ಭಾರತವು ಪ್ರಜಾಪ್ರಭುತ್ವದ ವಿಶ್ವಶಕ್ತಿಯನ್ನು ತೋರಿಸಿದೆ : ಪೋಲ್ಯಾಂಡ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ

Update: 2024-08-22 15:49 GMT

PC ; PTI

ವಾರ್ಸಾ : ಸಂಘರ್ಷವನ್ನು ಪರಿಹರಿಸಲು ಸಂವಾದ ಮತ್ತು ರಾಜತಾಂತ್ರಿಕತೆಯ ಪ್ರಾಮುಖ್ಯತೆಯನ್ನು ಪುನರುಚ್ಚರಿಸಿದ ಪ್ರಧಾನಿ ನರೇಂದ್ರ ಮೋದಿ ಭಾರತವು ಶಾಶ್ವತ ಶಾಂತಿಯ ಪ್ರತಿಪಾದಕವಾಗಿದೆ ಎಂದಿದ್ದಾರೆ.

ಎರಡು ರಾಷ್ಟ್ರಗಳ ಪ್ರವಾಸದ ಮೊದಲ ಹಂತದಲ್ಲಿ ಬುಧವಾರ ಪೋಲ್ಯಾಂಡ್ಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಗುರುವಾರ ಪೋಲ್ಯಾಂಡಿನಲ್ಲಿರುವ ಭಾರತೀಯ ಸಮುದಾಯದ ಜತೆ ಸಂವಾದ ನಡೆಸಿದರು. ಭಾರತದ ರಾಜತಾಂತ್ರಿಕತೆ ಮತ್ತು ಅಂತರಾಷ್ಟ್ರೀಯ ಸಂಬಂಧಗಳ ನೀತಿಯನ್ನು ಎತ್ತಿಹಿಡಿದ ಪ್ರಧಾನಿ ಮೋದಿ `ಇಂದಿನ ಭಾರತವು ಎಲ್ಲರೊಂದಿಗಿದೆ ಮತ್ತು ಎಲ್ಲರ ಹಿತಾಸಕ್ತಿಗಳ ಬಗ್ಗೆ ಯೋಚಿಸುತ್ತಿದೆ. ಭಾರತವು ಭಗವಾನ್ ಬುದ್ಧನ ಪರಂಪರೆಯ ನಾಡು. ಆದ್ದರಿಂದ ಭಾರತವು ಯುದ್ಧದ ಮೇಲೆ ವಿಶ್ವಾಸ ಹೊಂದಿಲ್ಲ. ಆದ್ದರಿಂದ ಈ ಪ್ರದೇಶದಲ್ಲಿ ಶಾಂತಿಗಾಗಿ ಪ್ರತಿಪಾದಿಸುತ್ತಿದೆ ಎಂದರು. ಆಂತರಿಕ ಸಂಘರ್ಷವನ್ನು ಪರಿಹರಿಸುವ ಭಾರತದ ಪರಿಕಲ್ಪನೆಯನ್ನು ಒತ್ತಿಹೇಳಿದ ಮೋದಿ `ಭಾರತದ ಪರಿಕಲ್ಪನೆ ಸ್ಪಷ್ಟವಾಗಿದೆ. ಇದು ಯುದ್ಧದ ಯುಗವಲ್ಲ ಮತ್ತು ಮಾನವೀಯತೆಯ ದೊಡ್ಡ ಸವಾಲುಗಳನ್ನು ಎದುರಿಸಲು ಒಂದಾಗುವ ಸಮಯ. ಹೀಗಾಗಿ ಭಾರತವು ಸಂಘರ್ಷವನ್ನು ಪರಿಹರಿಸಲು ಮಾತುಕತೆ ಮತ್ತು ರಾಜತಾಂತ್ರಿಕತೆಯನ್ನು ನಂಬುತ್ತದೆ ಎಂದರು.

ವಿದೇಶದಲ್ಲಿ ನೆಲೆಸಿರುವ ಭಾರತೀಯರ ಸಾಧನೆಯನ್ನು ಶ್ಲಾಘಿಸಿದ ಮೋದಿ ` ವಿಶ್ವದ ಯಾವುದೇ ಪ್ರದೇಶಕ್ಕೆ ಹೋದರೂ ಭಾರತೀಯರು ಗರಿಷ್ಟ ಪ್ರಯತ್ನಗಳನ್ನು ಮಾಡುವುದನ್ನು ಕಾಣಬಹುದು. ಅವರು ತಮ್ಮ ಪ್ರಯತ್ನಗಳ ಮೂಲಕ ದೇಶಕ್ಕೆ ವಿಶೇಷ ಮನ್ನಣೆಗಳನ್ನು ತರುತ್ತಿದ್ದಾರೆ' ಎಂದರು. ಇದು ಸುಮಾರು 40 ವರ್ಷಗಳ ನಂತರ ಪೋಲ್ಯಾಂಡ್ಗೆ ಭಾರತೀಯ ಪ್ರಧಾನಿಯ ಪ್ರಥಮ ಭೇಟಿಯಾಗಿದೆ.

