ಟ್ರಂಪ್ ಗಿಂತ ಬೈಡನ್ಗೆ ಹೆಚ್ಚು ಆದ್ಯತೆ ನೀಡುತ್ತೇವೆ: ಪುಟಿನ್
ಮಾಸ್ಕೋ: ಡೊನಾಲ್ಡ್ ಟ್ರಂಪ್ಗೆ ಹೋಲಿಸಿದರೆ, ಅಮೆರಿಕದ ಅಧ್ಯಕ್ಷರಾಗಲು ಬೈಡನ್ ಪರ ನಮ್ಮ ಒಲವಿದೆ. ಯಾಕೆಂದರೆ ಬೈಡನ್ ಟ್ರಂಪ್ಗಿಂತ ಹೆಚ್ಚು ಅನುಭವಿ ಮತ್ತು ಊಹೆಗೆ ನಿಲುಕುವ ವ್ಯಕ್ತಿಯಾಗಿದ್ದಾರೆ ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ.
ಟ್ರಂಪ್ ಮತ್ತು ಬೈಡನ್ ಇಬ್ಬರಲ್ಲಿ ಯಾರು ಅಮೆರಿಕದ ಅಧ್ಯಕ್ಷರಾಗಬೇಕೆಂದು ಬಯಸುತ್ತೀರಿ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಪುಟಿನ್ `ಖಂಡಿತವಾಗಿಯೂ ಬೈಡನ್. ಯಾಕೆಂದರೆ ಅವರಿಗೆ ಹೆಚ್ಚಿನ ಅನುಭವವಿದೆ. ಅವರು ಊಹೆಗೆ ನಿಲುಕುವ ವ್ಯಕ್ತಿ. ಆದರೆ, ಅಮೆರಿಕದ ಜನತೆ ವಿಶ್ವಾಸ ಇರಿಸುವ ಯಾವುದೇ ಅಮೆರಿಕ ಮುಖಂಡರ ಜತೆ ನಾವು ಕೆಲಸ ಮಾಡುತ್ತೇವೆ ಎಂದರು. ಬೈಡನ್ ಆರೋಗ್ಯದ ಬಗ್ಗೆ ಕೇಳಿಬರುತ್ತಿರುವ ವದಂತಿಗಳ ಬಗ್ಗೆ ಪ್ರತಿಕ್ರಿಯಿಸಿದ ಪುಟಿನ್ `ಇದೊಂದು ವಿಷಯವೇ ಅಲ್ಲ. ಯಾಕೆಂದರೆ 2021ರ ಜೂನ್ನಲ್ಲಿ ಸ್ವಿಝರ್ಲ್ಯಾಂಡ್ನಲ್ಲಿ ಬೈಡನ್ರನ್ನು ತಾನು ಭೇಟಿಯಾದ ಸಂದರ್ಭದಲ್ಲೂ ಬೈಡನ್ ಆರೋಗ್ಯದ ಬಗ್ಗೆ ಪ್ರಶ್ನೆಗಳಿದ್ದವು. ಆದರೆ ಸುಮಾರು 3 ವರ್ಷದ ಬಳಿಕವೂ ಅವರು ಕ್ರಿಯಾಶೀಲರಾಗಿದ್ದಾರೆ. ಇದೆಲ್ಲಾ ಚುನಾವಣೆಗೆ ಸಂಬಂಧಿಸಿದ ವಿಷಯಗಳಾಗಿರಬಹುದು' ಎಂದರು. ಇದೇ ವೇಳೆ ಬೈಡನ್ ಆಡಳಿತದ ಕೆಲವೊಂದು ಕಾರ್ಯನೀತಿ ಸಂಪೂರ್ಣ ತಪ್ಪಾಗಿದೆ. ತನ್ನ ವಿದೇಶಾಂಗ ಕಾರ್ಯನೀತಿಯ ಸಾಧನವನ್ನಾಗಿ ನೇಟೊವನ್ನು ಅಮೆರಿಕ ಬಳಸಿಕೊಳ್ಳುತ್ತಿದೆ. ಈ ಸಾಧನದ ಅಗತ್ಯವಿಲ್ಲ ಎಂದು ಅಮೆರಿಕ ಭಾವಿಸಿದರೆ ಆ ಬಗ್ಗೆ ತಕ್ಷಣ ನಿರ್ಧರಿಸುತ್ತದೆ' ಎಂದು ಪುಟಿನ್ ಆರೋಪಿಸಿದ್ದಾರೆ.