ಇರಾನ್‌ನ ನೂತನ ಅಧ್ಯಕ್ಷ ಮಸೂದ್ ಪೆಝೆಶ್ಕಿಯಾನ್ ಯಾರು?: ಇಲ್ಲಿದೆ ಮಾಹಿತಿ...

Update: 2024-07-09 11:25 GMT

 ಮಸೂದ್ ಪೆಝೆಶ್ಕಿಯಾನ್ | PC : PTI 

2021 ರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಇಬ್ರಾಹಿಂ ರಯೀಸಿ ಅವರು ಮೇ ತಿಂಗಳಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ ನಂತರ, ಇರಾನ್ ನಲ್ಲಿ ಕ್ಷಿಪ್ರ ಚುನಾವಣೆ ನಡೆಸಬೇಕಾಯಿತು. 69 ವರ್ಷದ ಸುಧಾರಣಾವಾದಿ ಅಭ್ಯರ್ಥಿ ಮಸೂದ್ ಪೆಝೆಶ್ಕಿಯಾನ್ ಈ ಚುನಾವಣೆಯಲ್ಲಿ ಗೆಲುವು ಸಾಧಿಸಿ ಹೊಸ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಮಧ್ಯಪ್ರಾಚ್ಯದಾದ್ಯಂತ ಮತ್ತು ಇರಾನ್ - ಅಮೆರಿಕ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವಾಗ ಈ ಚುನಾವಣೆ ಹಾಗು ಆಯ್ಕೆ ನಡೆದಿದೆ.

ದೇಶದ ಚುನಾವಣೆಗಳ ಉಸ್ತುವಾರಿ ಹೊತ್ತ ಇರಾನ್‌ನ ಗಾರ್ಡಿಯನ್ ಕೌನ್ಸಿಲ್‌ನಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಅನುಮೋದಿಸಲಾದ ಆರು ಅಭ್ಯರ್ಥಿಗಳಲ್ಲಿ ಮಸೂದ್ ಪೆಝೆಶ್ಕಿಯಾನ್ ಒಬ್ಬರು. ಸುಧಾರಣಾವಾದಿ ಅಭ್ಯರ್ಥಿಗಳ ಪೈಕಿ ಸ್ಪರ್ಧೆಗೆ ಅನುಮೋದನೆ ಪಡೆದ ಏಕೈಕ ಅಭ್ಯರ್ಥಿ ಇವರು. ಇರಾನ್‌ನ ಮಾಜಿ ಅಧ್ಯಕ್ಷ ಮಹಮೂದ್ ಅಹ್ಮದಿನೆಝಾದ್ ಸೇರಿದಂತೆ 80 ಜನರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಪ್ರಯತ್ನಿಸಿದ್ದರು. ಇವರಲ್ಲಿ ಬಹುತೇಕ ಎಲ್ಲರನ್ನು ಗಾರ್ಡಿಯನ್ ಕೌನ್ಸಿಲ್ ಸ್ಪರ್ಧಿಸದಂತೆ ನಿರ್ಬಂಧಿಸಿತ್ತು.

ಶುಕ್ರವಾರದ ಚುನಾವಣೆಯಲ್ಲಿ ಪೆಝೆಶ್ಕಿಯಾನ್ 53.7% ಮತ ಪಡೆದು ಕಟ್ಟಾ ಸಂಪ್ರದಾಯವಾದಿ ಸಯೀದ್ ಜಲೀಲಿ ಅವರನ್ನು ಸೋಲಿಸಿದರು. ಈ ಮೊದಲು ಅಧ್ಯಕ್ಷರಾಗಿದ್ದ ದಿವಂಗತ ರಯೀಸಿ ಅವರು ತರಬೇತಿ ಪಡೆದ ಧರ್ಮಗುರುಗಳಾಗಿದ್ದರೆ, ಪೆಝೆಶ್ಕಿಯಾನ್ ವೈದ್ಯರಾಗಿದ್ದಾರೆ. ಅವರು ಹೃದಯ ಶಸ್ತ್ರಚಿಕಿತ್ಸಾ ತಜ್ಞರಾಗಿದ್ದಾರೆ.

