ಬಾಂಗ್ಲಾ ಕರಾವಳಿಗೆ ಅಪ್ಪಳಿಸಿದ ಚಂಡಮಾರುತ | ಕನಿಷ್ಠ 8 ಮಂದಿ ಸಾವು; 8 ಲಕ್ಷ ಜನರ ಸ್ಥಳಾಂತರ

Update: 2024-05-27 14:58 GMT

PC : ddnews

ಢಾಕ : ಗಂಟೆಗೆ 120 ಕಿ.ಮೀ ವೇಗದ ಬಿರುಗಾಳಿಯೊಂದಿಗೆ ರೆಮಲ್ ಚಂಡಮಾರುತ ರವಿವಾರ ರಾತ್ರಿ ಬಾಂಗ್ಲಾದೇಶದ ಕರಾವಳಿ ಪ್ರದೇಶಕ್ಕೆ ಅಪ್ಪಳಿಸಿದ್ದು ಕನಿಷ್ಠ 8 ಮಂದಿ ಸಾವನ್ನಪ್ಪಿದ್ದಾರೆ. ನೂರಾರು ಹಳ್ಳಿಗಳು ಜಲಾವೃತಗೊಂಡಿದ್ದು 8 ಲಕ್ಷಕ್ಕೂ ಅಧಿಕ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ `ಬಿಎಸ್‍ಎಸ್ ನ್ಯೂಸ್' ವರದಿ ಮಾಡಿದೆ.

ವ್ಯಾಪಕ ನಾಶ-ನಷ್ಟ ಸಂಭವಿಸಿದ್ದು 1.5 ಕೋಟಿ ಜನರಿಗೆ ವಿದ್ಯುತ್ ಪೂರೈಕೆ ಕಡಿತಗೊಂಡಿದೆ. ಸೋಮವಾರ ಬೆಳಿಗ್ಗೆ ಚಂಡಮಾರುತ ದುರ್ಬಲಗೊಂಡಿದ್ದು ಬಿರುಗಾಳಿಯ ವೇಗ ಗಂಟೆಗೆ 90 ಕಿ.ಮೀ.ಗೆ ತಗ್ಗಿದೆ. ಸೋಮವಾರ ಬೆಳಿಗ್ಗೆ 5:30ಕ್ಕೆ ಸಾಗರ್ ದ್ವೀಪದ ಈಶಾನ್ಯಕ್ಕೆ 150 ಕಿ.ಮೀ ದೂರದಲ್ಲಿದ್ದ ಚಂಡಮಾರುತದಿಂದ ಧಾರಾಕಾರ ಮಳೆ ಸುರಿಸಿದೆ. ಕ್ರಮೇಣ ಈಶಾನ್ಯಕ್ಕೆ ಚಲಿಸಿ ಮತ್ತಷ್ಟು ದುರ್ಬಲಗೊಂಡಿದೆ. ಚಂಡಮಾರುತ ಉತ್ತರದ ಕಡೆಗೆ ತನ್ನ ಪಥವನ್ನು ಮುಂದುವರಿಸುವ ನಿರೀಕ್ಷೆಯಿದೆ ಎಂದು ಬಾಂಗ್ಲಾದ ಹವಾಮಾನ ಇಲಾಖೆ ಹೇಳಿದೆ.

ಈ ಬಾರಿಯ ಮುಂಗಾರು ಅವಧಿಗೂ ಮುನ್ನ ಬಾಂಗ್ಲಾಕ್ಕೆ ಅಪ್ಪಳಿಸಿದ ಪ್ರಥಮ ಚಂಡಮಾರುತ ಇದಾಗಿದೆ. ಚಂಡಮಾರುತದ ಜತೆ ತೀವ್ರ ಬಿರುಗಾಳಿ ಮತ್ತು ಧಾರಾಕಾರ ಮಳೆಯಿಂದಾಗಿ ಬರಿಸಾಲ್, ಪತುಖಾಲಿ, ಸತ್ಖಿರ ಮತ್ತು ಛಟ್ಟೋಗ್ರಾಮ್ ಪ್ರದೇಶಗಳು ಜಲಾವೃತಗೊಂಡಿವೆ. ಪತುಖಾಲಿ ನಗರದಲ್ಲಿ ಓರ್ವ ವ್ಯಕ್ತಿ ನೆರೆನೀರಿನಲ್ಲಿ ಕೊಚ್ಚಿಹೋಗಿದ್ದಾರೆ. ಇದುವರೆಗೆ 8 ಮಂದಿ ಸಾವನ್ನಪ್ಪಿರುವುದು ದೃಢಪಟ್ಟಿದೆ ಎಂದು ಢಾಕಾದ `ಸೊಮೊಯ್ ಟಿವಿ' ವರದಿ ಮಾಡಿದೆ. ಮೋಂಗ್ಲಾದಲ್ಲಿ ದೋಣಿಯೊಂದು ಮುಳುಗಿ ಮಗು ಸಹಿತ ಇಬ್ಬರು ನಾಪತ್ತೆಯಾಗಿದ್ದಾರೆ. ಗಾಳಿಯಿಂದ ಬೃಹತ್ ಮರಗಳು ವಿದ್ಯುತ್ ಕಂಬದ ಮೇಲೆ ಉರುಳಿಬಿದ್ದು ವಿದ್ಯುತ್ ಪೂರೈಕೆ ಅಸ್ತವ್ಯಸ್ತಗೊಂಡಿದೆ.

