ಇಸ್ರೇಲಿ ಪಡೆಯಿಂದ ಗುಂಡಿನ ದಾಳಿ: ಮೂವರು ಫೆಲೆಸ್ತೀನೀಯರ ಹತ್ಯೆ
ಜೆರುಸಲೇಂ: ಪಶ್ಚಿಮದಂಡೆಯಲ್ಲಿ ಶುಕ್ರವಾರ ಇಸ್ರೇಲಿ ಪಡೆಯ ಗುಂಡಿನ ದಾಳಿಯಲ್ಲಿ ಮೂವರು ಫೆಲೆಸ್ತೀನೀಯರು ಮೃತಪಟ್ಟಿರುವುದಾಗಿ ವರದಿಯಾಗಿದೆ.
ಪಶ್ಚಿಮದಂಡೆಯಲ್ಲಿ ನಡೆಸುತ್ತಿದ್ದ ಕಾರ್ಯಾಚರಣೆ ಅಂತ್ಯಗೊಂಡಿದೆ ಎಂದು ಇಸ್ರೇಲ್ ಪ್ರಧಾನಿ ಘೋಷಿಸಿದ ಮರುದಿನವವೇ ಇಸ್ರೇಲ್ ಸೇನೆ ಗುಂಡಿನ ದಾಳಿ ನಡೆಸಿದೆ.
ವೆಸ್ಟ್ಬ್ಯಾಂಕ್ನ ವಾಣಿಜ್ಯ ರಾಜಧಾನಿ ನಬ್ಲೂಸ್ ನಗರದಲ್ಲಿ ಇಸ್ರೇಲಿ ಸೇನೆಯ ಜತೆಗಿನ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ. ಇವರಿಬ್ಬರು ಈ ವಾರ ಇಸ್ರೇಲ್ನ ಪೊಲೀಸ್ ವಾಹನದ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಪಾತ್ರ ವಹಿಸಿದ್ದರು ಎಂದು ಇಸ್ರೇಲ್ನ ಅಧಿಕಾರಿಗಳು ಹೇಳಿದ್ದಾರೆ.
ಬಳಿಕ ಉಮ್ಮ್ ಸಫಾ ನಗರದಲ್ಲಿ ನಡೆದ ಪ್ರತಿಭಟನೆಯ ಸಂದರ್ಭ ಫೆಲೆಸ್ತೀನ್ ನಾಗರಿಕನನ್ನು ಎದೆಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಫೆಲೆಸ್ತೀನಿಯನ್ ಆರೋಗ್ಯ ಇಲಾಖೆ ಹೇಳಿದೆ. ಶುಕ್ರವಾರದ ಕಾರ್ಯಾಚರಣೆಯನ್ನು ಶ್ಲಾಘಿಸಿರುವ ಇಸ್ರೇಲ್ ರಕ್ಷಣಾ ಸಚಿವ ಯೊವಾವ್ ಗ್ಯಲಂಟ್, ಉಗ್ರರನ್ನು ಬೇರುಸಮೇತ ಕಿತ್ತೊಗೆಯುವ ಕಾರ್ಯವನ್ನು ಇಸ್ರೇಲ್ ಮುಂದುವರಿಸಲಿದೆ ಎಂದಿದ್ದಾರೆ.