ಪಶ್ಚಿಮ ದಂಡೆಯಲ್ಲಿ ಇಸ್ರೇಲ್ ಸೇನಾ ಕಾರ್ಯಾಚರಣೆ: ಜೆನಿನ್ ನಲ್ಲಿ 10 ಫೆಲೆಸ್ತೀನಿಯರ ಹತ್ಯೆ

Update: 2023-07-04 17:05 GMT

Photo: timesofindia

ಜೆನಿನ್(ಪಶ್ಚಿಮದಂಡೆ): ಆಕ್ರಮಿತ ಪಶ್ಚಿಮದಂಡೆಯ ಜೆನಿನ್ ನಗರದಲ್ಲಿ ಇಸ್ರೇಲ್ನ ಸೇನಾ ಕಾರ್ಯಾಚರಣೆ ಎರಡನೆ ದಿನವಾದ ಮಂಗಳವಾರವೂ ಮುಂದುವರಿದಿದ್ದು, ಕನಿಷ್ಠ 10 ಮಂದಿ ಫೆಲೆಸ್ತೀನಿಯರು ಸಾವನ್ನಪ್ಪಿದ್ದಾರೆ ಹಾಗೂ ನೂರಾರು ಮಂದಿ ಮನೆ ಬಿಟ್ಟು ಪಲಾಯನಗೈದಿದ್ದಾರೆ. ಈ ಮಧ್ಯೆ ಫೆಲೆಸ್ತೀನ್ ತೀವ್ರವಾದಿಗಳ ಭದ್ರಕೋಟೆಯಾದ ಜೆನಿನ್ ನಗರಕ್ಕೆ ತಾನು ಅತ್ಯಂತ ಶಕ್ತಿಯುತವಾಗಿ ಲಗ್ಗೆಹಾಕಿರುವುದಾಗಿ ಇಸ್ರೇಲ್ಸೇನೆ ಹೇಳಿಕೊಂಡಿದೆ.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನೇತೃತ್ವದ ಕಟ್ಟಾ ಬಲಪಂಥೀಯ ಸರಕಾರವು ಪಶ್ಚಿಮದಂಡೆಯ ಉತ್ತರಭಾಗದ ನಗರ ಜೆನಿನ್ ಮೇಲೆ ಯೋಜಿತ ದಾಳಿ ನಡೆಸಿದೆ. ಭಾರೀ ಸಂಖ್ಯೆಯಲ್ಲಿ ಕವಚಾವೃತ ವಾಹನಗಳು, ಸೇನಾ ಬುಲ್ಡೋಜರ್ಗಳು ಹಾಗೂ ದಾಳಿ ನಡೆಸುವ ಸಾಮರ್ಥ್ಯದ ಡ್ರೋನ್ಗಳನ್ನು ನಿಯೋಜಿಸಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿಮಾಡಿವೆ.

ಜೆನಿನ್ನಲ್ಲಿ ಭಯೋತ್ಪಾದನಾ ನಿಗ್ರಹ ಚಟುವವಟಿಕೆಗಳನ್ನು ಮಂಗಳವಾರವೂ ಮುಂದುವರಿಸಲಾಗಿದೆ. ನಿರಾಶ್ರಿತ ಶಿಬಿರಗಳಲ್ಲಿ ಸ್ಫೋಟಕಗಳನ್ನು ಸಂಗ್ರಹಿಸಿಡಲು ಬಳಸಲಾಗುತ್ತಿದ್ದ ಭೂಗತ ಕೊಳವೆಯನ್ನು ಕೂಡ ನಿಷ್ಕ್ರಿಯಗೊಳಿಸಲಾಗಿದೆ ಎಂದು ಇಸ್ರೇಲ್ ಸೇನೆ ತಿಳಿಸಿದೆ.

ನೆತನ್ಯಾಹು ನೇತೃತ್ವದ ಸಮ್ಮಿಶ್ರ ಸರಕಾರವು ತನ್ನ ಸಂಪುಟದಲ್ಲಿ ಕಟ್ಟಾ ಬಲಪಂಥೀಯರನ್ನು ಸೇರ್ಪಡೆಗೊಳಿಸಿದ ಬಳಿಕ ಕಳೆದೊಂದು ವರ್ಷದಿಂದ ಇಸ್ರೇಲ್ ಸೇನೆ-ಫೆಲೆಸ್ತೀನ್ ಹೋರಾಟಗಾರರ ನಡುವಿನ ಸಮರವು ಉಲ್ಬಣಗೊಂಡಿದೆ.

ಸೋಮವಾರ ಸೇನಾ ಕಾರ್ಯಾಚರಣೆ ಆರಂಭಗೊಂಡಾಗಿನಿಂದ ಸುಮಾರು 3 ಸಾವಿರ ಮಂದಿ ಫೆಲೆಸ್ತೀನಿಯರು ತಮ್ಮ ಮನೆಗಳನ್ನು ತೊರೆದು ಜೆನಿನ್ನ ನಿರಾಶ್ರಿತರ ಶಿಬಿರಗಳಲ್ಲಿ ಆಶ್ರಯಪಡೆದಿದ್ದಾರೆಂದು ಉಪರಾಜ್ಯಪಾಲ ಕಮಾಲ್ ಅಬು ಅಲ್ರೌಬ್ ತಿಳಿಸಿದ್ದಾರೆ. ನಿರಾಶ್ರಿತರಿಗೆ ಶಾಲೆಗಳಲ್ಲಿ ಹಾಗೂ ಇತರ ಆಶ್ರಯತಾಣಗಳಲ್ಲಿ ವಾಸ್ತವ್ಯದ ಏರ್ಪಾಡನ್ನು ಮಾಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News