ಈ ವರ್ಷ ದಾಖಲೆಯ ತಾಪಮಾನದ ಸಾಧ್ಯತೆ : ವಿಶ್ವಸಂಸ್ಥೆ ಎಚ್ಚರಿಕೆ
ಜಿನೆವಾ : ಪ್ಯಾರಿಸ್ ಹವಾಮಾನ ಒಪ್ಪಂದದ ಗುರಿಗಳು ಭಾರೀ ಅಪಾಯದಲ್ಲಿವೆ ಮತ್ತು 2024 ಹೊಸ ತಾಪಮಾನದ ದಾಖಲೆಯನ್ನು ಬರೆಯುವ ಸಾಧ್ಯತೆಯಿದೆ ಎಂದು ವಿಶ್ವಸಂಸ್ಥೆ ಸೋಮವಾರ ಎಚ್ಚರಿಕೆ ನೀಡಿದೆ.
ಅಜರ್ಬೈಜಾನ್ ನ ರಾಜಧಾನಿ ಬಾಕು ನಗರದಲ್ಲಿ ಸೋಮವಾರ ಆರಂಭಗೊಂಡ ` ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮಾವೇಶ-24' (ಸಿಒಪಿ29)ದ ಸಂದರ್ಭದಲ್ಲಿ ವಿಶ್ವಸಂಸ್ಥೆಯ ವರದಿ ಬಿಡುಗಡೆಗೊಂಡಿದೆ.
2015-2024ರ ಅವಧಿಯು ಇದುವರೆಗೆ ದಾಖಲಾದ ಅತ್ಯಂತ ತಾಪಮಾನದ ದಶಕವಾಗಿದೆ ಎಂದು ವಿಶ್ವಸಂಸ್ಥೆಯ ವಿಶ್ವ ಹವಾಮಾನ ಸಂಸ್ಥೆ(ಡಬ್ಲ್ಯೂಎಂಒ) ಆರು ಅಂತರಾಷ್ಟ್ರೀಯ ಡೇಟಾಸೆಟ್ಗಳನ್ನು ಆಧರಿಸಿದ ವರದಿಯಲ್ಲಿ ಉಲ್ಲೇಖಿಸಿದೆ. ಹವಾಮಾನ ಬದಲಾವಣೆಯು ಹಿಮನದಿಗಳ ಕುಗ್ಗುವಿಕೆ ಮತ್ತು ಸಮುದ್ರ ಮಟ್ಟದ ಏರಿಕೆಯನ್ನು ವೇಗಗೊಳಿಸುತ್ತದೆ ಮತ್ತು ಪ್ರಪಂಚದಾದ್ಯಂತದ ಸಮುದಾಯ ಮತ್ತು ಆರ್ಥಿಕತೆಗಳ ಮೇಲೆ ವಿನಾಶಕಾರಿ ಪರಿಣಾಮ ಉಂಟುಮಾಡುವ ತಾಪಮಾನ ಹೆಚ್ಚಳಕ್ಕೆ ಕಾರಣವಾಗುತ್ತದೆ. ಪ್ಯಾರಿಸ್ ಒಪ್ಪಂದದ ಮಹತ್ವಾಕಾಂಕ್ಷೆಗಳಿಗೆ ತೀವ್ರ ಅಪಾಯ ಎದುರಾಗಿದೆ ಎಂದು ಡಬ್ಲ್ಯೂಎಂಒ ಹೇಳಿದೆ.
ಪ್ಯಾರಿಸ್ ಒಪ್ಪಂದದಡಿ, ಭೂಮಿಯ ಮೇಲಿನ ಪ್ರತಿಯೊಂದು ರಾಷ್ಟ್ರಗಳೂ ತಾಪಮಾನವನ್ನು ಕೈಗಾರಿಕಾ ಪೂರ್ವದ ಮಟ್ಟಕ್ಕಿಂತ 2 ಡಿಗ್ರಿ ಸೆಲ್ಶಿಯಸ್ ಕಡಿಮೆಗೆ ಮಿತಿಗೊಳಿಸುವ, ಸಾಧ್ಯವಾದರೆ 1.5 ಡಿಗ್ರಿ ಸೆಲ್ಶಿಯಸ್ಗಿಂತ ಕಡಿಮೆ ಮಟ್ಟಕ್ಕೆ ಇಳಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಬದ್ಧವಾಗಿವೆ. ಆದರೆ 2024ರ ವರ್ಷವು 1.5 ಡಿಗ್ರಿ ಸೆಲ್ಶಿಯಸ್ನ ಮಿತಿಯನ್ನು ಮೀರಲಿದೆ ಎಂದು ಯುರೋಪಿಯನ್ ಯೂನಿಯನ್ ನ ಹವಾಮಾನ ನಿಗಾ ಏಜೆನ್ಸಿ ಹೇಳಿದೆ.
