ಜೀವ ಪ್ರೀತಿ ಉಳಿಸುವ ಬೆಳಕಿನ ಹಣತೆ

ಒಂದು ಪತ್ರಿಕೆ ವಸ್ತುನಿಷ್ಠೆಯಿಂದ ಸುದ್ದಿಗಳಿಗೆ ಪ್ರಾಶಸ್ತ್ಯ ಕೂಡುತ್ತಲೇ, ಸಾಮಾಜಿಕ ಕಳಕಳಿಯನ್ನು ಹೊಂದಿರಬೇಕು. ಆಗ ಒಂದು ಸಮಾಜ ಸ್ವಸ್ಥ ಸಮಾಜವಾಗುತ್ತದೆ. ಯಾವತ್ತೂ ಪತ್ರಿಕೆಗಳು ಸರಕಾರದ ಲೋಪದೋಷಗಳನ್ನು ಹುಡುಕಿ ಬರೆದು ಸರಕಾರಕ್ಕೆ ಚಾಟಿ ಏಟು ಬೀಸುತ್ತಲೇ ಇರುತ್ತವೆ. ಈ ಕಾರಣಕ್ಕಾಗಿ ಪತ್ರಿಕೆಗಳು ಯಾವಾಗಲೂ ವಿರೋಧ ಪಕ್ಷದ ಕೆಲಸವನ್ನು ಮಾಡುತ್ತಿರುತ್ತವೆ. ಈ ದೃಷ್ಟಿಯಿಂದ ‘ವಾರ್ತಾಭಾರತಿ ಜನದನಿಯ ಸಾರಥಿ’ ಎನ್ನುವ ಶೀರ್ಷಿಕೆ ಅರ್ಥಪೂರ್ಣವಾಗಿದೆ.

Update: 2023-08-29 05:33 GMT

ನಮ್ಮ ‘ವಾರ್ತಾಭಾರತಿ’ ಪತ್ರಿಕೆ ಇಪ್ಪತ್ತು ವಸಂತಗಳನ್ನು ಮುಗಿಸಿ, ಇಪ್ಪತ್ತೊಂದಕ್ಕೆ ಕಾಲಿಟ್ಟಿರುವುದು, ನಿಜಕ್ಕೂ ಖುಷಿಯ ಸಂಗತಿ. ಒಂದು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಪತ್ರಿಕೆಗಳ ಪಾತ್ರ ತುಂಬಾ ಮಹತ್ವದು. ಅದರಲ್ಲೂ ಸ್ವತಂತ್ರ ಭಾರತದಲ್ಲಿ ಈ ಹೊತ್ತಿಗೂ ಶೋಷಿತರು, ದಲಿತರು, ಮಹಿಳೆಯರು, ಅಲ್ಪಸಂಖ್ಯಾತರು ಅನುಭವಿಸುತ್ತಿರುವ ನೋವುಗಳಿಗೆ ಕೊನೆಯೇ ಇಲ್ಲವೇ ಎನ್ನುವ ಪರಿಸ್ಥಿತಿ ಇದೆ. ಹೊರ ನೋಟಕ್ಕೆ ಎಲ್ಲವೂ ಸರಿ ಇದ್ದಂತೆ ಕಂಡರೂ ಅಂತರಂಗ ಕತ್ತಲೆಯಲ್ಲಿದೆ ಎನ್ನುವುದನ್ನು ನೊಂದು, ಬೆಂದು ಅನುಭವಿಸಿದವರಿಗೆ ಗೊತ್ತು. ಅಪಾರ ಶ್ರಮ ಮತ್ತು ಬುದ್ಧಿಮತ್ತೆಯಿಂದ ರೂಪಿಸಿದ ಬಲಿಷ್ಠ ಸಂವಿಧಾನವಿದೆ, ಸುಂದರವಾದ ಸಮಾಜ ನಿರ್ಮಾಣಕ್ಕೆ ಬೇಕಾಗುವ ಸಮರ್ಥ ಕಾನೂನುಗಳಿವೆ. ಆದರೂ ಶತಮಾನಗಳಿಂದಲೂ ನಡೆದುಕೊಂಡು ಬಂದಿರುವ ಅನಿಷ್ಟ ಪದ್ದತಿಗಳು ಈಗಲೂ ಜಾರಿಯಲ್ಲಿದೆ. ಈ ಹೊತ್ತಿಗೂ ಮಹಿಳೆಯರು ಮತ್ತು ಅಸ್ಪಶ್ಯರ ಮೇಲೆ ಹಿಂಸೆ, ದೌರ್ಜನ್ಯ, ಕೊಲೆ ನಿತ್ಯನಿರಂತರವಾಗಿ ನಡೆಯುತ್ತಿವೆ. ದರ್ಪ, ದೌರ್ಜನ್ಯ ನಡೆಸುವವರು ಇದು ನಮ್ಮ ಹಕ್ಕು ಎಂಬಂತೆ ವರ್ತಿಸುತ್ತಿದ್ದಾರೆ. ಅನ್ಯಾಯಕ್ಕೆ ಮತ್ತು ಅವಮಾನಕ್ಕೆ ಒಳಗಾದವರೂ ಇದು ನಮ್ಮ ಹಣೆ ಬರಹ ಎಂದು ಅನುಭವಿಸುತ್ತಿದ್ದಾರೆ. ನಮಗೆ ಸ್ವಾತಂತ್ರ ಬಂದು ಎಪ್ಪತ್ತಾರು ವರ್ಷ ಕಳೆದರೂ ದಲಿತರನ್ನು ಮತ್ತು ಮಹಿಳೆಯರನ್ನು ಅವಮಾನಿಸುವುದು, ಹಿಂಸಿಸುವುದು ನಿಂತಿಲ್ಲ. ದುರಂತವೆಂದರೆ ಉಳಿದ ಸಮುದಾಯದ ಜನ ಶಿಕ್ಷಣ ಪಡೆದುಕೊಂಡಿದ್ದಾರೆ. ಸು-ಸಂಸ್ಕೃತರು, ಸಮಾಜದ ಆಳ-ಅಗಲ ತಿಳಿದುಕೊಂಡವರು ಹೀಗೆ ಬೇರೆ ಬೇರೆ ಸ್ತರದ ಜನರು ವಿವೇಕವಂತರು ಎಂದು ನಾವೆಲ್ಲರೂ ಭಾವಿಸಿರುತ್ತೇವೆ. ಆದರೂ ಅವರೊಳಗೆ ಮನುಷ್ಯತ್ವ ಸತ್ತು, ಧರ್ಮ ಜಾತಿಗಳು ಜೀವ ಪಡೆದುಕೊಂಡಿರುತ್ತವೆ. ಅದಕ್ಕೆ ಹೇಳಿದ್ದನ್ನೇ ಮತ್ತೆ ಮತ್ತೆ ಹೇಳಬೇಕಾಗುತ್ತದೆ. ಅದಕ್ಕೆ ಪತ್ರಿಕೆಗಳು ಮತ್ತು ಪುಸ್ತಕಗಳನ್ನು ಓದುತ್ತ ವಿಚಾರಗಳನ್ನು ತಿಳಿಯುತ್ತ ವೈಚಾರಿಕ ಪ್ರಜ್ಞೆಯನ್ನು ಮೂಡಿಸಿಕೊಳ್ಳಬೇಕಾದ ಅಗತ್ಯ ನಮ್ಮೆಲ್ಲರಿಗೂ ಇದೆ. ಒಂದು ಪತ್ರಿಕೆ ಅಂದರೆ ಸುದ್ದಿಗಳನ್ನು ಸಂಗ್ರಹಿಸಿ, ಪ್ರಸಾರ ಮಾಡುವುದಷ್ಟೇ ಅಲ್ಲ. ಆ ಪತ್ರಿಕೆಗೆ ಒಂದು ಬದ್ಧತೆ ಕೂಡ ಮುಖ್ಯ. ಆ ಬದ್ಧತೆ ಯನ್ನು ಸಂಪಾದಕೀಯಗಳಲ್ಲಿ ಹೇಳುವ ಮೂಲಕ ತಾನು ಯಾವುದಕ್ಕೆ ನಿಷ್ಠೆಯಿಂದ ಇದ್ದೇನೆ ಎಂಬುದು ತಿಳಿಯುತ್ತದೆ.

