦೪೫ ಕಿರಿಯ ಪ್ರಾಥಮಿಕ, ೨೨,೦೮೬ ಹಿರಿಯ ಪ್ರಾಥಮಿಕ ಶಾಲೆಗಳಿವೆ. ೫,೦೫೧ ಮಾಧ್ಯಮಿಕ ಶಾಲೆಗಳು, ೧,೨೨೯ ಪದವಿ ಪೂರ್ವ ಕಾಲೇಜುಗಳಿವೆ. ೨೦೨೨ರ ಯುಡಿಎಸ್ಇ ವರದಿಯ ಪ್ರಕಾರ ೫೪,೪೫,೯೮೯ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಶೇ.೬೫.೫೫ರಷ್ಟು ಸರಕಾರಿ ಶಾಲೆಗಳು, ೧,೨೦೩ (ಶೇ.೧೬೬) ಸಮಾಜ ಕಲ್ಯಾಣ ಇಲಾಖೆ ಶಾಲೆಗಳು, ೬,೫೫೪ (ಶೇ.೯.೦೭) ಅನುದಾನಿತ ಶಾಲೆಗಳು, ೧೬,೮೯೩ (ಶೇ.೨೩.೩೭) ಅನುದಾನರಹಿತ ಖಾಸಗಿ ಶಾಲೆಗಳಿವೆ. ಸರಕಾರಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಲ್ಲಿ ೧,೯೯,೦೫೭ ಶಿಕ್ಷಕರಿದ್ದಾರೆ. ೨೦೨೧-೨೨ರಲ್ಲಿ ೨.೦೮ ಲಕ್ಷ ಶಿಕ್ಷಕರಿದ್ದರು. ಅಂದರೆ ಒಂದು ವರ್ಷದಲ್ಲಿ ೯೫೧ ಶಿಕ್ಷಕರು ಕಡಿಮೆಯಾಗಿದ್ದಾರೆ. ೧೫,೦೦೦ ಹೊಸ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಮುಗಿದಿದೆ. ಆದರೆ ಇನ್ನೂ ಆದೇಶ ಹೊರಡಿಸಿಲ್ಲ. ಅನುದಾನರಹಿತ ಖಾಸಗಿ ಶಾಲೆಗಳಲ್ಲಿ ೧,೦೨,೮೯೪ ಶಿಕ್ಷಕರಿದ್ದಾರೆ. ವಿದ್ಯಾರ್ಥಿ ಶಿಕ್ಷಕರ ಅನುಪಾತವು ೨೩:೧ ಇದೆ. ಆದರೆ ೧-೫ ಕ್ಲಾಸ್ಗೆ ತರಗತಿಗೊಬ್ಬರು ಶಿಕ್ಷಕರಿರಬೇಕು. ೬-೧೦ನೇ ತರಗತಿಗೆ ವಿಷಯಕ್ಕೊಬ್ಬರು ಶಿಕ್ಷಕರಿರಬೇಕು. ಕರ್ನಾಟಕ ಆರ್ಥಿಕ ಸಮೀಕ್ಷೆ ೨೦೨೩ರ ಪ್ರಕಾರ ಶೇ.೯೮ರಷ್ಟು ಸರಕಾರಿ ಶಾಲೆಗಳು ಸ್ವಂತ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ೨.೦೨ ಲಕ್ಷ ಕ್ಲಾಸ್ರೂಂಗಳಿವೆ. ಇದರಲ್ಲಿ ಶೇ.೭೪.