ಇರಾನ್ ನ ಕೊನೆಯ ಸುಧಾರಣಾವಾದಿ ಅಧ್ಯಕ್ಷ ಮೊಹಮ್ಮದ್ ಖಾತಮಿ ಅವರ ಸರ್ಕಾರದಲ್ಲಿ ಉಪ ಆರೋಗ್ಯ ಮಂತ್ರಿಯಾಗಿ 1997 ರಿಂದ 2001ದ ವರೆಗೆ, ನಂತರ ಆರೋಗ್ಯ ಮಂತ್ರಿಯಾಗಿ 2001 ರಿಂದ 2005 ರವರೆಗೆ ಇವರು ಸೇವೆ ಸಲ್ಲಿಸಿದ್ದರು. ಈ ಮೂಲಕ ತಮ್ಮ ರಾಜಕೀಯ ಜೀವನ ಪ್ರಾರಂಭಿಸಿದ್ದರು. ಅವರು ಇರಾನ್ ಸಂಸತ್ತಿನ ಐದು ಅವಧಿಯ ಸದಸ್ಯರು ಮತ್ತು ಉಪ ಸ್ಪೀಕರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ.

ಹೊಸ ಅಧ್ಯಕ್ಷ ಪೆಝೆಶ್ಕಿಯಾನ್ ಇರಾನ್‌ನಲ್ಲಿ ಕಡ್ಡಾಯ ಶಿರವಸ್ತ್ರವನ್ನು ಜಾರಿಗೊಳಿಸುವ ಬಗ್ಗೆ ಹೆಚ್ಚು ಉದಾರವಾದ ನಿಲುವನ್ನು ತೆಗೆದುಕೊಂಡಿದ್ದಾರೆ.

"ನಾವು ದೇಶದಲ್ಲಿ ಹಿಜಾಬ್ ಅನ್ನು ಹಾಕಲು ಒತ್ತಡ ಹಾಕಿದರೆ, ನಾವು ಎಲ್ಲಿಗೂ ತಲುಪುವುದಿಲ್ಲ ಎಂದು ನಾನು ಭಾವಿಸುತ್ತೇನೆ" ಎಂದು ಅವರು ಈ ಹಿಂದೆ ಹೇಳಿದ್ದರು. 2022 ರಲ್ಲಿ ಕಡ್ಡಾಯ ಹಿಜಾಬ್ಅನ್ನು ವಿರೋಧಿಸಿ ಬಳಿಕ ಪೊಲೀಸ್ ಕಸ್ಟಡಿಯಲ್ಲಿ ಮಹ್ಸಾ ಅಮಿನಿ ನಿಧನರಾದ ನಂತರ, " ಇಸ್ಲಾಮಿಕ್ ರಿಪಬ್ಲಿಕ್ ನಲ್ಲಿ ತನ್ನ ಹಿಜಾಬ್ ಗಾಗಿ ಹುಡುಗಿಯನ್ನು ಬಂಧಿಸಿ ನಂತರ ಅವಳ ಮೃತದೇಹವನ್ನು ಅವಳ ಕುಟುಂಬಕ್ಕೆ ಹಸ್ತಾಂತರಿಸುವುದು ಸ್ವೀಕಾರಾರ್ಹವಲ್ಲ" ಎಂದು ಪೆಝೆಶ್ಕಿಯಾನ್ ಬರೆದಿದ್ದರು.

"ಇರಾನ್‌ ಗಾಗಿ" ಅಥವಾ "ಫಾರ್ ಇರಾನ್" ಎಂಬುದು ಪೆಝೆಶ್ಕಿಯಾನ್ ಅವರ ಪ್ರಚಾರದ ಘೋಷಣೆಯಾಗಿದೆ. ಇದು "ಬರಾಯೆ" ಅಥವಾ "ಫಾರ್" ಹೆಸರಿನ 2022 ರ ಮಹ್ಸಾ ಅಮಿನಿ ಪ್ರತಿಭಟನೆಗಳನ್ನು ಬೆಂಬಲಿಸುವ ಜನಪ್ರಿಯ ಗೀತೆಯ ಉಲ್ಲೇಖವಾಗಿದೆ ಎಂದು ಹೇಳಲಾಗಿದೆ.

ಗ್ರ್ಯಾಮಿ ಪ್ರಶಸ್ತಿ-ವಿಜೇತ ಇರಾನಿನ ಗಾಯಕ-ಗೀತರಚನೆಕಾರ ಶೆರ್ವಿನ್ ಹಾಜಿಪೂರ್ ಅವರಿಗೆ "ಬರಾಯೆ" ಹಾಡಿನ ಕಾರಣ ಮಾರ್ಚ್‌ನಲ್ಲಿ "ವ್ಯವಸ್ಥೆಯ ವಿರುದ್ಧ ಪ್ರಚಾರ" ಮತ್ತು "ಪ್ರತಿಭಟನೆಗೆ ಜನರನ್ನು ಪ್ರೋತ್ಸಾಹಿಸುವ" ಆರೋಪದ ಮೇಲೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು.

ಹೊಸ ಅಧ್ಯಕ್ಷರು ಪಶ್ಚಿಮ ಮತ್ತು ಅಮೆರಿಕದೊಂದಿಗೆ ಉತ್ತಮ ಸಂಬಂಧವನ್ನು ಬಯಸುವವರ ಪಟ್ಟಿಯಲ್ಲಿ ಸೇರಿದ್ದಾರೆ.

