ಇಸ್ರೇಲ್ ಗೆ ಈಗ ಪೂರ್ಣಪ್ರಮಾಣದ ಯುದ್ಧಕ್ಕೆ ಸಾಮರ್ಥ್ಯವಿಲ್ಲ : ಹಿಜ್ಬುಲ್ಲಾ ಪ್ರತಿಪಾದನೆ

Update: 2024-07-03 16:38 GMT

PC: PTI 

ಬೈರೂತ್: ಗಾಝಾದಲ್ಲಿ ಪೂರ್ಣಪ್ರಮಾಣದ ಕದನವಿರಾಮ ಜಾರಿಯಾದರೆ ಮಾತ್ರ ಲೆಬನಾನ್- ಇಸ್ರೇಲ್ ಗಡಿಯಲ್ಲಿ ಯುದ್ಧವಿರಾಮ ಸಾಧ್ಯ ಎಂದು ಲೆಬನಾನ್ ಮೂಲದ ಸಶಸ್ತ್ರ ಹೋರಾಟಗಾರರ ಗುಂಪು ಹಿಜ್ಬುಲ್ಲಾದ ಮುಖಂಡರು ಹೇಳಿಕೆ ನೀಡಿದ್ದಾರೆ.

ಗಾಝಾದಲ್ಲಿ ಯುದ್ಧವಿರಾಮ ಏರ್ಪಟ್ಟರೆ ಯಾವುದೇ ಚರ್ಚೆಯಿಲ್ಲದೆ ನಾವು ಹೋರಾಟ ನಿಲ್ಲಿಸುತ್ತೇವೆ' ಎಂದು ಹಿಜ್ಬುಲ್ಲಾದ ಉಪಮುಖಂಡ ಶೇಖ್ ನಯೀಮ್ ಕಾಸೆಮ್ ಹೇಳಿರುವುದಾಗಿ `ದಿ ಅಸೋಸಿಯೇಟೆಡ್ ಪ್ರೆಸ್' ವರದಿ ಮಾಡಿದೆ. ಇಸ್ರೇಲ್-ಹಮಾಸ್ ಯುದ್ಧದಲ್ಲಿ ಹಿಜ್ಬುಲ್ಲಾದ ಪಾಲ್ಗೊಳ್ಳುವಿಕೆಯು ಅದರ ಮಿತ್ರ ಹಮಾಸ್ಗೆ ಮುಂಚೂಣಿ ಬೆಂಬಲದ ಪ್ರದರ್ಶನವಾಗಿದೆ. ಒಂದು ವೇಳೆ ಯುದ್ಧ ನಿಂತರೆ ಈ ಮಿಲಿಟರಿ ಬೆಂಬಲವೂ ಅಸ್ತಿತ್ವದಲ್ಲಿ ಇರುವುದಿಲ್ಲ. ಆದರೆ ಒಂದು ವೇಳೆ ಅಧಿಕೃತ ಕದನವಿರಾಮ ಒಪ್ಪಂದವಿಲ್ಲದೆ ಮತ್ತು ಗಾಝಾದಿಂದ ಪೂರ್ಣ ವಾಪಸಾತಿ ಇಲ್ಲದೆ ಇಸ್ರೇಲ್ ತನ್ನ ಮಿಲಿಟರಿ ಕಾರ್ಯಾಚರಣೆ ಪುನರಾರಂಭಿಸಿದರೆ ಲೆಬನಾನ್-ಇಸ್ರೇಲ್ ಗಡಿಭಾಗದಲ್ಲಿ ಯಾವ ರೀತಿಯ ಪ್ರತಿಕ್ರಿಯೆಗೆ ಕಾರಣವಾಗಬಹುದು ಎಂದು ಈಗಲೇ ಹೇಳಲಾಗದು. ಯಾಕೆಂದರೆ ಈ ಪ್ರತಿಕ್ರಿಯೆಯ ಸ್ವರೂಪ, ಫಲಿತಾಂಶ ಮತ್ತು ಪರಿಣಾಮದ ಬಗ್ಗೆ ನಮಗೆ ತಿಳಿದಿಲ್ಲ ಎಂದು ಕಾಸೆಮ್ ಹೇಳಿದ್ದಾರೆ.