೭೯ರಷ್ಟು ಉತ್ತಮ ಸ್ಥಿತಿಯಲ್ಲಿವೆ. ೨೭,೩೫೮ ಕ್ಲಾಸ್ರೂಂಗಳಲ್ಲಿ ಹೆಚ್ಚಿನ ದುರಸ್ತಿಯಾಗಬೇಕಾಗಿದೆ. ಗ್ರಾಮೀಣ ಭಾಗದಲ್ಲಿರುವ ೧೩,೮೦೦ ಶಾಲೆಗಳಲ್ಲಿ ೨೫ಕ್ಕೂ ಕಡಿಮೆ ಮಕ್ಕಳಿದ್ದಾರೆ. ೨೦೨೧ರ ಮಾಹಿತಿಯ ಪ್ರಕಾರ ೨೭೬ ಕರ್ನಾಟಕ ಪಬ್ಲಿಕ್ ಶಾಲೆಗಳಿವೆ. ಇಲ್ಲಿ ೧-೧೨ನೇ ತರಗತಿಯವರೆಗೆ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಕೊಡಲಾಗುವುದು ಎಂದು ಶಿಕ್ಷಣ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಇಲ್ಲಿ ಇಂಗ್ಲಿಷ್ ಮಾಧ್ಯಮದ ಶಾಲೆಗಳಿರುವುದು ವಿಶೇಷ. ಆದರೆ ಈ ಮಾದರಿ ಶಾಲೆಗಳಿಗಾಗಿ ಹೊಸ ಕಟ್ಟಡಗಳ ಸೌಲಭ್ಯವಿಲ್ಲ, ಮೂಲಭೂತ ಸೌಕರ್ಯಗಳಿಲ್ಲ. ಹೋಬಳಿ ಮಟ್ಟದಲ್ಲಿ ಆಯ್ದ ಸರಕಾರಿ ಶಾಲೆಗಳಿಗೆ ಪಬ್ಲಿಕ್ ಶಾಲೆಗಳು ಎಂದು ಬೋರ್ಡ್ ಹಾಕಿದ್ದಾರೆ. ಇಲ್ಲಿ ಶಿಕ್ಷಕರ ಕೊರತೆ ಇದೆ. ಪಠ್ಯ ಪುಸ್ತಕಗಳ ಕೊರತೆ ಇದೆ.
ಪ್ರಸಕ್ತ ಕರ್ನಾಟಕದ ಸರಕಾರಿ ಶಾಲೆಗಳಲ್ಲಿ ಕಲಿಕಾ ಗುಣಮಟ್ಟ, ಬೋಧನೆಯ ಗುಣಮಟ್ಟ, ಮೂಲಭೂತ ಸೌಕರ್ಯಗಳ ಗುಣಮಟ್ಟವನ್ನು ಹೆಚ್ಚಿಸಲಿಕ್ಕಾಗಿ ಮತ್ತು ನಿರಂತರವಾಗಿ ಗುಣಮಟ್ಟವನ್ನು ಕಾಪಾಡಿಕೊಳ್ಳಲಿಕ್ಕಾಗಿಯೇ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಡಿಯಲ್ಲಿ ಆರಂಭಿಸಿದ ‘ವಲಯ ಸಂಪನ್ಮೂಲ ಸಂಯೋಜಕರು’(ಬಿಆರ್ಸಿ), ‘ಜಿಲ್ಲಾ ಮಟ್ಟದ ಶಿಕ್ಷಣ ಮತ್ತು ತರಬೇತಿ ಸಂಸ್ಥೆ’ (ಡಯೆಟ್), ‘ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ’(ಡಿಸರ್ಟ್) ಸಂಸ್ಥೆಗಳು ಆಸ್ತಿತ್ವದಲ್ಲಿವೆ. ಆದರೆ ಇವುಗಳನ್ನು ದುರ್ಬಲಗೊಳಿಸಲಾಗಿದೆ. ಶಿಕ್ಷಕರು, ಪ್ರಾಂಶುಪಾಲರನ್ನು ನೇಮಕ ಮಾಡಿಕೊಳ್ಳುತ್ತಿಲ್ಲ. ಈ ಸಂಸ್ಥೆಗಳ ಪ್ರಾಮುಖ್ಯತೆ ಗೌಣಗೊಳಿಸಿದ್ದಾರೆ. ಕಲಿಕಾ ಗುಣಮಟ್ಟ ಕುಂಠಿತವಾಗಿದೆ. ಒಟ್ಟಾರೆಯಾಗಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಸಬಲೀಕರಣಗೊಳ್ಳಬೇಕಿದೆ. ಆದರೆ ಇದಕ್ಕೆ ಶಿಕ್ಷಣದ ಖಾಸಗೀಕರಣವಂತೂ ಮದ್ದಲ್ಲ.
