ಹವಾಮಾನ ಬದಲಾವಣೆಯು ವಿಮೆಯನ್ನು ತೀರ ದುಬಾರಿಯಾಗಿಸಲಿದೆಯೇ?

Update: 2024-06-25 12:40 GMT

PC ; indianexpress.com

ಹೊಸದಿಲ್ಲಿ : ಹವಾಮಾನ ಬದಲಾವಣೆಯಿಂದ ಪ್ರಭಾವಿತ ಪ್ರಕೃತಿ ವಿಕೋಪಗಳು ಹಿಂದೆಂದಿಗಿಂತಲೂ ಹೆಚ್ಚಿನ ವಿನಾಶವನ್ನುಂಟು ಮಾಡುತ್ತಿದ್ದು, ಇದರಿಂದಾಗಿ ವಿಮೆ ಕಂಪನಿಗಳು ಸಾಧ್ಯವಿರುವಲ್ಲಿ ತಮ್ಮ ಪ್ರೀಮಿಯಮ್ಗಳನ್ನು ಹೆಚ್ಚಿಸುವ ಒತ್ತಡಕ್ಕೆ ಒಳಗಾಗುತ್ತಿವೆ. ಭವಿಷ್ಯದಲ್ಲಿ ಇದು ಏನು ಅರ್ಥವನ್ನು ನೀಡುತ್ತದೆ?

ಪ್ರಾಥಮಿಕವಾಗಿ,ಹೆಚ್ಚಿನ ಹಾನಿಯುಂಟಾಗಿದ್ದರೆ ಯಾರಾದರೂ ಅದಕ್ಕಾಗಿ ಪಾವತಿಸಬೇಕಾಗುತ್ತದೆ ಎಂದು ಪ್ರಮುಖ ಮರುವಿಮೆ ಕಂಪನಿ ಮ್ಯುನಿಚ್ ರೇದ ಹವಾಮಾನ ತಜ್ಞ ಅರ್ನ್ಸ್ಟ್ ರೌಚ್ ಹೇಳಿದರು. ವಿಮೆ ಕಂಪನಿಗಳು ಅಥವಾ ಸರಕಾರ ಅಥವಾ ಹಾನಿಯನ್ನು ಅನುಭವಿಸಿದ ವ್ಯಕ್ತಿ ಅದನ್ನು ಭರಿಸಲೇಬೇಕಾಗುತ್ತದೆ.

ಹಲವರು ವಿಮೆ ಪಾಲಿಸಿಗಳನ್ನು ಖರೀದಿಸುತ್ತಾರೆ,ಆದರೆ ಕೆಲವೇ ಜನರು ನಷ್ಟವನ್ನು ಅನುಭವಿಸುತ್ತಾರೆ ಮತ್ತು ಪರಿಹಾರವನ್ನು ಪಡೆಯುತ್ತಾರೆ ಎನ್ನುವುದು ವಿಮೆಯ ಹಿಂದಿನ ತರ್ಕವಾಗಿದೆ. ಆದರೆ ನಷ್ಟವನ್ನು ಅನುಭವಿಸುವ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಲೇ ಹೋದರೆ ವಿಮೆ ಕಂಪನಿಗಳು ವಿತ್ತೀಯ ಅಪಾಯದಿಂದ ಪಾರಾಗಲು ವಿಮಾಧಾರಕರಿಗೆ ಪ್ರೀಮಿಯಮ್ ಗಳನ್ನು ಹೆಚ್ಚಿಸುತ್ತವೆ.

ಹಿಂದಿನ ಕೆಲವು ಹವಾಮಾನ ವೈಪರೀತ್ಯ ಘಟನೆಗಳು ವಿಮೆ ರಕ್ಷಣೆಯನ್ನು ತೀರ ದುಬಾರಿಯಾಗಿಸಿದ್ದು,ವಿಮೆ ಕಂಪನಿಗಳು ತಮ್ಮ ಹೊಣೆಗಾರಿಕೆಯ ಕೆಲವು ಭಾಗವನ್ನು ಮರುವಿಮೆ ಕಂಪನಿಗಳಿಗೆ ವರ್ಗಾಯಿಸಿವೆ. ಮ್ಯುನಿಚ್ ರೇ ಇಂತಹುದೇ ಕಂಪನಿಯಾಗಿದೆ. ತನ್ನ ವ್ಯವಹಾರಗಳ ಮೇಲೆ ಹವಾಮಾನ ಬದಲಾವಣೆಯಿಂದ ಸಂಭಾವ್ಯ ಹೊಡೆತಕ್ಕೆ ಸಂಬಂಧಿಸಿದಂತೆ ಈ ಕಂಪನಿಯು ಕಳೆದ 50 ವರ್ಷಗಳಿಂದಲೂ ಹವಾಮಾನ ಬದಲಾವಣೆಯ ಪರಿಣಾಮಗಳ ಅಧ್ಯಯನವನ್ನು ನಡೆಸುತ್ತಿದೆ.

