ಇಂದು (ಫೆ.8) ದಮ್ಮಾಮ್ ನಲ್ಲಿ 17ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ

Update: 2024-02-08 16:31 GMT

ದಮ್ಮಾಮ್ (ಸೌದಿ ಅರೇಬಿಯಾ) : ಇಲ್ಲಿನ ಸಫ್ವಾದಲ್ಲಿ ಇಂದು (ಫೆಬ್ರವರಿ 8) ಸಂಜೆ 7ರಿಂದ 17ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ನಡೆಯಲಿದೆ ಎಂದು ಅನಿವಾಸಿ ಕನ್ನಡಿಗರ ಸ್ವಾಗತ ಸಮಿತಿಯು ಪ್ರಕಟನೆಯಲ್ಲಿ ತಿಳಿಸಿದೆ.

ಕರ್ನಾಟಕ ರಾಜ್ಯ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್, ಪೌರಾಡಳಿತ ಮತ್ತು ಹಚ್ ಖಾತೆ ಸಚಿವ ರಹೀಂ ಖಾನ್, ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ, ಸೌದಿ ಅರೇಬಿಯಾದ ಭಾರತೀಯ ರಾಯಭಾರಿ ಡಾ. ಸುಹೇಲ್ ಅಜಾಜ್ ಖಾನ್, ಅನಿವಾಸಿ ಕನ್ನಡಿಗರ ಕೋಶದ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ, ಶಾಸಕರಾದ ಅಶೋಕ್ ಕುಮಾರ್ ರೈ, ಬಿ.ಎಂ. ಫಾರೂಕ್, ಸಾಹಿತಿ ಎಸ್ ಜಿ  ಸಿದ್ದರಾಮಯ್ಯ, ಉದ್ಯಮಿಗಳಾದ ಝಕರಿಯಾ ಜೋಕಟ್ಟೆ, ಶೇಖ್ ಕರ್ನಿರೆ, ಇಬ್ರಾಹೀಂ ಹುಸೇನ್, ಅಬ್ದುಲ್ ನಿಶಾನ್, ಅಬ್ದುಲ್ ನಿಶಾನ್, ಯೂನುಸ್ ಕಾಝಿಯಾ, ಯೋಗೀಶ್ ಡಿ. ಪೂಜಾರಿ, ಪತ್ರಕರ್ತ ವಾಲ್ಟರ್ ನಂದಳಿಕೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್., ಸ್ವಾಗತ ಸಮಿತಿಯ ಅಧ್ಯಕ್ಷ ಸತೀಶ್ ಕುಮಾರ್ ಬಜಾಲ್, ಪ್ರಧಾನ ಕಾರ್ಯದರ್ಶಿ ರಫೀಕ್‌ ಸೂರಿಂಜೆ, ಸಮ್ಮೇಳನ ಸಮಿತಿಯ ಸ್ಥಾಪಕಾಧ್ಯಕ್ಷ ಕೆ.ಪಿ. ಮಂಜುನಾಥ್ ಸಾಗರ್ ಮತ್ತಿತರರು ಭಾಗವಹಿಸಲಿದ್ದಾರೆ.

ಕಾರ್ಯಕ್ರಮದ ಅಂಗವಾಗಿ ಬಹುಭಾಷಾ ಕವಿಗೋಷ್ಠಿ, ದಫ್ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳು, ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ. ಸಮ್ಮೇಳನದ ಆಕರ್ಷಣೆಯ ಕೇಂದ್ರ ಬಿಂದುವಾಗಿ ಆಹಾರ ಮಳಿಗೆಗಳನ್ನು ತೆರೆಯಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಖ್ಯಾತ ಕಲಾವಿದರಿಂದ ಮ್ಯಾಜಿಕ್ ಮತ್ತು ಸ್ಟಾಂಡ್ ಅಪ್ ಕಾಮಿಡಿ, ಕಥಕ್-ಕನ್ನಡ ಗೀತೆಗಳು, ನಗೆ ನಾಟಕ, ದಫ್ ಮತ್ತು ಭರತನಾಟ್ಯ, ಹುಲಿವೇಷ ಕುಣಿತ, ಹ್ಯಾಸ ಪ್ರಹಸನ ಏರ್ಪಡಿಸಲಾಗಿದೆ.

ಕವಿಗಳಾದ ಬಶೀರ್ ಅಹ್ಮದ್ ಕಿನ್ಯ, ಹುಸೈನ್ ಕಾಟಿಪಳ್ಳ, ಮುಹಮ್ಮದ್ ಫೈಝ್, ಸಮದ್ ಗಡಿಯಾರ್, ಸಮೀರ್ ಮುಲ್ಕಿ ಅವರು ‘ಬ್ಯಾರಿ ಮಾಪಿಲೆ ಪಾಟ್’ ಹಾಡಲಿದ್ದಾರೆ. ಕವಯತ್ರಿಯರಾದ ಶಮೀಮಾ ಕುತ್ತಾರ್, ರೈಹಾನ ವಿ.ಕೆ. ಸಚ್ಚರಿಪೇಟೆ, ಫೌಝಿಯಾ ಹರ್ಷದ್ ಭಾಗವಹಿಸಲಿದ್ದಾರೆ.

ಕನ್ನಡ ಸಂಸ್ಕೃತಿಯ ವೈಭವವನ್ನು ಹರಡುವ ಮತ್ತು ಅನಿವಾಸಿ ಕನ್ನಡಿಗರನ್ನು ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಯೆಡೆಗೆ ಕರೆದೊಯ್ಯುವ ಉದ್ದೇಶವನ್ನು ಹೊಂದಿರುವ ಈ ಐತಿಹಾಸಿಕ ಸಮ್ಮೇಳನವನ್ನು ಸೌದಿ ಅರೇಬಿಯಾದಲ್ಲಿ ಮೊದಲ ಬಾರಿಗೆ ಆಯೋಜಿಸಲಾಗುತ್ತಿದೆ ಎಂದು ಸಂಘಟಕರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News