ಖಾಸಗೀಕರಣದ ಭೂತ
ಖಾಸಗಿ ಶಾಲೆಗಳ ಸಮರ್ಥಕರು ‘‘ಇಂದಿನ ಅಗತ್ಯಕ್ಕೆ ತಕ್ಕ ಹಾಗೆ ಸಾರ್ವಜನಿಕ ಶಿಕ್ಷಣ ಇಲಾಖೆಯು ಅಗತ್ಯವಾದ ಶಿಕ್ಷಣವನ್ನು ಪೂರೈಸಲು ಅಸಮರ್ಥವಾಗಿದೆ. ಸಂವಿಧಾನದ ಎಲ್ಲಾ ನೀತಿಸಂಹಿತೆಗಳನ್ನು ಪಾಲಿಸಿಕೊಂಡು ಮತ್ತು ಉತ್ತಮ ಗುಣಮಟ್ಟದ ಶಿಕ್ಷಣವನ್ನು ಕೊಡುವಂತಹ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಬೆಂಬಲಿಸಬೇಕು’’ ಎಂದು ವಾದ ಮಾಡುತ್ತಾರೆ. ಜೊತೆಗೆ ಶುಲ್ಕವನ್ನು ಕಡಿಮೆ ದರದಲ್ಲಿ ಕೊಡು ವಂತಹ ಶಿಕ್ಷಣ ಸಂಸ್ಥೆಗಳನ್ನು ಬೆಂಬಲಿಸಬೇಕೆಂದು ಹೇಳುತ್ತಾರೆ. ಇವರು ಖಾಸಗೀಕರಣ ಮತ್ತು ವ್ಯಾಪಾರೀಕರಣದ ನಡುವೆ ಒಂದು ನಿರ್ದಿಷ್ಟವಾದ ವ್ಯತ್ಯಾಸಗಳಿವೆ ಮತ್ತು ಅವೆರಡೂ ಬೇರೆಯಾಗಿಯೇ ಪರಿಗಣಿಸಬೇಕೆಂದು ವಾದಿಸುತ್ತಾರೆ. ಇದನ್ನು ಮೃದು ಖಾಸಗೀಕರಣವೆಂದು ಸಮರ್ಥಿಸುತ್ತಾರೆ. ಆದರೆ ಕಳೆದ ಮೂವತ್ತು ವರ್ಷಗಳಲ್ಲಿ ಇಡೀ ಶಿಕ್ಷಣ ಕ್ಷೇತ್ರದಲ್ಲಿ ನಡೆದ ವಿದ್ಯಮಾನಗಳನ್ನು ಗಮನಿಸಿದಾಗ ಖಾಸಗೀಕರಣವೆಂದರೆ ಅದು ಸಂಪೂರ್ಣ ವ್ಯಾಪಾರೀಕರಣವಷ್ಟೆ ಎಂದು ಸ್ಪಷ್ಟವಾಗುತ್ತದೆ. ಆರಂಭದಲ್ಲಿ ಕೇವಲ ಶಿಕ್ಷಣವನ್ನು ಕೊಡುತ್ತೇವೆ, ಕಲಿಕೆಯ ಗುಣಮಟ್ಟ ಹೆಚ್ಚಿಸುತ್ತೇವೆ ಎಂದೇ ಪ್ರಾರಂಭಗೊಳ್ಳುವ ಖಾಸಗಿ ಸಂಸ್ಥೆಗಳು ಕ್ರಮೇಣ ಅದನ್ನು ಒಂದು ಲಾಭದಾಯಕ ಉದ್ಯಮವನ್ನಾಗಿಯೇ ರೂಪಿಸುತ್ತವೆ ಮತ್ತು ಬಂಡವಾಳವಿಲ್ಲದೆ ನಾವು ನಿಮಗೆ ಶಿಕ್ಷಣವನ್ನು ಕೊಡುವುದಾದರೂ ಹೇಗೆ ಎನ್ನುವ ತರ್ಕವನ್ನು ಮುಂದಿಟ್ಟುಕೊಂಡು ಹಣ ಕೊಟ್ಟರೆ ಮಾತ್ರ ಶಿಕ್ಷಣ ಎನ್ನುವ ನೀತಿಯನ್ನು ಜಾರಿಗೊಳಿಸುತ್ತವೆ. ನಂತರ ಸರಕಾರಿ ಶಾಲೆಗಳು ಈ ಖಾಸಗಿ ಸಂಸ್ಥೆಗಳಿಗೆ ಹಸ್ತಾಂತರಗೊಳ್ಳುತ್ತವೆ. ನಂತರ ಈ ಖಾಸಗಿ ಸಂಸ್ಥೆಗಳು ತಮ್ಮ ಹಿತಾಸಕ್ತಿಗೆ ಅನುಗುಣವಾಗಿ ಪಠ್ಯಪುಸ್ತಕಗಳನ್ನು ರಚಿಸುತ್ತವೆ. ಅದರ ಗುಣಮಟ್ಟವನ್ನು ನಿರ್ಧರಿಸುವ, ಈ ಪಠ್ಯಪುಸ್ತಗಳ ಮೌಲ್ಯಮಾಪನ ಮಾಡುವ ಅಧಿಕಾರವನ್ನು ಸಹ ಶಿಕ್ಷಣ ಇಲಾಖೆ ಕಳೆದುಕೊಂಡಿರುತ್ತದೆ.
ಈ ‘ಮೃದು ಖಾಸಗೀಕರಣ’ದ ಪರವಾಗಿ ಲಾಬಿ ಮಾಡುವವರು ಶೇ.೩೦-೪೦ರಷ್ಟು ಶುಲ್ಕವನ್ನು ಪೋಷಕರಿಂದ ವಸೂಲಿ ಮಾಡಿ ಉಳಿದ ಶೇ.೭೦-೬೦ರಷ್ಟು ಹಣವನ್ನು ಸ್ವತಃ ಸಂಸ್ಥೆಗಳೇ ಭರಿಸುತ್ತವೆ ಎಂದು ವಾದಿಸುತ್ತಾರೆ. ಆದರೆ ವಾಸ್ತವದಲ್ಲಿ ಅದು ಸಂಪೂರ್ಣ ವ್ಯತಿರಿಕ್ತವಾಗಿದೆ. ಅದು ತೀವ್ರವಾದ ಖಾಸಗೀಕರಣದ ಸ್ವರೂಪ ಪಡೆದುಕೊಂಡಿದೆ. ಹೆಚ್ಚೂ ಕಡಿಮೆ ಶೇ.೮೦-೯೦ ಪ್ರಮಾಣದ ಶುಲ್ಕವನ್ನು ಪೋಷಕರಿಂದಲೇ ವಸೂಲಿ ಮಾಡುವ ಖಾಸಗಿ ಶಿಕ್ಷಣ ಸಂಸ್ಥೆಗಳು ಸಂವಿಧಾನದ ಎಲ್ಲಾ ನೀತಿಸಂಹಿತೆಗಳನ್ನು ಧಿಕ್ಕರಿಸಿವೆ. ಇಲ್ಲಿ ಪರ್ಯಾಯ ಖಾಸಗೀಕರಣ ಎನ್ನುವ ತರ್ಕವೇ ಅಸಂಬದ್ಧವಾಗಿದೆ.