ಇಸ್ರೇಲ್ಗೆ ಈಗ ಹಿಜ್ಬುಲ್ಲಾದ ಜತೆ ಪೂರ್ಣ ಪ್ರಮಾಣದ ಯುದ್ಧ ಆರಂಭಿಸಲು ಅಥವಾ ಈ ಕುರಿತು ನಿರ್ಧರಿಸುವ ಸಾಮರ್ಥ್ಯವಿಲ್ಲ. ಆದರೂ ಒಂದು ವೇಳೆ ಲೆಬನಾನ್ನಲ್ಲಿ ಸೀಮಿತ ಕಾರ್ಯಾಚರಣೆಗೆ ಇಸ್ರೇಲ್ ಮುಂದಾದರೂ ಹೋರಾಟವು ಸೀಮಿತವಾಗಿರುತ್ತದೆ ಎಂದು ಅದು ನಿರೀಕ್ಷಿಸಬಾರದು. ಸೀಮಿತ ಯುದ್ಧ, ಸಂಪೂರ್ಣ ಯುದ್ಧ ಅಥವಾ ಆಂಶಿಕ ಯುದ್ಧ- ಇವುಗಳಲ್ಲಿ ಇಸ್ರೇಲ್ ತನಗೆ ಬೇಕಾದುದನ್ನು ನಿರ್ಧರಿಸಬಹುದು. ಆದರೆ ಅದಕ್ಕೆ ನಮ್ಮ ಪ್ರತಿಕ್ರಿಯೆಯೂ ಸೀಮಿತವಾಗಿರುತ್ತದೆ ಅಥವಾ ಇಸ್ರೇಲ್ ರೂಪಿಸಿದ ಯುದ್ಧ ಕಾನೂನಿಗೆ ಒಳಪಡುತ್ತದೆ ಎಂದು ಅವರು ನಿರೀಕ್ಷಿಸಬಾರದು. ಒಂದು ವೇಳೆ ಇಸ್ರೇಲ್ ಯುದ್ಧ ನಡೆಸಿದರೆ, ಅದು ಯುದ್ಧದ ವ್ಯಾಪ್ತಿಯನ್ನು ಅಥವಾ ಯುದ್ಧದ ವ್ಯಾಪ್ತಿಗೆ ಪ್ರವೇಶಿಸುವವರನ್ನು ನಿಯಂತ್ರಿಸುವುದಿಲ್ಲ ಎಂದು ಅರ್ಥ ಮಾಡಿಕೊಳ್ಳಬಹುದು ಎಂದರು. ಇರಾನ್ ಬೆಂಬಲಿತ `ಪ್ರತಿರೋಧದ ಕಕ್ಷೆ'ಯನ್ನು ಉಲ್ಲೇಖಿಸಿ ಅವರು ಈ ಮಾತನ್ನು ಹೇಳಿದ್ದು ಇರಾಕ್, ಸಿರಿಯಾ, ಯೆಮನ್ ಹಾಗೂ ಇತರೆಡೆ ಇರುವ ಸಶಸ್ತ್ರ ಹೋರಾಟಗಾರರ ಗುಂಪಿನ ಜತೆಗೆ, ಇರಾನ್ ಸ್ವತಃ ಯುದ್ಧದ ವ್ಯಾಪ್ತಿಗೆ ಸೇರಬಹುದು ಎಂದು ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.