ನಿಖರ ಮುನ್ಸೂಚನೆ ಮತ್ತು ಮುನ್ನೆಚ್ಚರಿಕೆಯ ಹೊರತಾಗಿಯೂ ದುರ್ಬಲ ಒಡ್ಡು(ನದಿಗಳ ದಂಡೆ)ಗಳು ಚಂಡಮಾರುತದ ಹೊಡೆತವನ್ನು ಎದುರಿಸಲು ವಿಫಲವಾಗಿ ಹಲವು ಮನೆಗಳು ಜಲಾವೃತಗೊಂಡಿದೆ. ಸಮುದ್ರದಲ್ಲಿ 6 ಅಡಿಗಳಷ್ಟು ಎತ್ತರದ ಅಲೆಗಳು ಕಾಣಿಸಿಕೊಂಡಿವೆ. ಮುನ್ನೆಚ್ಚರಿಕೆ ಕ್ರಮವಾಗಿ ರವಿವಾರ ದೇಶದ ಮೂರು ಪ್ರಮುಖ ಬಂದರುಗಳು ಹಾಗೂ ಛತ್ತೋಗ್ರಾಮ್ ವಿಮಾನ ನಿಲ್ದಾಣವನ್ನು ಮುಚ್ಚಲಾಗಿತ್ತು. ಬಂಗಾಳ ಕೊಲ್ಲಿಯ ಉತ್ತರದಲ್ಲಿ ಕಾರ್ಯಾಚರಿಸುತ್ತಿರುವ ಮೀನುಗಾರಿಕೆ ಟ್ರಾಲರ್ ಮತ್ತು ದೋಣಿಗಳಿಗೆ ಮುಂದಿನ ಸೂಚನೆಯವರೆಗೆ ಸಮೀಪದ ಬಂದರಿನಲ್ಲಿ ತಂಗಲು ಸಲಹೆ ನೀಡಲಾಗಿದೆ. ಕರಾವಳಿ ಪ್ರಾಂತದ ಬಹುತೇಕ ಶಾಲೆಗಳನ್ನು ತಾತ್ಕಾಲಿಕ ಶಿಬಿರಗಳಾಗಿ ಗುರುತಿಸಿ ಜನರು ಮತ್ತು ಜಾನುವಾರುಗಳಿಗೆ ಆಶ್ರಯ ಕಲ್ಪಿಸಲಾಗಿದೆ. ಸುಮಾರು 36,000 ರೊಹಿಂಗ್ಯಾಗಳು ಆಶ್ರಯ ಪಡೆದಿರುವ ತಗ್ಗುಪ್ರದೇಶದ ಭಾಶನ್‍ಚಾರ್ ದ್ವೀಪದಲ್ಲಿ 57 ತಾತ್ಕಾಲಿಕ ಶಿಬಿರಗಳನ್ನು ಸ್ಥಾಪಿಸಲಾಗಿದೆ. ತಗ್ಗು ಪ್ರದೇಶಗಳಿಂದ ಸುಮಾರು 8 ಲಕ್ಷ ಜನರನ್ನು ಸ್ಥಳಾಂತರಿಸಿರುವುದಾಗಿ ವಿಪತ್ತು ನಿರ್ವಹಣಾ ಇಲಾಖೆ ಮಾಹಿತಿ ನೀಡಿದೆ.

1 ಲಕ್ಷಕ್ಕೂ ಅಧಿಕ ಮನೆಗಳು ನಾಶ

ಚಂಡಮಾರುತ ಕರಾವಳಿ ತೀರದ ಖುಲ್ನಾ ಜಿಲ್ಲೆಯಲ್ಲಿ 4,52,000 ಜನರ ಮೇಲೆ ಪರಿಣಾಮ ಬೀರಿದ್ದು 76,900ಕ್ಕೂ ಅಧಿಕ ಮನೆಗಳು ನಾಶಗೊಂಡಿವೆ. 12,700 ಹೆಕ್ಟೇರ್ ಕೃಷಿ ಭೂಮಿಯ ಬೆಳೆ ನಾಶವಾಗಿದ್ದು 5,575 ಸಿಗಡಿ ಕೇಂದ್ರಗಳು ನಾಶಗೊಂಡಿವೆ. ಬಗೆರ್‍ಹಾಟ್ ಜಿಲ್ಲೆಯಲ್ಲಿ 45,000 ಮನೆಗಳು ನಾಶಗೊಂಡಿವೆ. ಜಲಾವೃತಗೊಂಡಿರುವ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ದಕ್ಷಿಣ ಮತ್ತು ನೈಋತ್ಯ ಬಾಂಗ್ಲಾದ ಕರಾವಳಿ ಪ್ರದೇಶದ ಸುಮಾರು 3.2 ದಶಲಕ್ಷ ಮಕ್ಕಳ ಸಹಿತ 8.4 ದಶಲಕ್ಷ ಜನತೆ ವಿನಾಶಕಾರಿ ಪರಿಣಾಮದ ಅಪಾಯದಲ್ಲಿದ್ದಾರೆ ಎಂದು ಯುನಿಸೆಫ್(ವಿಶ್ವಸಂಸ್ಥೆ ಮಕ್ಕಳ ನಿಧಿ) ಹೇಳಿದೆ.

ವಾರ್ತಾ ಭಾರತಿ ವಾಟ್ಸ್ ಆ್ಯಪ್ ಚಾನೆಲ್ ಗೆ ಸೇರಲು https://whatsapp.com/channel/0029VaA8ju86LwHn9OQpEq28 ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್ಡೇಟ್ ಪಡೆಯಿರಿ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News