ಕಾರ್ಮಿಕರ ಮಾಹಿತಿ ನೀಡಿ ಉದ್ಯೋಗಿಗಳ ಪರ ನೀತಿ ರೂಪಿಸಲು ಸಹಕರಿಸಿ: ಐಟಿ ಕಂಪೆನಿಗಳಿಗೆ ಕಾರ್ಮಿಕ ಸಚಿವ ಸಂತೋಷ್‌ ಲಾಡ್ ಸೂಚನೆ

Update: 2025-02-20 22:32 IST
ಕಾರ್ಮಿಕರ ಮಾಹಿತಿ ನೀಡಿ ಉದ್ಯೋಗಿಗಳ ಪರ ನೀತಿ ರೂಪಿಸಲು ಸಹಕರಿಸಿ: ಐಟಿ ಕಂಪೆನಿಗಳಿಗೆ ಕಾರ್ಮಿಕ ಸಚಿವ ಸಂತೋಷ್‌ ಲಾಡ್ ಸೂಚನೆ
  • whatsapp icon

ಬೆಂಗಳೂರು : ಐಟಿ ಕಂಪೆನಿಗಳು ಉದ್ಯೋಗಿಗಳನ್ನು ಕೆಲಸಕ್ಕೆ ತೆಗೆದುಕೊಳ್ಳುವಾಗ, ತೆಗೆದುಹಾಕುವಾಗ ಯಾವೆಲ್ಲಾ ಶಿಷ್ಟಾಚಾರ ಅನುಸರಿಸಲಾಗುತ್ತದೆ ಎಂಬ ಬಗ್ಗೆ ಸರಕಾರಕ್ಕೆ ಮಾಹಿತಿ ಇರುವುದಿಲ್ಲ. ಈ ಬಗ್ಗೆ ಸರಕಾರದೊಂದಿಗೆ ಮಾಹಿತಿ ಹಂಚಿಕೊಂಡರೆ ಉದ್ಯೋಗಿಗಳ ಹಿತ ಕಾಯುವ ನೀತಿ ರೂಪಿಸಲು ಸಹಾಯವಾಗಲಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ.

ಗುರುವಾರ ವಿಕಾಸಸೌಧದಲ್ಲಿ ಇನ್ಫೋಸಿಸ್‍ನ ಮೈಸೂರು ನೌಕರರ/ಆಡಳಿತ ಮಂಡಳಿಗೆ ಸಂಬಂಧಿಸಿದಂತೆ ಸಭೆ ನಡೆಸಿ ಮಾತನಾಡಿದ ಅವರು, ಸಾಫ್ಟ್‌ ವೇರ್ ಉದ್ಯಮಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳನ್ನು ರಾತ್ರೋರಾತ್ರಿ ಕೆಲಸದಿಂದ ತೆಗೆದುಹಾಕಿ ನಾಳೆಯಿಂದ ಕೆಲಸಕ್ಕೆ ಬರಬೇಡಿ ಎಂದು ಕಂಪೆನಿಗಳು ಹೇಳುತ್ತಿವೆ ಎಂಬ ದೂರುಗಳಿವೆ. ಈ ಸಂದರ್ಭದಲ್ಲಿ ಉದ್ಯೋಗಿಗಳು ತೊಂದರೆಗೆ ಒಳಗಾಗುತ್ತಾರೆ, ಇದಕ್ಕೊಂದು ಪರಿಹಾರ ಕಂಡುಕೊಳ್ಳಿ ಎಂದು ಸೂಚಿಸಿದರು.

ಕಾರ್ಮಿಕ ಇಲಾಖೆಯೊಂದಿಗೆ ಕಂಪೆನಿಗಳು ಕೈ ಜೋಡಿಸಿದರೆ ಉದ್ಯೋಗಿಗಳ ಪರವಾದ ಪಾಲಿಸಿಯನ್ನು ರೂಪಿಸಲು ಸಹಾಯವಾಗಲಿದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಿ ಎಂದು ಸಂತೋಷ್ ಲಾಡ್ ಸಲಹೆ ನೀಡಿದರು.

