ಫಿಲಿಪ್ಪೀನ್ಸ್ | ಭೂಕುಸಿತದಲ್ಲಿ ಮೃತರ ಸಂಖ್ಯೆ 15ಕ್ಕೆ ಏರಿಕೆ ; 110 ಮಂದಿ ನಾಪತ್ತೆ
ಮನಿಲಾ : ದಕ್ಷಿಣ ಫಿಲಿಪ್ಪೀನ್ಸ್ ನ ಪರ್ವತ ಪ್ರದೇಶದ ಗ್ರಾಮವೊಂದರಲ್ಲಿ ಎರಡು ದಿನದ ಹಿಂದೆ ಸಂಭವಿಸಿದ್ದ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 15ಕ್ಕೆ ಏರಿಕೆಯಾಗಿದ್ದು ಇನ್ನೂ 110 ಮಂದಿ ನಾಪತ್ತೆಯಾಗಿದ್ದಾರೆ ಎಂದು ರಕ್ಷಣಾ ತಂಡದ ಅಧಿಕಾರಿಗಳು ಹೇಳಿದ್ದಾರೆ.
ಶುಕ್ರವಾರ ಮಣ್ಣಿನಡಿ ಪವಾಡಸದೃಶವಾಗಿ ಬದುಕುಳಿದಿದ್ದ ಬಾಲಕಿಯೊಬ್ಬಳನ್ನು ರಕ್ಷಣಾ ತಂಡದವರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಂಗಳವಾರ ರಾತ್ರಿ ದಕ್ಷಿಣ ಮಿಂಡಾನೊ ದ್ವೀಪದ ಮಸಾರಾ ಗ್ರಾಮದಲ್ಲಿ ಭೂಕುಸಿತ ಸಂಭವಿಸಿತ್ತು. ಗ್ರಾಮದಲ್ಲಿನ ಚಿನ್ನದ ಗಣಿಯಿಂದ ಕಾರ್ಮಿಕರನ್ನು ಕರೆದೊಯ್ಯಲು ನಿಂತಿದ್ದ ಮೂರು ಬಸ್ಸುಗಳು, ಒಂದು ಜೀಪು ಹಾಗೂ ಹಲವು ಮನೆಗಳ ಮೇಲೆ ಸಮೀಪದ ಗುಡ್ಡ ಕುಸಿದುಬಿದ್ದಿತ್ತು. ದುರಂತದಲ್ಲಿ 15 ಮಂದಿ ಮೃತಪಟ್ಟಿದ್ದು ಇತರ 31 ಮಂದಿ ಗಾಯಗೊಂಡಿದ್ದರು.
ಆದರೆ ಈ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದ ಶೋಧ ಕಾರ್ಯಕ್ಕೆ ಅಡ್ಡಿಯಾಗಿದೆ. ದುರಂತ ಸಂಭವಿಸಿ ಮೂರು ದಿನವಾಗಿದ್ದು ನಾಪತ್ತೆಯಾಗಿರುವವರು ಬದುಕುಳಿದಿರುವ ಸಾಧ್ಯತೆ ಕ್ಷೀಣವಾಗಿರುವುದರಿಂದ ಮೃತರ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.