೧೯೯೧ರಲ್ಲಿ ಭಾರತವು ಮುಕ್ತ ಮಾರುಕಟ್ಟೆ ವ್ಯವಸ್ಥೆಗೆ ತೆರೆದುಕೊಂಡ ನಂತರ ಸರಕಾರಿ ವಲಯಗಳು ರೋಗಗ್ರಸ್ಥ ಮತ್ತು ಅನುಪಯುಕ್ತ ಆದರೆ ಖಾಸಗಿ ವಲಯಗಳು ಲಾಭದಾಯಕ ಮತ್ತು ದೇಶದ ಅಭಿವೃದ್ಧಿಗೆ ಸಹಕಾರಿಯಾಗುತ್ತವೆ ಎನ್ನುವ ಮರೆಮೋಸದ ಸಿದ್ಧಾಂತವನ್ನು ಒಂದು ಅಧಿಕೃತ ಸಿದ್ಧಾಂತವಾಗಿ ಎಲ್ಲಾ ಸರಕಾರಗಳು ಪಾಲಿಸಿಕೊಂಡು ಬರುತ್ತಿವೆ. ಈ ಖಾಸಗೀಕರಣದ ಎಲ್ಲಾ ದುಷ್ಪರಿಣಾಮಗಳು ಕೃಷಿ, ಆರೋಗ್ಯ, ಸಾಂಸ್ಕೃತಿಕ ವಲಯಗಳಂತೆಯೆ ಶಿಕ್ಷಣ ವಲಯದಲ್ಲಿಯೂ ತಳಮಟ್ಟದವರೆಗೆ ವ್ಯಾಪಿಸಿಕೊಂಡಿದೆ. ಇಂದು ಸರಕಾರವೇ ಮುಂದೆ ನಿಂತು ಮಕ್ಕಳ ಕೊರತೆಯ ಹೆಸರಿನಲ್ಲಿ ಸರಕಾರಿ ಶಾಲೆಗಳನ್ನು ಮುಚ್ಚುತ್ತಿದೆ. ಇದಕ್ಕೆ ಯಾವ ಪ್ರತಿರೋಧವೂ ವ್ಯಕ್ತವಾಗುತ್ತಿಲ್ಲ. ಮಕ್ಕಳು ಯಾತಕ್ಕೆ ಸರಕಾರಿ ಶಾಲೆಗೆ ಬರುತ್ತಿಲ್ಲ? ಬದಲಾಗಿ ಯಾವ ಕಾರಣಕ್ಕೆ ಖಾಸಗಿ ಶಾಲೆಗೆ ಸೇರಿಕೊಳ್ಳುತ್ತಿದ್ದಾರೆ ಎಂದು ಪೋಷಕರಾಗಲೀ, ಶಿಕ್ಷಣ ತಜ್ಞರಾಗಲೀ ತಮ್ಮ ವಿವೇಚನೆಯನ್ನು ಬಳಸಿ ಸರಕಾರಕ್ಕೆ ಪ್ರಶ್ನಿಸುತ್ತಿಲ್ಲ. ೨೦೦೦ದಲ್ಲಿ ‘ಶಿಕ್ಷಣದಲ್ಲಿ ಸುಧಾರಣೆಗಾಗಿ ಪಾಲಿಸಿ ಚೌಕಟ್ಟು’ ಎನ್ನುವ ಅಂಬಾನಿ-ಬಿರ್ಲಾ ವರದಿ ಶಿಕ್ಷಣವನ್ನು ಒಂದು ಲಾಭದಾಯಕ ಮಾರುಕಟ್ಟೆಯನ್ನಾಗಿ ಸುಧಾರಿಸಬೇಕಾಗಿದೆ ಎಂದು ಶಿಫಾರಸು ಮಾಡುತ್ತದೆ. ಉನ್ನತ ಶಿಕ್ಷಣದ ವಿವಿಧ ಅಂಗಗಳನ್ನು ಖಾಸಗೀಕರಣಗೊಳಿಸಿ ಖಾಸಗಿ ಸಹಭಾಗಿತ್ವದ ಒಡೆತನದಲ್ಲಿ ಉನ್ನತ ಶಿಕ್ಷಣವನ್ನು ಸುಧಾರಿಸಬೇಕೆಂದು ಹೇಳುವ ಈ ವರದಿ ಈ ವೆಚ್ಚಕ್ಕೆ ತಗಲುವ ಖರ್ಚನ್ನು ವಿದ್ಯಾರ್ಥಿಗಳಿಂದಲೇ ಭರಿಸಬೇಕು ಎಂದು ಶಿಫಾರಸು ಮಾಡುತ್ತದೆ.