ಸಾಮಾನ್ಯವಾಗಿ ನಾನು ಪತ್ರಿಕೆಗಳ ಸುದ್ದಿಗಳನ್ನು ಓದುವುದರ ಜೊತೆಗೆ ಪತ್ರಿಕೆಯಲ್ಲಿ ಬರುವ ಗಂಭೀರ ಅಂಕಣಗಳನ್ನು ಗಮನಿಸುತ್ತ ವಿಶೇಷವಾಗಿ ನನ್ನ ಕಣ್ಣು ಸಂಪಾದಕೀಯ ಕಡೆಗೆ ಚಲಿಸುತ್ತದೆ. ‘ವಾರ್ತಾಭಾರತಿ’ಯ ಸಂಪಾದಕೀಯ, ಲೇಖನಗಳು, ಅಂಕಣಗಳು ನನಗೆ ಅಚ್ಚುಮೆಚ್ಚು. ಅವು ಪ್ರಚಲಿತ ವಿಷಯಗಳಿಗೆ ಸಂಬಂಧಿಸಿರುತ್ತದೆ. ಹಾಗೆಯೇ ಸಮ ಸಮಾಜದ ಕನಸು ಕಾಣುವ ಮಾನವೀಯ ಸಮಾಜ ನಿರ್ಮಾಣಕ್ಕೆ ಪ್ರೇರಣೆ ನೀಡುವ ಲೇಖನಗಳಾಗಿರುತ್ತದೆ. ಇತ್ತೀಚೆಗಿನ ಪತ್ರಿಕೆಯ ಒಂದು ಸಂಪಾದಕೀಯ ನನ್ನ ಮನಕಲಕುವಂತಿತ್ತು. ಇದನ್ನು ಓದಿದ ಯಾರ ಕಣ್ಣಲ್ಲಾದರೂ ನೀರು ಬರುವಂತಿತ್ತು. ಆ ಸಂಪಾದಕೀಯ ಶೀರ್ಷಿಕೆ ‘ಯಕಃಶ್ಚಿತ್ ಗಾದೆಗಳಿಗಾಗಿ ದಲಿತರು ತೆರುತ್ತಿರುವ ಬೆಲೆ!’ ಇದನ್ನು ಓದುತ್ತ, ಓದುತ್ತ ಐದನೇ ಪ್ಯಾರಾದಲ್ಲಿರುವ ಈ ಸಾಲುಗಳನ್ನು ಗಮನಿಸಿ. ‘‘ಒಬ್ಬ ದಲಿತ ಬಾಲಕ ನೀರಿನ ಮಡಕೆಯನ್ನು ಮುಟ್ಟಿದ ಎನ್ನುವ ‘ಯಕಃಶ್ಚಿತ್’ ಕಾರಣಕ್ಕಾಗಿ ರಾಜಸ್ಥಾನದಲ್ಲಿ ಶಿಕ್ಷಕನೊಬ್ಬ ಆತನನ್ನು ಥಳಿಸಿ ಕೊಂದು ಹಾಕುತ್ತಾನೆ. ಯಾಕೆಂದರೆ ಆ ಶಿಕ್ಷಕನ ಪಾಲಿಗೆ ದಲಿತನೊಬ್ಬ ನೀರಿನ ಮಡಕೆಯನ್ನು ಮುಟ್ಟುವುದು ‘ಯಕಃಶ್ಚಿತ್’ ವಿಷಯ ಅಲ್ಲ. ಮೀಸೆ ಇಟ್ಟ ‘ಯಕಃಶ್ಚಿತ್’ ಕಾರಣಕ್ಕಾಗಿ ಆತನ ಮೇಲೆ ಹಲ್ಲೆ ನಡೆಯುತ್ತದೆ. ಖೈರ್ಲಾಂಜಿಯಲ್ಲಿ ದಲಿತರ ಹೆಣ್ಣು ಮಕ್ಕಳು ಸೈಕಲಲ್ಲಿ ಓಡಾಡುತ್ತಾ ಶಾಲೆ ಕಲಿಯುತ್ತಿದ್ದಾರೆ ಎನ್ನುವ ‘ಯಕಃಶ್ಚಿತ್’ ಕಾರಣಕ್ಕಾಗಿಯೇ ಇಡೀ ಗ್ರಾಮ ಆ ಹೆಣ್ಣು ಮಕ್ಕಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಕೊಂದು ಹಾಕಿದ್ದರು. ದೇವರ ಕೋಲನ್ನು ಮುಟ್ಟಿದ ಕಾರಣಕ್ಕಾಗಿ ದಲಿತ ಬಾಲಕನ ಮೇಲೆ ಹಲ್ಲೆ ನಡೆಸಲಾಗುತ್ತದೆ, ಮಾತ್ರವಲ್ಲ ಆತನ ಕುಟುಂಬಕ್ಕೆ ದಂಡ ವಿಧಿಸಲಾಗುತ್ತದೆ. ಇಂತಹ ಸಮಾಜದಲ್ಲಿ ನಟರೊಬ್ಬರು ಬಳಸಿದ ಗಾದೆಯನ್ನು ‘ಯಕಃಶ್ಚಿತ್’ ಎಂದು ನಿರ್ಲಕ್ಷಿಸಲು ಸಾಧ್ಯವೇ? ಇಂತಹ ಯಕಃಶ್ಚಿತ್ಗಳಿಗಾಗಿ ದಲಿತರು ತೆರುತ್ತಿರುವ ಬೆಲೆಯೇನು ಎನ್ನುವುದು ಗೊತ್ತಿದ್ದವರು ಈ ಗಾದೆಗಳನ್ನು ಸಾರ್ವಜನಿಕವಾಗಿ ಬಳಸುವುದು ಸಾಧ್ಯವೇ?’’ ಮೇಲ್ಕಂಡ ಸಾಲುಗಳು ನೀವೆಲ್ಲ ಇನ್ನೊಮ್ಮೆ ಗಮನಿಸಲಿ ಎಂದೇ ಇದನ್ನು ದಾಖಲಿಸಿದ್ದೇನೆ. ಹಾಗಾದರೆ ಈ ಸಮಾಜದಲ್ಲಿ ನಾವೆಲ್ಲ ಮನುಷ್ಯರಂತೆ ಕಾಣುವುದಿಲ್ಲವೇ? ನಿಮ್ಮ ಹಾಗೆಯೇ ನಾವು ನಾಗರಿಕರಲ್ಲವೇ? ನಮ್ಮ ದೇಶ ಮಹಾ ಪ್ರಜಾಪ್ರಭುತ್ವ ಹೊಂದಿದ್ದರೂ ಯಾಕಿಷ್ಟು ಹಿಂಸೆ, ಅವಮಾನ, ಅನ್ಯಾಯಗಳು ನಡೆಯುತ್ತವೆ ಎನ್ನುವ ಪ್ರಶ್ನೆಗಳು ನಾನು ಸೇರಿದಂತೆ ಲಕ್ಷಾಂತರ ಜನರ ಪ್ರಶ್ನೆಗಳಾಗಿವೆ. ಈ ಸಂಪಾದಕೀಯದಲ್ಲಿ ಅವಮಾನಿಸಿದವರ ಪರವಾಗಿ ಮಾತನಾಡುತ್ತಲೇ ಅವಮಾನಿಸಿದವರಿಗೆ ಎಚ್ಚರಿಕೆ ಮತ್ತು ಅರಿವನ್ನು ಮೂಡಿಸುವ ಸಾಲುಗಳು ಇವೆ. ಒಂದು ಪತ್ರಿಕೆ ವಸ್ತುನಿಷ್ಠೆಯಿಂದ ಸುದ್ದಿಗಳಿಗೆ ಪ್ರಾಶಸ್ತ್ಯ ಕೂಡುತ್ತಲೇ, ಸಾಮಾಜಿಕ ಕಳಕಳಿಯನ್ನು ಹೊಂದಿರಬೇಕು. ಆಗ ಒಂದು ಸಮಾಜ ಸ್ವಸ್ಥ ಸಮಾಜವಾಗುತ್ತದೆ. ಯಾವತ್ತೂ ಪತ್ರಿಕೆಗಳು ಸರಕಾರದ ಲೋಪದೋಷಗಳನ್ನು ಹುಡುಕಿ ಬರೆದು ಸರಕಾರಕ್ಕೆ ಚಾಟಿ ಏಟು ಬೀಸುತ್ತಲೇ ಇರುತ್ತವೆ. ಈ ಕಾರಣಕ್ಕಾಗಿ ಪತ್ರಿಕೆಗಳು ಯಾವಾಗಲೂ ವಿರೋಧ ಪಕ್ಷದ ಕೆಲಸವನ್ನು ಮಾಡುತ್ತಿರುತ್ತವೆ. ಈ ದೃಷ್ಟಿಯಿಂದ ‘ವಾರ್ತಾಭಾರತಿ ಜನದನಿಯ ಸಾರಥಿ’ ಎನ್ನುವ ಶೀರ್ಷಿಕೆ ಅರ್ಥಪೂರ್ಣವಾಗಿದೆ.

