ಕಮಲಾ ಹ್ಯಾರಿಸ್ ಪ್ರಚಾರಕ್ಕೆ ಕೈಜೋಡಿಸಿದ ಒಬಾಮಾ
ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಕೇವಲ ಮೂರು ವಾರಗಳು ಬಾಕಿ ಉಳಿದಿದ್ದು, ಸಮಬಲದ ಹೋರಾಟವನ್ನು ಸಮೀಕ್ಷೆಗಳು ನಿರೀಕ್ಷಿಸಿವೆ. ಟ್ರಂಪ್ ವಿರುದ್ಧದ ನಿರ್ಣಾಯಕ ಹೋರಾಟದಲ್ಲಿ ನೆಲೆ ಕಳೆದುಕೊಳ್ಳುವ ಭೀತಿಯಲ್ಲಿರುವ ಕಮಲಾ ಹ್ಯಾರಿಸ್ ಅವರು ಒಬಾಮಾ ಅವರ ರಾಜಕೀಯ ವರ್ಚಸ್ಸಿನ ಪ್ರಯೋಜನ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.
ಭಾನುವಾರ ಬಿಡುಗಡೆ ಮಾಡಲಾದ ಮೂರು ಚುನಾವಣಾ ಸಮೀಕ್ಷೆಗಳಲ್ಲಿ ಕಮಲಾ ಹ್ಯಾರಿಸ್ ಅವರ ಮುನ್ನಡೆ ಇಳಿಮುಖವಾಗಿರುವುದು ನವೆಂಬರ್ ನಲ್ಲಿ ನಡೆಯುವ ಚುನಾವಣೆಗೆ ಹಿನ್ನಡೆ ಎಂದು ವಿಶ್ಲೇಷಿಸಲಾಗುತ್ತಿದೆ. ಎನ್ ಬಿಸಿ ಸಮೀಕ್ಷೆ ಪ್ರಕಾರ, ನವೆಂಬರ್ 5ರಂದು ನಡೆಯುವ ಚುನಾವಣೆಯಲ್ಲಿ ಡೆಮಾಕ್ರಟಿಕ್ ಮತ್ತು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಗಳು ಶೇಕಡ 48ರಷ್ಟು ಮತಗಳನ್ನು ಸಮಾನವಾಗಿ ಪಡೆಯುವ ನಿರೀಕ್ಷೆ ಇದೆ.
ಸಂಭಾವ್ಯ ಮತದಾರರಲ್ಲಿ ಹ್ಯಾರಿಸ್ ಅವರು ಟ್ರಂಪ್ ವಿರುದ್ಧ ಅಲ್ಪ ಮೇಲುಗೈ ಸಾಧಿಸಿದ್ದು, ಉಭಯ ಮುಖಂಡರು ಕ್ರಮವಾಗಿ ಶೇಕಡ 50 ಮತ್ತು 48ರಷ್ಟು ಮತಗಳನ್ನು ಪಡೆಯುವ ನಿರೀಕ್ಷೆ ಇದೆ ಎಂದು ಎಬಿಸಿ ನ್ಯೂಸ್/ಎಲ್ಪೋಸ್ ಸಮೀಕ್ಷೆ ಹೇಳಿದೆ. ಸಿಬಿಎಸ್ ನ್ಯೂಸ್/ ಯುಗೋವ್ ಸಮೀಕ್ಷೆ ಪ್ರಕಾರ ಕಠಿಣ ಸ್ಪರ್ಧೆ ಇದ್ದು, ಕಮಲಾ ಹ್ಯಾರೀಸ್ ಅತ್ಯಲ್ಪ ಮುನ್ನಡೆ ಸಾಧಿಸಲಿದ್ದಾರೆ. ಸಂಭಾವ್ಯ ಮತದಾರರ ಪೈಕಿ ಹ್ಯಾರೀಸ್ ಶೇಕಡ 51ರಷ್ಟು ಮತಗಳನ್ನು ಪಡೆದರೆ, ಟ್ರಂಪ್ ಶೇಕಡ 48ರಷ್ಟು ಮತ ಗಳಿಸುವ ನಿರೀಕ್ಷೆ ಇದೆ.
ಇದೀಗ ಬರಾಕ್ ಒಬಾಮಾ ದಂಪತಿ ಹ್ಯಾರೀಸ್ ಪರ ಮುಂದಿನ ವಾರ ಪ್ರಚಾರಕ್ಕೆ ಧುಮುಕಲಿದ್ದು, ಡೆಮಾಕ್ರಟಿಕ್ ನೆಲೆಯ ರಾಜ್ಯಗಳಲ್ಲಿ ಇವರ ಜನಪ್ರಿಯತೆ, ಹ್ಯಾರಿಸ್ ಪರ ಅಲೆ ಸೃಷ್ಟಿಸಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಅಕ್ಟೋಬರ್ 26ರಂದು ಮಿಶೆಲ್ ಒಬಾಮಾ ಮಿಚಿಗನ್ ನಲ್ಲಿ ಕಮಲಾ ಹ್ಯಾರಿಸ್ ಜತೆ ಪ್ರಚಾರಸಭೆಯಲ್ಲಿ ಕಾಣಿಸಿಕೊಳ್ಳುವರು. ಮುಂದಿನ ಗುರುವಾರ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಜಾರ್ಜಿಯಾದಲ್ಲಿ ಪ್ರಚಾರ ಕೈಗೊಳ್ಳುವರು. ಜತೆಗೆ ಏಕಾಂಗಿಯಾಗಿ ಕೂಡಾ ಕೆಲ ರಾಜ್ಯಗಳಿಗೆ ಒಬಾಮಾ ಭೇಟಿ ನೀಡಲಿದ್ದಾರೆ.