ಈಜಿಪ್ಟ್‌ನಲ್ಲಿ ನಡೆದ ಶೃಂಗಸಭೆಯಲ್ಲಿ ʼಗಾಝಾ ಪುನರ್ ನಿರ್ಮಾಣ ಯೋಜನೆʼ ಅಂಗೀಕರಿಸಿದ ಅರಬ್ ನಾಯಕರು

Update: 2025-03-05 14:46 IST
ಈಜಿಪ್ಟ್‌ನಲ್ಲಿ ನಡೆದ ಶೃಂಗಸಭೆಯಲ್ಲಿ ʼಗಾಝಾ ಪುನರ್ ನಿರ್ಮಾಣ ಯೋಜನೆʼ ಅಂಗೀಕರಿಸಿದ ಅರಬ್ ನಾಯಕರು

ಸಾಂದರ್ಭಿಕ ಚಿತ್ರ (PTI)

  • whatsapp icon

ಕೈರೋ : ಈಜಿಪ್ಟ್‌ನ ರಾಜಧಾನಿ ಕೈರೋದಲ್ಲಿ ನಡೆದ ತುರ್ತು ಶೃಂಗಸಭೆಯಲ್ಲಿ ಅರಬ್ ನಾಯಕರು ಗಾಝಾ ಪುನರ್‌ ನಿರ್ಮಾಣ ಯೋಜನೆಯನ್ನು ಅಂಗೀಕರಿಸಿದ್ದಾರೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಫೆಲೆಸ್ತೀನಿಯನ್ನರ ಸಾಮೂಹಿಕ ಸ್ಥಳಾಂತರದ ಪ್ರಸ್ತಾಪಕ್ಕೆ ಪ್ರತಿಯಾಗಿ ಯೋಜನೆಯನ್ನು ರೂಪಿಸಲಾಗಿದೆ ಎಂದು ವರದಿಯಾಗಿದೆ.

ಈಜಿಪ್ಟ್ ಪ್ರಸ್ತಾಪಿಸಿದ ʼಗಾಝಾ ಪುನರ್ ನಿರ್ಮಾಣ ಯೋಜನೆʼಯನ್ನು ಅರಬ್ ನಾಯಕರು ಅಂಗೀಕರಿಸಿದ್ದಾರೆ. 53 ಶತಕೋಟಿ ಅಮೆರಿಕನ್ ಡಾಲರ್ ವೆಚ್ಚದ ಯೋಜನೆ ಇದಾಗಿದೆ. ಟ್ರಂಪ್ ಅವರ ʼಮಧ್ಯಪ್ರಾಚ್ಯ ರಿವೇರಿಯಾ" ದೃಷ್ಟಿಕೋನಕ್ಕೆ ಇದು ಪ್ರತಿಯಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಗಾಝಾವನ್ನು ಸ್ವಾಧೀನಪಡಿಸಿಕೊಂಡು, ನಾಗರಿಕರನ್ನು ಸ್ಥಳಾಂತರ ಮಾಡಿ, ಆ ಪ್ರದೇಶವನ್ನು ʼಮಧ್ಯಪ್ರಾಚ್ಯದ ರಿವೇರಿಯಾʼ ಆಗಿ ಪರಿವರ್ತಿಸುವುದಾಗಿ ಹೇಳಿದ್ದರು.

ಕೈರೋದಲ್ಲಿ ನಡೆದ ಶೃಂಗಸಭೆಯ ಅಂತ್ಯದಲ್ಲಿ ಈ ಪ್ರಸ್ತಾಪವನ್ನು ಅಂಗೀಕರಿಸಲಾಗಿದೆ ಎಂದು ಈಜಿಪ್ಟ್ ಅಧ್ಯಕ್ಷ ಅಬ್ದುಲ್ ಫತ್ತಾಹ್ ಅಲ್‌ಸಿಸಿ ಹೇಳಿದರು. ಯೋಜನೆಯನ್ನು ಹಮಾಸ್‌ ಸ್ವಾಗತಿಸಿದ್ದು, ಇಸ್ರೇಲ್ ಟೀಕಿಸಿದೆ.