ಕಳೆದ ಎರಡು ದಶಕಗಳಲ್ಲಿ ‘ವಾರ್ತಾಭಾರತಿ’ ಬೆಳೆದು ಬಂದಿದ್ದನ್ನು ನಾನು ಗಮನಿಸಿದ್ದೇನೆ. ಕರಾವಳಿಯಲ್ಲಿ ಹುಟ್ಟಿ ಬೆಳೆದ ಈ ಪತ್ರಿಕೆ ಕೂಡ ನಮ್ಮ ಹಾಗೆಯೇ ಕಷ್ಟ-ಕಾರ್ಪಣ್ಯಗಳು, ಅಡೆ-ತಡೆಗಳು ಹೀಗೆ ಹತ್ತಾರು ವಿಘ್ನಗಳನ್ನು ದಾಟಿ ನೆಲೆ ನಿಂತಿದೆ. ನನ್ನ ಪ್ರೀತಿಯ ಲಂಕೇಶ್ ಮೇಷ್ಟ್ರು ಕರಾವಳಿಯನ್ನು ಕುರಿತು ‘‘ಸಸ್ಯ ಶ್ಯಾಮಲೆಯ ನಾಡು’’ ಎಂದು ಬಣ್ಣಿಸಿದ್ದನ್ನು ನಾನು ಮರೆಯಲಾರೆ.

ಎಪ್ಪತ್ತರ ದಶಕದಲ್ಲಿ ದಲಿತ, ರೈತ ಚಳವಳಿಗಳು ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕಾಲದಲ್ಲಿ ಈ ಚಳವಳಿಗೆ ಒತ್ತಾಸೆಯಾಗಿ ಒಂದು ಪತ್ರಿಕೆ ಇದ್ದರೆ ಬಲ ಎಂದು ಭಾವಿಸಿದ ಈ ನಾಡಿನ ಸಾಕ್ಷಿ ಪ್ರಜ್ಞೆಯಾದ ದೇವನೂರ ಮಹಾದೇವ, ವಡ್ಡರ್ಸೆ, ಇಂದೂಧರ, ಕೆ.ರಾಮಯ್ಯ, ಎಸ್.ಎಸ್.ಶಂಕರ್ ಮುಂತಾದವರ ಹೊಸ ಕನಸುಗಳೊಂದಿಗೆ ‘ಮುಂಗಾರು’ ಪತ್ರಿಕೆ ಪ್ರಾರಂಭವಾದಾಗ ನಾಡಿನ ಪ್ರಜ್ಞಾವಂತರೆಲ್ಲ ಸಂಭ್ರಮ ಪಟ್ಟಿದ್ದರು. ಆದರೆ ಬೇರೆ ಬೇರೆ ಕಾರಣಗಳಿಂದ ಅದು ನಿಂತು ಹೋಯಿತು. ಆದರೆ ಆ ಕನಸಿನ ಗಾಳಿ ಮಾತ್ರ ಅಲ್ಲೇ ಎಲ್ಲೋ ಓಡಾಡುತ್ತಿತ್ತು ಅನ್ನಿಸುತ್ತದೆ. ಅದು ಮತ್ತೆ ಕನಸೊಡೆದು ಚಿಗುರಿ ಈಗ ‘ವಾರ್ತಾಭಾರತಿ’ಯಾಗಿ ಎಲ್ಲರ ಜೀವ ನಾಡಿಯಾಗಿ, ಜನ ಸಾರಥಿಯಾಗಿ, ಉಳಿದ ಕನಸುಗಳ ಈಡೇರಿಸಲು ನಮ್ಮ ಮುಂದೆ ನಿತ್ಯ ಅಂತರಂಗದ ಗೆಳತಿಯಾಗಿ, ಗೆಳೆಯನಾಗಿ ಬರುತ್ತಿದೆ.

