ಗುಜರಾತ್ ನಲ್ಲಿ ಅಪೌಷ್ಟಿಕತೆಯಿಂದ ಮಕ್ಕಳ ಸಾವು ಇದು ಹೇಳುತ್ತಿರುವ ಭಾರತದ ಅಭಿವೃದ್ಧಿಯ ಕಥೆ ಏನು?

ಅಪೌಷ್ಟಿಕತೆಯಿಂದ ಮಕ್ಕಳ ಸಾವುಗಳು ಸಂಭವಿಸಿದ ಗುಜರಾತ್, ಭಾರತದ ಅತ್ಯಂತ ಶ್ರೀಮಂತ ಮತ್ತು ಕೈಗಾರಿಕೀಕರಣಗೊಂಡ ರಾಜ್ಯಗಳಲ್ಲಿ ಒಂದಾಗಿದೆ. ಆದರೂ, ಈ ಸಂಪತ್ತು ಜೀವನದ ನಿಜವಾದ ಗುಣಮಟ್ಟದೊಂದಿಗೆ ಸಂಬಂಧಿಸಿಯೇ ಇಲ್ಲ ಎಂಬಂತಿದೆ. ಸ್ವಾತಂತ್ರ್ಯದ ನಂತರ ಕೈಗಾರಿಕಾ ಕುಸಿತವನ್ನು ಕಂಡಿರುವ ಪಶ್ಚಿಮ ಬಂಗಾಳ ಕೈಗಾರಿಕಾ ಕ್ಷೇತ್ರದಲ್ಲಿ ಗಮನಾರ್ಹ ಪ್ರಗತಿ ಸಾಧಿಸಿರುವ ಗುಜರಾತ್ಗಿಂತಲೂ ಉತ್ತಮ ರೀತಿಯಲ್ಲಿ ಮಕ್ಕಳ ಆರೋಗ್ಯದಲ್ಲಿ ಪ್ರಗತಿ ತೋರಿಸಿದೆ.

Update: 2023-08-03 12:23 GMT

ಜೂನ್ 7ರಿಂದ15ರ ಅವಧಿಯಲ್ಲಿ ಗುಜರಾತಿನ ಗ್ರಾಮದ ಲುಡ್ಬಾಯಿಯಲ್ಲಿ ಅಪೌಷ್ಟಿಕತೆಯಿಂದ ಐದು ಶಿಶುಗಳು ಸಾವನ್ನಪ್ಪಿರುವುದು ವರದಿಯಾಗಿದೆ. ಇವರಲ್ಲಿ ಹಿರಿಯ ಮಗುವಿಗೇ ಕೇವಲ 15 ತಿಂಗಳು. ಈ ಕುರಿತು ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ದೂರು ನೀಡಿದ್ದರೂ ಯಾರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಗ್ರಾಮಸ್ಥರ ಆರೋಪ.

ಸರಕಾರ ಯಾವುದೇ ಕ್ರಮ ಕೈಗೊಳ್ಳುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಗ್ರಾಮದ ಮುಖ್ಯಸ್ಥರು ಸರಕಾರೇತರ ಸಂಸ್ಥೆಯ ಸಹಾಯದಿಂದ ವೈದ್ಯಕೀಯ ಶಿಬಿರ ಆಯೋಜಿಸಿದರು. ವೈದ್ಯರ ಪರೀಕ್ಷೆಯಲ್ಲಿ ತಿಳಿದುಬಂದ ಕಠೋರ ಸತ್ಯವೆಂದರೆ, 39 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರುವುದು.

ಈ ಮಧ್ಯೆ, ಸರಕಾರ ಊರಿನ ಮುಖ್ಯಸ್ಥರ ಆರೋಪಗಳನ್ನು ನಿರಾಕರಿಸಿದ್ದು, ಎರಡು ಶಿಶುಗಳು ಮಾತ್ರ ಅಪೌಷ್ಟಿಕತೆಯಿಂದ ಸಾವನ್ನಪ್ಪಿವೆ ಎಂದು ಸ್ಪಷ್ಟನೆ ಕೊಟ್ಟಿರುವುದೂ ವರದಿಯಾಗಿದೆ.