ಮತ್ತೊಂದೆಡೆ ಈ ಖಾಸಗಿ ಶಿಕ್ಷಣ ಸಂಸ್ಥೆಗಳು ಸರಕಾರದ ಯಾವುದೇ ನೀತಿಸಂಹಿತೆಗೆ ಒಳಪಡದೆ ಕಾರ್ಯ ನಿರ್ವಹಿಸುತ್ತವೆ. ಒಂದು ಬಗೆಯ ಉಕ್ಕಿನ ಗೋಡೆಯನ್ನೇ ನಿರ್ಮಿಸಿಕೊಳ್ಳುವ ಈ ಖಾಸಗಿ ಸಂಸ್ಥೆಗಳ ಆಡಳಿತವು ಪಾರದರ್ಶಕವಾಗಿರುವುದಿಲ್ಲ. ಇಲ್ಲಿನ ಶಿಕ್ಷಣ ಪದ್ಧತಿಯು ಸರ್ವಾಧಿಕಾರದ ಮಾದರಿಯಲ್ಲಿರುತ್ತದೆ. ಇಲ್ಲಿ ಸಂಭಾಷಣೆಗೆ, ಚರ್ಚೆಗೆ, ಸಂವಾದಕ್ಕೆ ಅವಕಾಶಗಳಿರುವುದಿಲ್ಲ. ಇಲ್ಲಿಂದ ಶಿಕ್ಷಣ ಪಡೆದ ಬಹುಪಾಲು ಮಕ್ಕಳು ಮತ್ತು ವಿದ್ಯಾರ್ಥಿಗಳು ದರ್ಪದ, ಮೇಲ್ಜಾತಿ/ಮೇಲ್ವರ್ಗದ ಶ್ರೇಷ್ಠತೆಯ ಹಿರಿಮೆಯನ್ನು ಮೈಗೂಡಿಸಿಕೊಂಡು ಬೂರ್ಜ್ವ ವ್ಯಕ್ತಿತ್ವದ ನಾಗರಿಕರಾಗಿ ರೂಪುಗೊಳ್ಳುತ್ತಾರೆ.
ಖಾಸಗಿ ಶಿಕ್ಷಣ ಸಂಸ್ಥೆಗಳ ಬಲು ದೊಡ್ಡ ಬಿಕ್ಕಟ್ಟೇನೆಂದರೆ ಒಂದೇ ವಿಷಯದ ಕುರಿತಾಗಿ ಸಂಪೂರ್ಣ ಹುಚ್ಚನ್ನು ಬೆಳೆಸಿಕೊಂಡು, ಏಕರೂಪಿ ಪಠ್ಯಗಳನ್ನು ಬೋಧಿಸುತ್ತ, ಬಾಯಿಪಾಠದ ವ್ಯಾಸಂಗ, ಸಿದ್ಧ ಮಾದರಿಯ ವ್ಯಾಸಂಗಕ್ರಮವನ್ನು (pedagogy) ಅಪ್ಪಿಕೊಳ್ಳುತ್ತವೆ. ಹೊಸನೀತಿಯ ರಾಜಕೀಯ, ಸಾಂಸ್ಕೃತಿಕ, ಪರಿಸರವಾದದ ತೊಂದರೆಗಳನ್ನು, ಬಿಕ್ಕಟ್ಟುಗಳನ್ನು ಅರಿತುಕೊಳ್ಳುವುದಿಲ್ಲ, ಸಂಬೋಧಿಸುವುದಿಲ್ಲ. ಇಂದಿನ ಪರಿಸರದ ಬಿಕ್ಕಟ್ಟು ಮತ್ತು ಅದು ಮುಂದಿನ ತಲೆಮಾರಿಗೆ ಅದರಿಂದಾಗುವ ದುಷ್ಪರಿಣಾಮಗಳ ಕುರಿತಾಗಿ ಪಠ್ಯಗಳನ್ನು ಅಳವಡಿಸಿಕೊಳ್ಳುವುದಿಲ್ಲ. ಉನ್ನತ ಶಿಕ್ಷಣದಲ್ಲಿ ಸಮಾಜ ಶಾಸ್ತ್ರ, ಇತಿಹಾಸ, ರಾಜಕೀಯ ಶಾಸ್ತ್ರ, ಮನಶಾಸ್ತ್ರ, ಭಾಷಾ ಅಧ್ಯಯನಗಳಂತಹ ಸಾಮಾಜೋ-ಸಾಂಸ್ಕೃತಿಕ-ಆರ್ಥಿಕ ಜ್ಞಾನವನ್ನು ಕೊಡುವಂತಹ ಮಾನವಿಕ ವಿಭಾಗಗಳಿಗೆ ಖಾಸಗಿ ಆಡಳಿತದ ಸಂಸ್ಥೆಗಳಲ್ಲಿ ಸ್ಥಾನವಿರುವುದಿಲ್ಲ. ಬಹುಮುಖಿ ಪಠ್ಯ ಮತ್ತು ಸಾಹಿತ್ಯಕ್ಕೆ ಪ್ರೋತ್ಸಾಹ ನೀಡುವುದಿಲ್ಲ. ಅಸಮಾನತೆ, ಸಾಮಾಜಿಕ ಸಂಘರ್ಷಗಳ ಕುರಿತಾಗಿ ಪಠ್ಯಗಳ ಪರಿಕಲ್ಪನೆಯನ್ನೇ ತಿರಸ್ಕರಿಸುವ ಖಾಸಗಿ ಶಿಕ್ಷಣ ಸಂಸ್ಥೆಗಳು ಕೇವಲ ತಂತ್ರಜ್ಞಾನ ಆಧಾರಿತ ಶಿಕ್ಷಣವನ್ನು ಕೊಡುತ್ತ ನಿರ್ವಾಹಕರನ್ನು (ಮ್ಯಾನೇಜರ್ಸ್) ಮಾತ್ರ ಉತ್ಪಾದಿಸುತ್ತಾರೆ. ನಿರ್ದಿಷ್ಟ ಬಗೆಯ ಮೆಟೀರಿಯಲಿಸ್ಟಿಕ್ ಶಿಕ್ಷಣವನ್ನು ಪಡೆದ ವಿದ್ಯಾರ್ಥಿಗಳಿಂದ ಸಾಮಾಜಿಕ ಕಳಕಳಿಯ ಬದ್ಧತೆಗಳನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಜಗತ್ತನ್ನೇ ಆಕ್ರಮಿಸಿಕೊಂಡಿರುವ ನವತಂತ್ರಜ್ಞಾನದ ಜ್ಞಾನವನ್ನು ಪಡೆದುಕೊಂಡ ಈ ವಿದ್ಯಾಥಿಗಳು ರಚನಾತ್ಮಕವಾಗಿ ಪ್ರಗತಿಪರವಾಗಿ ಸ್ಪಂದಿಸಲು ವಿಫಲರಾಗುತ್ತಾರೆ
ಈ ಖಾಸಗೀಕರಣವು ಒಂದೆಡೆ ಗ್ರಾಮೀಣ ಮಟ್ಟದಲ್ಲಿ, ತಳ ಸಮುದಾಯ, ವಂಚಿತ ಸಮುದಾಯಗಳಲ್ಲಿ ನಿರುದ್ಯೋಗವನ್ನು ಸೃಷ್ಟಿಸುವುದರ ಮೂಲಕ ವ್ಯವಸ್ಥೆಯಲ್ಲಿ ಅಸಮತೋಲನ ಉಂಟು ಮಾಡುತ್ತದೆ. ಇದು ಶಿಕ್ಷಣ ಕ್ಷೇತ್ರದಲ್ಲಿ ಅದರಲ್ಲೂ ಉನ್ನತ ಶಿಕ್ಷಣದಲ್ಲಿ ಭಾರೀ ದುಷ್ಪರಿಣಾಮಗಳನ್ನು ಉಂಟು ಮಾಡುತ್ತದೆ. ಮೊದಲು ಜಾಗತಿಕ ಮಾರುಕಟ್ಟೆಯ ಅನುಕೂಲಕ್ಕೆ ಅನುಗುಣವಾಗಿ ಪಠ್ಯಕ್ರಮಗಳನ್ನು ರೂಪಿಸುವ ಈ ನವ ಉದಾರೀಕರಣವು ಕ್ರಮೇಣ ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನದ ಶಿಕ್ಷಣವನ್ನೇ ಅನಿವಾರ್ಯಗೊಳಿಸುವುದರ ಮೂಲಕ ಮೇಲ್ಜಾತಿಗಳು ಮತ್ತು ದಲಿತರು ಹಾಗೂ ಅಲ್ಪಸಂಖ್ಯಾತರ ನಡುವೆ ಅಗಾಧವಾದ ಅಸಮಾನತೆಯನ್ನು ಸೃಷ್ಟಿ ಮಾಡಿಬಿಡುತ್ತದೆ. ಈ ಅಸಮಾನತೆಯು ಜಾತಿ ಸಮಾಜದ ಭಾರತದಂತಹ ದೇಶದಲ್ಲಿ ಪ್ರತ್ಯೇಕತೆ ಮತ್ತು ತಾರತಮ್ಯವನ್ನು ಮತ್ತಷ್ಟು ವಿಸ್ತರಿಸಲು ನೆರವಾಗುತ್ತದೆ. ಇದರ ದುಷ್ಪರಿಣಾಮಗಳು ಮೇಲ್ನೋಟಕ್ಕೆ ಆರ್ಥಿಕ ನೆಲೆಯಲ್ಲಿ ಕಂಡು ಬರುತ್ತಿದ್ದರೆ ಆಳದಲ್ಲಿ ಇದು ಸಾಮಾಜಿಕ ನೆಲೆಯಲ್ಲಿಯೂ ವ್ಯಾಪಿಸಿಕೊಂಡು ಇಪ್ಪತ್ತೊಂದನೇ ಶತಮಾನದ ಇಂಡಿಯಾದಲ್ಲಿ ಚಾತುರ್ವರ್ಣ ಪದ್ಧತಿ ತನ್ನ ಎಲ್ಲಾ ವಿಕೃತಿಯೊಂದಿಗೆ ಮರಳಲು ರತ್ನಗಂಬಳಿ ಹಾಸುತ್ತದೆ.
ಉಪಸಂಹಾರ
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೇಳಿಕೊಂಡಂತೆ ಅವರು ೩ ಖಾಸಗಿ ಶಾಲೆಗಳ ಮಾಲಕರು. ಅದೇ ರೀತಿ ಪಕ್ಷಾತೀತವಾಗಿ ಶಾಸಕರ ಒಡೆತನದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಿವೆ. ಇಲ್ಲಿ ಸ್ವಹಿತಾಸಕ್ತಿ ಮುಖ್ಯವಾಗಿ, ಸಾರ್ವಜನಿಕ ಹಿತಾಸಕ್ತಿ ಕುಂಠಿತಗೊಂಡು ಸಾರ್ವಜನಿಕ ಶಿಕ್ಷಣವನ್ನು ದುರ್ಬಲಗೊಳಿಸುತ್ತದೆ. ಇಂತಹ ಬಿಕ್ಕಟ್ಟಿನಲ್ಲಿ ಸರಕಾರಿ ಶಾಲೆಗಳನ್ನು ಖಾಸಗಿಯವರಿಗೆ ದತ್ತು ಕೊಡುವ ನಿರ್ಧಾರ ತುಂಬಾ ಅಪಾಯಕಾರಿಯಾಗಿದೆ ಮತ್ತು ಈ ಕೂಡಲೇ ಈ ನಿಲುವನ್ನು ರದ್ದುಗೊಳಿಸಬೇಕಾಗಿದೆ