ಈಗ ಪತ್ರಿಕೋದ್ಯಮ ಉದ್ದಿಮೆಯಾಗಿ ಬೆಳೆದು ನಿಂತಿದೆ. ಉದ್ಯಮ ಎಂದರೆ ಸರಕುಗಳನ್ನು ಉತ್ಪಾದಿಸಿ ಬಂಡವಾಳವನ್ನು ಹೆಚ್ಚಿಸಿಕೊಳ್ಳುವುದಲ್ಲ. ಆದರೆ ಬಂಡವಾಳವಿಲ್ಲದೆ ಪತ್ರಿಕೆಯನ್ನು ಮಾಡಲು ಸಾಧ್ಯವಿಲ್ಲ. ಆದರೆ ಒಂದು ಪತ್ರಿಕೆಗೆ ಬದ್ಧತೆ ಇರಬೇಕು. ಈ ಬದ್ಧತೆ ಹೇಗೆ ಎಂಬುವುದನ್ನು ಗಾಂಧಿ ಮತ್ತು ಭೀಮ ಸಾಹೇಬರು ಕಲಿಸಿ ಕೊಟ್ಟಿದ್ದಾರೆ. ಜನಸಾಮಾನ್ಯರ ಮನಸ್ಸುಗಳಿಗೆ ವೈಚಾರಿಕ ಚಿಂತನೆಯನ್ನು ಸರಳವಾಗಿ ಹೇಳುತ್ತ ವೈಜ್ಞಾನಿಕ ಮನೋಭಾವವನ್ನು ಹೆಚ್ಚಿಸಬೇಕಾದ ಅನಿವಾರ್ಯತೆ ಈ ಸಮಾಜಕ್ಕೆ ಇದೆ. ಕುವೆಂಪು ‘ಮಗು ಹುಟ್ಟುತ್ತ ವಿಶ್ವಮಾನವ, ಬೆಳೆಯುತ್ತ ಅಲ್ಪಮಾನವ’ ಎಂದು ಹೇಳಿದ ಹಾಗೆ ಈ ಅಲ್ಪತನವನ್ನು ಹೋಗಲಾಡಿಸಬೇಕೆಂದರೆ ನಮ್ಮ ಒಳಗಿನ ವೌಢ್ಯವನ್ನು ಹೋಗಲಾಡಿಸಬೇಕು. ಅಂದರೆ ಜಾತಿ-ಧರ್ಮದ ಸಂಕೋಲೆಗಳು, ಮೇಲು-ಕೀಲುಗಳ ತಾರತಮ್ಯಗಳು ಕೊನೆಗೊಳ್ಳಬೇಕು. ಸಮಾಜ ಬದಲಾಗಲಿ ಎಂದು ಕಾಯುವುದಕ್ಕಿಂತ ನಾನು ಬದಲಾಗಬೇಕು ಎಂದು ಪ್ರತಿಯೊಬ್ಬರಿಗೂ ಅನ್ನಿಸಿದರೆ ಸಮಾಜ ತನಗೆ ತಾನೇ ಬದಲಾಗುತ್ತದೆ. ಇವುಗಳೆಲ್ಲ ಹಾಗೇ ಘಟಿಸುವುದಿಲ್ಲ. ಓದು, ಬರಹ, ಅನುಭವ, ಒಂದಕ್ಕೊಂದು ಪೂರಕವಾಗಿರುತ್ತದೆ. ಪ್ರತಿದಿನ ಪತ್ರಿಕೆ ಓದುವುದರಿಂದ ಅನೇಕ ವಿಷಯಗಳು ತಿಳಿಯುತ್ತದೆ, ಹೊಳೆಯುತ್ತವೆ. ನಮ್ಮದೇ ತಪ್ಪು ಒಪ್ಪುಗಳು ನಮಗೆ ಅರ್ಥವಾಗುತ್ತದೆ. ಪತ್ರಿಕೆ ಓದುವುದು ಪ್ರತಿದಿನ ನಮ್ಮ ಬದುಕಿನ ಒಂದು ಅವಿಭಾಜ್ಯ ಅಂಗವಾಗಬೇಕು. ಓದು ಓದನ್ನು ಹೆಚ್ಚಿಸುತ್ತದೆ ಹಾಗೇ ಬುದ್ಧನ ಒಂದು ಮಾತಿದೆ ‘‘ಪ್ರೀತಿ ಪ್ರೀತಿನಾ ಹೆಚ್ಚಿಸುತ್ತದೆ. ಹಿಂಸೆ ಹಿಂಸೆಯನ್ನು ಹೆಚ್ಚಿಸುತ್ತದೆ’’. ನಮ್ಮ ಆಯ್ಕೆ ಓದು ಮತ್ತು ಪ್ರೀತಿ ಆಗಿರಬೇಕು. ಮನುಷ್ಯನ ಸಂಸ್ಕಾರಕ್ಕೆ ಬೇಕಾಗುವ ವಿಚಾರ ಸಾಹಿತ್ಯ ಪುಸ್ತಕಗಳು ನಮ್ಮಲ್ಲಿ ಹೇರಳವಾಗಿವೆ. ಇದನ್ನೆಲ್ಲ ಓದಿದರೆ ಮನಸ್ಸು ತಿಳಿಯಾಗುತ್ತದೆ.