ಭಾರತ ಸೂಪರ್ ಪವರ್ ಆಗುವತ್ತ ಹೊರಟಿದೆ ಎಂದು 2023ರಲ್ಲಿ ಆಗಾಗ ಸರಕಾರ ಹೇಳುತ್ತಲೇ ಇದ್ದುದನ್ನು ಕೇಳಿಸಿಕೊಂಡಿದ್ದೇವೆ. ವಾಸ್ತವವಾಗಿ ಕೆಲವು ರಂಗಗಳಲ್ಲಿ ಗಮನಾರ್ಹ ಸಾಧನೆಗಳನ್ನು ದೇಶ ಮಾಡಿದೆ ಎಂಬುದೂ ನಿಜ. ಈ ತಿಂಗಳ ಆರಂಭದಲ್ಲಿ ಚಂದ್ರನ ಮೇಲೆ ಇಳಿಯಲು ಪ್ರಯತ್ನಿಸುವ ಬಾಹ್ಯಾಕಾಶ ನೌಕೆಯ ಉಡ್ಡಯನ ನಡೆಸಿತು. ಇದು ಯಶಸ್ವಿಯಾದರೆ ಭಾರತ ಚಂದ್ರನ ಮೇಲೆ ಇಳಿದ ನಾಲ್ಕನೇ ದೇಶವಾಗಲಿದೆ. ಆದರೂ, ಇಂಥ ಸಾಧನೆಗಳ ಜೊತೆಗೆ ಲುಡ್ಬಾಯಿ ಗ್ರಾಮದ ಶಿಶುಗಳು ಅಪೌಷ್ಟಿಕತೆಯಿಂದ ಸಾವನ್ನಪ್ಪಿರುವ ವಿಚಾರ ಚರ್ಚೆಯಾಗುತ್ತಿದೆ. ಈ ವಿಚಾರವಾಗಿ ಗ್ರಾಮಸ್ಥರು ಮತ್ತು ಸರಕಾರದ ಹೇಳಿಕೆಗಳು ಭಿನ್ನವಾಗಿರುವುದರ ಹೊರತಾಗಿಯೂ, ಇದು ತೀರಾ ಅಲಕ್ಷಿಸಿ ಬಿಡುವ ಸಂಗತಿಯಂತೂ ಅಲ್ಲ.

ಕೆಲವು ದಶಕಗಳ ಹಿಂದೆ ಭಾರತ ನಿಜವಾಗಿಯೂ ಆಹಾರದ ಕೊರತೆಯನ್ನು ಎದುರಿಸಿತ್ತು. ಅಂಥ ಯಾವ ಸಮಸ್ಯೆಗಳೂ ಈಗ ಇಲ್ಲ. ದೇಶ ಸಾಕಷ್ಟು ಆಹಾರವನ್ನು ಉತ್ಪಾದಿಸುತ್ತದೆ ಮತ್ತು ಕೆಲವು ಸರಕುಗಳ ಪ್ರಮುಖ ರಫ್ತುದಾರ ಕೂಡ ಆಗಿದೆ. ಇದು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಆದರೂ ಅಪೌಷ್ಟಿಕತೆಯಂತಹ ಮೂಲಭೂತ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಾಗುತ್ತಿಲ್ಲ ಎಂಬುದು ವಿಪರ್ಯಾಸ.

