ಟ್ವಿಟರ್ ನಿರ್ವಹಿಸುವುದು ಕಷ್ಟ: ಪೋಸ್ಟ್‌ಗಳ ಓದಿಗೆ ಮಿತಿ ನಿಗದಿಗೊಳಿಸಿರುವ ಎಲಾನ್ ಮಸ್ಕ್ ಕ್ರಮದ ಕುರಿತು ಜಾಕ್ ಡಾರ್ಸಿ ಪ್ರತಿಕ್ರಿಯೆ
ಕ್ಯಾಲಿಫೋರ್ನಿಯಾ: "ಟ್ವಿಟರ್ ನಿರ್ವಹಿಸುವುದು ಕ್ಲಿಷ್ಟಕರವಾಗಿದ್ದರೂ, ತೀವ್ರ ನಿರ್ಬಂಧಗಳ ನಡುವೆಯೂ ಟ್ವಿಟರ್ ತಂಡ ತನ್ನ ಕೈಲಾದಷ್ಟು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದೆ" ಎಂದು ಎಲಾನ್ ಮಸ್ಕ್ ವಿಧಿಸಿರುವ ವೀಕ್ಷಣಾ ಮಿತಿಯ ಕುರಿತು ಟ್ವಿಟರ್‌ನ ಸಹ ಸಂಸ್ಥಾಪಕ ಹಾಗೂ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಾಕ್ ಡಾರ್ಸಿ ಪ್ರತಿಕ್ರಿಯಿಸಿದ್ದಾರೆ. ಎಲಾನ್ ಮಸ್ಕ್ ವಿರುದ್ಧ ಕೇಳಿ ಬರುತ್ತಿರುವ ಆಕ್ರೋಶ ಹಾಗೂ ಟೀಕೆಯ ಕುರಿತು ಪ್ರತಿಕ್ರಿಯಿಸಿರುವ ಜಾಕ್ ಡಾರ್ಸಿ, ದೂರದಲ್ಲಿ ಕುಳಿತು ನಿರ್ಧಾರವೊಂದನ್ನು ಟೀಕಿಸುವುದು ಸುಲಭ. ಆದರೆ, ಟ್ವಿಟರ್ ವೇಗವಾಗಿ ವೃದ್ಧಿಸಬೇಕು ಎಂಬುದೇ ಅಂತಿಮ ಗುರಿಯಾಗಿದೆ ಎಂದು ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಜಾಕ್ ಡಾರ್ಸಿ, "ಟ್ವಿಟರ್ ಅನ್ನು ನಿರ್ವಹಿಸುವುದು ಕ್ಲಿಷ್ಟಕರ. ನಾನು ಯಾರ ಕುರಿತೂ ಒತ್ತಿ ಹೇಳಲು ಬಯಸುವುದಿಲ್ಲ. ಟ್ವಿಟರ್ ತಂಡವು ತೀವ್ರ ನಿರ್ಬಂಧಗಳ ನಡುವೆಯೂ ತನ್ನ ಕೈಲಾದಷ್ಟು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ನಾನು ನಂಬಿದ್ದೇನೆ. ನಾನೂ ದೋಷಿಯಾಗಿರುವ ನಿರ್ಧಾರಗಳನ್ನು ದೂರದಲ್ಲಿ ಕುಳಿತು ಟೀಕಿಸುವುದು ಸುಲಭ.. ಆದರೆ, ಟ್ವಿಟರ್ ವೇಗವಾಗಿ ವೃದ್ಧಿಸಬೇಕು ಎಂಬುದೇ ಗುರಿಯಾಗಿದ್ದು, ಅದು ತನ್ನ ಗುರಿ ತಲುಪಲಿದೆ" ಎಂದು ಬರೆದುಕೊಂಡಿದ್ದಾರೆ.
ಟ್ವಿಟರ್ ತನ್ನ ಮೇಲಿನ ಹೊರೆಯನ್ನು ತಗ್ಗಿಸಿಕೊಳ್ಳಲು ಬಿಟ್‌ಕಾಯಿನ್ ಹಾಗೂ ನಾಸ್ಟರ್‌ನಂತಹ ನಿರ್ಬಂಧ ಪ್ರತಿರೋಧಕ ಮುಕ್ತ ಶಿಷ್ಟಾಚಾರಗಳನ್ನು ರೂಪಿಸಿಕೊಳ್ಳುವುದನ್ನು ಪರಿಗಣಿಸಬೇಕು ಎಂದೂ ಸಲಹೆ ನೀಡಿದ್ದಾರೆ. "ಅವರು ತಮ್ಮ ಮೇಲಿನ ಹೊರೆಯನ್ನು ತಗ್ಗಿಸಿಕೊಳ್ಳಲು ಬಿಟ್‌ಕಾಯಿನ್ ಹಾಗೂ ನಾಸ್ಟರ್‌ನಂತಹ ನಿರ್ಬಂಧ ಪ್ರತಿರೋಧಕ ಮುಕ್ತ ಶಿಷ್ಟಾಚಾರಗಳನ್ನು ರೂಪಿಸಿಕೊಳ್ಳಲಿ ಎಂದು ಆಶಿಸುತ್ತೇನೆ. ಇದರಿಂದ ಎಲ್ಲರಿಗೂ ಒಳಿತಾಗಲಿದ್ದು, ಮುಕ್ತ ಅಂತರ್ಜಾಲವನ್ನು ಸಂರಕ್ಷಿಸಲು ಇದು ಅತ್ಯಗತ್ಯವಾಗಿದೆ" ಎಂದು ಜಾಕ್ ಡಾರ್ಸಿ ಸೂಚಿಸಿದ್ದಾರೆ.
ಇದಕ್ಕೂ ಮುನ್ನ, ಟ್ವಿಟರ್ ವೇದಿಕೆಯಿಂದ ಉಪಯುಕ್ತ ದತ್ತಾಂಶಗಳನ್ನು ಕಳವು ಮಾಡುವ ಕಂಪ್ಯೂಟರ್ ತಂತ್ರಾಂಶಗಳ ವಿರುದ್ಧ ಹೋರಾಡಲು ಪ್ರತಿ ನಿತ್ಯ ಓದುವ ಬಳಕೆದಾರರ ಸಂಖ್ಯೆಗೆ ಟ್ವಿಟರ್ ತಾತ್ಕಾಲಿಕ ಮಿತಿ ಹೇರಲಿದೆ ಎಂದು ಶನಿವಾರ ಟ್ವಿಟರ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಲಾನ್ ಮಸ್ಕ್ ಪ್ರಕಟಿಸಿದ್ದರು.