ಪಾಕಿಸ್ತಾನದಲ್ಲಿ ಅಪರಿಚಿತರಿಂದ ಎಲ್ಇಟಿ ಕಮಾಂಡರ್ ಹತ್ಯೆ

Update: 2023-11-10 03:52 GMT

Photo: twitter.com/MeghUpdates

ಹೊಸದಿಲ್ಲಿ: ಲಷ್ಕರ್-ಇ-ತೋಯ್ಬಾ ಸಂಘಟನೆಯ ಕಮಾಂಡರ್ ಅಕ್ರಮ್ ಗಾಝಿನನ್ನು ಪಾಕಿಸ್ತಾನದ ಖೈಬರ್ ಪಖ್ ತೂನ್ ಖ್ವ ಎಂಬಲ್ಲಿ ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಸಾಯಿಸಿದ್ದಾರೆ. ಭಾರತವನ್ನು ಗುರಿ ಮಾಡಿರುವ ಉಗ್ರಗಾಮಿ ಹತ್ಯೆಯಾಗಿರುವ ಎರಡನೇ ಪ್ರಕರಣ ಇದಾಗಿದೆ.

ಅಕ್ರಮ್ ಖಾನ್ ಅಲಿಯಾಸ್ ಗಾಝಿ 2018-20ರ ಅವಧಿಯಲ್ಲಿ ನೇಮಕಗೊಂಡ ಅಗ್ರ ಮುಖಂಡನಾಗಿದ್ದು, ಕಾಶ್ಮೀರ ಕಣಿವೆ ಪ್ರದೇಶದಲ್ಲಿ ಕಳೆದ ಎರಡು ವರ್ಷಗಳಲ್ಲಿ ಹಲವು ಭಯೋತ್ಪಾದಕ ಕೃತ್ಯಗಳನ್ನು ಎಸಗಲು ಗಡಿ ಮೂಲಕ ಉಗ್ರರನ್ನು ನುಸುಳಿಸಿದ್ದ ಎನ್ನಲಾಗಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ 2018ರಲ್ಲಿ ನಡೆದ ಸಂಜ್ವಾನ್ ಉಗ್ರರ ದಾಳಿ ಪ್ರಕರಣದ ರೂವಾರಿ ಖ್ವಾಜಾ ಶಾಹೀದ್ ಎಂಬಾತನನ್ನು ಭಾನುವಾರ ಅಪಹರಿಸಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಪ್ರದೇಶದ ವ್ಯಾಪ್ತಿಯಲ್ಲಿ ವಾಸ್ತವ ನಿಯಂತ್ರಣ ರೇಖೆ ಬಳಿ ಶಿರಚ್ಛೇದ ಮಾಡಲಾಗಿತ್ತು.

ಪಾಕಿಸ್ತಾನ ನಡೆಸಿದ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಂತೆ ವಿವಿಧ ಉಗ್ರ ಸಂಘಟನೆಗಳು ಸೇರಿದಂತೆ ಸ್ಥಳೀಯ ಪ್ರತಿಸ್ಪರ್ಧಿಗಳು ಮತ್ತು ಲಷ್ಕರ್ ಸಂಘಟನೆಯ ಮುಖಂಡರಲ್ಲೇ ಇರುವ ಭಿನ್ನಾಭಿಪ್ರಾಯಗಳಿಂದಾಗಿ ಈ ಹತ್ಯೆ ನಡೆದಿರುವ ಸಾಧ್ಯತೆ ಇದೆ.

"ಲಷ್ಕರ್ ಸಂಘಟನೆಗೆ ನಿಯುಕ್ತಿಗೊಂಡ ಅಗ್ರ ಮುಖಂಡರದಲ್ಲಿ ಗಾಝಿ ಒಬ್ಬನಾಗಿದ್ದು, ಭಾರತದ ವಿರುದ್ಧದ ದ್ವೇಷಪೂರಿತ ಭಾಷಣಗಳಿಗೆ ಹೆಸರುವಾಸಿಯಾಗಿದ್ದ" ಎಂದು ಮೂಲಗಳು ಹೇಳಿವೆ. ಬಜೂರ್ ಜಿಲ್ಲೆಯಲ್ಲಿ ಬೈಕ್ನಲ್ಲಿ ಬಂದ ವ್ಯಕ್ತಿಗಳು ಈತನನ್ನು ಹತ್ಯೆ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News