ಈ ಮಧ್ಯೆ, ಇಸ್ರೇಲ್-ಹಿಜ್ಬುಲ್ಲಾ ನಡುವಿನ ಸಂಘರ್ಷ ವ್ಯಾಪಿಸುವುದನ್ನು ತಡೆಯಲು ಅಂತರಾಷ್ಟ್ರೀಯ ಪ್ರಯತ್ನ ಬಿರುಸುಗೊಂಡಿದೆ. ಶನಿವಾರ ಜರ್ಮನಿಯ ಗುಪ್ತಚರ ವಿಭಾಗದ ಸಹಾಯಕ ಮುಖ್ಯಸ್ಥ ಒಲೆ ಡಿಯಾಹ್ ಬೈರೂತ್ನಲ್ಲಿ ಹಿಜ್ಬುಲ್ಲಾ ಮುಖಂಡರ ಜತೆ ಮಾತುಕತೆ ನಡೆಸಿದ್ದಾರೆ. ಅಮೆರಿಕವು ಹಿಜ್ಬುಲ್ಲಾವನ್ನು ಭಯೋತ್ಪಾದಕ ಸಂಘಟನೆಯೆಂದು ನಿಯೋಜಿಸಿರುವುದರಿಂದ ನೇರ ಮಾತುಕತೆ ನಡೆಸುತ್ತಿಲ್ಲ ಆದರೆ ಮಧ್ಯವರ್ತಿಗಳ ಮೂಲಕ ನಿರಂತರ ಸಂದೇಶ ರವಾನಿಸುತ್ತಿದೆ. `ಗಾಝಾದಲ್ಲಿ ಕದನ ವಿರಾಮಕ್ಕೆ ಅಮೆರಿಕ ಮುಂದಿರಿಸಿದ ಪ್ರಸ್ತಾವನೆಯನ್ನು ಒಪ್ಪಿಕೊಳ್ಳುವಂತೆ ಹಮಾಸ್ ಮೇಲೆ ಒತ್ತಡ ಹಾಕಲು ಕಳೆದ ವಾರ ಶ್ವೇತಭವನದ ಪ್ರತಿನಿಧಿ ಅಮೋಸ್ ಹೊಚ್ಸ್ಟೆನ್ ಮಧ್ಯವರ್ತಿಗಳ ಮೂಲಕ ಸಂದೇಶ ರವಾನಿಸಿದ್ದರು. ಆದರೆ ಇದನ್ನು ತಾವು ನಿರಾಕರಿಸಿದ್ದೇವೆ. ಹಮಾಸ್ ತನ್ನ ನಿರ್ಧಾರವನ್ನು ಸ್ವಯಂ ತೆಗೆದುಕೊಳ್ಳುತ್ತದೆ. ಆದ್ದರಿಂದ ಅದರೊಡನೆ ನೇರವಾಗಿ ಮಾತುಕತೆ ನಡೆಸುವಂತೆ ತಿಳಿಸಿದ್ದೇವೆ' ಎಂದು ಹಿಜ್ಬುಲ್ಲಾ ವಕ್ತಾರರು ಪ್ರತಿಪಾದಿಸಿದ್ದಾರೆ.

*ಉದ್ವಿಗ್ನತೆ ಶಮನಕ್ಕೆ ಅಮೆರಿಕ ಪ್ರಯತ್ನ

ಈ ಮಧ್ಯೆ, ಇಸ್ರೇಲ್-ಲೆಬನಾನ್ ಗಡಿಯಲ್ಲಿನ ಉದ್ವಿಗ್ನತೆ ಶಮನಕ್ಕೆ ಮತ್ತು ಇಸ್ರೇಲ್-ಹಿಜ್ಬುಲ್ಲಾ ನಡುವೆ ನಡೆಯುತ್ತಿರುವ ಗಡಿಯಾಚೆಗಿನ ದಾಳಿ ಪ್ರಕರಣಗಳನ್ನು ಶಮನಗೊಳಿಸುವ ಮಾರ್ಗಗಳ ಬಗ್ಗೆ ಚರ್ಚಿಸಲು ಅಮೆರಿಕ ಪ್ರತಿನಿಧಿ ಅಮೋಸ್ ಹೊಚ್ಸ್ಟೆನ್ ಪ್ಯಾರಿಸ್ನಲ್ಲಿ ಬುಧವಾರ ಫ್ರಾನ್ಸ್ ಅಧಿಕಾರಿಗಳನ್ನು ಭೇಟಿಯಾಗಿರುವುದಾಗಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ವ್ಯಾಪಕ ಯುದ್ಧವನ್ನು ತಪ್ಪಿಸಲು ಪ್ರಯತ್ನಿಸುವುದಾಗಿ ಅಮೆರಿಕ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News