ಮಿಲಿಟರಿ ಕಾನೂನು ಘೋಷಿಸಿದ ಆರೋಪ: ದಕ್ಷಿಣ ಕೊರಿಯಾ ಅಧ್ಯಕ್ಷ ಬಂಧನ

Update: 2025-01-19 08:40 IST
ಮಿಲಿಟರಿ ಕಾನೂನು ಘೋಷಿಸಿದ ಆರೋಪ: ದಕ್ಷಿಣ ಕೊರಿಯಾ ಅಧ್ಯಕ್ಷ ಬಂಧನ

PC: x.com/visegrad24

  • whatsapp icon

ಸಿಯೋಲ್: ದೇಶದಲ್ಲಿ ಮಿಲಿಟರಿ ಕಾನೂನು ಘೋಷಿಸಿದ ಆರೋಪದಲ್ಲಿ ವಾಗ್ದಂಡನೆಗೆ ಒಳಗಾಗಿದ್ದ ದಕ್ಷಿಣ ಕೊರಿಯಾ ಅಧ್ಯಕ್ಷ ಯೂನ್ ಸುಕ್ ಯೋಲ್ ಅವರನ್ನು ಭಾನುವಾರ ನಸುಕಿನಲ್ಲಿ ಪೊಲೀಸರು ಅಧಿಕೃತವಾಗಿ ಬಂಧಿಸಿದ್ದಾರೆ. ಹಲವು ದಿನಗಳಿಂದ ಅವರನ್ನು ಸಿಯೋಲ್ ಅಧ್ಯಕ್ಷೀಯ ನಿವಾಸದಲ್ಲಿ ಪೊಲೀಸ್ ವಶದಲ್ಲಿ ಇರಿಸಿಕೊಳ್ಳಲಾಗಿತ್ತು. ಕಳೆದ ತಿಂಗಳು ವಿವಾದಾತ್ಮಕ ಮಿಲಿಟರಿ ಕಾನೂನು ಘೋಷಿಸಿದ ಸಂಬಂಧ ಜೈಲುಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇದೆ.

ಇದೀಗ ಅಧಿಕೃತವಾಗಿ ಅಧ್ಯಕ್ಷರನ್ನು ಬಂಧಿಸುವ ಮೂಲಕ ಹಲವು ತಿಂಗಳುಗಳ ಕಾಲ ಅವರನ್ನು ಬಂಧನದಲ್ಲಿ ಇಟ್ಟುಕೊಳ್ಳುವ ನಿರೀಕ್ಷೆ ಇದೆ. ಸುಧೀರ್ಘ ಕಾರ್ಯಕಲಾಪದ ಬಳಿಕ ಸಿಯೋಲ್ ಪಶ್ಚಿಮ ಜಿಲ್ಲಾ ಕೋರ್ಟ್, ಸಾಕ್ಷಿಗಳನ್ನು ನಾಶಪಡಿಸುವ ಭೀತಿಯ ಹಿನ್ನೆಲೆಯಲ್ಲಿ ಅಧ್ಯಕ್ಷರ ವಿರುದ್ಧದ ಬಂಧನ ವಾರೆಂಟನ್ನು ಅನುಮೋದಿಸಿತ್ತು. ಬಿಡುಗಡೆ ಕೋರಿ ಯೂನ್ ಮತ್ತು ಅವರ ಕಾನೂನು ತಂಡ ನ್ಯಾಯಾಲಯದ ಮುಂದೆ ಹಾಜರಾಗಿತ್ತು.

ಅಧ್ಯಕ್ಷೀಯ ನಿವಾಸದಲ್ಲಿ ಭಾರಿ ಕಾನೂನು ಜಾರಿ ಕಾರ್ಯಾಚರಣೆ ನಡೆಸಿದ ಬಳಿಕ ಬುಧವಾರ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಡಿಸೆಂಬರ್ 3ರಂದು ಮಿಲಿಟರಿ ಕಾನೂನು ಘೋಷಿಸಿದ ಸಂಬಂಧ ಅವರ ವಿರುದ್ಧ ದಂಗೆ ಆರೋಪವನ್ನು ಹೊರಿಸುವ ಸಾಧ್ಯತೆ ಇದೆ. 1980ರ ದಶಕದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬಂದ ಬಳಿಕ ದಕ್ಷಿಣ ಕೊರಿಯಾದಲ್ಲಿ ನಡೆದ ತೀವ್ರ ರಾಜಕೀಯ ವಿಪ್ಲವಗಳಿಗೆ ಮಿಲಿಟರಿ ಕಾನೂನು ಘೋಷಣೆ ಕಾರಣವಾಗಿತ್ತು.

ಉನ್ನತ ಅಧಿಕಾರಿಗಳ ವಿರುದ್ಧದ ಭ್ರಷ್ಟಾಚಾರ ತನಿಖಾ ಕಚೇರಿ ನೇತೃತ್ವದಲ್ಲಿ ಪೊಲೀಸರು ಹಾಗೂ ಮಿಲಿಟರಿ ಅಧಿಕಾರಿಗಳನ್ನು ಒಳಗೊಂಡ ಜಂಟಿ ತನಿಖಾ ತಂಡ ಯೂನ್ ಬಂಧನದ ಅವಧಿಯನ್ನು 20 ದಿನಗಳ ವರೆಗೆ ವಿಸ್ತರಿಸಲು ಅವಕಾಶವಿದೆ. ಈ ಅವಧಿಯಲ್ಲಿ ಅವರನ್ನು ಸರ್ಕಾರಿ ಅಭಿಯೋಜಕರಿಗೆ ಹಸ್ತಾಂತರಿಸಲಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News