ಬಳಿಕ ಪೋಲ್ಯಾಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್ ಜತೆ ದ್ವಿಪಕ್ಷೀಯ ಸಂಬಂಧವನ್ನು ಬಲಪಡಿಸುವ ಮಾರ್ಗಗಳ ಕುರಿತು ಚರ್ಚೆ ನಡೆಸಿದರು. ಬಳಿಕ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೋಲ್ಯಾಂಡ್ ಪ್ರಧಾನಿ ಟಸ್ಕ್ ` ಇತಿಹಾಸವು ನಮ್ಮ ರಾಷ್ಟ್ರಗಳಿಗೆ ಕಾನೂನನ್ನು ಗೌರವಿಸುವ, ಗಡಿಗಳನ್ನು ಗೌರವಿಸುವ, ಪ್ರಾದೇಶಿಕ ಸಮಗ್ರತೆಯ ಮಹತ್ವವನ್ನು ಕಲಿಸಿದೆ. ಯುದ್ಧವನ್ನು ಶಾಂತಿಯುತ, ನ್ಯಾಯಯುತ, ತ್ವರಿತ ರೀತಿಯಲ್ಲಿ ಅಂತ್ಯಗೊಳಿಸಲು ವೈಯಕ್ತಿಕವಾಗಿ ಪ್ರಯತ್ನಿಸುವಲ್ಲಿ ತನ್ನ ಬದ್ಧತೆಯನ್ನು ಮೋದಿ ಪುನರುಚ್ಚರಿಸಿದ್ದಾರೆ ' ಎಂದರು. ಪೋಲ್ಯಾಂಡ್ ಅಧ್ಯಕ್ಷ ಆಂಡ್ರೆಜ್ ಡುಡಾ ಅವರ ಜತೆಗೂ ಮೋದಿ ಮಾತುಕತೆ ನಡೆಸಿದರು. ಪ್ರತ್ಯೇಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಪೋಲ್ಯಾಂಡ್ ಸಹಾಯಕ ವಿದೇಶಾಂಗ ಸಚಿವ ವ್ಲಾಡಿಸ್ಲಾವ್ ಟಿಯೊಫಿಲ್ ` ನಾವು ಅಂತಿಮವಾಗಿ ಸರಿಯಾದ ಮಟ್ಟದ ರಾಜಕೀಯ ಮತ್ತು ರಾಜತಾಂತ್ರಿಕ ಸಂಬಂಧಗಳನ್ನು ಹೊಂದಲು ಪ್ರಾರಂಭಿಸುತ್ತಿದ್ದೇವೆ. ಕೃಷಿ ವಲಯದಲ್ಲಿ, ಐಟಿ ವಲಯದಲ್ಲಿ, ಭದ್ರತಾ ವಲಯದಲ್ಲಿ, ಹೊಸ ತಂತ್ರಜ್ಞಾನ ವಲಯದಲ್ಲಿ ವಿಶೇಷವಾಗಿ ಹಸಿರು ತಂತ್ರಜ್ಞಾನ ವಲಯದಲ್ಲಿ ಭಾರತದೊಂದಿಗೆ ಸಹಕಾರವನ್ನು ಬಯಸುತ್ತಿದ್ದೇವೆ' ಎಂದರು.

► ಜಾಮ್ ಸಾಹೇಬ್ ಸ್ಮಾರಕ ಯುವ ವಿನಿಮಯ ಕಾರ್ಯಕ್ರಮ

ಎರಡನೇ ವಿಶ್ವಯುದ್ಧದಲ್ಲಿ ತನ್ನ ಜೀವವನ್ನು ಪಣಕ್ಕಿಟ್ಟು ಪೋಲ್ಯಾಂಡ್ನ ಮಹಿಳೆಯರು ಮತ್ತು ಮಕ್ಕಳನ್ನು ರಕ್ಷಿಸಿದ ಗುಜರಾತ್ ನವನಗರದ ಜಾಮ್ ಸಾಹೇಬ್ ಆಫ್ ನವನಗರ ಎಂದೇ ಹೆಸರಾದ ದಿಗ್ವಿಜಯ್ಸಿಂಹಜಿ ರಣಜಿತ್ಸಿಂಹಜಿ ಜಡೇಜಾರ ಕೊಡುಗೆಗಳನ್ನು ಪ್ರಧಾನಿ ಮೋದಿ ಸ್ಮರಿಸಿದರು.

ಎರಡನೇ ವಿಶ್ವಯುದ್ಧದಲ್ಲಿ ಪೋಲ್ಯಾಂಡ್ಗೆ ಸಂಕಷ್ಟ ಎದುರಾದಾಗ, ಪೋಲ್ಯಾಂಡ್ನ ಸಾವಿರಾರು ಮಕ್ಕಳು, ಮಹಿಳೆಯರು ಆಶ್ರಯಕ್ಕಾಗಿ ಅಲೆದಾಡುತ್ತಿದ್ದಾಗ ದಿಗ್ವಿಜಯ್ ಸಿಂಹಜಿ ವಿಶೇಷ ಆಶ್ರಮಗಳನ್ನು ಸ್ಥಾಪಿಸಿ ಅವರಿಗೆ ನೆಲೆ ಒದಗಿಸಿದರು. ಅವರ ಕೊಡುಗೆಯ ಸ್ಮರಣಾರ್ಥ ಯುವ ವಿನಿಮಯ ಕಾರ್ಯಕ್ರಮವನ್ನು ಮೋದಿ ಘೋಷಿಸಿದರು. ಇದರಡಿ ಪ್ರತೀ ವರ್ಷ ಪೋಲ್ಯಾಂಡ್ನ 20 ಯುವಕರನ್ನು ಭಾರತಕ್ಕೆ ಆಹ್ವಾನಿಸಲಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News