ಪಾಕಿಸ್ತಾನ: ಆಂತರಿಕ ಚುನಾವಣೆ ನಡೆಸಲು ಪಿಟಿಐ ಪಕ್ಷಕ್ಕೆ ಚುನಾವಣಾ ಆಯೋಗ ಸೂಚನೆ
ಇಸ್ಲಮಾಬಾದ್: ಚುನಾವಣಾ ಆಯೋಗ ನೀಡಿದ ಗಡುವಿನೊಳಗೆ ಪಕ್ಷದ ಆಂತರಿಕ ಚುನಾವಣೆ ನಡೆಸಲು ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್(ಪಿಟಿಐ) ಪಕ್ಷದ ಕಾರ್ಯನಿರ್ವಾಹಕ ಸಮಿತಿ ಸಿದ್ಧತೆ ನಡೆಸುತ್ತಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಜಿಯೊ ನ್ಯೂಸ್ ಮಂಗಳವಾರ ವರದಿ ಮಾಡಿದೆ.
ಮಾಜಿ ಪ್ರಧಾನಿ ಇಮ್ರಾನ್‍ಖಾನ್ ಅಧ್ಯಕ್ಷರಾಗಿರುವ ಪಿಟಿಐ ಪಕ್ಷ ನಡೆಸಿರುವ ಆಂತರಿಕ ಚುನಾವಣೆ ಮುಕ್ತ, ನ್ಯಾಯಸಮ್ಮತ ಮತ್ತು ಪಾರದರ್ಶಕವಾಗಿಲ್ಲದ ಕಾರಣ ಅದನ್ನು ಮಾನ್ಯ ಮಾಡಲು ಸಾಧ್ಯವಿಲ್ಲ. ಆದ್ದರಿಂದ 20 ದಿನದೊಳಗೆ ಪಾರದರ್ಶಕ ರೀತಿಯಲ್ಲಿ ಆಂತರಿಕ ಚುನಾವಣೆ ನಡೆಸದಿದ್ದರೆ ಪಕ್ಷದ ಚಿಹ್ನೆಯನ್ನು ಅಮಾನತುಗೊಳಿಸಲಾಗುವುದು ಎಂದು ಚುನಾವಣಾ ಆಯೋಗ ನವೆಂಬರ್ 23ರಂದು ಆದೇಶಿಸಿತ್ತು. ಈ ನಿಟ್ಟಿನಲ್ಲಿ ಮಹತ್ವದ ಸಭೆ ನಡೆಸಿದ ಕೋರ್ ಕಮಿಟಿ, ದೇಶದ ಪ್ರಚಲಿತ ರಾಜಕೀಯ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಸಿತು ಹಾಗೂ ನ್ಯಾಯಾಲಯದ ಆದೇಶದಂತೆ ಆಂತರಿಕ ಚುನಾವಣೆ ನಡೆಸಲು ನಿರ್ಧರಿಸಿತು. ಬಂಧನದಲ್ಲಿರುವ ಮಾಜಿ ಪ್ರಧಾನಿ, ಪಕ್ಷದ ಅಧ್ಯಕ್ಷ ಇಮ್ರಾನ್‍ಖಾನ್ ವಿಚಾರಣೆಗೆ ಹಾಜರಾಗುವ ಸಂದರ್ಭ ಅವರಿಗೆ ಬಿಗಿ ಬಂದೋಬಸ್ತ್ ನಡೆಸುವಂತೆ ಸರಕಾರವನ್ನು ಆಗ್ರಹಿಸಲಾಗಿದೆ ಎಂದು ಪಕ್ಷದ ಮಾಧ್ಯಮ ವಕ್ತಾರರು ಮಾಹಿತಿ ನೀಡಿದ್ದಾರೆ.