ವೈದ್ಯಕೀಯ ಸಿಬ್ಬಂದಿಗಳ ಸೋಗಿನಲ್ಲಿ ಆಸ್ಪತ್ರೆ ಪ್ರವೇಶಿಸಿ 3 ಫೆಲೆಸ್ತೀನೀಯರ ಹತ್ಯೆ
ಜೆನಿನ್ : ವೈದ್ಯಕೀಯ ಸಿಬ್ಬಂದಿಗಳಂತೆ ವೇಷ ಮರೆಸಿಕೊಂಡಿದ್ದ ಇಸ್ರೇಲ್ ಏಜೆಂಟರು ಮಂಗಳವಾರ ಪಶ್ಚಿಮದಂಡೆಯ ಆಸ್ಪತ್ರೆಗೆ ನುಗ್ಗಿ ಮೂವರು ಫೆಲೆಸ್ತೀನೀ ಹೋರಾಟಗಾರರನ್ನು ಹತ್ಯೆಗೈದಿರುವುದಾಗಿ ವರದಿಯಾಗಿದೆ.
ವೆಸ್ಟ್ ಬ್ಯಾಂಕ್ ಉತ್ತರದ ಜೆನಿನ್ ನಗರದಲ್ಲಿನ ಇಬನ್ ಸಿನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಮಾಸ್ ಹೋರಾಟಗಾರರನ್ನು ಗುರಿಯಾಗಿಸಿ ದಾಳಿ ನಡೆದಿದ್ದು ಮೂವರು ಹಮಾಸ್ ಸದಸ್ಯರು ಹತರಾಗಿದ್ದಾರೆ ಎಂದು ಇಸ್ರೇಲ್ ಸೇನೆ ಹೇಳಿದೆ.
ಆರೋಗ್ಯ ಕೇಂದ್ರಗಳಿಗೆ ಅಂತರಾಷ್ಟ್ರೀಯ ಕಾನೂನಿನಡಿ ವಿಶೇಷ ರಕ್ಷಣೆಯಿದೆ. ನಮ್ಮ ಜನರು ಮತ್ತು ಆರೋಗ್ಯ ವ್ಯವಸ್ಥೆಗಳ ವಿರುದ್ಧ ಇಸ್ರೇಲ್ ನಡೆಸುತ್ತಿರುವ ದೈನಂದಿನ ಅಪರಾಧ ಕೃತ್ಯಗಳನ್ನು ನಿಲ್ಲಿಸಲು ವಿಶ್ವಸಂಸ್ಥೆ, ಅಂತರಾಷ್ಟ್ರೀಯ ಸಂಸ್ಥೆಗಳು ಹಾಗೂ ಮಾನವ ಹಕ್ಕು ಸಂಘಟನೆಗಳು ಕ್ರಮ ಕೈಗೊಳ್ಳಬೇಕು ಎಂದು ಫೆಲೆಸ್ತೀನ್ ಆರೋಗ್ಯ ಸಚಿವಾಲಯ ಆಗ್ರಹಿಸಿದೆ.
ವೈದ್ಯಕೀಯ ಸಿಬ್ಬಂದಿಗಳಂತೆ ಬಟ್ಟೆ ಧರಿಸಿದ್ದ ಸಶಸ್ತ್ರ ಪುರುಷರು ಮತ್ತು ಮಹಿಳೆಯರು ಆಸ್ಪತ್ರೆಯ ಕಾರಿಡಾರ್ ನಲ್ಲಿ ಸಾಗುತ್ತಿರುವ ದೃಶ್ಯ ಆಸ್ಪತ್ರೆಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆಸ್ಪತ್ರೆ ಪ್ರವೇಶಿಸಿದ ಇಸ್ರೇಲಿ ಏಜೆಂಟರು ಗಾಲಿಕುರ್ಚಿ ಮತ್ತು ಬೇಬಿ ಕ್ಯಾರಿಯರ್ಗಳ ಜತೆ ಮುಂದೆ ಸಾಗಿದ್ದರು. ಬಳಿಕ ತಮ್ಮ ಬಳಿ ಅಡಗಿಸಿಟ್ಟುಕೊಂಡಿದ್ದ ಗನ್ ಗಳಿಂದ ಗುಂಡಿನ ದಾಳಿ ನಡೆಸಿ ಮೂವರನ್ನು ಹತ್ಯೆ ಮಾಡಿದ್ದಾರೆ ಎಂದು ಆಸ್ಪತ್ರೆಯ ನಿರ್ದೇಶಕ ನಾಜಿ ನಝಾಲ್ರನ್ನು ಉಲ್ಲೇಖಿಸಿ ಎಎಫ್ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.
ಹತರಾದವರನ್ನು ಮುಹಮ್ಮದ್ ಜಲಾಮ್ನಹ್, ಮುಹಮ್ಮದ್ ಅಯ್ಮಾನ್ ಘಝಾವಿ ಹಾಗೂ ಬಾಸೆಲ್ ಅಯ್ಮಾನ್ ಘಝಾವಿ ಎಂದು ಗುರುತಿಸಲಾಗಿದೆ. ಬಾಸೆಲ್ ಘಝಾವಿ ಚಿಕಿತ್ಸೆ ಪಡೆಯುತ್ತಿದ್ದ ವಾರ್ಡ್ ಗೆ ನುಗ್ಗಿ ಗುಂಡು ಹಾರಿಸಲಾಗಿದೆ ಎಂದು ಫೆಲೆಸ್ತೀನಿಯನ್ ಸುದ್ಧಿಸಂಸ್ಥೆ ವಫಾ ವರದಿ ಮಾಡಿದೆ.
ಈ ಮೂವರೂ ಉಗ್ರರಾಗಿದ್ದು ಆಸ್ಪತ್ರೆಯೊಳಗೆ ಅಡಗಿರುವ ಬಗ್ಗೆ ಗುಪ್ತಚರ ಮಾಹಿತಿಯ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ಇಸ್ರೇಲ್ ಸೇನೆ ಹೇಳಿದೆ.