ನ್ಯೂ ಕ್ಯಾಲೆಡೋನಿಯಾ ಮತದಾನ ಸುಧಾರಣೆ ಅಮಾನತು : ಫ್ರಾನ್ಸ್

Update: 2024-06-13 16:38 GMT

ಸಾಂದರ್ಭಿಕ ಚಿತ್ರ (PTI)

ಪ್ಯಾರಿಸ್ : ವ್ಯಾಪಕ ಹಿಂಸಾಚಾರದ ಹಿನ್ನೆಲೆಯಲ್ಲಿ ನ್ಯೂ ಕ್ಯಾಲೆಡೋನಿಯಾದಲ್ಲಿ ಮತದಾನ ಸುಧಾರಣೆ ಉಪಕ್ರಮಗಳನ್ನು ಅಮಾನತುಗೊಳಿಸಲಾಗಿದೆ ಎಂದು ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರೋನ್ ಘೋಷಿಸಿದ್ದಾರೆ.

ಪೆಸಿಫಿಕ್ ಪ್ರದೇಶದಲ್ಲಿರುವ ಫ್ರಾನ್ಸ್ ಪ್ರಾಂತವಾದ ನ್ಯೂ ಕ್ಯಾಲೆಡೋನಿಯಾದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗೆ ಅಲ್ಲಿನ ಬುಡಕಟ್ಟು ನಿವಾಸಿಗಳಾದ ಕನಾಕ್ ಜನತೆ ತೀವ್ರ ಪ್ರತಿರೋಧ ವ್ಯಕ್ತಪಡಿಸಿದ್ದರು. ಫ್ರಾನ್ಸ್‍ನ ಸಂವಿಧಾನದಲ್ಲಿ ತಿದ್ದುಪಡಿ ಮಾಡಿ ನ್ಯೂ ಕ್ಯಾಲೆಡೋನಿಯಾದಲ್ಲಿ ಮತದಾರರ ಪಟ್ಟಿಯನ್ನು ಬದಲಾಯಿಸಲು ಫ್ರಾನ್ಸ್ ಸರಕಾರ ನಿರ್ಧರಿಸಿತ್ತು. ಈ ಕ್ರಮ ತಮ್ಮ ಮತದಾನದ ಹಕ್ಕುಗಳನ್ನು ಬದಲಾಯಿಸುತ್ತದೆ ಎಂದು ಸ್ಥಳೀಯರು ಆತಂಕಗೊಂಡಿದ್ದರು. ಸರಕಾರದ ಕ್ರಮವನ್ನು ವಿರೋಧಿಸಿ ಮೇ 13ರಂದು ಆರಂಭಗೊಂಡ ಸ್ಥಳೀಯರ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಹಿನ್ನೆಲೆಯಲ್ಲಿ ನ್ಯೂ ಕ್ಯಾಲೆಡೋನಿಯಾದಲ್ಲಿ ಮೇ 15ರಂದು ತುರ್ತು ಪರಿಸ್ಥಿತಿ ಜಾರಿಗೊಳಿಸಲಾಗಿತ್ತು.

ನ್ಯೂ ಕ್ಯಾಲೆಡೋನಿಯಾಕ್ಕೆ ಸಂಬಂಧಿಸಿದ ಸಾಂವಿಧಾನಿಕ ಮಸೂದೆಯನ್ನು ಅಮಾನತುಗೊಳಿಸಲು ನಿರ್ಧರಿಸಲಾಗಿದೆ. ಈ ಸಮಯದಲ್ಲಿ ಅಸ್ಪಷ್ಟತೆಗೆ ಅವಕಾಶ ನೀಡುವುದಿಲ್ಲ. ಮಸೂದೆಯ ಬಗ್ಗೆ ಸ್ಥಳೀಯರೊಂದಿಗೆ ಮಾತುಕತೆ ನಡೆಸಿದ ಬಳಿಕ ಮುಂದಿನ ಕ್ರಮದ ಬಗ್ಗೆ ನಿರ್ಧರಿಸಲಾಗುವುದು ಎಂದು ಫ್ರಾನ್ಸ್‍ನ ನ್ಯಾಯ ಇಲಾಖೆ ಹೇಳಿದೆ. ಈ ಮಧ್ಯೆ, ನ್ಯೂ ಕ್ಯಾಲೆಡೋನಿಯಾದಲ್ಲಿ ಜಾರಿಯಲ್ಲಿರುವ ರಾತ್ರಿ ಕರ್ಫ್ಯೂವನ್ನು ಜೂನ್ 17ರವರೆಗೆ ಮುಂದುವರಿಸಲು ಫ್ರಾನ್ಸ್ ಸರಕಾರ ಆದೇಶಿಸಿರುವುದಾಗಿ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News