ನಿಜ್ಜರ್‌ಗೆ ಕೆನಡಾ ಶ್ರದ್ಧಾಂಜಲಿ | ಭಾರತದ ಖಂಡನೆ

Update: 2024-06-21 16:38 GMT

PC: NDTV 

ಹೊಸದಿಲ್ಲಿ : ಕಳೆದ ವರ್ಷದ ಜನವರಿಯಲ್ಲಿ ಬ್ರಿಟಿಷ್ ಕೊಲಂಬಿಯಾದ ಸರ್ರೆಯಲ್ಲಿ ಗುಂಡೇಟಿಗೆ ಬಲಿಯಾದ ಖಾಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಸ್ಮರಣಾರ್ಥ ಕೆನಡಾದ ಸಂಸತ್ತು ‘ಒಂದು ನಿಮಿಷ ಮೌನ’ ಆಚರಿಸಿದ್ದನ್ನು ಭಾರತವು ಶುಕ್ರವಾರ ಖಂಡಿಸಿದೆ.

‘ಉಗ್ರವಾದಕ್ಕೆ ರಾಜಕೀಯ ಬೆಂಬಲವನ್ನು ನೀಡುವ ಮತ್ತು ಹಿಂಸಾಚಾರವನ್ನು ಸಮರ್ಥಿಸುವ ಯಾವುದೇ ನಡೆಯನ್ನು ನಾವು ಸಹಜವಾಗಿಯೇ ವಿರೋಧಿಸುತ್ತೇವೆ ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ ಜೈಸ್ವಾಲ್ ಹೇಳಿದರು.

ಅಸಾಧಾರಣ ನಡೆಯೊಂದರಲ್ಲಿ ಕೆನಡಾ ಸಂಸತ್ತು ಎರಡು ದಿನಗಳ ಹಿಂದೆ ನಿಜ್ಜರ್ ಸ್ಮರಣಾರ್ಥ ‘ಒಂದು ನಿಮಿಷ ಮೌನ’ವನ್ನು ಆಚರಿಸಿತ್ತು.

ಕಳೆದ ವರ್ಷದ ಸೆಪ್ಟಂಬರ್‌ನಲ್ಲಿ ಕೆನಡಾದ ಪ್ರಧಾನಿ ಜಸ್ಟಿನ್ ಟ್ರೂಡೊ ಅವರು, ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆಂಟ್‌ಗಳು ಭಾಗಿಯಾಗಿರುವ ಶಂಕೆಯಿದೆ ಎಂದು ಆರೋಪಿಸಿದ ಬಳಿಕ ಉಭಯ ದೇಶಗಳ ನಡುವಿನ ಸಂಬಂಧಗಳು ಹದಗೆಟ್ಟಿವೆ.

ಟ್ರೂಡೊ ಆರೋಪಗಳನ್ನು ‘ಅಸಂಬದ್ಧ’ ಎಂದು ಭಾರತವು ತಿರಸ್ಕರಿಸಿತ್ತು.

ತನ್ನ ನೆಲದಿಂದ ನಿರ್ಭಯವಾಗಿ ಕಾರ್ಯಾಚರಿಸಲು ಖಾಲಿಸ್ತಾನ ಪರ ಶಕ್ತಿಗಳಿಗೆ ಕೆನಡಾ ಅವಕಾಶ ನೀಡುತ್ತಿರುವುದು ಉಭಯ ದೇಶಗಳ ನಡುವಿನ ಪ್ರಮುಖ ಸಮಸ್ಯೆಯಾಗಿದೆ ಎಂದು ಭಾರತವು ಪ್ರತಿಪಾದಿಸುತ್ತಿದ್ದು, ವಿದೇಶಾಂಗ ಕಾರ್ಯದರ್ಶಿ ವಿನಯ ಕ್ವಾತ್ರಾ ಅವರು ಕಳೆದ ವಾರ ಇದನ್ನು ಪುನರುಚ್ಚರಿಸಿದ್ದರು.

ಭಾರತವು ತನ್ನ ತೀವ್ರ ಕಳವಳಗಳನ್ನು ಕೆನಡಾಕ್ಕೆ ಪದೇ ಪದೇ ತಿಳಿಸಿದೆ ಮತ್ತು ಖಾಲಿಸ್ತಾನ ಪರ ಶಕ್ತಿಗಳ ವಿರುದ್ಧ ಅದು ಕಠಿಣ ಕ್ರಮವನ್ನು ತೆಗೆದುಕೊಳ್ಳುತ್ತದೆ ಎಂದು ನಿರೀಕ್ಷಿಸಿದೆ ಎಂದೂ ಕ್ವಾತ್ರಾ ಹೇಳಿದ್ದರು.

ಭಾರತವು ಭಯೋತ್ಪಾದಕ ಎಂದು ಘೋಷಿಸಿದ್ದ ನಿಜ್ಜರ್‌ನನ್ನು ಕಳೆದ ವರ್ಷದ ಜೂ.18ರಂದು ಬ್ರಿಟಿಷ್ ಕೊಲಂಬಿಯಾದ ಗುರುದ್ವಾರಾದ ಹೊರಗೆ ಗುಂಡಿಟ್ಟು ಹತ್ಯೆ ಮಾಡಲಾಗಿತ್ತು.

ರಾಯಲ್ ಕೆನೆಡಿಯನ್ ಮೌಂಟೆಡ್ ಪೋಲಿಸ್ (ಆರ್‌ಸಿಎಂಪಿ) ಈ ಹತ್ಯೆಯ ಬಗ್ಗೆ ತನಿಖೆಯನ್ನು ನಡೆಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News