ಬರಾಕ್ ಒಬಾಮಾ ಸಹಿ ಮಾಡಿದ ಡೊನಾಲ್ಡ್ ಟ್ರಂಪ್ ಹರಿದು ಹಾಕಿದ ಮತ್ತು ಜೋ ಬೈಡನ್ ಮತ್ತೆ ಜೀವಂತಗೊಳಿಸಲು ನಿರಾಕರಿಸಿದ ಪರಮಾಣು ಒಪ್ಪಂದಕ್ಕೆ ಮರಳಲು ಪೆಝೆಶ್ಕಿಯಾನ್ ಬಯಸುತ್ತಾರೆ ಎಂದು ಹೇಳಲಾಗಿದೆ. ಆ ಒಪ್ಪಂದದ ಶಿಲ್ಪಿಗಳಲ್ಲಿ ಒಬ್ಬರಾದ ಇರಾನಿನ ಮಾಜಿ ವಿದೇಶಾಂಗ ಸಚಿವ ಜವಾದ್ ಝರೀಫ್ ಅವರನ್ನು ತಮ್ಮ ಪರ ಪ್ರಚಾರಕ್ಕಾಗಿ ನಿಯೋಜಿಸಿದ್ದರು.

ಆದರೆ, ಹೆಚ್ಚಿನ ಇರಾನಿನ ರಾಜಕಾರಣಿಗಳಂತೆ ಅಮೇರಿಕಾದ ನಿಲುವುಗಳನ್ನು ಖಂಡಿಸುವ ಸುದೀರ್ಘ ಇತಿಹಾಸವನ್ನು ಪೆಝೆಶ್ಕಿಯಾನ್ ಅವರೂ ಹೊಂದಿದ್ದಾರೆ. 2019 ರಲ್ಲಿ ಅಮೆರಿಕನ್ ಡ್ರೋನ್ ಅನ್ನು ಇರಾನ್ ಹೊಡೆದುರುಳಿಸಿದಾಗ, ಪೆಝೆಶ್ಕಿಯಾನ್ "ನಿಜವಾದ ಭಯೋತ್ಪಾದಕ ಅಮೆರಿಕ" ಎಂದು ಹೇಳಿದ್ದರು. ಅಷ್ಟೇ ಅಲ್ಲದೆ ಡ್ರೋನ್ ದಾಳಿಯನ್ನು ಅಪರಾಧಿ ಅಮೆರಿಕದ ನಾಯಕರ ಬಾಯಿಯಲ್ಲಿ ಬಲವಾದ ಹೊಡೆತ ಎಂದು ಪೆಝೆಶ್ಕಿಯಾನ್ ಬಣ್ಣಿಸಿದ್ದರು.

ಇರಾನ್-ಇರಾಕ್ ಯುದ್ಧದ ಅನುಭವಿಯಾಗಿರುವ ಇವರು ಒಮ್ಮೆ ಐಆರ್‌ಜಿಸಿ ಮಿಲಿಟರಿ ಸಮವಸ್ತ್ರ ಹಾಕಿ ಸಂಸತ್ತಿಗೆ ಬಂದಿದ್ದರು.

ಐಆರ್‌ಜಿಸಿ ಹಿಂದೆ ಇದ್ದದ್ದಕ್ಕಿಂತ "ವಿಭಿನ್ನವಾಗಿದೆ" ಎಂದು ಹೇಳಿದ್ದ ಅವರು ಸಂಘಟನೆಗೆ ಬೆಂಬಲ ಪ್ರದರ್ಶಿಸುವ ಸಲುವಾಗಿ ಈ ರೀತಿ ಮಾಡಿದ್ದರು.

ಪರ್ಷಿಯನ್ನರು ಜನಾಂಗೀಯ ಬಹುಸಂಖ್ಯಾತರಾಗಿರುವ ಇರಾನಿನಲ್ಲಿ , ಪೆಜೆಶ್ಕಿಯಾನ್ ಅಝರ್ ಬೈಜಾನ್ ನ ತಂದೆ ಮತ್ತು ಕುರ್ದಿಷ್ ತಾಯಿಯ ಮಗ. ಅಜೆರಿ ಮತ್ತು ಕುರ್ದಿಶ್ ಎರಡು ಭಾಷೆಗಳನ್ನು ನಿರರ್ಗಳವಾಗಿ ಮಾತನಾಡ ಬಲ್ಲರಾಗಿದ್ದಾರೆ ಪೆಜೆಶ್ಕಿಯಾನ್.