2024ರ ವರ್ಷವು 1.5 ಡಿಗ್ರಿ ಸೆಲ್ಶಿಯಸ್ನ ಗಡಿಯನ್ನು ಮೀರಲಿದೆ ಮತ್ತು ಕಳೆದ ವರ್ಷದ ದಾಖಲೆಯನ್ನು ಮುರಿಯಲಿದೆ ಎಂದು ವಿಶಾಲವಾದ ಅಂಕಿ ಅಂಶವನ್ನು ಆಧರಿಸಿದ ಡಬ್ಲ್ಯುಎಂಒ ವರದಿ ಹೇಳಿದೆ. ಹವಾಮಾನ ವಿಕೋಪವು ಅನಾರೋಗ್ಯವನ್ನು ಬಡಿದೆಬ್ಬಿಸುತ್ತದೆ. ಅಸಮಾನತೆಗಳನ್ನು ವಿಸ್ತರಿಸುತ್ತದೆ, ಸುಸ್ಥಿರ ಅಭಿವೃದ್ಧಿಗೆ ಹಾನಿ ಮಾಡುತ್ತದೆ ಮತ್ತು ಶಾಂತಿಯ ಅಡಿಪಾಯವನ್ನು ಅಲ್ಲಾಡಿಸುತ್ತಿದೆ. ದುರ್ಬಲರು ಹೆಚ್ಚು ಹಾನಿಗೊಳಗಾಗುತ್ತಾರೆ ಎಂದು ವಿಶ್ವಸಂಸ್ಥೆ ಮುಖ್ಯಸ್ಥ ಅಂಟೋನಿಯೊ ಗುಟೆರಸ್ ಹೇಳಿದ್ದಾರೆ.
1850-1900 ಬೇಸ್ಲೈನ್ಗೆ ಹೋಲಿಸಿದರೆ ದೀರ್ಘಾವಧಿಯ ಜಾಗತಿಕ ತಾಪಮಾನವು ಪ್ರಸ್ತುತ 1.3 ಡಿಗ್ರಿ ಸೆಲ್ಶಿಯಸ್ ಆಗಿರಬಹುದು ಎಂದು ಡಬ್ಲ್ಯುಎಂಒ ರಚಿಸಿರುವ ಅಂತರಾಷ್ಟ್ರೀಯ ತಜ್ಞರ ತಂಡ ವಿಶ್ಲೇಷಿಸಿದೆ. ` 1.5 ಡಿಗ್ರಿ ಸೆಲ್ಶಿಯಸ್ ತಾಪಮಾನಕ್ಕಿಂತ ಕೆಳಗಿರಲಿ ಅಥವಾ ಮೇಲಿರಲಿ, ತಾಪಮಾನದ ಪ್ರತಿಯೊಂದು ಸಣ್ಣ ವ್ಯತ್ಯಾಸವೂ ಮಹತ್ವದ್ದಾಗಿದೆ. ಜಾಗತಿಕ ತಾಪಮಾನ ಏರಿಕೆಯ ಪ್ರತೀ ಹೆಚ್ಚುವರಿ ಹೆಚ್ಚಳವು ಹವಾಮಾನ ವೈಪರೀತ್ಯ, ಪರಿಣಾಮ ಮತ್ತು ಅಪಾಯವನ್ನು ಹೆಚ್ಚಿಸುತ್ತದೆ. ವಾತಾವರಣದಲ್ಲಿರುವ ಹಸಿರುಮನೆ ಅನಿಲದ ಸಾಂದ್ರತೆಗಳು 2023ರಲ್ಲಿ ದಾಖಲೆ ಮಟ್ಟ ತಲುಪಿದ್ದು ಈ ವರ್ಷ ಮತ್ತಷ್ಟು ಹೆಚ್ಚುವ ನಿರೀಕ್ಷೆಯಿದೆ. ಸಾಗರದ ಶಾಖವೂ ಕಳೆದ ವರ್ಷ ಕಂಡ ದಾಖಲೆಯ ಮಟ್ಟದಲ್ಲೇ ಮುಂದುವರಿಯಬಹುದು ಎಂದು ವರದಿ ಹೇಳಿದೆ.
► ಭವಿಷ್ಯದ ಮುನ್ಸೂಚನೆ:
ಈ ವರ್ಷ ಪ್ರಪಂಚದಾದ್ಯಂತ ವಿನಾಶಕಾರಿ ವಿಪರೀತ ಹವಾಮಾನ ಘಟನೆಗಳ ಸರಣಿಯು ದುರದೃಷ್ಟವಶಾತ್ ನಮ್ಮ ಹೊಸ ವಾಸ್ತವವಾಗಿದೆ. ಅದು ನಮ್ಮ ಭವಿಷ್ಯದ ಮುನ್ಸೂಚನೆಯಾಗಿದೆ ಎಂದು ವಿಶ್ವ ಹವಾಮಾನ ಸಂಸ್ಥೆಯ ಮುಖ್ಯಸ್ಥೆ ಸೆಲೆಸ್ಟೆ ಸೌಲೊ ಹೇಳಿದ್ದಾರೆ.