ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಷಯ ಪ್ರಸ್ತಾವನೆಯನ್ನು ಪಾಕ್ ಮುಂದುವರಿಸಲಿದೆ: ಶಹಬಾಝ್ ಶರೀಫ್

Update: 2023-12-12 18:09 GMT

Photo: twitter/IndiaToday

ಇಸ್ಲಾಮಾಬಾದ್: ಜಮ್ಮುಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿ ರದ್ದತಿಯನ್ನು ಎತ್ತಿಹಿಡಿದ ಭಾರತದ ಸುಪ್ರೀಂಕೋರ್ಟ್ ತೀರ್ಪಿಗೆ ಪಾಕಿಸ್ತಾನದ ಮಾಜಿ ಪ್ರಧಾನಿ ಶಹಬಾಝ್ ಶರೀಫ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಶ್ಮೀರ ವಿಷಯವನ್ನು ಪ್ರಸ್ತಾವಿಸುವುದನ್ನು ಪಾಕಿಸ್ತಾನವು ಮುಂದುವರಿಸಲಿದೆಯೆಂದು ಅವರು ಹೇಳಿದ್ದಾರೆ.

‘‘ವಿಶ್ವಸಂಸ್ಥೆಯ ನಿರ್ಣಯದ ವಿರುದ್ಥ ತೀರ್ಪನ್ನು ನೀಡುವ ಮೂಲಕ ಭಾರತೀಯ ಸುಪ್ರೀಂಕೋರ್ಟ್ ಅಂತರ್‌ ರಾಷ್ಟ್ರೀಯ ಕಾನೂನುಗಳನ್ನು ಉಲ್ಲಂಘಿಸಿದೆ. ಭಾರತೀಯ ಸುಪ್ರೀಂಕೋರ್ಟ್ ಲಕ್ಷಾಂತರ ಕಾಶ್ಮೀರಿಗಳ ಬಲಿದಾನಕ್ಕೆ ದ್ರೋಹ ಬಗೆದಿದೆ. ಭಾರತೀಯ ಸುಪ್ರೀಂಕೋರ್ಟ್‌ ನ ಈ ಪಕ್ಷಪಾತದ ನಿರ್ಧಾರದಿಂದಾಗಿ, ಕಾಶ್ಮೀರದ ಸ್ವಾತಂತ್ರ್ಯ ಹೋರಾಟವು ಬಲಿಷ್ಠಗೊಳ್ಳಲಿದೆ. ಕಾಶ್ಮೀರಿ ಹೋರಾಟವು ಕುಗ್ಗಲಾರದು’’ ಎಂದು ಶರೀಫ್ ಹೇಳಿದ್ದಾರೆ.

ಭಾರತದ ಕೋರ್ಟ್‌ ಗಳು ಹಾಗೂ ಸಂಸತ್ ಗೆ ಅಂತರ್‌ ರಾಷ್ಟ್ರೀಯ ಒಪ್ಪಂದಗಳನ್ನು ಪುನಾರಚಿಸಲು ಸಾಧ್ಯವಿಲ್ಲ ಎಂದವರು ಹೇಳಿದ್ದಾರೆ.

ನವಾಝ್ಶರೀಫ್ ಅವರ ನಾಯಕತ್ವದಲ್ಲಿ ಎಲ್ಲಾ ಸ್ತರಗಳಲ್ಲಿಯೂ ಕಾಶ್ಮೀರಿಗಳ ಹಕ್ಕುಗಳ ವಿಷಯವನ್ನು ಪಿಎಂಎಲ್ಎನ್ ಪಕ್ಷವು ಎತ್ತಲಿದೆ. ಈ ಹೋರಾಟದಲ್ಲಿ ನಮ್ಮ ಕಾಶ್ಮೀರಿ ಸಹೋದರರು ಹಾಗೂ ಸಹೋದರಿಯರ ಜೊತೆ ನಿಲ್ಲಲಿದ್ದೇವೆ’’ ಎಂದು ಶರೀಫ್ ಹೇಳಿದ್ದಾರೆ.

ಭಾರತದ ಸುಪ್ರೀಂಕೋರ್ಟ್‌ ನ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿದ ಪಿಪಿಪಿ ಪಕ್ಷದ ನಾಯಕ ಹಾಗೂ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಝರ್ದಾರಿ ಅವರು, ಭಾರತವು ಅಂತರ್‌ ರಾಷ್ಟ್ರೀಯ ಕಾನೂನುಗಳನ್ನು ಹಾಗೂ ವಿಶ್ವಸಂಸ್ಥೆಯ ನಿರ್ಣಯಗಳನ್ನು ಅನುಸರಿಸುವುದಿಲ್ಲವೆಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News