ಕಲಬುರಗಿ ಜಿಲ್ಲೆಯಲ್ಲಿ 2,36,933 ರೈತರಿಗೆ 667.73 ಕೋಟಿ ರೂ. ಮೊತ್ತದ ಪರಿಹಾರ : ಪ್ರಿಯಾಂಕ್‌ ಖರ್ಗೆ

Update: 2025-03-24 16:45 IST
Photo of Priyank Kharge

ಪ್ರಿಯಾಂಕ್‌ ಖರ್ಗೆ

  • whatsapp icon

ಕಲಬುರಗಿ : ತೊಗರಿ, ಹೆಸರು, ಉದ್ದು, ಸೊಯಾಬೀನ್‌ ಹತ್ತಿ ಹಾಗೂ ಇತರೆ ಬೆಳೆಗಳನ್ನು ಬೆಳೆದಿದ್ದ ಕಲಬುರಗಿ ಜಿಲ್ಲೆಯ 2,04,073 ರೈತರು ಬೆಳೆ ವಿಮೆ ಯೋಜನೆಯಡಿ ವಿಮೆ ಪರಿಹಾರ ಕೋರಿ 2024-25 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ನೋಂದಾವಣೆ ಮಾಡಿಕೊಂಡಿದ್ದು, 575.194 ಕೋಟಿ ಬೆಳೆ ವಿಮೆ ಪರಿಹಾರ ಮಂಜೂರಾಗಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

ಕಲಬುರಗಿ ಜಿಲ್ಲೆಯಲ್ಲಿ ಬೆಳೆ ವಿಮೆ ಹಾಗೂ ಬೆಳೆಹಾನಿ ಸೇರಿದಂತೆ 2,36,933 ರೈತರಿಗೆ ಒಟ್ಟು ರೂ. 667.73 ಕೋಟಿ ರೂ. ಪರಿಹಾರ ನೀಡಲಾಗುತ್ತಿದೆ, ರಾಜ್ಯ ಸರ್ಕಾರದಿಂದ ಜಿಲ್ಲೆಯ ರೈತರಿಗೆ ಇಷ್ಟು ದೊಡ್ಡ ಮೊತ್ತದ ಬೆಳೆ ವಿಮೆ ಪರಿಹಾರ ನೀಡುವ ಮೂಲಕ ದಾಖಲೆ ಸೃಷ್ಟಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಜಿಲ್ಲೆಯಲ್ಲಿ 4.36 ಲಕ್ಷ ರೈತರು ತೊಗರಿ, ಹೆಸರು, ಉದ್ದು, ಸೊಯಾಬೀನ್‌ ಹತ್ತಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ, ಈ ಪೈಕಿ ಸ್ಥಳೀಯ ಪ್ರಕೃತಿ ವಿಕೋಪದಡಿ ದೂರುಗಳನ್ನು ಸಲ್ಲಿಸಿದ 2,01,847 ರೈತರಿಗೆ ಮಧ್ಯಂತರ ಪರಿಹಾರವಾಗಿ ರೂ. 76.34 ಕೋಟಿ ಪರಿಹಾರ ಈಗಾಗಲೇ ನೀಡಲಾಗಿದೆ ಎಂದು ಸಚಿವರು ಹೇಳಿದ್ದಾರೆ.

ರೈತವಾರು ಮಾಹಿತಿಯನ್ನು ಸಂರಕ್ಷಣಾ ಪೋರ್ಟನಲ್ಲಿ ದಾಖಲಿಸುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಶೀಘ್ರದಲ್ಲಿಯೇ ಬೆಳೆ ವಿಮೆ ಪರಿಹಾರ ರೈತರ ಖಾತೆಗೆ ನೇರವಾಗಿ ಜಮೆಯಾಗಲಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

ಜಿಲ್ಲೆಯ ರೈತರು ಬೆಳೆಯುತ್ತಿರುವ ತೊಗರಿಗೆ ಕ್ವಿಂಟಾಲ್‌ ಒಂದಕ್ಕೆ 7,550 ರೂ. ಬೆಂಬಲ ಬಲೆ ನಿಗದಿ ಮಾಡಿದ್ದು, ರಾಜ್ಯ ಸರ್ಕಾರ ಪ್ರತಿ ಕ್ವಿಂಟಾಲ್‌ಗೆ 450 ರೂ. ಪ್ರೋತ್ಸಾಹಧನವನ್ನು ನಿಗದಿ ಮಾಡಿದೆ. ಜಿಲ್ಲೆಯ 9,189 ರೈತರಿಗೆ 108.30 ಕೋಟಿ ರೂ. ಸಹಾಯಧನವನ್ನು ವಿತರಿಸಲಾಗಿದೆ ಎಂದೂ ಸಚಿವರು ತಿಳಿಸಿದ್ದಾರೆ.

2024-25 ನೇ ಸಾಲಿನಲ್ಲಿ ಅಗಷ್ಟ್ ಕೊನೆಯ ವಾರ ಹಾಗೂ ಸೆಪ್ಟಂಬರ್ ತಿಂಗಳ ಮೊದಲನೆ ವಾರದಲ್ಲಿ ಸುರಿದ ಹೆಚ್ಚಿನ ಮಳೆಯಿಂದಾಗಿ ಒಟ್ಟು 16,373 ಹೆಕ್ಟೇರ್‌ನಷ್ಟು ಬೆಳೆ ಹಾನಿಯಾಗಿದ್ದು, ರಾಷ್ಟ್ರೀಯ ಹಾಗೂ ರಾಜ್ಯ ಬರ ಪರಿಹಾರ ನಿಧಿ ಮಾರ್ಗಸೊಚಿಯಂತೆ 35,086 ರೈತರಿಗೆ 13.47 ಕೋಟಿ ರೂ. ಪರಿಹಾರವನ್ನು ನೀಡಲಾಗಿದೆ ಎಂದು ಸಚಿವರು ಮಾಹಿತಿ ಹಂಚಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News