ಟರ್ಕಿಯಲ್ಲಿ ಪ್ರೊಪೇನ್ ಟ್ಯಾಂಕ್ ಸ್ಫೋಟ | 5 ಮಂದಿ ಮೃತ್ಯು, 63 ಮಂದಿಗೆ ಗಾಯ

Update: 2024-07-01 17:19 GMT

ಸಾಂದರ್ಭಿಕ ಚಿತ್ರ

ಇಸ್ತಾಂಬುಲ್ : ಪಶ್ಚಿಮ ಟರ್ಕಿಯ ಇಝ್ಮಿರ್ ನಗರದ ಹೋಟೆಲ್‍ನಲ್ಲಿ ರವಿವಾರ ಪ್ರೊಪೇನ್ (ಎಲ್‍ಪಿಜಿ ರೀತಿಯ ಅನಿಲ) ಟ್ಯಾಂಕ್ ಸ್ಫೋಟಗೊಂಡು ಕನಿಷ್ಠ 5 ಮಂದಿ ಮೃತಪಟ್ಟಿದ್ದಾರೆ. ಇತರ 63 ಮಂದಿ ಗಾಯಗೊಂಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ಸ್ಫೋಟದ ತೀವ್ರತೆಗೆ ಹೋಟೆಲ್ ಎದುರಿಗಿನ ರಸ್ತೆ ಪಕ್ಕ ನಿಲ್ಲಿಸಿದ್ದ ಹಲವು ವಾಹನಗಳು ಹಾಗೂ ಹೋಟೆಲ್‍ನ ಸುತ್ತಮುತ್ತಲಿನ ಕಟ್ಟಡಗಳು ಹಾನಿಗೊಂಡಿರುವುದು ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಓರ್ವ ಶಂಕಿತ ಆರೋಪಿಯನ್ನು ಬಂಧಿಸಲಾಗಿದ್ದು ಈತ ಶನಿವಾರ ಹಳೆಯ ಪ್ರೊಪೇನ್ ಟ್ಯಾಂಕ್ ಅನ್ನು ಬದಲಾಯಿಸಿ ಹೊಸ ಟ್ಯಾಂಕನ್ನು ಅಳವಡಿಸಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸ್ಫೋಟದ ಮಾಹಿತಿ ತಿಳಿದ ತಕ್ಷಣ ಹತ್ತಕ್ಕೂ ಹೆಚ್ಚು ರಕ್ಷಣಾ ಕಾರ್ಯಕರ್ತರನ್ನು ಸ್ಥಳಕ್ಕೆ ರವಾನಿಸಲಾಗಿದೆ. ಗಾಯಗೊಂಡವರಲ್ಲಿ 40 ಮಂದಿಯನ್ನು ಪ್ರಾಥಮಿಕ ಚಿಕಿತ್ಸೆಯ ಬಳಿಕ ಬಿಡುಗಡೆಗೊಳಿಸಿದ್ದು ಉಳಿದವರಿಗೆ ಚಿಕಿತ್ಸೆ ಮುಂದುವರಿದಿದೆ ಎಂದು ಆಂತರಿಕ ಸಚಿವ ಆಲಿ ಯೆರ್ಲಿಕಾಯ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News