ಕೆನ್ಯಾದಲ್ಲಿ ಪ್ರವಾಹ: ಕನಿಷ್ಟ 13 ಮಂದಿ ಮೃತ್ಯು
ನೈರೋಬಿ: ಕೆನ್ಯಾದ ವಿವಿಧ ಪ್ರದೇಶಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಪ್ರವಾಹದ ಸಮಸ್ಯೆ ಎದುರಾಗಿದ್ದು ಕನಿಷ್ಟ 13 ಮಂದಿ ಸಾವನ್ನಪ್ಪಿದ್ದಾರೆ. ಇದುವರೆಗೆ ಸುಮಾರು 15,000 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ವಿಶ್ವಸಂಸ್ಥೆ ಮಾಹಿತಿ ನೀಡಿದೆ.
ಜೂನ್‍ವರೆಗೆ ಮತ್ತಷ್ಟು ಬಿರುಸಿನ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಮಾರ್ಚ್ ಮಧ್ಯಭಾಗದಿಂದ ನಿರಂತರ ಸುರಿಯುತ್ತಿರುವ ಮಳೆ ಮತ್ತು ಪ್ರವಾಹದಿಂದ ಸುಮಾರು 20,000 ಜನರು ಸಂಕಷ್ಟಕ್ಕೆ ಸಿಲುಕಿದ್ದು ಇದುವರೆಗೆ ಸುಮಾರು 15,000 ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ ಎಂದು ಕೆನ್ಯಾ ರೆಡ್‍ಕ್ರಾಸ್ ಸೊಸೈಟಿಯನ್ನು ಉಲ್ಲೇಖಿಸಿ ಯುಎನ್‍ಒಸಿಎಚ್‍ಆರ್ (ಯುನೈಟೆಡ್ ನೇಷನ್ಸ್ ಆಫೀಸ್ ಫಾರ್ ದಿ ಕೋರ್ಟಿನೇಷನ್ ಆಫ್ ಹ್ಯುಮಾನಿಟೇರಿಯನ್ ಅಫೇರ್ಸ್) ಹೇಳಿದೆ.
ದೇಶದ ಪ್ರಮುಖ ರಸ್ತೆಗಳು ಜಲಾವೃತಗೊಂಡಿದ್ದು ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ. ಉತ್ತರ ಕೆನ್ಯಾದ ಗ್ಯರಿಸಾ ರಸ್ತೆಯಲ್ಲಿ ಚಲಿಸುತ್ತಿದ್ದ ಬಸ್ಸೊಂದು ಪ್ರವಾಹದಲ್ಲಿ ಕೊಚ್ಚಿಹೋಗಿದ್ದು ಬಸ್ಸಿನಲ್ಲಿದ್ದ 51 ಪ್ರಯಾಣಿಕರನ್ನು ರಕ್ಷಿಸಲಾಗಿದೆ. ತನಾ ನದಿಯ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಲಮು, ಗ್ಯರಿಸಾ ಪ್ರದೇಶಗಳ ನಿವಾಸಿಗಳಿಗೆ ಪ್ರವಾಹದ ಮುನ್ನೆಚ್ಚರಿಕೆ ನೀಡಲಾಗಿದೆ ಎಂದು ಕೆನ್ಯಾದ ವಿಪತ್ತು ನಿರ್ವಹಣಾ ಏಜೆನ್ಸಿ ಹೇಳಿದೆ. ದೇಶದ 47 ಪ್ರಾಂತಗಳ ಪೈಕಿ 9 ಪ್ರಾಂತಗಳಲ್ಲಿ ಪ್ರವಾಹದ ಸ್ಥಿತಿಯಿದೆ. ಮಧ್ಯ ಪ್ರಾಂತಗಳಲ್ಲಿ ಹಲವೆಡೆ ಭೂಕುಸಿತದ ವರದಿಯಾಗಿದೆ. ನರೋಕ್ ಪ್ರಾಂತದಲ್ಲಿ ಭೂಕುಸಿತದಿಂದ 4 ಮಂದಿ ಮೃತಪಟ್ಟಿದ್ದಾರೆ. ಸ್ಥಳಾಂತರಗೊಂಡವರಿಗೆ ತಾತ್ಕಾಲಿಕ ಶಿಬಿರಗಳಲ್ಲಿ ವಾಸ್ತವ್ಯ ಕಲ್ಪಿಸಿದ್ದು ಶುದ್ಧ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ಕೆನ್ಯಾ ರೆಡ್‍ಕ್ರಾಸ್ ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಆಹ್ಮದ್ ಇದ್ರಿಸ್ ಹೇಳಿದ್ದಾರೆ.