ಗಾಝಾಕ್ಕಾಗಿ ಈಜಿಪ್ಟ್‌ನ ಪುನರ್ ನಿರ್ಮಾಣ ಯೋಜನೆಯು 112 ಪುಟಗಳ ದಾಖಲೆಯಾಗಿದ್ದು, ಯುದ್ಧದಿಂದ ನಾಶವಾಗಿರುವ ಗಾಝಾಪಟ್ಟಿಯ ಮರು ಅಭಿವೃದ್ಧಿ ಕುರಿತು ಕರಡು ಚಿತ್ರಣವನ್ನು ಹೊಂದಿದೆ. ವಸತಿ ಕಟ್ಟಡಗಳು, ಉದ್ಯಾನವನಗಳು, ಸಮುದಾಯ ಕೇಂದ್ರಗಳ ವರ್ಣರಂಜಿತ AI ರಚಿತ ಚಿತ್ರಗಳನ್ನು ಒಳಗೊಂಡಿದೆ. ಯೋಜನೆಯು ವಾಣಿಜ್ಯ ಬಂದರು, ತಂತ್ರಜ್ಞಾನ ಕೇಂದ್ರ, ಬೀಚ್‌ಗಳು, ಹೊಟೇಲ್‌ಗಳು ಮತ್ತು ವಿಮಾನ ನಿಲ್ದಾಣವನ್ನು ಒಳಗೊಂಡಿದೆ.

ಈಜಿಪ್ಟ್ ಅಧ್ಯಕ್ಷ ಅಬ್ದುಲ್ ಫತ್ತಾಹ್ ಅಲ್‌ಸಿಸಿ ಮಾತನಾಡಿ, ಗಾಝಾ ಪಟ್ಟಿಯನ್ನು ಧ್ವಂಸಗೊಳಿಸಿರುವ ಸಂಘರ್ಷದಲ್ಲಿ ಶಾಂತಿಯನ್ನು ಸ್ಥಾಪಿಸಲು ಟ್ರಂಪ್ ಗೆ ಖಚಿತವಾಗಿಯೂ ಸಾಧ್ಯ, ಆದರೆ ಗಾಝಾದ ಭವಿಷ್ಯದ ಬಗ್ಗೆ ಉತ್ತರಿಸಬೇಕಾದ ಪ್ರಮುಖ ಪ್ರಶ್ನೆಗಳೆಂದರೆ ಗಾಝಾ ಪಟ್ಟಿಯನ್ನು ಯಾರು ಮುನ್ನಡೆಸುತ್ತಾರೆ ಮತ್ತು ಯಾವ ದೇಶಗಳು ಪುನರ್ ನಿರ್ಮಾಣಕ್ಕೆ ಶತಕೋಟಿ ಡಾಲರ್‌ಗಳನ್ನು ಒದಗಿಸುತ್ತವೆ ಎಂಬುವುದಾಗಿದೆ ಎಂದು ಹೇಳಿದರು.

ಸ್ವತಂತ್ರ ಆಡಳಿತ ಸಮಿತಿಯನ್ನು ರಚಿಸುವಲ್ಲಿ ಈಜಿಪ್ಟ್ ಫೆಲೆಸ್ತೀನ್ ಜೊತೆ ಸಹಕಾರದೊಂದಿಗೆ ಕೆಲಸ ಮಾಡಿದೆ. ಸಮಿತಿಯು ಮಾನವೀಯ ನೆರವಿನ ಮೇಲ್ವಿಚಾರಣೆ ಮತ್ತು ತಾತ್ಕಾಲಿಕ ಅವಧಿಗೆ ಗಾಝಾ ಪಟ್ಟಿಯ ವ್ಯವಹಾರಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿರುತ್ತದೆ ಎಂದು ಅಬ್ದುಲ್ ಫತ್ತಾಹ್ ಅಲ್‌ಸಿಸಿ ಹೇಳಿದರು.

ಗಾಝಾವನ್ನು ಮುನ್ನಡೆಸುತ್ತಿದ್ದ ಹಮಾಸ್ ಈಜಿಪ್ಟ್ ಸಮಿತಿಯ ಪ್ರಸ್ತಾವನೆಯನ್ನು ಒಪ್ಪಿಕೊಳ್ಳುವುದಾಗಿ ಹೇಳಿಕೆಯಲ್ಲಿ ತಿಳಿಸಿದೆ. ಕೈರೋ ಪ್ರಸ್ತಾಪಿತ ಸಮಿತಿಯಲ್ಲಿ ತಮ್ಮ ಪ್ರತಿನಿಧಿಗಳು ಇರುವುದಿಲ್ಲ ಎಂದು ಹಮಾಸ್ ಒಪ್ಪಿಕೊಂಡಿದೆ. ಆದರೆ ಅದು ಕಾರ್ಯಗಳಿಗೆ ತನ್ನ ಒಪ್ಪಿಗೆಯನ್ನು ಪಡೆಯಬೇಕು ಎಂದು ಹೇಳಿದೆ. ಸದಸ್ಯರು ಮತ್ತು ಸಮಿತಿಯ ಕಾರ್ಯಸೂಚಿಯು ಫೆಲೆಸ್ತೀನ್ ಪ್ರಾಧಿಕಾರದ ಮೇಲ್ವಿಚಾರಣೆಯಲ್ಲಿ ಕಾರ್ಯನಿರ್ವಹಿಸುತ್ತದೆ. ಸಮಿತಿಯಲ್ಲಿ ಭಾಗವಾಗಲಿರುವ ವ್ಯಕ್ತಿಗಳ ಹೆಸರನ್ನು ನಿರ್ಧರಿಸಲಾಗುವುದು ಎಂದು ಈಜಿಪ್ಟ್ ವಿದೇಶಾಂಗ ಸಚಿವ ಬದ್ರ್ ಅಬ್ದುಲ್ ಅತ್ತಿ ಹೇಳಿದರು.

