ಪಿಟಿಐ ಬೆಂಬಲಿಗರ ರಾಷ್ಟ್ರವ್ಯಾಪಿ ಪ್ರತಿಭಟನೆ

Update: 2024-02-12 16:47 GMT

ಇಸ್ಲಮಾಬಾದ್: ಕಳೆದ ವಾರ ನಡೆದ ಚುನಾವಣೆಯಲ್ಲಿ ವ್ಯಾಪಕ ಅಕ್ರಮ ನಡೆದಿದೆ ಎಂದು ಆರೋಪಿಸಿ ಮಾಜಿ ಪ್ರಧಾನಿ ಇಮ್ರಾನ್‍ಖಾನ್ ಅವರ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್ (ಪಿಟಿಐ) ಪಕ್ಷ ದೇಶದಾದ್ಯಂತ ವ್ಯಾಪಕ ಪ್ರತಿಭಟನೆ ನಡೆಸಿದ್ದು ಹಲವೆಡೆ ರಸ್ತೆ ತಡೆ ನಡೆಸಿದ್ದಾರೆ ಎಂದು ವರದಿಯಾಗಿದೆ.

ಲಾಹೋರ್ ನಲ್ಲಿ ಚುನಾವಣಾ ಆಯುಕ್ತರ ಕಚೇರಿಯ ಎದುರು ಪ್ರತಿಭಟನೆ ನಡೆಸಿದ ಪಿಟಿಐ ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ. ರಾವಲ್ಪಿಂಡಿ, ಲಾಹೋರ್ ಮುಂತಾದ ನಗರಗಳಲ್ಲೂ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆದಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.

ಪೇಷಾವರ ಹೆದ್ದಾರಿಯ ಟೋಲ್ ಗೇಟ್ ಬಳಿ ಹೆದ್ದಾರಿ ತಡೆ ನಡೆಸಿದರಲ್ಲದೆ ಸಿಂಧ್ ಪ್ರಾಂತದ ಪ್ರಮುಖ ರಸ್ತೆಗಳಲ್ಲೂ ಪ್ರತಿಭಟನೆ ನಡೆಸಿದ್ದರಿಂದ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಕಾನೂನುಬಾಹಿರವಾಗಿ ಸಭೆ ಸೇರುವುದು, ಪ್ರತಿಭಟನೆ ನಡೆಸುವುದಕ್ಕೆ ಅವಕಾಶವಿಲ್ಲ ಎಂದು ಪಾಕಿಸ್ತಾನದ ಕಾನೂನು ಜಾರಿ ಅಧಿಕಾರಿಗಳ ಎಚ್ಚರಿಕೆಯ ಹೊರತಾಗಿಯೂ ಮತಗಳ ಮರುಎಣಿಕೆ ಮತ್ತು ಜೈಲಿನಲ್ಲಿರುವ ಪಕ್ಷದ ಮುಖಂಡ ಇಮ್ರಾನ್‍ಖಾನ್ ಬಿಡುಗಡೆಗೆ ಆಗ್ರಹಿಸಿ ಪಿಟಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಪಕ್ಷೇತರರಾಗಿ ಸ್ಪರ್ಧಿಸಿದ್ದ ಪಕ್ಷದ ಇನ್ನಷ್ಟು ಬೆಂಬಲಿಗರು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರೂ ಮತ ಎಣಿಕೆಯಲ್ಲಿ ಅಕ್ರಮ ನಡೆದಿರುವುದರಿಂದ ಅವರ ಗೆಲುವನ್ನು ಕಸಿಯಲಾಗಿದೆ ಎಂದು ಪಿಟಿಐ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದು, ಮರು ಮತ ಎಣಿಕೆಗೆ ಆಗ್ರಹಿಸಿ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News