ವಿವಿಗಳಲ್ಲಿ ಜಾತಿ ಪೀಠಗಳು ಅಧ್ಯಯನವೂ ಇಲ್ಲ, ಅನುದಾನವೂ ಇಲ್ಲ..!?

Update: 2023-08-09 12:37 GMT

ಯಾವುದೇ ಒಂದು ಸಂಶೋಧನೆ ವಿಚಾರ ಬಂದಾಗ ಎಂದಿಗೂ ವಿಶ್ವವಿದ್ಯಾನಿಲಯಗಳು ಮೊದಲ ಸಾಲಿನಲ್ಲಿ ಬಂದು ನಿಲ್ಲುತ್ತವೆ. ವಿಶ್ವವಿದ್ಯಾನಿಲಯಗಳನ್ನು ಸಂಶೋಧನೆಗಳ ತೊಟ್ಟಿಲು ಎಂದು ನಾವು ಪರಿಗಣಿಸುತ್ತೇವೆ. ಆದರೆ ಈ ವಿಶ್ವವಿದ್ಯಾನಿಲಯಗಳು ಜನ ಸಾಮಾನ್ಯನ ಬಳಿ ಬಂದಿದ್ದು ಬಹಳ ಕಡಿಮೆ. ಏಕೆಂದರೆ ಹೆಚ್ಚಿನ ಮಂದಿಗೆ ವಿಶ್ವವಿದ್ಯಾನಿಲಯಗಳಲ್ಲಿ ಯಾವ ರೀತಿ ಸಂಶೋಧನೆಗಳು ನಡೆಯುತ್ತಿದೆ ಎಂದು ಗೊತ್ತಿರು ವುದಿಲ್ಲ. ಪ್ರಪಂಚದ ಅತಿ ಅಪರೂಪದ ವಿಶಿಷ್ಟವಾದ ಸಂಶೋಧನೆಗಳು ವಿಶ್ವವಿದ್ಯಾನಿಲಯಗಳಲ್ಲಿ ನಡೆಯುತ್ತದೆ. ಹೆಚ್ಚಿನ ಬಾರಿ ಅವು ಬೆಳಕಿಗೆ ಬರುವುದಿಲ್ಲ. ಈ ರೀತಿಯ ಸಂಶೋಧನೆಗಳು ನಡೆಯಲು ವಿಶ್ವವಿದ್ಯಾನಿಲಯಗಳಿಗೆ ಕೋಟ್ಯಂತರ ರೂಪಾಯಿಗಳು ಬೇಕಾಗುತ್ತದೆ. ರಾಜ್ಯ ಮತ್ತು ಕೇಂದ್ರ ಸರಕಾರಗಳು ದೇಶದ ಎಲ್ಲ ವಿವಿಗಳಲ್ಲಿ ಮೂಲ ನಿಧಿರೂಪದಲ್ಲಿ ಅಧ್ಯಯನ ಪೀಠಗಳನ್ನು ಆರಂಭಿಸಿವೆ. ಹೆಚ್ಚಾಗಿ ಜಾತಿ ನಾಯಕರ ಹೆಸರಿನಲ್ಲಿ ಈ ಅಧ್ಯಯನ ಪೀಠಗಳನ್ನು ಆರಂಭಿಸಿವೆ. ಕರ್ನಾಟಕದಲ್ಲಿ ಹೆಚ್ಚು ಕಡಿಮೆ ನೂರಕ್ಕಿಂತ ಹೆಚ್ಚಿನ ಅಧ್ಯಯನ ಪೀಠಗಳಿವೆ. ಇಂತಹ ಪೀಠಗಳನ್ನು ಸ್ಥಾಪಿಸಿ ಅವುಗಳಿಗೆ ಸರಕಾರವು ಒಂದು ಬಾರಿ ಒಂದು ಮೂಲನಿಧಿಯನ್ನು ನೀಡುತ್ತದೆ. ಈ ಹಣವನ್ನು ಬ್ಯಾಂಕಿನಲ್ಲಿ ಇಟ್ಟು, ಅದರಿಂದ ಬರುವ ಬಡ್ಡಿಯಿಂದ ಈ ಪೀಠಗಳು ಸಂಶೋಧನೆ, ಪ್ರಕಟಣೆ, ವಿಚಾರ ಸಂಕಿರಣಗಳು ಮತ್ತು ವಿಶೇಷ ಉಪನ್ಯಾಸಗಳನ್ನು ನಿರಂತರವಾಗಿ ಮಾಡಬೇಕಾಗುತ್ತದೆ. ಸಾಮಾನ್ಯವಾಗಿ ಇಂತಹ ಪೀಠಗಳಿಗೆ ಹಾಲಿ ಅಧ್ಯಾಪಕರನ್ನು ಅಥವಾ ನಿವೃತ್ತರನ್ನು ಆಯ್ಕೆ ಮಾಡಲಾಗುತ್ತದೆ. ಅಲ್ಲದೆ ಅಗತ್ಯಕ್ಕೆ ತಕ್ಕಂತೆ ವಿವಿಗಳು ತಮ್ಮ ವತಿಯಿಂದ ಸಂಶೋಧಕರನ್ನು ಸಾಧ್ಯವಾದರೆ ನೇಮಿಸುತ್ತದೆ. ಇಲ್ಲದಿದ್ದರೆ ಅದೂ ಇಲ್ಲ. ಅಂತಹ ಆಯ್ಕೆಗಳಲ್ಲಿ ಜಾತಿಯ ಮೇಲಾಟಗಳು ನಡೆಯುತ್ತದೆ. ರಾಜ್ಯದ ವಿವಿಧ ವಿವಿಗಳಲ್ಲಿ ಬುದ್ಧ, ಬಸವ, ಕನಕ, ಹೇಮರೆಡ್ಡಿ ಮಲ್ಲಮ್ಮ, ಕುವೆಂಪು, ಎನ್. ರಾಚಯ್ಯ, ಬಿ.ಆರ್. ಅಂಬೇಡ್ಕರ್, ಸಂಗೊಳ್ಳಿ ರಾಯಣ್ಣ, ದೇವರಾಜ ಅರಸು, ವಿವೇಕಾನಂದ, ರಾಣಿ ಚೆನ್ನಮ್ಮ, ಓಬವ್ವ, ಗುಬ್ಬಿ ವೀರಣ,್ಣ ದೇವರ ದಾಸಿಮಯ್ಯ, ಲಿಂಗಸ್ವಾಮಿ, ಝಾಕಿರ್ ಹುಸೇನ್, ಗಂಗೂಬಾಯಿ ಹಾನಗಲ್ ಹೀಗೆ ಹತ್ತು ಹಲವಾರು ಅಧ್ಯಯನ ಪೀಠಗಳಿವೆ. ಆದರೆ ಈ ಎಲ್ಲಾ ಪೀಠಗಳು ಅನುದಾನದ ಕೊರತೆಯಿಂದ ಸೊರಗುತ್ತಿವೆ. ಹೆಚ್ಚಿನ ಬಾರಿ ಇಂತಹ ಅಧ್ಯಯನ ಪೀಠಗಳನ್ನು ರಾಜಕೀಯ ಅಥವಾ ಜಾತಿ ಸಂಘಟನೆಗಳ ಒತ್ತಡದಿಂದ ಸ್ಥಾಪಿಸಲಾಗಿರುತ್ತದೆ. ಯಾರದೋ ಮರ್ಜಿಗೆ ಒಳಗಾಗಿ ಇಂತಹ ಪೀಠಗಳು ವಿವಿಗಳಲ್ಲಿ ತಲೆಯೆತ್ತುತ್ತವೆ. ಅದರೆ ಹೇಳಿಕೊಳ್ಳುವಂತಹ ಯಾವುದೇ ಅಧ್ಯಯನಗಳು ಇಲ್ಲಿ ನಡೆಯುವುದಿಲ್ಲ. ಈ ಮಧ್ಯೆ ಯಾವುದೇ ಜಾತಿ ಧರ್ಮದ ಹಂಗಿಲ್ಲದೆ ಕೆಲವು ವಿವಿಗಳಲ್ಲಿ ರಾಮ ಮನೋಹರ್ ಲೋಹಿಯಾ ಮತ್ತು ಡಾ. ರಾಜಕುಮಾರ್ ಹೆಸರಿನಲ್ಲಿ ಅಧ್ಯಯನ ಪೀಠಗಳಿವೆ. ಅಧ್ಯಯನ ಪೀಠಗಳು ನಡೆಸಲು ಬೇಕಾಗುವ ಹಣದ ಕೊರತೆ ಮತ್ತು ಇನ್ನು ಕೆಲವು ಸಂದರ್ಭಗಳಲ್ಲಿ ಒಂದೇ ಹೆಸರಿನಲ್ಲಿ ಬೇರೆ ಬೇರೆ ವಿವಿಗಳಲ್ಲಿ ಅಧ್ಯಯನ ಪೀಠ ಸ್ಥಾಪಿಸಿರುವುದು ಸಮಸ್ಯೆಯ ತೀವ್ರತೆಯನ್ನು ಇನ್ನೂ ಹೆಚ್ಚಿಸಿದೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ಮಂಗಳೂರು ವಿವಿ ಮತ್ತು ಕರ್ನಾಟಕದ ವಿವಿಗಳಲ್ಲಿ ಕನಕ ಅಧ್ಯಯನ ಪೀಠವಿದೆ. ಕನ್ನಡ ಸಂಸ್ಕೃತಿ ಇಲಾಖೆಯಲ್ಲಿ ಕನಕದಾಸ ಸಂಶೋಧನೆ ಮತ್ತು ಅಧ್ಯಯನ ಕೇಂದ್ರ ಇದೆ. ಅಲ್ಲದೇ ಉಡುಪಿ ಮತ್ತು ಮಂಗಳೂರಿನಲ್ಲಿ ಕನಕ ಅಧ್ಯಯನ ಸಂಸ್ಥೆ ಸ್ಥಾಪಿಸಲಾಗಿದೆ.

ಕೆಲವು ಪೀಠಗಳ ಘೋಷಣೆ ಮಾಡಿ ಎರಡು ಮೂರು ವರ್ಷ ಕಳೆದರೂ ಪೀಠದ ಪರಿ ನಿಯಮಾವಳಿಯನ್ನು ಸರಕಾರ ಇನ್ನೂ ಅನುಮೋದಿಸಿಯೇ ಇಲ್ಲ. ಗುಲ್ಬರ್ಗಾ ವಿವಿಗೆ ಘೋಷಣೆಯಾಗಿದ್ದ ವಾಲ್ಮೀಕಿ ಪೀಠಕ್ಕೆ ಎರಡು ಕೋಟಿ ಹಣವನ್ನು ಕೊನೆಗೆ ವಿವಿಯ ಅನುದಾನದಲ್ಲಿಯೇ ಬಳಸಿಕೊಳ್ಳುವಂತೆ ಅಂದಿನ ಸರಕಾರ ಅಂದು ಹೇಳಿತ್ತು. ಎಂತಹ ದುರಂತ. ರಾಣಿ ಚೆನ್ನಮ್ಮ ವಿವಿಗೆ ಹಿಂದೆ ಘೋಷಿಸಿದ್ದ ಪೀಠ ಮಂಜೂರು ಆಗಿದೆ, ಆದರೆ ಅನುದಾನ ಬಂದಿಲ್ಲ ಎನ್ನುವ ಮಾತಿದೆ. ಸಣ್ಣ ಪುಟ್ಟ ಜಾತಿ ಹೆಸರಿನಲ್ಲಿ ಆರಂಭವಾದ ಪೀಠಗಳಿಗೆ ಕಡಿಮೆ ಅನುದಾನ ಮತ್ತು ಪ್ರಬಲ ಸಮುದಾಯಗಳ ಹೆಸರಿನಲ್ಲಿ ಆರಂಭವಾದ ಪೀಠಗಳಿಗೆ ಹೆಚ್ಚಿನ ಅನುದಾನ ಕೊಟ್ಟಿರುವುದು ಅಲ್ಲಲ್ಲಿ ಸ್ಪಷ್ಟವಾಗಿ ತಿಳಿದು ಬರುತ್ತದೆ. ಕೆಲವು ಪೀಠಗಳಲ್ಲಿ ಕೋಟಿಗಟ್ಟಲೆ ಹಣ ಕೊಳೆಯುತ್ತ ಬಿದ್ದಿದೆ. ಕೆಲ ಪೀಠಗಳಿಗೆ ಸರಕಾರ 5 ಲಕ್ಷ ಹಣ ನೀಡಿದರೆ ಕೆಂಪೇಗೌಡ ಅಧ್ಯಯನ ಪೀಠಕ್ಕೆ ಬೆಂಗಳೂರು ವಿವಿಗೆ 50 ಕೋಟಿ ರೂ. ಕೊಡಲಾಗಿದೆ. ಕನ್ನಡ ವಿವಿಯಲ್ಲಿ ಡಾಕ್ಟರ್ ರಾಜ್ ಪೀಠಕ್ಕೆ 15 ಲಕ್ಷ ರೂ. ಬಿಡುಗಡೆ ನೀಡಲಾಗಿದೆ. 13 ವರ್ಷದ ನಂತರ ಬೆಂಗಳೂರಿನಲ್ಲಿ ಪೀಠಕ್ಕೆ ಎರಡು ಎಕರೆ ಜಾಮೀನು ಗುರುತಿಸಲಾಗಿದೆ. ಮೈಸೂರು ವಿವಿಯಲ್ಲಿ ವಿಶ್ವೇಶ್ವರಯ್ಯ ಪೀಠಕ್ಕೆ ಐದು ಲಕ್ಷ ರೂ. ನೀಡಿದರೆ, ಬೆಳಗಾವಿಯ ವಿಶ್ವವಿದ್ಯಾನಿಲಯಕ್ಕೆ ಕೇಂದ್ರ ಸಂಸ್ಕೃತಿ ಸಚಿವಾಲಯ ದೀನದಯಾಳ್ ಉಪಾಧ್ಯಾಯ ಹೆಸರಿನ ಪೀಠಕ್ಕೆ ಸುಮಾರು 6 ಕೋಟಿ ರೂ. ನೀಡಿದೆ. ಹಂಪಿ ಕನ್ನಡ ವಿವಿಯಲ್ಲಿರುವ ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಅಧ್ಯಯನ ಪೀಠ ಇಂದಿಗೂ ಯಾರಿಗೂ ನೆನಪಿಲ್ಲ. 2018 ಪ್ರೊಫೆಸರ್ ಎನ್.ಆರ್. ಶೆಟ್ಟಿ ಪೀಠಗಳ ಅಧ್ಯಯನ ಕುರಿತು ಸಲ್ಲಿಸಿದ ವರದಿ ಇನ್ನೂ ಸರಕಾರದಲ್ಲಿ ಕೊಳೆಯುತ್ತಿದೆ. ವದರಿಗಳ ಪ್ರಕಾರ ಹೆಚ್ಚಿನ ಪೀಠಗಳಲ್ಲಿ ಇದುವರೆಗೆ ಲೆಕ್ಕ ಪತ್ರ ಪರಿಶೋಧನೆ ನಡೆದಿಲ್ಲ. ಕೆಲವು ತಜ್ಞರ ಪ್ರಕಾರ ಇದು ಒಂದು ರೀತಿಯಲ್ಲಿ ಬೌದ್ಧಿಕ ದಿವಾಳಿತನ. ಕೆಲವು ಪೀಠಗಳಲ್ಲಿ ಪೀಠದ ಮುಖ್ಯಸ್ಥರ ಹುದ್ದೆಯನ್ನು