ಜಾಗತಿಕವಾಗಿ 120 ದಶಲಕ್ಷ ಜನರ ಬಲವಂತದ ಸ್ಥಳಾಂತರ : ವಿಶ್ವಸಂಸ್ಥೆ ಏಜೆನ್ಸಿ ವರದಿ

Update: 2024-06-13 16:15 GMT

Photo:X/@ndtv

ಜಿನೆವಾ : ಕಳೆದ ವರ್ಷಾಂತ್ಯಕ್ಕೆ ಯುದ್ಧ, ಹಿಂಸಾಚಾರ ಮತ್ತು ಕಿರುಕುಳದಿಂದಾಗಿ ಜಾಗತಿಕವಾಗಿ ದಾಖಲೆಯ 117.3 ದಶಲಕ್ಷ ಜನತೆ ಬಲವಂತವಾಗಿ ಸ್ಥಳಾಂತರಗೊಂಡಿದ್ದು ಅಂತರರಾಷ್ಟ್ರೀಯ ಭೌಗೋಳಿಕ ರಾಜಕೀಯದಲ್ಲಿ ಪ್ರಮುಖ ಬದಲಾವಣೆಗಳು ಆಗದಿದ್ದರೆ ಈ ಪ್ರಮಾಣ ಮತ್ತಷ್ಟು ಹೆಚ್ಚಬಹುದು ಎಂದು ನಿರಾಶ್ರಿತರಿಗಾಗಿನ ವಿಶ್ವಸಂಸ್ಥೆ ಏಜೆನ್ಸಿ ವರದಿ ಮಾಡಿದೆ.

ಎಪ್ರಿಲ್ ಅಂತ್ಯಕ್ಕೆ ಈ ಸಂಖ್ಯೆ 120 ದಶಲಕ್ಷಕ್ಕೆ ತಲುಪಿರುವುದಾಗಿ ಅಂದಾಜಿಸಲಾಗಿದೆ. ಜಾಗತಿಕ ಸ್ಥಳಾಂತರಗೊಂಡವರ ಸಂಖ್ಯೆ ಈಗ ಜಪಾನ್‍ನ ಜನಸಂಖ್ಯೆಯಷ್ಟಿದೆ. 2023ರ ಅಂತ್ಯದಲ್ಲಿ ಆಂತರಿಕವಾಗಿ ಸ್ಥಳಾಂತರಗೊಂಡವರ ಸಂಖ್ಯೆ 68.3 ದಶಲಕ್ಷಕ್ಕೆ ತಲುಪಿದೆ ಎಂದು ನಿರಾಶ್ರಿತರಿಗಾಗಿನ ವಿಶ್ವಸಂಸ್ಥೆಯ ಹೈಕಮಿಷನ್(ಯುಎನ್‍ಎಚ್‍ಸಿಆರ್) ವರದಿ ಹೇಳಿದೆ.

`ಇವರಲ್ಲಿ ನಿರಾಶ್ರಿತರು, ಆಶ್ರಯ ಕೋರುವವರು , ಆಂತರಿಕವಾಗಿ ಸ್ಥಳಾಂತರಗೊಂಡ ಜನರು, ಸಂಘರ್ಷದಿಂದ, ಕಿರುಕುಳದಿಂದ, ವಿಭಿನ್ನ ಮತ್ತು ಸಂಕೀರ್ಣ ರೀತಿಯ ಹಿಂಸಾಚಾರದಿಂದ ಬೆದರಿ ಬಲವಂತವಾಗಿ ಸ್ಥಳಾಂತರಗೊಂಡವರಿದ್ದಾರೆ. ಸಂಘರ್ಷವು ಸಾಮೂಹಿಕ ಸ್ಥಳಾಂತರದ ಅತ್ಯಂತ ದೊಡ್ಡ ಕಾರಣವಾಗಿದೆ' ಎಂದು ನಿರಾಶ್ರಿತರಿಗಾಗಿನ ವಿಶ್ವಸಂಸ್ಥೆಯ ಹೈಕಮಿಷನರ್ ಫಿಲಿಪ್ಪೋ ಗ್ರಾಂಡಿ ಹೇಳಿದ್ದಾರೆ. ಗಾಝಾ, ಸುಡಾನ್ ಮತ್ತು ಮ್ಯಾನ್ಮಾರ್ ಮುಂತಾದ ಸ್ಥಳಗಳಲ್ಲಿ ಸಂಘರ್ಷ ತೀವ್ರಗೊಂಡಿರುವುದರಿಂದ ಜಾಗತಿಕವಾಗಿ ಬಲವಂತದ ಸ್ಥಳಾಂತರ ಪ್ರಕರಣ ಮತ್ತೆ ದಾಖಲೆಯನ್ನು ಮುರಿದಿದೆ.

ಬಲವಂತದಿಂದ ಸ್ಥಳಾಂತರಗೊಂಡವರ ಪ್ರಮಾಣ ಸತತ 12 ವರ್ಷಗಳಿಂದ ಏರಿಕೆಯಾಗುತ್ತಿದ್ದು 2022ರ ಅಂತ್ಯಕ್ಕೆ 110 ದಶಲಕ್ಷದಷ್ಟಿತ್ತು. ಇದು 2012ಕ್ಕೆ ಹೋಲಿಸಿದರೆ ಮೂರು ಪಟ್ಟು ಹೆಚ್ಚಾಗಿದ್ದು ದೀರ್ಘಾವಧಿಯಿಂದ ಮುಂದುವರಿದಿರುವ ಸಂಘರ್ಷವನ್ನು ಪರಿಹರಿಸುವಲ್ಲಿ ವೈಫಲ್ಯ, ಹೊಸ ಪ್ರಕರಣಗಳ ಸೇರ್ಪಡೆ ಈ ತೀವ್ರ ಹೆಚ್ಚಳಕ್ಕೆ ಕಾರಣವಾಗಿದೆ. 8 ವರ್ಷಗಳ ಹಿಂದೆ ತಾನು ಹುದ್ದೆ ವಹಿಸಿಕೊಂಡ ಅವಧಿಗೆ ಹೋಲಿಸಿದರೆ ಈಗಿನ ಪ್ರಮಾಣ ಎರಡು ಪಟ್ಟಿಗೂ ಅಧಿಕವಾಗಿದೆ ಎಂದು ಫಿಲಿಪ್ಪೋ ಗ್ರಾಂಡಿ ಕಳವಳ ವ್ಯಕ್ತಪಡಿಸಿದ್ದಾರೆ.

ಹವಾಮಾನ ಬದಲಾವಣೆಯು ಜನಸಮುದಾಯದ ಚಲನವಲನದ ಮೇಲೆ ಪ್ರಭಾವ ಬೀರುತ್ತದೆ. ಕಳೆದ ವರ್ಷ 29 ದೇಶಗಳಲ್ಲಿ 43 ತುರ್ತು ಪರಿಸ್ಥಿತಿಗಳನ್ನು ಯುಎನ್‍ಎಚ್‍ಸಿಆರ್ ಘೋಷಿಸಿದೆ. ಆದರೆ ಕೆಲ ವರ್ಷಗಳ ಹಿಂದೆ ಈ ಪರಿಸ್ಥಿತಿಯನ್ನು ಸಹಜ, ಸಾಮಾನ್ಯವೆಂದು ಪರಿಗಣಿಸಲಾಗುತ್ತಿತ್ತು . ಅಂತರರಾಷ್ಟ್ರೀಯ ಕಾನೂನನ್ನು ಸಂಪೂರ್ಣವಾಗಿ ಕಡೆಗಣಿಸಿ ಮತ್ತು ಸಾಮಾನ್ಯವಾಗಿ ಜನರನ್ನು ಭಯಭೀತಗೊಳಿಸುವ ಉದ್ದೇಶದಿಂದ ಸಂಘರ್ಷಗಳನ್ನು ನಡೆಸಲಾಗುತ್ತಿದೆ. ಇನ್ನಷ್ಟು ಸ್ಥಳಾಂತರಕ್ಕೆ ಸಂಘರ್ಷದ ಕೊಡುಗೆ ಅಧಿಕವಾಗಿದೆ. ಸದ್ಯಕ್ಕೆ ಈ ಪ್ರವೃತ್ತಿ (ಬಲವಂತದ ಸ್ಥಳಾಂತರ) ಇಳಿಮುಖವಾಗುವ ಬಗ್ಗೆ ಹೆಚ್ಚಿನ ವಿಶ್ವಾಸವಿಲ್ಲ ಎಂದವರು ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ.