ಹವಾಮಾನ ಬದಲಾವಣೆಯು ವಿಶ್ವದ ಕೆಲವು ಭಾಗಗಳಲ್ಲಿ ವಿಮೆ ರಕ್ಷಣೆಯನ್ನು ಒದಗಿಸಲು ಕಂಪನಿಗಳು ಹಿಂದೇಟು ಹೊಡೆಯುವಂತಹ ವಿನಾಶಗಳನ್ನು ಸೃಷ್ಟಿಸಿದಾಗ ಮತ್ತು ಯಾರೊಬ್ಬರೂ ಪಾವತಿಸಲು ಸಿದ್ಧರಿಲ್ಲದ ಪ್ರಮಾಣದಲ್ಲಿ ಪ್ರೀಮಿಯಂ ಮೊತ್ತಗಳನ್ನು ಹೆಚ್ಚಿಸುವ ಅನಿವಾರ್ಯತೆಗೆ ಅವು ಸಿಲುಕಿದಾಗ ಏನಾಗುತ್ತದೆ?

ಸ್ಟೇಟ್ ಫಾರ್ಮ್ ಇದಕ್ಕೊಂದು ನಿದರ್ಶನವಾಗಿದೆ. ಈ ಪ್ರಮುಖ ವಿಮೆ ಕಂಪನಿಯು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ವಿಮಾ ಪಾಲಿಸಿಗಳನ್ನು ಮಾರಾಟ ಮಾಡುವುದನ್ನು ನಿಲ್ಲಿಸಿದೆ. ಪ್ರಕೃತಿ ವಿಕೋಪಗಳ ಹೆಚ್ಚುತ್ತಿರುವ ಅಪಾಯ,ತೀವ್ರ ನಿರ್ಮಾಣ ವೆಚ್ಚಗಳು ಮತ್ತು ಸವಾಲೊಡ್ಡುತ್ತಿರುವ ಮರುವಿಮೆ ಮಾರುಕಟ್ಟೆಯನ್ನು ಅದು ತನ್ನ ನಿರ್ಧಾರಕ್ಕೆ ಕಾರಣಗಳನ್ನಾಗಿ ಉಲ್ಲೇಖಿಸಿದೆ.

ಕ್ಯಾಲಿಫೋರ್ನಿಯಾದಲ್ಲಿ ಕಳೆದ ದಶಕಗಳಲ್ಲಿ ವಿಮೆ ಕಂಪನಿಗಳು ವಾರ್ಷಿಕವಾಗಿ ಒಂದು ಶತಕೋಟಿ ಡಾಲರ್ನಿಂದ ಮೂರು ಶತಕೋಟಿ ಡಾಲರ್ಗಳವರೆಗೆ ನಷ್ಟವನ್ನು ಭರಿಸಬೇಕಾಗಿ ಬಂದಿತ್ತು ಎಂದು ಹೇಳಿದ ರೌಚ್,ಈ ದಿನಗಳಲ್ಲಿ ಇಂತಹ ಪಾವತಿಗಳ ಮೊತ್ತ ಹತ್ತು ಶತಕೋಟಿ ಡಾಲರ್ಗಳಿಗಿಂದ ಅಧಿಕವಾಗಿದೆ ಎಂದು ತಿಳಿಸಿದರು.

ವಿಮೆ ಕಂಪನಿಗಳು ಪಾಲಿಸಿದಾರರ ನಷ್ಟಕ್ಕಾಗಿ ವಿಶ್ವಾದ್ಯಂತ ವಾರ್ಷಿಕವಾಗಿ ಒಟ್ಟು ಸುಮಾರು 100 ಶತಕೋಟಿ ಡಾಲರ್ಗಳನ್ನು ಪಾವತಿಸುತ್ತಿವೆ. ಈ ಪೈಕಿ ಶೇ.80ರಿಂದ ಶೇ.90ರಷ್ಟು ಮೊತ್ತವು ಹವಾಮಾನಕ್ಕೆ ಸಂಬಂಧಿಸಿದೆ ಎಂದು ರೌಚ್ ಹೇಳಿದರು.