ಫೆಲೆಸ್ತೀನ್ ಪ್ರಾಧಿಕಾರದ ಮುಖ್ಯಸ್ಥರಾಗಿರುವ ಫೆಲೆಸ್ತೀನ್ ಅಧ್ಯಕ್ಷ ಮಹ್ಮೂದ್ ಅಬ್ಬಾಸ್ ಅವರು ಈಜಿಪ್ಟ್ ಕಲ್ಪನೆಯನ್ನು ಸ್ವಾಗತಿಸುವುದಾಗಿ ಹೇಳಿದರು. ಫೆಲೆಸ್ತೀನ್ ನಿವಾಸಿಗಳನ್ನು ಸ್ಥಳಾಂತರಿಸದಂತಹ ಯೋಜನೆಯನ್ನು ಬೆಂಬಲಿಸುವಂತೆ ಟ್ರಂಪ್ ಅವರನ್ನು ಒತ್ತಾಯಿಸಿದರು. ಸಂದರ್ಭಗಳು ಅನುಮತಿಸಿದರೆ ಅಧ್ಯಕ್ಷೀಯ ಮತ್ತು ಸಂಸತ್ತಿನ ಚುನಾವಣೆಗಳನ್ನು ನಡೆಸಲು ಸಿದ್ಧ ಎಂದು ಹೇಳಿದರು. ಚುನಾವಣೆಯನ್ನು ಸ್ವಾಗತಿಸುವುದಾಗಿ ಹಮಾಸ್ ಕೂಡ ಹೇಳಿದೆ.

ಇಸ್ರೇಲ್ ವಿದೇಶಾಂಗ ಸಚಿವಾಲಯ ಇದಕ್ಕೆ ವಿರೋಧಿಸಿದೆ. ಪುನರ್ ನಿರ್ಮಾಣ ಯೋಜನೆಯು ಹಳೆಯ ದೃಷ್ಟಿಕೋನಗಳಲ್ಲಿ ಬೇರೂರಿದೆ. ಈ ಯೋಜನೆಯಿಂದ ಹಮಾಸ್ ಅಧಿಕಾರದಲ್ಲಿ ಮುಂದುವರಿಯಲಿದೆ ಎಂದು ಹೇಳಿದರು.

ಶೃಂಗಸಭೆಯಲ್ಲಿ ಮಾತನಾಡಿದ ಸೌದಿ ವಿದೇಶಾಂಗ ಸಚಿವ ಫೈಸಲ್ ಬಿನ್ ಫರ್ಹಾನ್, ಪ್ರಸ್ತುತ ತಾತ್ಕಾಲಿಕ ಕದನ ವಿರಾಮವು ಜಾರಿಯಲ್ಲಿರುತ್ತದೆ ಎಂಬುದಕ್ಕೆ ಅಂತಾರಾಷ್ಟ್ರೀಯ ಖಾತರಿಗಳು ಅಗತ್ಯವಿದೆ. ಗಾಝಾ ಪಟ್ಟಿಯನ್ನು ನಿಯಂತ್ರಿಸುವಲ್ಲಿ ಫೆಲೆಸ್ತೀನ್ ಪ್ರಾಧಿಕಾರದ ಪಾತ್ರವನ್ನು ಬೆಂಬಲಿಸುವುದಾಗಿ ಹೇಳಿದರು.

ಈಜಿಪ್ಟ್, ಜೋರ್ಡಾನ್ ಮತ್ತು ಅರಬ್ ರಾಜ್ಯಗಳು ಟ್ರಂಪ್ ಅವರ ಸ್ಥಳಾಂತರ ಮತ್ತು ಗಾಝಾದ ಯುಎಸ್ ಯೋಜನೆಗೆ ಪರ್ಯಾಯವಾಗಿ ʼಪುನರ್ ನಿರ್ಮಾಣ ಯೋಜನೆʼ ರೂಪಿಸಲು ಸುದೀರ್ಘವಾದ ಸಮಾಲೋಚನೆ ನಡೆಸಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News