ಇರಾನ್ ವಿರುದ್ಧ ಹೊಸ ನಿರ್ಬಂಧ: ಯುರೋಪಿಯನ್ ಯೂನಿಯನ್ ಮುಖಂಡರ ಸಮ್ಮತಿ
ಬ್ರಸೆಲ್ಸ್: ಇಸ್ರೇಲ್ ಮೇಲೆ ಇರಾನ್ ನಡೆಸಿರುವ ಡ್ರೋನ್ ಮತ್ತು ಕ್ಷಿಪಣಿ ದಾಳಿಯ ಬಳಿಕ ಮಧ್ಯಪ್ರಾಚ್ಯದ ಸಂಘರ್ಷ ಉಲ್ಬಣಿಸುವನ್ನು ತಡೆಯುವ ಪ್ರಯತ್ನ ನಡೆಯುತ್ತಿರುವಂತೆಯೇ ಇರಾನ್ ವಿರುದ್ಧ ಹೊಸ ನಿರ್ಬಂಧ ಕ್ರಮಗಳನ್ನು ಜಾರಿಗೊಳಿಸಲು ಯುರೋಪಿಯನ್ ಯೂನಿಯನ್(ಇಯು) ಮುಖಂಡರು ಸಮ್ಮತಿಸಿದ್ದಾರೆ.
ಬುಧವಾರ ಬ್ರಸೆಲ್ಸ್‍ನಲ್ಲಿ ಸಭೆ ಸೇರಿದ ಯುರೋಪಿಯನ್ ಯೂನಿಯನ್‍ನ 27 ಸದಸ್ಯ ದೇಶಗಳ ಪ್ರತಿನಿಧಿಗಳು ಇರಾನ್ ದಾಳಿಯನ್ನು ಖಂಡಿಸಿದರು ಮತ್ತು ಇಸ್ರೇಲ್‍ನ ಭದ್ರತೆಗೆ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು. ಜತೆಗೆ, ಉದ್ವಿಗ್ನತೆ ಹೆಚ್ಚುವುದನ್ನು ತಡೆಯಲು ಲೆಬನಾನ್ ಸೇರಿದಂತೆ ಸಂಬಂಧಿಸಿದ ಎಲ್ಲರೂ ನೆರವಾಗುವಂತೆ ಕರೆ ನೀಡಿದರು.
ಇಸ್ರೇಲ್ ವಿರುದ್ಧದ ಡ್ರೋನ್ ಮತ್ತು ಕ್ಷಿಪಣಿ ದಾಳಿ ಹಿನ್ನೆಲೆಯಲ್ಲಿ ಇರಾನ್ ವಿರುದ್ಧ ಮತ್ತಷ್ಟು ನಿರ್ಬಂಧ ಕ್ರಮಗಳನ್ನು ಯುರೋಪಿಯನ್ ಯೂನಿಯನ್ ಕೈಗೊಳ್ಳಲಿದೆ ಎಂದು ಸಭೆಯ ಬಳಿಕ ಹೊರಡಿಸಿದ ಜಂಟಿ ಹೇಳಿಕೆ ತಿಳಿಸಿದೆ. ಇರಾನಿಯನ್ ರೆವೊಲ್ಯುಷನರಿ ಗಾಡ್ರ್ಸ್(ಐಆರ್‍ಜಿಸಿ)ಯನ್ನು ನಿರ್ಬಂಧದ ಪಟ್ಟಿಯಲ್ಲಿ ಸೇರಿಸುವಂತೆ ಬೆಲ್ಜಿಯಂ ಪ್ರಧಾನಿ ಅಲೆಕ್ಸಾಂಡರ್ ಡೆಕ್ರೂ ಆಗ್ರಹಿಸಿದ್ದಾರೆ. ಇಂತಹ ಕ್ರಮಗಳಿಂದ ಮಹತ್ವದ ಸಂದೇಶ ಪ್ರಸಾರವಾಗುತ್ತದೆ ಎಂದವರು ಹೇಳಿದ್ದಾರೆ. ಬ್ರೆಝಿಲ್ ಯುರೋಪಿಯನ್ ಯೂನಿಯನ್‍ನ ಪರ್ಯಾಯ ಅಧ್ಯಕ್ಷ ದೇಶವಾಗಿದೆ. ಆದರೆ ಹೀಗೆ ಮಾಡಲು ಕೆಲವು ಕಾನೂನಿನ ಸವಾಲುಗಳಿವೆ. ಐಆರ್‍ಜಿಸಿ ಭಯೋತ್ಪಾದಕ ಕೃತ್ಯದಲ್ಲಿ ತೊಡಗಿರುವ ಬಗ್ಗೆ ಸ್ಪಷ್ಟವಾದ ಪುರಾವೆಯ ಅಗತ್ಯವಿದೆ. ಆದರೆ ಸದ್ಯಕ್ಕೆ ಇಂತಹ ಪುರಾವೆ ದೊರಕಿಲ್ಲ ಎಂದು ಇಯು ಮೂಲಗಳನ್ನು ಉಲ್ಲೇಖಿಸಿ `ಅಸೋಸಿಯೇಟೆಡ್ ಪ್ರೆಸ್' ವರದಿ ಮಾಡಿದೆ.