ಕಳೆದ ಹತ್ತು ವರ್ಷಗಳಿಂದ ಖಾಲಿ ಬಿಡಲಾಗಿದೆ. ಕೆಲವರಿಗೆ ಹೆಚ್ಚಿನ ಹೊರೆ ಹೊರಲು ಇಷ್ಟವಿಲ್ಲ. ಎಷ್ಟೋ ಪೀಠಗಳ ಪ್ರಭಾರ ಮುಖ್ಯಸ್ಥರಿಗೆ ಅವರ ಪೀಠಗಳ ಸ್ಥಾಪನೆಯ ಉದ್ದೇಶ ಮತ್ತು ಆಶಯಗಳೇ ಗೊತ್ತಿಲ್ಲ. ಕೆಲವು ಪೀಠಗಳಿಗೆ ಖಾಯಂ ಸಿಬ್ಬಂದಿಯನ್ನು ನೇಮಕ ಮಾಡಿಲ್ಲ. ಕೆಲವು ವಿವಿಗಳಲ್ಲಿ ಪೀಠಗಳಿಗೆ ಕೇವಲ ಒಂದು ಕೋಣೆಯನ್ನು ಮಾತ್ರ ನೀಡಲಾಗಿದೆ. ಪೀಠೋಪಕರಣಗಳು ಸಹ ಇಲ್ಲ.

ಭಾರತೀಯ ವಿಶ್ವವಿದ್ಯಾನಿಲಯಗಳಲ್ಲಿನ ಅಧ್ಯಯನ ಪೀಠಗಳು ವಿಶೇಷವಾದ ಸಂಶೋಧನೆ ಮತ್ತು ಶೈಕ್ಷಣಿಕ ಕೇಂದ್ರಗಳಾಗಿವೆ, ಅದು ನಿರ್ದಿಷ್ಟ ವಿಭಾಗಗಳು, ಪ್ರದೇಶಗಳು ಅಥವಾ ವಿಷಯಗಳ ಮೇಲೆ ಕೇಂದ್ರೀಕರಿಸುತ್ತವೆ. ಅಧ್ಯಯನ ಪೀಠಗಳು ನಿರ್ದಿಷ್ಟ ಕ್ಷೇತ್ರಗಳಲ್ಲಿ ಸಂಶೋಧನೆಯನ್ನು ಉತ್ತೇಜಿಸುವುದು, ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವುದು, ಅಂತರ್ಶಿಸ್ತೀಯ ಅಧ್ಯಯನಗಳನ್ನು ಉತ್ತೇಜಿಸುವುದು ಸೇರಿದಂತೆ ವಿವಿಧ ಉದ್ದೇಶಗಳನ್ನು ಪೂರೈಸುತ್ತವೆ. ಇದ್ಯಾವುದು ಈಗ ನಡೆಯುತ್ತಿಲ್ಲ. ವಿಶ್ವವಿದ್ಯಾನಿಲಯ ಮತ್ತು ಅಧ್ಯಯನ ಪೀಠದ ಸ್ವರೂಪವನ್ನು ಅವಲಂಬಿಸಿ ಹಣಕಾಸಿನ ಕಾರ್ಯವಿಧಾನಗಳು ಬದಲಾಗಬೇಕು, ಆದರೆ ನಮ್ಮಲ್ಲಿ ಅದು ಆಗುತ್ತಿಲ್ಲ. ವಿಶ್ವವಿದ್ಯಾನಿಲಯಗಳಲ್ಲಿನ ಅಧ್ಯಯನ ಪೀಠಗಳು ಬೇರೆ ಬೇರೆ ಮೂಲಗಳಿಂದ ಹಣವನ್ನು ಸಂಗ್ರಹಿಸಬಹುದು. ಅದು ಸಹ ನಡೆಯುತ್ತಿಲ್ಲ. ಸರಕಾರಗಳು ನೀಡುವ ಇಡಗಂಟಿನಿಂದ ಬರುವ ಬಡ್ಡಿ ಹಣ ಯಾವುದಕ್ಕೂ ಸಾಲುವುದಿಲ್ಲ. ಆದರೆ ಯಾವುದೇ ವಿವಿ ಈ ಕುರಿತು ತಲೆ ಕೆಡಿಸಿಕೊಳ್ಳುತ್ತಿಲ್ಲ. ಇದು ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸಿದೆ. ಅಲ್ಲದೆ ಯಾವುದೇ ವಿಶ್ವವಿದ್ಯಾನಿಲಯವು ತಮ್ಮ ಅನನ್ಯ ಶೈಕ್ಷಣಿಕ ಆದ್ಯತೆಗಳು ಮತ್ತು ಸಂಶೋಧನಾ ಸಾಮರ್ಥ್ಯಗಳ ಆಧಾರದ ಮೇಲೆ ಅಧ್ಯಯನ ಪೀಠಗಳನ್ನು ಸ್ಥಾಪಿಸಲು ಮತ್ತು ನಿರ್ವಹಿಸಲು ತನ್ನದೇ ಆದ ನೀತಿಗಳು ಮತ್ತು ಮಾರ್ಗಸೂಚಿಗಳನ್ನು ಹೊಂದಿಲ್ಲ. ರಾಜಕೀಯ ಕಾರಣಗಳಿಂದಾಗಿ ರಾಜ್ಯದ ವಿಶ್ವವಿದ್ಯಾನಿಲಯಗಳಲ್ಲಿನ ಹೆಚ್ಚಿನ ಅಧ್ಯಯನ ಪೀಠಗಳು ಇರುವುದೇ ಇದಕ್ಕೆ ಮುಖ್ಯ ಕಾರಣ. ರಾಜ್ಯದ ಅನೇಕ ಅಧ್ಯಯನ ಪೀಠಗಳು ತಮ್ಮ ಕ್ಷೇತ್ರಗಳಿಗೆ ಸಂಬಂಧಿಸಿದ ವಿದ್ವತ್ಪೂರ್ಣ ನಿಯತಕಾಲಿಕಗಳು, ಪುಸ್ತಕಗಳು ಮತ್ತು ಸಂಶೋಧನಾ ಪ್ರಬಂಧಗಳನ್ನು ಸಹ ಪ್ರಕಟಿಸಬೇಕು. ಆದರೆ ಹಣಕಾಸಿನ ಸಮಸ್ಯೆಯಿಂದ ಅದು ಎಲ್ಲೂ ಆಗುತ್ತಿಲ್ಲ. ಹೆಚ್ಚಿನ ಬಾರಿ ಚೇರ್ ಪ್ರೊಫೆಸರ್ಶಿಪ್ಗಳು (ಪೀಠದ ಮುಖ್ಯಸ್ಥರು) ವಿವಿಧ ಪ್ರಯೋಜನಗಳು ಮತ್ತು ಮನ್ನಣೆಯೊಂದಿಗೆ ಬರುವ ಪ್ರತಿಷ್ಠಿತ ಸ್ಥಾನಗಳಾಗಿವೆ. ಈ ವ್ಯಕ್ತಿಗಳು ನಿರ್ದಿಷ್ಟಪಡಿಸಿದ ಅವಧಿಗೆ ಅಧ್ಯಯನ ಪೀಠದ ಸ್ಥಾನವನ್ನು ಹೊಂದಿರುತ್ತಾರೆ, ಹಲವಾರು ವರ್ಷಗಳವರೆಗೆ ಸಂಶೋಧನೆ, ಪ್ರಕಟಣೆಗಳು, ಸಹಯೋಗಗಳು ಮತ್ತು ಮಾರ್ಗದರ್ಶನದ ಮೂಲಕ ಶೈಕ್ಷಣಿಕ ಸಮುದಾಯಕ್ಕೆ ಗಣನೀಯವಾಗಿ ಕೊಡುಗೆ ನೀಡುವ ಜವಾಬ್ದಾರಿ ಇವರದು. ಹಾಗಾಗಿ ಅಧ್ಯಯನ ಪೀಠಗಳು ಪರಿಣತಿ ಮತ್ತು ಅನುಭವ ಇರುವ ನಾಯಕರನ್ನೇ ಹೊಂದಬೇಕು. ಇಂತಹ ಪೀಠದ ಪ್ರಾಧ್ಯಾಪಕರು ವಿವಿಯ ಶೈಕ್ಷಣಿಕ ಕಾರ್ಯತಂತ್ರದ ದಿಕ್ಕಿನ ಮೇಲೆ ಪ್ರಭಾವ ಬೀರಲು ಮತ್ತು ಶೈಕ್ಷಣಿಕ ಕಾರ್ಯಕ್ರಮಗಳು ಮತ್ತು ಉಪಕ್ರಮಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಪೀಠಗಳು ಅಂತರ್ಶಿಸ್ತೀಯ ಸಂಶೋಧನೆಯನ್ನು ಉತ್ತೇಜಿಸಬೇಕು. ವಿಶ್ವವಿದ್ಯಾನಿಲಯಗಳು ಹೆಸರಾಂತ ಅಧ್ಯಯನ ಪೀಠಗಳ ಸಹಯೋಗದಿಂದ ಪ್ರಯೋಜನ ಪಡೆಯಬೇಕು ಮತ್ತು ಅದರ ಮೂಲಕ ತಮ್ಮ ಖ್ಯಾತಿಯನ್ನು ಹೆಚ್ಚಿಸಿಕೊಳ್ಳಬೇಕು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರನ್ನು ಆಕರ್ಷಿಸಬೇಕು. ಆದರೆ ಇದ್ಯಾವುದೂ ಇಂದಿನ ಪೀಠಗಳಲ್ಲಿ ನಡೆಯುತ್ತಿಲ್ಲ. ಕಾರಣ ಹಣಕಾಸು ಮತ್ತು ಸಿಬ್ಬಂದಿ ಕೊರತೆ. ಇಲ್ಲಿ ಹೆಚ್ಚಿನ ಬಾರಿ ಪೀಠದ ವಿಷಯ ಉದ್ದೇಶಕ್ಕೆ ಅನುಗುಣವಾಗಿ ಮುಖ್ಯಸ್ಥರ ನೇಮಕಾತಿ ನಡೆಯುವುದಿಲ್ಲ. ಇಂದು ಹೆಚ್ಚಿನ ಪೀಠಗಳನ್ನು ಪ್ರಭಾರ ಪ್ರಾಧ್ಯಾಪಕರು ಸಂಬಂಧಪಡದ ವಿಷಯ ತಜ್ಞರು ನಡೆಸುತ್ತಿದ್ದಾರೆ. ಕೆಲವರು ಬಿಡುವಿದ್ದಾಗ ಮಾತ್ರ ಪೀಠದ ಕಚೇರಿಗೆ ಬರುತ್ತಾರೆ. ಹಾಗಾಗಿ ಈ ಪೀಠಗಳು ಇಂದು ಹೆಚ್ಚಾಗಿ ಅರೆಕಾಲಿಕ ಸಂಶೋಧನಾ ಕೇಂದ್ರಗಳಾಗಿವೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News