ಭಾರತದ ಅಪೌಷ್ಟಿಕತೆಯ ಸಮಸ್ಯೆ ಎಷ್ಟು ವಿಚಿತ್ರವಾಗಿದೆ ಎಂಬುದನ್ನು ದೇಶದ ಜನರು ಇನ್ನೂ ಬಡ ದೇಶಗಳ ಜನರಿಗಿಂತಲೂ ಕೆಟ್ಟ ಸ್ಥಿತಿ ಎದುರಿಸುತ್ತಿದ್ದಾರೆ ಎಂಬ ಅಂಶದಿಂದ ಅಳೆಯಬಹುದು. ಉದಾಹರಣೆಗೆ, 2022ರ ಜಾಗತಿಕ ಹಸಿವಿನ ಸೂಚ್ಯಂಕದ ಪ್ರಕಾರ ಭಾರತ 121 ದೇಶಗಳಲ್ಲಿ 107ನೇ ಸ್ಥಾನದಲ್ಲಿತ್ತು. ಅಂದರೆ ಶ್ರೀಲಂಕಾ (64), ನೇಪಾಳ (81) ಮತ್ತು ಬಾಂಗ್ಲಾದೇಶ (84) ಇವುಗಳಿಗಿಂತಲೂ ಭಾರತದ ಸ್ಥಿತಿ ಕೆಳಮಟ್ಟದಲ್ಲಿದೆ. ಪಾಕಿಸ್ತಾನಿಗಳು ಸಹ ಬಡವರಾಗಿದ್ದರೂ ಭಾರತೀಯರಿಗಿಂತ ಗಮನಾರ್ಹವಾಗಿ ಹೆಚ್ಚು ಆಹಾರ ಸುರಕ್ಷತೆ ಹೊಂದಿದ್ದಾರೆ ಎಂಬುದನ್ನು ಸೂಚ್ಯಂಕ ಕಂಡುಕೊಂಡಿದೆ.

ಈ ವಿರೋಧಾಭಾಸವನ್ನು ಭಾರತೀಯ ರಾಜ್ಯಗಳಲ್ಲಿಯೂ ಕಾಣಬಹುದು. ಉದಾಹರಣೆಗೆ, ಈ ಸಾವುಗಳು ಸಂಭವಿಸಿದ ಗುಜರಾತ್, ಭಾರತದ ಅತ್ಯಂತ ಶ್ರೀಮಂತ ಮತ್ತು ಕೈಗಾರಿಕೀಕರಣಗೊಂಡ ರಾಜ್ಯಗಳಲ್ಲಿ ಒಂದಾಗಿದೆ. ಆದರೂ, ಈ ಸಂಪತ್ತು ಜೀವನದ ನಿಜವಾದ ಗುಣಮಟ್ಟದೊಂದಿಗೆ ಸಂಬಂಧಿಸಿಯೇ ಇಲ್ಲ ಎಂಬಂತಿದೆ. ಸ್ಕ್ರಾಲ್ 2021ರಲ್ಲಿ ವರದಿ ಮಾಡಿದಂತೆ, ಸ್ವಾತಂತ್ರ್ಯದ ನಂತರ ಕೈಗಾರಿಕಾ ಕುಸಿತವನ್ನು ಕಂಡಿರುವ ಪಶ್ಚಿಮ ಬಂಗಾಳ ಕೈಗಾರಿಕಾ ಕ್ಷೇತ್ರದಲ್ಲಿ ಗಮನಾರ್ಹ ಪ್ರಗತಿ ಸಾಧಿಸಿರುವ ಗುಜರಾತ್ಗಿಂತ ಉತ್ತಮ ರೀತಿಯಲ್ಲಿ ಮಕ್ಕಳ ಆರೋಗ್ಯದಲ್ಲಿ ಪ್ರಗತಿ ತೋರಿಸಿದೆ.

ಈ ವಿರೋಧಾಭಾಸವನ್ನು ಕೇಂದ್ರ ಸರಕಾರದ ಚಿಂತಕರ ಚಾವಡಿಯಾದ ನೀತಿ ಆಯೋಗ ಬಿಡುಗಡೆ ಮಾಡಿರುವ ಇತ್ತೀಚಿನ ಅಂಕಿಅಂಶಗಳೇ ಒತ್ತಿಹೇಳುತ್ತಿವೆ. ಪಶ್ಚಿಮ ಬಂಗಾಳದಲ್ಲಿ ಅಪೌಷ್ಟಿಕತೆ ಪ್ರಮಾಣ ಗಣನೀಯವಾಗಿ ಕಡಿಮೆ. ಮಾತ್ರವಲ್ಲದೆ, ಗುಜರಾತ್ಗಿಂತ ಹೆಚ್ಚು ವೇಗದಲ್ಲಿ ಅದು ಪೌಷ್ಟಿಕತೆಯಲ್ಲಿ ಪ್ರಗತಿ ಸಾಧಿಸುತ್ತಿದೆ.

