ಗಾಝಾಕ್ಕೆ 1.2 ಶತಕೋಟಿ ಡಾಲರ್ ತುರ್ತು ನೆರವಿಗೆ ವಿಶ್ವಸಂಸ್ಥೆ ಮನವಿ

Update: 2023-11-03 17:57 GMT

ಜಿನೆವಾ: ಗಾಝಾ ಮತ್ತು ಪಶ್ಚಿಮದಂಡೆಯಲ್ಲಿನ ಸುಮಾರು 2.7 ದಶಲಕ್ಷ ಜನತೆಗೆ ನೆರವಾಗಲು 1.2 ಶತಕೋಟಿ ಡಾಲರ್ ನೆರವಿನ ಅಗತ್ಯವಿದೆ ಎಂದು ವಿಶ್ವಸಂಸ್ಥೆ ಶುಕ್ರವಾರ ಮನವಿ ಮಾಡಿದೆ.

ಗಾಝಾದ ಸಂಪೂರ್ಣ ಜನಸಂಖ್ಯೆ ಮತ್ತು ಆಕ್ರಮಿತ ಪಶ್ಚಿಮದಂಡೆಯ 5 ಲಕ್ಷ ಜನತೆಗೆ ತುರ್ತು ನೆರವು ಒದಗಿಸುವ ಅಗತ್ಯವಿದ್ದು ಇದಕ್ಕೆ ಸುಮಾರು 1.2 ಶತಕೋಟಿ ಡಾಲರ್ ನಿಧಿಯನ್ನು ಸಂಗ್ರಹಿಸಬೇಕಿದೆ ಎಂದು ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಸಮನ್ವಯ ಸಮಿತಿ(ಒಸಿಎಚ್‍ಎ) ಹೇಳಿದೆ.

ಗಾಝಾ, ಪಶ್ಚಿಮದಂಡೆಯ ನಿವಾಸಿಗಳಿಗೆ ನೆರವಾಗಲು 294 ದಶಲಕ್ಷ ಡಾಲರ್ ಮೊತ್ತ ಅಗತ್ಯವಿದೆ ಎಂದು ಅಕ್ಟೋಬರ್ 12ರಂದು ಒಸಿಎಚ್‍ಎ ಹೇಳಿತ್ತು. ಆದರೆ ಆ ಬಳಿಕ ಪರಿಸ್ಥಿತಿ ಇನ್ನಷ್ಟು ಹತಾಶೆಯ ಸ್ಥಿತಿಗೆ ತಲುಪಿದೆ. ಗಾಝಾ ಪಟ್ಟಿಯ ಮೇಲೆ ನಡೆಯುತ್ತಿರುವ ನಿರಂತರ ಬಾಂಬ್ ದಾಳಿಯ ಹಿನ್ನೆಲೆಯಲ್ಲಿ ಆಹಾರ, ನೀರು, ಆರೋಗ್ಯರಕ್ಷಣೆ, ಆಶ್ರಯ, ನೈರ್ಮಲ್ಯ ಮತ್ತಿತರ ತುರ್ತು ಆದ್ಯತೆಗಳ ಅಗತ್ಯ ಹೆಚ್ಚಿದೆ. ಆದ್ದರಿಂದ ದಾನಿಗಳು ಕೊಡುಗೆ ನೀಡಬೇಕಾಗಿ ಮನವಿ ಮಾಡುತ್ತೇವೆ ಎಂದು ಹೇಳಿಕೆ ತಿಳಿಸಿದೆ.

ಫೆಲೆಸ್ತೀನಿಯರ ಸಂಕಷ್ಟಕ್ಕೆ ಸ್ಪಂದಿಸುವ, ತುರ್ತು ನೆರವು ಒದಗಿಸುವ ನಮ್ಮ ಸಾಮಥ್ರ್ಯವು ಸೂಕ್ತ ನಿಧಿಯನ್ನು ಅವಲಂಬಿಸಿದೆ. ಅಗತ್ಯವಿರುವ ಎಲ್ಲಾ ಜನರಿಗೆ ಇಂಧನ ಲಭ್ಯತೆ, ಮಾನವೀಯ ನೆರವಿನ ಪೂರೈಕೆಗೆ ಹಣಕಾಸು ಬೆಂಬಲದ ಅಗತ್ಯವಿದೆ' ಎಂದು ಒಸಿಎಚ್‍ಎ ಹೇಳಿದೆ. ವಿದೇಶಿ ಪಾಸ್‍ಪೋರ್ಟ್ ಹೊಂದಿರುವ ನೂರಾರು ಫೆಲೆಸ್ತೀನೀಯರ ಸಹಿತ ಸುಮಾರು 800 ಫೆಲೆಸ್ತೀನೀಯರು ರಫಾಹ್ ಗಡಿದಾಟುವಿನ ಮೂಲಕ ಗಾಝಾ ಪಟ್ಟಿಯಿಂದ ನಿರ್ಗಮಿಸಲು ಅವಕಾಶ ಒದಗಿಸಲಾಗಿದೆ.

ಆಹಾರ ಮತ್ತು ಔಷಧ ವಸ್ತುಗಳನ್ನು ಹೊತ್ತ 260 ಟ್ರಕ್‍ಗಳನ್ನು ರಫಾಹ್ ಗಡಿದಾಟುವಿನ ಮೂಲಕ ಗಾಝಾ ಪ್ರವೇಶಿಸಲು ಅವಕಾಶ ನೀಡಿರುವುದಾಗಿ ಇಸ್ರೇಲ್ ಹೇಳಿದೆ. ಆದರೆ ಈ ನೆರವು ಸಾಕಾಗುವುದಿಲ್ಲ , ಇಸ್ರೇಲಿ ಅಧಿಕಾರಿಗಳು ಇಂಧನ ಪೂರೈಕೆಗೆ ಅವಕಾಶ ನಿರಾಕರಿಸಿದ್ದಾರೆ ಎಂದು ನೆರವು ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News