ಪತ್ರಿಕೆಗಳು ಇಂತಹ ಮಹತ್ವದ ಕೆಲಸ ಮಾಡುತ್ತಿವೆ ಎನ್ನುವುದು ಗಮನಾರ್ಹ. ‘ವಾರ್ತಾ ಭಾರತಿ’ ಕೂಡ, ತನ್ನ ಒಡಲಲ್ಲಿ ಪ್ರತಿದಿನವೂ ಜೀವ ಪ್ರೀತಿ ಉಳಿಸುವ ಬೆಳಕಿನ ಹಣತೆ ಬೆಳಗುವ ವಿಷಯಗಳನ್ನು ಪ್ರಕಟಿಸುತ್ತದೆ. ವೈಯಕ್ತಿಕ ಸಂಕಟಗಳು ಸಮಾಜದ ಸಂಕಟಗಳಾಗಿ ಕಾಣುತ್ತಿವೆ. ಹಾಗೆಯೇ ಸಮುದಾಯದ ಅವಮಾನಗಳು ಸಮಾಜದ ಅವಮಾನವಾಗಿ, ಕಾಣಬೇಕು. ಆದರೆ ಅದು ನಗಣ್ಯವಾಗಿ ಕಾಣುತ್ತಿದೆ. ಇದಕ್ಕಾಗಿ ಅನೇಕ ಮಹನೀಯರು ಹೋರಾಡಿದ್ದಾರೆ. ಮನಸ್ಸಿನ ಚಿಕಿತ್ಸೆಗೆ ‘ಓದೇ ಮದ್ದು’ ಎಂದು ತಾನು ಬದುಕಿರುವಷ್ಟು ದಿನಗಳು ಓದಿ ಓದಿ ಓದಪ್ಪನಾಗಿ ನೊಂದ ಅವಮಾನಿತರೆಲ್ಲರ ಪರವಾಗಿ, ಹೋರಾಟ ಮಾಡಿ, ‘ಮೂಕ ನಾಯಕ’, ‘ಬಹಿಷ್ಕೃತ ಭಾರತ’ ಪತ್ರಿಕೆಗಳನ್ನು ಖುದ್ದು ತಾನೇ ಪ್ರಕಟಿಸಿ ಜಗತ್ತಿನಲ್ಲೇ ಅತ್ಯಂತ ಶ್ರೇಷ್ಠ ಸಂವಿಧಾನವನ್ನು ರೂಪಿಸಿದವರು ಭೀಮ ಸಾಹೇಬರು. ಇವತ್ತು ನನ್ನಂತಹವರು ಅಕ್ಷರ ಕಲಿತು ಉದ್ಯೋಗ ಪಡೆದು ಬದುಕನ್ನು ರೂಪಿಸಿಕೊಳ್ಳುವುದಕ್ಕೆ ಕಾರಣಕರ್ತರಾದ, ಭೀಮ ಸಾಹೇಬರನ್ನು ನೆನೆಯದೆ ಇರಲು ಸಾಧ್ಯವೇ ಇಲ್ಲ. ಎಲ್ಲಾ ಕ್ಷೇತ್ರಗಳಲ್ಲೂ ಕೆಲಸ ಮಾಡಿರುವ ಭೀಮ ಸಾಹೇಬರು ಎರಡು ಪತ್ರಿಕೆಗಳನ್ನು ಮಾಡುವ ಮುಖಾಂತರ ಶತ ಶತಮಾನಗಳ ನೋವು, ಸಂಕಟ, ಅವಮಾನಗಳ ಕುರಿತು ಸ್ವತಃ ತಾವೇ ಬರೆದ ಲೇಖನಗಳನ್ನು ಪ್ರಕಟಿಸುವ ಮೂಲಕ ಜಾಗೃತಿ ಮೂಡಿಸಿದ್ದು, ಪತ್ರಿಕೆಗಳ ಮಹತ್ವವನ್ನು ಅರಿಯಬಹುದು. ಹೀಗೆ ಇಂತಹದೇ ಮಹತ್ವದ ಕೆಲಸವನ್ನು ದೇಶದ ಸ್ವಾತಂತ್ರಕ್ಕಾಗಿ, ಮಹಾತ್ಮಾ ಗಾಂಧೀಜಿಯವರು ಕೂಡ ಪತ್ರಿಕೆಗಳನ್ನು ಪ್ರಕಟಿಸುವ ಮೂಲಕ ಜನ ಜಾಗೃತಿಯನ್ನು ಮೂಡಿಸಿದ್ದು, ಈಗ ಇತಿಹಾಸ. ಹಾಗಾಗಿ ಪತ್ರಿಕೆ, ಪತ್ರಿಕೋದ್ಯಮದ ಜವಾಬ್ದಾರಿ ಬಹಳದೊಡ್ಡದು. ಒಂದು ಪತ್ರಿಕೆ ವರ್ಷದಿಂದ ವರ್ಷಕ್ಕೆ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಹೀಗೆ ಹತ್ತಾರು ವಿಷಯಗಳನ್ನು ಒಳಗೊಂಡಿರುತ್ತ ಅರಿವನ್ನು ಮೂಡಿಸುವ ಕೆಲಸ ಮಾಡಿದರೆ, ನಾಲ್ಕನೇ ಅಂಗವೆಂದು ಕರೆಸಿಕೊಳ್ಳುವ ಪತ್ರಿಕಾ ರಂಗ ತನ್ನ ಜವಾಬ್ದಾರಿಯನ್ನು ನಿಭಾಯಿಸಿದಂತಾಗುತ್ತದೆ. ಈ ನಿಟ್ಟಿನಲ್ಲಿ ‘ವಾರ್ತಾಭಾರತಿ’ ಇಪ್ಪತ್ತು ವಸಂತಗಳನ್ನು ದಾಟಿ ಇಪ್ಪತ್ತೊಂದಕ್ಕೆ ಮುನ್ನಡೆಯುತ್ತಿರುವುದಕ್ಕೆ ಹಾರ್ದಿಕ ಶುಭಾಶಯವನ್ನು ಹೇಳುತ್ತಾ, ವಸ್ತು ನಿಷ್ಠತೆಯ ಜೊತೆಗೆ ಕರುಣೆ, ಪ್ರೀತಿ, ಭ್ರಾತೃತ್ವವನ್ನ್ನು ಬೆಸೆಯವ ಕಾರ್ಯದಲ್ಲಿ ನಿಮ್ಮ ಎಂದಿನ ದೃಢ ನಿಲುವು, ದೃಷ್ಟಿಕೋನ ಹೀಗೆಯೇ ಮುಂದುವರಿಯಲಿ. ಪ್ರಕೃತಿಯ ಒಂದು ಸಣ್ಣ ಭಾಗವಾಗಿರುವ ಈ ಜೀವಕುಲ ಉಳಿಯಬೇಕಾದರೆ ಪ್ರಕೃತಿಯನ್ನು ಕಾಪಾಡುವುದು, ನಮ್ಮೆಲ್ಲರ ಆದ್ಯ ಕರ್ತವ್ಯವೆಂದು ಭಾವಿಸಬೇಕಾಗುತ್ತದೆ. ಸಕಲರ ಲೇಸು ಬಯಸುವ ‘ವಾರ್ತಾ ಭಾರತಿ’ ಜಲ ಚಿಹ್ನೆಯಾಗಿ ಉಳಿಯಲಿ ಎನ್ನುವ ಹಾರೈಕೆ ಒಬ್ಬ ಸಾಮಾನ್ಯ ಓದುಗನಾಗಿ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Contributor - ಸುಬ್ಬು ಹೊಲೆಯಾರ್

contributor

Similar News