ಹೆಚ್ಚುತ್ತಿರುವ ನಷ್ಟ ಪರಿಹಾರದ ಮೊತ್ತವು ಆಗಾಗ್ಗೆ ಉಂಟಾಗುತ್ತಿರುವ ಹವಾಮಾನ ವೈಪರೀತ್ಯ ಪರಿಣಾಮಗಳ ಒಂದು ಭಾಗ ಮಾತ್ರವಾಗಿದೆ ಎಂದು ಹೇಳಿದ ರೌಚ್,ಸಾಮಾಜಿಕ-ಆರ್ಥಿಕ ಅಂಶಗಳು ಹೆಚ್ಚಿನ ಪಾತ್ರವನ್ನು ಹೊಂದಿವೆ ಎಂದರು.

ಕಟ್ಟಡಗಳು ಮತ್ತು ಮೂಲಸೌಕರ್ಯಗಳ ಮೌಲ್ಯವು ಹೆಚ್ಚುತ್ತಿದೆ ಮತ್ತು ಈಗಲೂ ಕರಾವಳಿ ಮತ್ತು ನದಿಗಳಿಗೆ ಸಮೀಪದಂತಹ ವಿಶೇಷವಾಗಿ ದುರ್ಬಲ ಪ್ರದೇಶಗಳಲ್ಲಿ ನಿರ್ಮಾಣ ಚಟುವಟಿಕೆಗಳು ನಡೆಯುತ್ತಿವೆ

ಪ್ರತಿಯೊಂದೂ ವಿಮೆ ರಕ್ಷಣೆಯನ್ನು ಹೊಂದಿರುವುದಿಲ್ಲವಾದ್ದರಿಂದ ನಿಜವಾದ ಹಾನಿಯ ಮೊತ್ತವು ತುಂಬ ದೊಡ್ಡದಾಗಿರುತ್ತದೆ. ವಾಸ್ತವದಲ್ಲಿ ಜಗತ್ತಿನ ಎಲ್ಲ ಪ್ರಕೃತಿ ವಿಕೋಪಗಳ ಅರ್ಧದಷ್ಟು ಮಾತ್ರ ವಿಮೆ ವ್ಯಾಪ್ತಿಯಲ್ಲಿವೆ ಎಂದು ರೌಚ್ ಹೇಳಿದರು.

ದೀರ್ಘಾವಧಿಯಲ್ಲಿ ವಿಮೆ ಕಂಪನಿಗಳು ತಾವು ಬಯಸಿದ ಪ್ರೀಮಿಯಂ ವಿಧಿಸಲು ಸಾಧ್ಯವಿರುವ ವಿಶ್ವದ ಭಾಗಗಳಲ್ಲಿಯೂ ಕೆಲವು ಪ್ರದೇಶಗಳು ವಿಮೆ ರಕ್ಷಣೆಯನ್ನು ಹೊಂದುವುದು ಅಸಾಧ್ಯವಾಗಬಹುದು ಎಂದು ಹೇಳಿದ ರೌಚ್, ಕೆಲವು ಸಣ್ಣ ಪ್ರದೇಶಗಳನ್ನು ಹೊರತುಪಡಿಸಿದರೆ ಮುಂದಿನ ಐದರಿಂದ ಹತ್ತು ವರ್ಷಗಳವರೆಗೆ ಇಂದು ಸಂಭವನೀಯ ಎಂದು ತಾನು ಭಾವಿಸಿಲ್ಲ ಎಂದರು.

ವೆಚ್ಚವನ್ನು ನಿಯಂತ್ರಿಸುವ ವಿಷಯಕ್ಕೆ ಬಂದರೆ,ಹವಾಮಾನ ಬದಲಾವಣೆಯನ್ನು ಸೀಮಿತಗೊಳಿಸುವ ಪ್ರಯತ್ನಗಳ ಜೊತೆಗೆ ಪ್ರವಾಹದಿಂದ ರಕ್ಷಣೆಯಂತಹ ಹಾನಿ ತಡೆಗಟ್ಟುವಿಕೆ ಕ್ರಮಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ರೌಚ್ ಪ್ರಕಾರ ಇವು ವಿಮೆ ಕಂಪನಿಗಳು ಕೈಗೆಟಕುವ ಪ್ರೀಮಿಯಂ ದರಗಳನ್ನು ನೀಡುವುದನ್ನು ಅಸಾಧ್ಯವಾಗಿಸುವಷ್ಟು ಹೆಚ್ಚು ಪ್ರಮಾಣದಲ್ಲಿ ಹವಾಮಾನ ವಿಕೋಪಗಳು ಸಂಭವಿಸುವ ಪ್ರದೇಶಗಳಲ್ಲಿ ತೆಗೆದುಕೊಳ್ಳಬಹುದಾದ ಪ್ರಮುಖ ಕ್ರಮಗಳಾಗಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News