ಪೋಲ್ಯಾಂಡ್ ಪ್ರಧಾನಿಯಾಗಿ ಡೊನಾಲ್ಡ್ ಟಸ್ಕ್ ಪದಗ್ರಹಣ
ವಾರ್ಸಾ: ಪೋಲ್ಯಾಂಡ್‍ನಲ್ಲಿ 8 ವರ್ಷಗಳ ಬಲಪಂಥೀಯ `ಲಾ ಆ್ಯಂಡ್ ಜಸ್ಟಿಸ್ ಪಾರ್ಟಿ(ಪಿಐಎಸ್)'ಯ ಆಡಳಿತ ಅಂತ್ಯಗೊಂಡಿದ್ದು ಯುರೋಪಿಯನ್ ಯೂನಿಯನ್ ಪರ ಒಲವು ಹೊಂದಿರುವ ಡೊನಾಲ್ಡ್ ಟಸ್ಕ್ ನೂತನ ಪ್ರಧಾನಿಯಾಗಿ ಬುಧವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಅಕ್ಟೋಬರ್ ನಲ್ಲಿ ನಡೆದಿದ್ದ ಸಾರ್ವತ್ರಿಕ ಚುನಾವಣೆಯಲ್ಲಿ ಪಿಐಎಸ್ ಪಕ್ಷ ಅತೀ ಹೆಚ್ಚು ಸ್ಥಾನ ಗಳಿಸಿದ್ದರೂ ಬಹುಮತ ಪಡೆದಿರಲಿಲ್ಲ. ಅಲ್ಲದೆ ಇತರ ಪಕ್ಷಗಳ ಬೆಂಬಲ ಪಡೆದು ಸರಕಾರ ರಚಿಸುವ ಪ್ರಯತ್ನವೂ ವಿಫಲವಾದ ಬಳಿಕ ಎರಡನೇ ಅತೀ ದೊಡ್ಡ ಪಕ್ಷವಾಗಿದ್ದ ಟಸ್ಕ್ ನೇತೃತ್ವದ ಪಕ್ಷ ಇತರ ಪಕ್ಷಗಳ ಬೆಂಬಲ ಪಡೆಯುವಲ್ಲಿ ಸಫಲವಾಗುವುದರೊಂದಿಗೆ ಸರಕಾರ ರಚನೆಗೆ ಹಕ್ಕು ಮಂಡಿಸಿತ್ತು. ಪಿಐಎಸ್ ಪಕ್ಷ ಸರಕಾರ ರಚನೆಯಲ್ಲಿ ವಿಫಲವಾದರೂ ಅಧ್ಯಕ್ಷ, ಸೆಂಟ್ರಲ್ ಬ್ಯಾಂಕ್ ಅಧ್ಯಕ್ಷ, ಸುಪ್ರೀಂಕೋರ್ಟ್ ಸೇರಿದಂತೆ ಪ್ರಮುಖ ಹುದ್ದೆಗಳು ಈಗಲೂ ಪಿಐಎಸ್ ನಿಯಂತ್ರಣದಲ್ಲಿದೆ. ಪೋಲ್ಯಾಂಡ್ ಮತ್ತೆ ಯುರೋಪಿಯನ್ ಯೂನಿಯನ್ ಸದಸ್ಯತ್ವ ಪಡೆಯುವುದು ತನ್ನ ಸರಕಾರದ ಪ್ರಥಮ ಆದ್ಯತೆಯಾಗಿದೆ ಎಂದು ಡೊನಾಲ್ಡ್ ಟಸ್ಕ್ ಘೋಷಿಸಿದ್ದಾರೆ.