ಪಾಕಿಸ್ತಾನ: ಲ್ಯಾಮಿನೇಷನ್ ಕಾಗದದ ಕೊರತೆ; ಪಾಸ್ ಪೋರ್ಟ್ ಪ್ರಕ್ರಿಯೆಗೆ ಅಡ್ಡಿ
ಇಸ್ಲಮಾಬಾದ್: ಲ್ಯಾಮಿನಷೇಷನ್ ಕಾಗದದ ಕೊರತೆಯಿಂದಾಗಿ ಪಾಕಿಸ್ತಾನದಲ್ಲಿ ಪಾಸ್ ಪೋರ್ಟ್ ಪ್ರಕ್ರಿಯೆಗೆ ತೀವ್ರ ಅಡ್ಡಿಯಾಗಿದೆ ಎಂದು ವರದಿಯಾಗಿದೆ.
ಫ್ರಾನ್ಸ್ ನಿಂದ ಲ್ಯಾಮಿನೇಷನ್ ಕಾಗದ ಆಮದು ಮಾಡಿಕೊಳ್ಳುತ್ತಿರುವ ಪಾಕಿಸ್ತಾನ ಆರ್ಥಿಕ ಮುಗ್ಗಟ್ಟಿನಿಂದಾಗಿ ಪಾವತಿ ವಿಳಂಬವಾಗಿರುವುದು ಈ ಸಮಸ್ಯೆಗೆ ಕಾರಣ ಎನ್ನಲಾಗಿದೆ. 2013ರಲ್ಲಿಯೂ ಇದೇ ರೀತಿಯ ಸಮಸ್ಯೆ ಎದುರಾಗಿತ್ತು. ಸಮಸ್ಯೆಯನ್ನು ಸಾಧ್ಯವಾದಷ್ಟು ಬೇಗ ಪರಿಹರಿಸಲಾಗುವುದು ಮತ್ತು ಪರಿಸ್ಥಿತಿ ಶೀಘ್ರ ನಿಯಂತ್ರಣಕ್ಕೆ ಬರಲಿದೆ ಮತ್ತು ಪಾಸ್ ಪೋರ್ಟ್ ನೀಡುವ ಪ್ರಕ್ರಿಯೆ ಎಂದಿನಂತೆ ಮುಂದುವರಿಯಲಿದೆ ಎಂದು ಆಂತರಿಕ ಸಚಿವಾಲಯದ ಮಾಧ್ಯಮ ವಿಭಾಗದ ಪ್ರಧಾನ ನಿರ್ದೇಶಕ ಖಾದಿರ್ ಯಾರ್ ತಿವಾನಾ ಹೇಳಿದ್ದಾರೆ.
ಪಾಸ್ ಪೋರ್ಟ್ ಪ್ರಕ್ರಿಯೆಗೆ ಅಡ್ಡಿಯಾಗಿರುವುದರಿಂದ ಶಿಕ್ಷಣ, ಉದ್ಯೋಗ ಅಥವಾ ರಜೆ ಕಳೆಯಲೆಂದು ವಿದೇಶಕ್ಕೆ ಪ್ರಯಾಣಿಸಬೇಕಿರುವ ಸಾವಿರಾರು ಮಂದಿ ಸಮಸ್ಯೆ ಎದುರಿಸುತ್ತಿದ್ದಾರೆ. ವೀಸಾ ಅನುಮೋದನೆಗೊಂಡಿದ್ದರೂ ವೀಸಾ ದಾಖಲೆ ದೊರಕದೆ ಬ್ರಿಟನ್, ಇಟಲಿ ಮತ್ತಿತರ ದೇಶಗಳಲ್ಲಿ ಶಿಕ್ಷಣ ಪಡೆಯುತ್ತಿರುವ ಹಲವಾರು ವಿದ್ಯಾರ್ಥಿಗಳು ದೇಶ ಬಿಟ್ಟು ತೆರಳಲು ಸಾಧ್ಯವಾಗುತ್ತಿಲ್ಲ. ಕೆಲ ತಿಂಗಳ ಹಿಂದೆ ದಿನಕ್ಕೆ 3 ಸಾವಿರದಿಂದ 4 ಸಾವಿರದಷ್ಟು ಪಾಸ್ ಪೋರ್ಟ್ ಒದಗಿಸಲಾಗುತ್ತಿತ್ತು. ಆದರೆ ಈಗ ಈ ಸಂಖ್ಯೆ 12ಕ್ಕೆ ಇಳಿದಿದೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ ‘ದಿ ಎಕ್ಸ್ ಪ್ರೆಸ್ ಟ್ರಿಬ್ಯೂನ್’ ವರದಿ ಮಾಡಿದೆ