ಇಸ್ರೇಲ್ ಮೇಲೆ ಡ್ರೋನ್‍, ಕ್ಷಿಪಣಿ ದಾಳಿ ಆರಂಭಿಸಿದ ಇರಾನ್

Update: 2024-04-14 02:30 GMT

Photo: twitter.com/SukantaGAlak

ಹೊಸದಿಲ್ಲಿ: ಇರಾನ್ ಶನಿವಾರ ಇಸ್ರೇಲ್ ಮೇಲೆ ವಾಯುದಾಳಿ ಆರಂಭಿಸಿದ್ದು, ಸುಧೀರ್ಘ ಅವಧಿಯಿಂದ ಉಭಯ ದೇಶಗಳ ನಡುವೆ ಇದ್ದ ಸಂಘರ್ಷ ಇದೀಗ ಮತ್ತಷ್ಟು ಉಲ್ಬಣಿಸಿದೆ.

"ಇಸ್ರೇಲ್ ನತ್ತ ಇರಾನ್ ತನ್ನ ಭೂ ಪ್ರದೇಶದಿಂದ ಯುಎವಿಗಳನ್ನು ಉಡಾಯಿಸಿದೆ" ಎಂದು ಇಸ್ರೇಲ್ ಸೇನಾ ವಕ್ತಾರ ಡೇನಿಯಲ್ ಹಗಾರಿ ವಿಡಿಯೊ ಹೇಳಿಕೆಯಲ್ಲಿ ಪ್ರಕಟಿಸಿದ್ದಾರೆ. ಈ ದಾಳಿಗಳನ್ನು ಭೇದಿಸುವ ನಿಟ್ಟಿನಲ್ಲಿ ನಾವು ಅಮೆರಿಕ ಹಾಗೂ ಈ ಭಾಗದ ಇತರ ಪಾಲುದಾರ ದೇಶಗಳ ನಿಕಟ ಸಹಕಾರದೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.  ‌

ಅಮೆರಿಕ ಕೂಡಾ, ಇಸ್ರೇಲ್ ಮೇಲೆ ಡ್ರೋನ್ ದಾಳಿ ನಡೆದಿರುವುದನ್ನು ದೃಢಪಡಿಸಿದೆ. ಇಸ್ರೇಲ್ ಮೇಲೆ ಇರಾನ್ ವಾಯುದಾಳಿಯನ್ನು ಆರಂಭಿಸಿದ್ದು, ಇದು ಹಲವು ಗಂಟೆಗಳ ಕಾಲ ಮುಂದುವರಿಯುವ ನಿರೀಕ್ಷೆ ಇದೆ ಎಂದು ಶ್ವೇತಭವನ ಹೇಳಿದೆ.

ಅಧ್ಯಕ್ಷ ಜೋ ಬೈಡನ್ ಅವರಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರರು ಈ ಬಗ್ಗೆ ನಿಯತವಾಗಿ ಮಾಹಿತಿಗಳನ್ನು ನೀಡುತ್ತಿದ್ದಾರೆ ಎಂದು ರಾಷ್ಟ್ರೀಯ ಭದ್ರತಾ ಮಂಡಳಿ ವಕ್ತಾರ ಎಡ್ರಿಯೇನ್ ವಾಟ್ಸನ್ ಹೇಳಿದ್ದಾರೆ. ಅಧ್ಯಕ್ಷರು ಇಸ್ರೇಲ್ ಅಧಿಕಾರಿಗಳ ಹಾಗೂ ಅಮೆರಿಕದ ಮಿತ್ರರಾಷ್ಟ್ರಗಳ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಅವರು ವಿವರಿಸಿದ್ದಾರೆ.

ಇರಾನ್ ನ ಸರ್ವೋಚ್ಛ ನಾಯಕ ಆಯಾತುಲ್ಲಾ ಅಲಿ ಖಮೇನಿ ಎಕ್ಸ್ ಪೋಸ್ಟ್ ನಲ್ಲಿ ಇಸ್ರೇಲಿ ಆಡಳಿತವನ್ನು "ದುರುದ್ದೇಶಪೂರಿತ" "ದುಷ್ಟ" ಹಾಗೂ "ಲೋಪಯುಕ್ತ" ಎಂದು ಹೇಳಿದ್ದಾರೆ.

ಇಸ್ರೇಲ್ ಮೇಲಿನ ಇರಾನ್ ದಾಳಿಯನ್ನು ಬ್ರಿಟನ್ ಪ್ರಧಾನಿ ರಿಷಿ ಸುನಾಕ್ ಖಂಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News