ಇರಾಕ್‍ನ ಮಸೀದಿಯ ಗೋಡೆಯಲ್ಲಿ ಐದು ಬಾಂಬ್‍ಗಳು ಪತ್ತೆ: ಯುನೆಸ್ಕೋ

Update: 2024-06-30 15:10 GMT

Photo : AP 

ಬಗ್ದಾದ್ : ಉತ್ತರ ಇರಾಕ್‍ನ ಮೊಸುಲ್ ನಗರದ ಐತಿಹಾಸಿಕ ಅಲ್-ನೂರಿ ಮಸೀದಿಯ ಗೋಡೆಗಳೊಳಗೆ ಇರಿಸಿದ್ದ ಐದು ಬಾಂಬ್‍ಗಳನ್ನು ಪತ್ತೆಹಚ್ಚಲಾಗಿದೆ. ಇದು ಈ ಪ್ರದೇಶದಲ್ಲಿ ಐಸಿಸ್ ಗುಂಪಿನ ಆಳ್ವಿಕೆಯ ಅವಶೇಷಗಳಾಗಿವೆ ಎಂದು ವಿಶ್ವಸಂಸ್ಥೆಯ ಸಾಂಸ್ಕೃತಿಕ ಏಜೆನ್ಸಿ ಯುನೆಸ್ಕೋ ಹೇಳಿಕೆ ತಿಳಿಸಿದೆ.

ವಾಲಿರುವ ಮಿನಾರ್‍ಗಳನ್ನು ಹೊಂದಿರುವ 12ನೇ ಶತಮಾನದ ಈ ಪ್ರಸಿದ್ಧ ಮಸೀದಿ 2017ರಲ್ಲಿ ಐಸಿಸ್‍ನಿಂದ ನಾಶಗೊಂಡಿತ್ತು ಮತ್ತು 2020ರಿಂದ ಯುನೆಸ್ಕೋದ ಮರುಸ್ಥಾಪನೆ ಪ್ರಯತ್ನಗಳ ಕೇಂದ್ರಬಿಂದುವಾಗಿದೆ. ಮಸೀದಿಯ ಪ್ರಾರ್ಥನಾ ಹಾಲ್‍ನ ಗೋಡೆಯೊಳಗಿನ ವಿಶೇಷ ರಚನೆಯಲ್ಲಿ ಬಾಂಬ್‍ಗಳನ್ನು ಇರಿಸಲಾಗಿತ್ತು. ಒಂದನ್ನು ನಿಷ್ಕ್ರಿಯಗೊಳಿಸಿದ್ದು ಉಳಿದ 4 ಬಾಂಬ್‍ಗಳು ಪರಸ್ಪರ ಸಂಪರ್ಕ ಹೊಂದಿರುವುದರಿಂದ ಇವನ್ನು ಮುಂದಿನ ದಿನಗಳಲ್ಲಿ ಸುರಕ್ಷಿತವಾಗಿ ನಿಷ್ಕ್ರಿಯಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಇರಾಕ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು , ಮಸೀದಿಯಲ್ಲಿ ಸುರಕ್ಷತೆ ಖಾತರಿಗೊಳ್ಳುವವರೆಗೆ ಪುನರ್‍ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸಲು ಸೂಚಿಸಲಾಗಿದೆ ಎಂದು ಯುನೆಸ್ಕೋ ಅಧಿಕಾರಿಗಳು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News