ಕಮಲಾ ಹ್ಯಾರಿಸ್ ಸೋಲಿಸುವುದು ಸುಲಭ : ಟ್ರಂಪ್
ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ಅಧ್ಯಕ್ಷೀಯ ಕಣದಿಂದ ಹಿಂದೆ ಸರಿದು ಕಮಲಾ ಹ್ಯಾರಿಸ್ ಅವರನ್ನು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ದೃಢಪಡಿಸಿದ ಬಳಿಕ ನೀಡಿರುವ ಮಾಜಿ ಅಧ್ಯಕ್ಷ ಹಾಗೂ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್, ಕಮಲಾ ಹ್ಯಾರಿಸ್ ಅವರನ್ನು ಸೋಲಿಸುವುದು ಸುಲಭ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಮಧ್ಯೆ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಹೇಳಿಕೆ ನೀಡಿ ಹಾಲಿ ಅಧ್ಯಕ್ಷ ಜೋ ಬೈಡನ್ ಅವರನ್ನು ನಿಸ್ವಾರ್ಥಿ ಮತ್ತು ದೇಶಪ್ರೇಮಿ ಎಂದು ಬಣ್ಣಿಸಿದ್ದಾರೆ. ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಟ್ರಂಪ್ ಅವರನ್ನು ಸೋಲಿಸುತ್ತೇನೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.
"ತಮ್ಮ ನಿಸ್ವಾರ್ಥ ಮತ್ತು ರಾಷ್ಟ್ರಪ್ರೇಮದ ಕ್ರಮದ ಮೂಲಕ ಬೈಡನ್ ತಮ್ಮ ಸೇವಾ ಜೀವನದುದ್ದಕ್ಕೂ ಮಾಡುತ್ತಾ ಬಂದದ್ದನ್ನೇ ಮುಂದುವರಿಸಿದ್ದಾರೆ. ಅಮೆರಿಕದ ಜನತೆ ಮತ್ತು ದೇಶ ಅವರಿಗೆ ಎಲ್ಲಕ್ಕಿಂತ ಹೆಚ್ಚು" ಎಂದು ಕಮಲಾ ಹೇಳಿದ್ದಾರೆ. ಪಕ್ಷವನ್ನು, ದೇಶವನ್ನು ಸಂಘಟಿಸುವ ಮೂಲಕ ಟ್ರಂಪ್ ಅವರನ್ನು ಸುಲಭವಾಗಿ ಸೋಲಿಸುತ್ತೇನೆ ಎಂದಿದ್ದಾರೆ.
ಇನ್ನೊಂದೆಡೆ ಎದುರಾಳಿ ವಿರುದ್ಧ ವಾಗ್ದಾಳಿ ನಡೆಸಿರುವ ಟ್ರಂಪ್, "ದೇಶ ಕಂಡ ಅತ್ಯಂತ ಕೆಟ್ಟ ಅಧ್ಯಕ್ಷ ಬೈಡನ್" ಎಂದು ಟೀಕಿಸಿದ್ದಾರೆ. ಈ ಮಧ್ಯೆ ಟ್ರಂಪ್ ಪುತ್ರ ಹೇಳಿಕೆ ನೀಡಿ, "ಕಮಲಾ ಹ್ಯಾರೀಸ್, ಬೈಡನ್ ಗಿಂತಲೂ ಅಸಮರ್ಥ ನಾಯಕಿ" ಎಂದು ಟೀಕಿಸಿದ್ದಾರೆ.