ಸುಡಾನ್‍ನಲ್ಲಿ 2023ರ ಎಪ್ರಿಲ್‍ನಲ್ಲಿ ಸಶಸ್ತ್ರ ಪಡೆ ಮತ್ತು ಅರೆಸೇನಾ ಪಡೆಯ ನಡುವೆ ಯುದ್ಧ ಭುಗಿಲೆದ್ದ ಬಳಿಕ ಸುಮಾರು 11 ದಶಲಕ್ಷ ಜನತೆ ನೆಲೆ ಕಳೆದುಕೊಂಡಿದ್ದಾರೆ. ಈ ಸಂಖ್ಯೆ ಕ್ರಮೇಣ ಏರಿಕೆಯಾಗುತ್ತಿದೆ. ನೆರೆದೇಶ ಚಾಡ್‍ಗೆ ಕಳೆದ 14 ತಿಂಗಳಲ್ಲಿ ಸುಮಾರು 6 ಲಕ್ಷ ಸುಡಾನ್ ಜನತೆ ಪಲಾಯನ ಮಾಡಿದ್ದಾರೆ. ಕಾಂಗೋ ಗಣರಾಜ್ಯ, ಮ್ಯಾನ್ಮಾರ್‍ನಲ್ಲೂ ಸಂಘರ್ಷದಿಂದಾಗಿ ಲಕ್ಷಾಂತರ ಮಂದಿ ಆಂತರಿಕವಾಗಿ ಸ್ಥಳಾಂತರಗೊಂಡಿದ್ದಾರೆ. 8 ತಿಂಗಳಿಂದ ನಡೆಯುತ್ತಿರುವ ಯುದ್ಧದಿಂದಾಗಿ ಗಾಝಾ ಪಟ್ಟಿಯ ಜನಸಂಖ್ಯೆಯ 75%ದಷ್ಟು ಅಂದರೆ 1.7 ದಶಲಕ್ಷ ಜನತೆ ನೆಲೆ ಕಳೆದುಕೊಂಡಿದ್ದಾರೆ. ಉಕ್ರೇನ್‍ನಲ್ಲಿ 2022ರ ಫೆಬ್ರವರಿಯಿಂದ ರಶ್ಯ ನಡೆಸುತ್ತಿರುವ ಯುದ್ಧದಿಂದಾಗಿ ಸುಮಾರು 7,50,000 ಜನರು ಆಂತರಿಕವಾಗಿ ಸ್ಥಳಾಂತರಗೊಂಡಿರುವುದಾಗಿ ವಿಶ್ವಸಂಸ್ಥೆ ಅಂದಾಜಿಸಿದೆ. ಸಿರಿಯಾದಲ್ಲಿ ಅತ್ಯಧಿಕ ಸ್ಥಳಾಂತರ ಪ್ರಕರಣ ವರದಿಯಾಗಿದ್ದು 13.8 ದಶಲಕ್ಷ ಜನತೆ ಆಂತರಿಕವಾಗಿ ಮತ್ತು ದೇಶದ ಹೊರಗೆ ಬಲವಂತವಾಗಿ ಸ್ಥಳಾಂತರಗೊಂಡಿದ್ದಾರೆ ಎಂದು ಯುಎನ್‍ಎಚ್‍ಸಿಆರ್ ವರದಿ ಮಾಡಿದೆ.

►ನಿರಾಶ್ರಿತರಿಗೆ ಅಂತರರಾಷ್ಟ್ರೀಯ ರಕ್ಷಣೆಗೆ ಆದ್ಯತೆ

ಅಂತರರಾಷ್ಟ್ರೀಯ ರಕ್ಷಣೆಯ ಅಗತ್ಯವಿರುವ ನಿರಾಶ್ರಿತರು ಹಾಗೂ ಇತರರ ಸಂಖ್ಯೆ 43.3 ದಶಲಕ್ಷಕ್ಕೆ ಹೆಚ್ಚಿದೆ. ಎಲ್ಲಾ ನಿರಾಶ್ರಿತರು ಹಾಗೂ ಇತರ ವಲಸಿಗರು ಶ್ರೀಮಂತ ದೇಶಗಳಿಗೆ ಹೋಗುತ್ತಾರೆ ಎಂಬ ಪರಿಕಲ್ಪನೆ ಸರಿಯಲ್ಲ ಎಂದು ಯುಎನ್‍ಎಚ್‍ಸಿಆರ್ ಹೇಳಿದೆ.

ನಿರಾಶ್ರಿತರಲ್ಲಿ ಹೆಚ್ಚಿನವರು ತಮ್ಮ ನೆರೆದೇಶದಲ್ಲಿ ನೆಲೆಸಿದ್ದಾರೆ. ಇವರಲ್ಲಿ 75%ದಷ್ಟು ಮಂದಿ ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ಆಶ್ರಯ ಪಡೆಯುತ್ತಾರೆ. ಈ 75% ದೇಶಗಳು ಜಾಗತಿಕ ಆದಾಯದ 20%ದಷ್ಟನ್ನು ಮಾತ್ರ ಹೊಂದಿದೆ ಎಂಬುದನ್ನು ಗಮನಿಸಬೇಕು ಎಂದು ವರದಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News