ನೇಪಾಳದ ಮೌಂಟ್ ಎವರೆಸ್ಟ್ ಬಳಿ ನಾಪತ್ತೆಯಾಗಿದ್ದ 6 ಪ್ರಯಾಣಿಕರಿದ್ದ ಹೆಲಿಕಾಪ್ಟರ್ ಪತನ: ವರದಿ
ಕಠ್ಮಂಡು: ನೇಪಾಳದ ಮೌಂಟ್ ಎವರೆಸ್ಟ್ ಬಳಿ ಇಂದು ಬೆಳಗ್ಗೆ ನಾಪತ್ತೆಯಾಗಿದ್ದ ಆರು ಜನರಿದ್ದ ಖಾಸಗಿ ಹೆಲಿಕಾಪ್ಟರ್ ಪತನಗೊಂಡಿದ್ದು ಹೆಲಿಕಾಪ್ಟರ್ ನ ಅವಶೇಷಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಕ್ಷಣಾ ತಂಡವು ಅಪಘಾತದ ಸ್ಥಳದಿಂದ ಐದು ಮೃತದೇಹಗಳನ್ನು ಹೊರತೆಗೆದಿದೆ.
ಖಾಸಗಿ ಹೆಲಿಕಾಪ್ಟರ್ ಟೇಕಾಫ್ ಆದ ಕೆಲವೇ ಹೊತ್ತಿನಲ್ಲಿ ಪರ್ವತ ಪ್ರದೇಶವಾದ ಸೊಲುಖುಂಬು ಜಿಲ್ಲೆಯ ಲಂಜುರಾದಲ್ಲಿ ಪತನಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೆಲಿಕಾಪ್ಟರ್ ಬೆಟ್ಟದ ಮೇಲಿರುವ ಮರಕ್ಕೆ ಡಿಕ್ಕಿ ಹೊಡೆದಿದ್ದು, ಇದು ಪತನಕ್ಕೆ ಕಾರಣವಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಲಾಮ್ಜುರಾ ಪ್ರದೇಶದ ಚಿಹಂದಂಡದಲ್ಲಿ ಹೆಲಿಕಾಪ್ಟರ್ ಪತನಗೊಳ್ಳುವ ಕೆಲವೇ ಸೆಕೆಂಡುಗಳ ಮೊದಲು ದೊಡ್ಡ ಸ್ಫೋಟದ ಶಬ್ದ ಕೇಳಿದೆ ಎಂದು ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ.
ಮನಂಗ್ ಏರ್ ಫ್ಲೀಟ್ ನ ಒಂದು ಭಾಗವಾದ ಹೆಲಿಕಾಪ್ಟರ್ ಸೊಲುಖುಂಬು ಜಿಲ್ಲೆಯ ಸುರ್ಕಿಯಿಂದ ಬೆಳಿಗ್ಗೆ 9.45 ಕ್ಕೆ ರಾಜಧಾನಿ ಕಠ್ಮಂಡುವಿಗೆ ಹೊರಟಿತು ಹಾಗೂ 15 ನಿಮಿಷಗಳಲ್ಲಿ ತನ್ನ ಸಂಪರ್ಕವನ್ನು ಕಳೆದುಕೊಂಡಿತು ಎಂದು ದಿ ಕಠ್ಮಂಡು ಪೋಸ್ಟ್ ನಲ್ಲಿ ವರದಿ ಮಾಡಿದೆ.
ಸೊಲುಖುಂಬು ಜಿಲ್ಲೆಯ ಲಿಖುಪಿಕೆ ಗ್ರಾಮೀಣ ಪುರಸಭೆಯ ಲಾಮ್ಜುರಾದಲ್ಲಿ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ ಎಂದು ವರದಿ ತಿಳಿಸಿದೆ.
ಹೆಲಿಕಾಪ್ಟರ್ ನಲ್ಲಿ ಐವರು ವಿದೇಶಿ ಪ್ರಜೆಗಳಿದ್ದರು ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಹೆಲಿಕಾಪ್ಟರ್ ನಲ್ಲಿ ಒಟ್ಟು ಆರು ಮಂದಿ ಇದ್ದರು. ಹಿರಿಯ ಕ್ಯಾಪ್ಟನ್ ಚೆಟ್ ಗುರುಂಗ್ ಅವರು ಪೈಲಟ್ ಆಗಿದ್ದಾರೆ ಎಂದು Himalayan Times ಪತ್ರಿಕೆಯು ಮೂಲವನ್ನು ಉಲ್ಲೇಖಿಸಿ ವರದಿ ಮಾಡಿದೆ.