ಬೆಂಗಳೂರು: ಶ್ರೀಕಾಂತ್ ಪೂಜಾರಿ ಬಂಧನ ಖಂಡಿಸಿ ಬಿಜೆಪಿ ಪ್ರತಿಭಟನೆ

Update: 2024-01-03 07:30 GMT

ಬೆಂಗಳೂರು, ಜ.3: ಹುಬ್ಬಳ್ಳಿಯಲ್ಲಿ ಬಾಬರಿ ಮಸೀದಿ ಧ್ವಂಸ ಪ್ರಕರಣದ ಬಳಿಕ 1992ರ ಡಿ.5ರಂದು ಹುಬ್ಬಳ್ಳಿ ನಗರದಲ್ಲಿ ಸಂಭವಿಸಿದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ಶ್ರೀಕಾಂತ್ ಪೂಜಾರಿಯ ಬಂಧನ ಖಂಡಿಸಿ ಬಿಜೆಪಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿಂದು ಪ್ರತಿಭಟನೆ ನಡೆಸಿತು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮುಖ್ಯಮಂತ್ರಿಗಳಿಗೆ 48 ಗಂಟೆಗಳ ಗಡುವು ಕೊಡುತ್ತೇವೆ. ಶ್ರೀಕಾಂತ್ ಪೂಜಾರಿಯವರ ಬಿಡುಗಡೆ ಮಾಡದಿದ್ದರೆ, ಬಿಜೆಪಿ ಯುವ ಮೋರ್ಚಾ ವತಿಯಿಂದ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಇವತ್ತು ರಾಜ್ಯಪಾಲರನ್ನೂ ಭೇಟಿ ಮಾಡುತ್ತೇವೆ ಎಂದು ತಿಳಿಸಿದರು. ಅವಶ್ಯಕತೆ ಬಂದರೆ ರಸ್ತೆಗಿಳಿದು ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.

ಅಯೋಧ್ಯೆಯಲ್ಲಿ ಹಿಂದೂಗಳ ಆರಾಧ್ಯ ದೈವ ಪ್ರಭು ಶ್ರೀರಾಮನ ಮಂದಿರ ನಿರ್ಮಾಣದ ಕನಸು ನನಸಾಗುತ್ತಿದೆ. ಮೋದಿಜೀ ಅವರ ನೇತೃತ್ವದಲ್ಲಿ ಶ್ರೀರಾಮನ ಮಂದಿರ ನಿರ್ಮಾಣ ನಿರ್ಮಾಣವಾಗಿ ಲೋಕಾರ್ಪಣೆ ಆಗಲಿದೆ. ಎಲ್ಲ ಕಡೆ ಉತ್ಸಾಹ, ಸಂತಸದ ವಾತಾವರಣ ಇದೆ. ಇಂಥ ಸಂದರ್ಭದಲ್ಲಿ ಹಿಂದೂವಿರೋಧಿ ಕಾಂಗ್ರೆಸ್ ಸರಕಾರ, ಪ್ರಭು ಶ್ರೀರಾಮಚಂದ್ರ ವಿರೋಧಿ ಸರಕಾರವು ಮಂತ್ರಾಕ್ಷತೆ ಕೊಡುವುದನ್ನು ತಡೆಯುವ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು.

ಹಿಂದೂಗಳ ಮನಸ್ಸಿಗೆ ನೋವಾಗುವ ಹೇಳಿಕೆ ಕೊಡುತ್ತಿದ್ದಾರೆ. ಹುಬ್ಬಳ್ಳಿಯ ಕರಸೇವಕ ಶ್ರೀಕಾಂತ್ ಪೂಜಾರಿಯವರ ಬಂಧನದ ದುಸ್ಸಾಹಸಕ್ಕೆ ಕಾಂಗ್ರೆಸ್ ಸರಕಾರ ಕೈಹಾಕಿದೆ. 31 ವರ್ಷಗಳ ಹಿಂದಿನ ಕೇಸು ಇದಾಗಿದೆ. ಈ ಸರಕಾರಕ್ಕೆ ತಕ್ಕ ಪಾಠ ಕಲಿಸಬೇಕಿದೆ ಎಂದು ತಿಳಿಸಿದರು.

ರಾಜ್ಯ ಉಪಾಧ್ಯಕ್ಷ ಮಾಳವಿಕಾ ಅವಿನಾಶ್ ಮಾತನಾಡಿ, ಶ್ರೀಕಾಂತ್ ಪೂಜಾರಿ ಬಿಡುಗಡೆ ಆಗುವವರೆಗೆ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದ ನೀತಿ ಕುಲಗೆಟ್ಟದ್ದು. ಹಿಜಾಬ್ ಪರ, ಶ್ರೀರಾಮನ ವಿರುದ್ಧ ನೀತಿಯಿಂದ ಜನತೆ ರಾಜ್ಯ ಸರಕಾರದ ವಿರುದ್ಧ ಒಗ್ಗಟ್ಟಾಗಿದ್ದಾರೆ ಎಂದು ಮಾಜಿ ಸಿಎಂ, ಸಂಸದ ಡಿ.ವಿ.ಸದಾನಂದ ಗೌಡ ನುಡಿದರು.

ರಾಜ್ಯದ ಕಾಂಗ್ರೆಸ್ ಸರಕಾರ ಕರಸೇವಕರನ್ನು ಬಂಧಿಸುತ್ತಿರುವುದು ಖಂಡನೀಯ ಎಂದು ಶಾಸಕ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲ್ಕುಮಾರ್ ಹೇಳಿದರು.

ಮಾಜಿ ಡಿಸಿಎಂ ಡಾ.ಸಿ.ಅಶ್ವತ್ಥನಾರಾಯಣ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಮ್ ಗೌಡ, ಸಂಸದ ಪಿ.ಸಿ.ಮೋಹನ್, ಶಾಸಕ ರವಿಸುಬ್ರಹ್ಮಣ್ಯ, ವಿಧಾನ ಪರಿಷತ್ ಮುಖ್ಯ ಸಚೇತಕ ಎನ್. ರವಿಕುಮಾರ್, ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಎನ್.ಆರ್. ರಮೇಶ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News