ಸರಕಾರದೊಂದಿಗೆ ಐಟಿ ಕಂಪೆನಿಗಳು ಕೈ ಜೋಡಿಸಿದರೆ ಉದ್ಯೋಗಾವಕಾಶ ಹೆಚ್ಚಿಸಬಹುದು, ಕೌಶಲ್ಯ ವೃದ್ಧಿಸಬಹುದು ಹಾಗೂ ಅವಕಾಶಗಳನ್ನು ಸೃಷ್ಟಿಸಬಹುದು. ಇತ್ತೀಚೆಗೆ ಉದ್ಯೋಗದ್ದೇ ದೊಡ್ಡ ಸಮಸ್ಯೆ. ಸರಕಾರವೇ ಎಲ್ಲರಿಗೂ ಕೆಲಸ ಕೊಡಲು ಸಾಧ್ಯವಿಲ್ಲ. ಕೆಲಸ ಕಳೆದುಕೊಂಡವರಿಗೆ ಮತ್ತೆ ಸರಿಯಾದ ಕೆಲಸ ಸಿಗುತ್ತಿಲ್ಲ.. ಇಂತಹ ಸಂದರ್ಭದಲ್ಲಿ ಸೂಕ್ತ ಕೌಶಲ್ಯ ಹೊಂದಿದ್ದರೆ ಉದ್ಯೋಗ ಸಿಗಲಿದೆ ಎಂದು ಸಂತೋಷ್ ಲಾಡ್ ತಿಳಿಸಿದರು.

ಐಟಿ ಉದ್ಯಮದ ಸಮಸ್ಯೆಯನ್ನು ಅರಿಯಲು ಸರಕಾರ ಬಯಸಿದೆ. ಇದರಿಂದ ಉದ್ಯೋಗಿಗಳಿಗೆ ಸಹಾಯವಾಲಿದೆ. ಕೌಶಲ ಹೆಚ್ಚಳಕ್ಕೆ ಸರಕಾರ ಸಹ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ. ಕಂಪೆನಿಗಳು ಈ ನಿಟ್ಟಿನಲ್ಲಿ ನಾಯಕತ್ವ ತೆಗೆದುಕೊಳ್ಳಬೇಕು. ಸರಕಾರ ಮತ್ತು ಉದ್ದಿಮೆಗಳು ಒಂದಾದರೆ ಅಭ್ಯರ್ಥಿಗಳಿಗೆ ಒಳ್ಳೆಯದಾಗಲಿದೆ ಎಂದು ಸಂತೋಷ್ ಲಾಡ್ ಹೇಳಿದರು.

ಸಭೆಯಲ್ಲಿ ಸಚಿವರ ಮಾತಿಗೆ ಉತ್ತರಿಸಿದ ಅಧಿಕಾರಿಗಳು, ಉದ್ಯೋಗಿಯನ್ನು ಏಕಾಏಕಿ ಕೆಲಸದಿಂದ ತೆಗೆದು ಹಾಕುವ ಮುಂಚೆ ಕಂಪೆನಿಯ ಕ್ರಮಗಳನ್ನು ಕೈಗೊಂಡಿರುತ್ತದೆ. ಶಿಸ್ತುಪಾಲನಾ ಸಮಿತಿ ಇದ್ದು, ಅದು ತೀರ್ಮಾನ ಕೈಗೊಳ್ಳುತ್ತದೆ. ಯಾವುದೇ ಅಭ್ಯರ್ಥಿಗೆ ತೊಂದರೆ ಮಾಡುವ ಉದ್ದೇಶ ಕಂಪೆನಿಗೆ ಇರುವುದಿಲ್ಲ. ಅವರ ಕೆಲಸದ ಕೌಶಲ ಮತ್ತಿತರ ಅಂಶಗಳನ್ನು ಪರಿಗಣಿಸುತ್ತೇವೆ ಎಂದು ಪ್ರತಿಕ್ರಿಯಿಸಿದರು.


Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News