" ಡಾ ಪೆಝೆಶ್ಕಿಯಾನ್ ಗೆ ನಾನು ತುರ್ಕಿ ಎಂಬ ಕಾರಣಕ್ಕೆ ಮತ ಹಾಕುತ್ತಿಲ್ಲ. ಅವರು ಆಯ್ಕೆಯಾದರೆ, ಅವರು ಈ ದೇಶದ ತುಳಿತಕ್ಕೊಳಗಾದ ಮತ್ತು ತಾರತಮ್ಯಕ್ಕೊಳಗಾದ ಅಲ್ಪಸಂಖ್ಯಾತರ ಅಧ್ಯಕ್ಷರಾಗುತ್ತಾರೆ ಎಂಬ ಕಾರಣಕ್ಕೆ ಮತ ಹಾಕುತ್ತೇನೆ" ಎಂದು ಅಜೆರಿ ಮತದಾರರೊಬ್ಬರು ಇರಾನ್‌ ವೈರ್‌ಗೆ ಹೇಳಿದ್ದರು.

1972 ರಲ್ಲಿ ಕಾರ್ ಅಪಘಾತದಲ್ಲಿ ತನ್ನ ಹೆಂಡತಿ ಮತ್ತು ಕಿರಿಯ ಮಗಳನ್ನು ಕಳೆದುಕೊಂಡ ಅಧ್ಯಕ್ಷ ಜೋ ಬೈಡನ್ ನಂತೆ, ಇರಾನಿನ ಹೊಸ ಅಧ್ಯಕ್ಷರೂ 1994 ರಲ್ಲಿ ಕಾರು ಅಪಘಾತದಲ್ಲಿ ತಮ್ಮ ಹೆಂಡತಿ ಮತ್ತು ಕಿರಿಯ ಮಗಳನ್ನು ಕಳೆದುಕೊಂಡಿದ್ದಾರೆ. ಆದರೆ ಪೆಝೆಶ್ಕಿಯಾನ್ ಮರುಮದುವೆಯಾಗಲಿಲ್ಲ. ಇಬ್ಬರು ಪುತ್ರರು ಮತ್ತು ಓರ್ವ ಪುತ್ರಿ ಸೇರಿದಂತೆ ಪೆಝೆಶ್ಕಿಯಾನ್ ಗೆ ಮೂವರು ಮಕ್ಕಳು.

ಚುನಾವಣೆಯ ಕೊನೆಯ ಗಳಿಗೆಯಲ್ಲಿ ಮತದಾನದಲ್ಲಿ ಹೆಚ್ಚಳದ ಕಾರಣದಿಂದ ಪೆಜೆಶ್ಕಿಯಾನ್ ಗೆಲುವು ಸಾಧ್ಯವಾಗಿದೆ ಎಂದು ಹೇಳಲಾಗುತ್ತಿದೆ.

ಚುನಾವಣೆಯ ಮೊದಲ ಸುತ್ತಿನಲ್ಲಿ ಇಸ್ಲಾಮಿಕ್ ಗಣರಾಜ್ಯದ ಇತಿಹಾಸದಲ್ಲೇ ಅತ್ಯಂತ ಕಡಿಮೆ 40% ಮತದಾನವಾಗಿತ್ತು. ಆದರೆ ಶುಕ್ರವಾರ ಇದು ಸುಮಾರು 50%ಕ್ಕೆ ಏರಿತು. ಪೆಝೆಶ್ಕಿಯಾನ್ ಅವರು ತಮ್ಮ ಮುಂದಿರುವ ಸವಾಲನ್ನು ಒಪ್ಪಿಕೊಂಡಿದ್ದಾರೆ.

ಈ ವಾರದ ಆರಂಭದಲ್ಲಿ ಅವರು ಬೆಂಬಲಿಗರೊಂದಿಗೆ ಮಾತನಾಡುತ್ತಾ "ಪ್ರಬಲರು ಕಾಣದ ಮತ್ತು ಯಾರ ಧ್ವನಿಯನ್ನು ಕೇಳಲಾಗುವುದಿಲ್ಲವೋ, ಅವರ ಧ್ವನಿಯನ್ನು ಕೇಳುವ ಹಾಗೆ ಮಾಡಲು ನಾನು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇನೆ" ಎಂದಿದ್ದರು.

ಇರಾನ್ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಜನರು 30 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎಂಬುದು ಗಮನಾರ್ಹ.

ಇನ್ನು ಮುಂದೆ, ಇರಾನ್ ಮತ್ತು ಅಮೆರಿಕ ನಡುವಿನ ಸಂಬಂಧ ಹೇಗಿರಲಿದೆ ಎಂಬುದು ಸದ್ಯಕ್ಕೆ ದೊಡ್ಡ ಸವಾಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News