ಈ ಅಂಶಗಳ ಮೂಲಕ ಸ್ಪಷ್ಟವಾಗುವುದೇನೆಂದರೆ, ಕೈಗಾರಿಕಾ ಬೆಳವಣಿಗೆ ಅಪ್ರಸ್ತುತವಾಗುತ್ತದೆ. ಅದು ತುಂಬಾ ಸೂಕ್ಷ್ಮ್ಮವಾದ ಅಂಶವನ್ನು ಸುಧಾರಿಸುವುದಿಲ್ಲ ಎಂಬುದನ್ನು ಗಮನಿಸಬೇಕು. ಹೇಗೆ ಆ ಪ್ರಗತಿಯನ್ನು ಬಳಸಿಕೊಳ್ಳಲು ವ್ಯವಸ್ಥೆ ಕೆಲಸ ಮಾಡುತ್ತದೆ ಎಂಬುದು ಮುಖ್ಯವಾಗುತ್ತದೆ. ಪೂರ್ವದಲ್ಲಿ ಪಶ್ಚಿಮ ಬಂಗಾಳದ ಗಡಿಯಲ್ಲಿರುವ ಬಾಂಗ್ಲಾದೇಶ ಕೂಡ ಪೌಷ್ಟಿಕತೆಯಲ್ಲಿ ಇನ್ನಷ್ಟು ಉತ್ತಮ ಅಭಿವೃದ್ಧಿ ಕಾಣಿಸಿದೆ. ಗಾರ್ಮೆಂಟ್ಸ್ ಉದ್ಯಮದಲ್ಲಿನ ತನ್ನ ಅಭಿವೃದ್ಧಿಯಿಂದಲೂ ಅದು ಈ ಉದ್ದೇಶಕ್ಕೆ ಅಪಾರವಾಗಿ ಕೊಡುಗೆ ಪಡೆದಿದೆ. ಅದೇ ರೀತಿ, ತಮಿಳುನಾಡು ಕೈಗಾರಿಕಾ ಬೆಳವಣಿಗೆ ಮತ್ತು ಮಾನವ ಅಭಿವೃದ್ಧಿಯನ್ನು ಸಂಯೋಜಿಸುವಲ್ಲಿ ಯಶಸ್ವಿಯಾಗಿದೆ.

ಕೈಗಾರಿಕಾ ಅಭಿವೃದ್ಧಿ ಮಾನವ ಅಭಿವೃದ್ಧಿಗೆ ಅಗತ್ಯವಾಗಿ ಬೇಕಿರುವ ಸಂಗತಿಯಾದರೂ, ಅದೊಂದೇ ಸಾಕಾಗುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಅರ್ಥಶಾಸ್ತ್ರಜ್ಞರಾದ ಅಮರ್ತ್ಯ ಸೇನ್ ಮತ್ತು ಜಗದೀಶ್ ಭಗವತಿ ನಡುವಿನ ಪ್ರಸಿದ್ಧ ಚರ್ಚೆಯಲ್ಲಿನ ಅಭಿಪ್ರಾಯಗಳನ್ನು ಗಮನಿಸುವುದಾದರೆ, ಭಗವತಿ ಜೀವನ ಮಟ್ಟವನ್ನು ಹೆಚ್ಚಿಸಲು ಆರ್ಥಿಕ ಬೆಳವಣಿಗೆ ಮಾತ್ರವೇ ಸಾಕಾಗುತ್ತದೆ ಎಂದು ವಾದಿಸುತ್ತಾರೆ. ಮತ್ತೊಂದೆಡೆ, ಸೇನ್ ಭಾರತೀಯರ ನಿಜವಾದ ಜೀವನ ಮಟ್ಟವನ್ನು ಹೆಚ್ಚಿಸಲು ನಿರ್ದಿಷ್ಟ ಕಲ್ಯಾಣ ನೀತಿಗಳ ಅಗತ್ಯವಿದೆ ಎಂದು ಹೇಳುತ್ತಾರೆ.

ಕಲ್ಯಾಣ ನೀತಿಗಳ ಅನುಷ್ಠಾನಕ್ಕೆ ರಾಜಕೀಯ ಒತ್ತಾಸೆ ಇರಬೇಕಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಪ್ರತಿಪಕ್ಷಗಳ ಆಡಳಿತದಲ್ಲಿರುವ ರಾಜ್ಯಗಳನ್ನು ಸಿಹಿತಿಂಡಿಗಳು ಎಂದು ಕೀಳಾಗಿ ಕರೆಯುವ ಮೂಲಕ ಕಲ್ಯಾಣ ನೀಡುತ್ತಿರುವ ರಾಜ್ಯಗಳ ಮೇಲೆ ದಾಳಿ ಮಾಡುತ್ತಿದ್ದಾರೆ. ಆದರೂ, ಭಾರತದಷ್ಟೇ ಸಂಪತ್ತನ್ನು ಹೊಂದಿರುವ ದೇಶಗಳಿಗೆ ಹೋಲಿಸಿದರೆ ಭಾರತ ಕಲ್ಯಾಣಕ್ಕಾಗಿ ಖರ್ಚು ಮಾಡುತ್ತಿರುವುದು ನಿಜವಾಗಿಯೂ ಕಡಿಮೆ ಎಂಬುದನ್ನು ಅಂಕಿಅಂಶಗಳು ತೋರಿಸುತ್ತವೆ.

ಇನ್ನೂ ಹೆಚ್ಚು ಆತಂಕಕಾರಿ ಸಂಗತಿಯೆಂದರೆ, ಕಳೆದ ದಶಕದಲ್ಲಿ ಭಾರತದ ಆರ್ಥಿಕ ಬೆಳವಣಿಗೆಯ ವೇಗ ಗಣನೀಯವಾಗಿ ತಗ್ಗಿದೆ. 1980ರ ದಶಕದ ನಂತರ ಭಾರತ ಕಂಡಿದ್ದ ಸಂಪನ್ಮೂಲಗಳ ಗಮನಾರ್ಹ ಹೆಚ್ಚಳ, ಮುಂದಿನ ದಿನಗಳಲ್ಲಿ ಪುನರಾವರ್ತನೆಯಾಗುವುದಿಲ್ಲ.

ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಭಿವೃದ್ಧಿ ಕಾರ್ಯಕ್ರಮ ಅತಿ ಮುಖ್ಯವಾಗಿದೆ. ಇದಕ್ಕೆ ಗ್ರಾಮೀಣ ಭಾರತ ನಿದರ್ಶನವನ್ನು ಒದಗಿಸುತ್ತದೆ. ತಮ್ಮ ಬೇಡಿಕೆಗಳಿಗಾಗಿ ಸರಕಾರವನ್ನು ಒತ್ತಾಯಿಸಲು ತಮ್ಮ ಮತಗಳು ನಿರ್ಣಾಯಕ ಸಾಧನ ಎಂಬ ಅಂಶವನ್ನು ಹೆಚ್ಚಿನ ಭಾರತೀಯರು ತಿಳಿದಿದ್ದಾರೆ. ವಾಸ್ತವವಾಗಿ, ಇದು ಅವರು ಹೊಂದಿರುವ ಏಕೈಕ ಸಾಧನವೂ ಹೌದು ಮತ್ತು ಇದೇ ಪ್ರಸ್ತುತ ದೇಶದಲ್ಲಿ ಸೀಮಿತ ಅಭಿವೃದ್ಧಿಯ ಕಾರಣವಾಗಿದೆ ಎಂಬುದೂ ನಿಜ. ಆದರೆ ಭಾರತದ ಮಕ್ಕಳು ಇನ್ನೂ ಅಪೌಷ್ಟಿಕತೆಯಿಂದ ಸಾಯುತ್ತಿದ್ದಾರೆ ಎಂಬುದನ್ನು ಸರಕಾರಗಳು ಗಂಭೀರವಾಗಿ ತೆಗೆದುಕೊಳ್ಳಬೇಕಾಗಿದೆ.

ಕೃಪೆ: scroll.in

Tags:    

Writer - ವಾರ್ತಾಭಾರತಿ

contributor

Editor - musaveer

contributor

Contributor - ಶುಐಬ್ ದಾನಿಯಾಲ್

contributor

Similar News