ಪಾಕ್: ಸೇನಾ ನೆಲೆ ಮೇಲೆ ಆತ್ಮಹತ್ಯಾ ದಾಳಿ; ಕನಿಷ್ಠ 23 ಮಂದಿ ಮೃತ್ಯು; 27 ಮಂದಿಗೆ ಗಾಯ

Update: 2023-12-12 18:35 GMT

Photo : PTI

ಪೇಶಾವರ: ಪಾಕಿಸ್ತಾನದ ಪೇಶಾವರ ಸಮೀಪ ಸೇನಾನೆಲೆಯೊಂದರ ಮೇಲೆ ಮಂಗಳವಾರ ನಸುಕಿನಲ್ಲಿ ನಡೆದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಕನಿಷ್ಠ 23 ಮಂದಿ ಸಾವನ್ನಪ್ಪಿದ್ದಾರೆ ಹಾಗೂ 27ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಪಾಕಿಸ್ತಾನಿ ತಾಲಿಬಾನ್‌ ಗೆ ನಿಷ್ಠವಾಗಿರುವ ಉಗ್ರರು ಈ ದಾಳಿಯ ಹೊಣೆ ಹೊತ್ತಿದ್ದಾರೆ.

ಅಫ್ಘಾನ್ ಗಡಿ ಸಮೀಪದಲ್ಲಿರುವ ಖೈಬರ್ ಪಖ್ತೂಂಖ್ವಾ ಪ್ರಾಂತದಲ್ಲಿರುವ ದೇರಾ ಇಸ್ಮಾಯಿಲ್ ಖಾನ್ ಜಿಲ್ಲೆಯ ದಾರಾಬಾನ್ ನ ಸೇನಾನೆಲೆಯನ್ನು ಗುರಿಯಿರಿಸಿ ಈ ದಾಳಿ ನಡೆದಿದೆಯೆಂದು ಸ್ಥಳೀಯ ಪೊಲೀಸ್ ಅಧಿಕಾರಿ ಕಮಲ್ಖಾನ್ ತಿಳಿಸಿದ್ದಾರೆ. ನಸುಕಿನಲ್ಲಿಯೇ ದಾಳಿ ನಡೆದಿದ್ದುದರಿಂದ ಹಲವಾರು ಮಂದಿ ನಿದ್ರಿಸುತ್ತಿರುವಾಗಲೇ ಸಾವನ್ನಪ್ಪಿದ್ದಾರೆ.

ಸ್ಫೋಟಕಗಳಿಂದ ತುಂಬಿದ್ದ ವಾಹನವನ್ನು ಸೇನಾನೆಲೆಗೆ ನುಗ್ಗಿಸಿ ಆತ್ಮಹತ್ಯಾ ದಾಳಿಯನ್ನು ನಡೆಸಲಾಗಿದೆ. ಸ್ಫೋಟದ ತೀವ್ರತೆಗೆ ಕಟ್ಟಡದ ಮೂರು ಕೊಠಡಿಗಳು ಕುಸಿದು ಬಿದ್ದಿವೆ ಹಾಗೂ ಮೃತದೇಹಗಳನ್ನು ಕಟ್ಟಡದ ಅವಶೇಷಗಳಿಂದ ಹೊರತೆಗೆಯುವ ಕೆಲಸ ನಡೆಯುತ್ತಿದೆ. ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಭೀತಿಯಿದೆ ಎಂದು ಅವರು ತಿಳಿಸಿದರು.

ಪಾಕ್ ತಾಲಿಬಾನ್ ಬೆಂಬಲಿತ ಉಗ್ರರ ಕೃತ್ಯ?

ಪಾಕಿಸ್ತಾನದ ತಾಲಿಬಾನ್‌ ಗೆ ನಿಷ್ಠವಾಗಿರುವ ತೆಹ್ರಿಕೆ ಜಿಹಾದ್ ಪಾಕಿಸ್ತಾನ್(ಟಿಜೆಪಿ) ಈ ದಾಳಿಯ ಹೊಣೆಯನ್ನು ವಹಿಸಿಕೊಂಡಿದೆ.ಮಂಗಳವಾರ ನಸುಕಿನಲ್ಲಿ 2:30 ಗಂಟೆಯ ಹೊತ್ತಿಗೆ ಆತ್ಮಹತ್ಯಾ ದಾಳಿ ನಡೆದಿದೆ .

ಆತ್ಮಹತ್ಯಾ ದಾಳಿ ನಡೆದಿರುವ ದೇರಾ ಇಸ್ಮಾಯೀಲ್ ಖಾನ್ ಜಿಲ್ಲೆಯು ಪಾಕಿಸ್ತಾನ್ ತಾಲಿಬಾನ್ ಗುಂಪಿನ ಭದ್ರಕೋಟೆಯಾಗಿದೆ.

ದಾಳಿಯ ನಂತರ ಭದ್ರತಾ ಪಡೆಗಳು ಹಾಗೂ ಉಗ್ರರ ನಡುವೆ ತೀವ್ರ ಗುಂಡಿನ ಕಾಳಗ ನಡೆದಿದೆ. ಖೈಬರ್ ಪಖ್ತೂನ್ ಖ್ವಾ ಪ್ರಾಂತದಲ್ಲಿರುವ ಉಗ್ರರ ವಿರುದ್ಧ ಭದ್ರತಾಪಡೆಗಳು ಬೇಹುಗಾರಿಕೆ ಆಧಾರಿತ ದಾಳಿಗಳನ್ನು ನಡೆಸುತ್ತಿವೆ. ಹೀಗಾಗಿ ದಾರಾಬಾನ್ ಸೇನಾ ಠಾಣೆಯಲ್ಲಿ ಭಾರೀ ಸಂಖ್ಯೆಯ ಭದ್ರತಾಪಡೆಗಳ ನಿರಂತರ ಉಪಸ್ಥಿತಿಯಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ಕಮಾಲ್ ಖಾನ್ ತಿಳಿಸಿದ್ದಾರೆ. ಇತ್ತೀಚಿನ ತಿಂಗಳುಗಳಲ್ಲಿ ಖೈಬರ್ ಪಖ್ತೂನ್ ಖ್ವಾ ಪ್ರಾಂತದಲ್ಲಿ ಹಿಂಸಾಚಾರ ಉಲ್ಬಣಿಸಿದ್ದು, ಹಲವಾರು ಭೀಕರ ಭಯೋತ್ಪಾದಕ ದಾಳಿಗಳು ನಡೆದಿವೆ. ಈ ವರ್ಷದ ಜನವರಿಯಲ್ಲಿ ಆತ್ಮಹತ್ಯಾ ಬಾಂಬರ್ ಒಬ್ಬಾತ ಪೇಶಾವರದ ಮಸೀದಿಯೊಂದನ್ನು ಗುರಿಯಾಗಿರಿಸಿ ನಡೆಸಿದ ದಾಳಿಯಲ್ಲಿ ಕನಿಷ್ಠ 101 ಮಂದಿ ಸಾವನ್ನಪ್ಪಿದ್ದರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News